ಜಮ್ಮು ಕಾಶ್ಮೀರ ರಾಜ್ಯದ ರಾಜಧಾನಿ ಶ್ರೀನಗರ ಸಮುದ್ರ ಮಟ್ಟದಿಂದ ಸುಮಾರು 5,700 ಅಡಿ ಎತ್ತರವಿರುವ ವಿಶ್ವ ಪ್ರಸಿದ್ಧ ಗಿರಿಧಾಮ. ಹಿಮಾಲಯ ಪರ್ವತ ಶ್ರೇಣಿಯ ಮಡಿಲಲ್ಲಿರುವ ಈ ನಗರವು ಝೀಲಂ ನದಿಯ ಎರಡೂ ಬದಿ ಹರಡಿಕೊಂಡಿದೆ. ಅನೇಕ ಸರೋವರಗಳು ಹಾಗೂ ಮನಮೋಹಕ ಉದ್ಯಾನವನಗಳಿಂದ ಕಂಗೊಳಿಸುವ ಶ್ರೀನಗರವು ಸೌಂದರ್ಯದ ಖನಿ ಎಂದರೆ ತಪ್ಪಾಗಲಾರದು.
ಶ್ರೀನಗರದಲ್ಲಿರುವ ಉದ್ಯಾನವನಗಳ ಪೈಕಿ ನಿಷಾದ್‌ಭಾಗ್ ಅತ್ಯಂತ ವಿಸ್ತಾರವನ್ನು ಹೊಂದಿದ್ದು, ಉತ್ತಮವಾಗಿ ನಿರ್ವಹಿಸಲ್ಪಟ್ಟಿರುವ ಸುಂದರ ಉದ್ಯಾನವನವಾಗಿದೆ. ದೈವಿಕ ಉದ್ಯಾನವನ-ಗಾರ್ಡನ್ ಆಫ್ ಬ್ಲಿಸ್‌ವೆಂದೂ ಕರೆಸಿಕೊಳ್ಳುವ ನಿಷಾದ್‌ಭಾಗ್ ಅನ್ನು 1633ರಲ್ಲಿ ಮಹಾರಾಣಿ ನೂರ್ ಜಹಾನ್‌ರವರ ಸಹೋದರ ಅಸಾಫ್ ಖಾನ್ ಎಂಬಾತ ನಿರ್ಮಿಸಿದನು. ಸುಪ್ರಸಿದ್ಧ ದಾಲ… ಸರೋವರದ ದಡದಲ್ಲಿರುವ ಈ ಉದ್ಯಾನವನದ ಹಿನ್ನೆಲೆಯಲ್ಲಿ ಝಬರ್ವಾನ್ ಎಂಬ ಬೆಟ್ಟವಿದೆ. ನಿಷಾದ್‌ಭಾಗ್ ಹಲವು ಹಂತಗಳ ರಚನೆಗಳನ್ನು ಹೊಂದಿದ್ದು, ಮೆಟ್ಟಿಲುಗಳನ್ನು ಏರುತ್ತ ಸಾಗಬಹುದು. ಉದ್ಯಾನವನದ ನಡುವಿನಲ್ಲಿ ಉದ್ದಕ್ಕೂ ನೀರಿನ ಹರಿವು ಇದ್ದು, ಅದರಲ್ಲಿ ವಿವಿಧ ಬಗೆಯ ಕಾರಂಜಿಗಳಿವೆ. ಇವುಗಳಿಂದ ಚಿಮ್ಮುವ ನೀರ ಹನಿಗಳ ಸಿಂಚನದಿಂದ ಮೈಮನ ಮುದಗೊಳ್ಳುತ್ತವೆ.
ನಿಷಾದ್‌ಭಾಗ್ ಉದ್ಯಾನವನದಲ್ಲಿ ದೇಶವಿದೇಶಗಳ ಹೂಗಳು ಹಾಗೂ ಮರಗಿಡಗಳನ್ನು ಬೆಳೆಸಲಾಗಿದೆ. ಅನೇಕ ಬಗೆಯ ಹೂಗಳು ಹತ್ತು ಹಲವು ಬಣ್ಣಗಳು ಮತ್ತು ಆಕಾರದಿಂದ ಕಂಗೊಳಿಸುತ್ತವೆ. ಕಾಲುದಾರಿಯ ಅಕ್ಕಪಕ್ಕದಲ್ಲಿ ಸಾಲು ಸಾಲು ಬಣ್ಣ ಬಣ್ಣದ ಹೂಗಳು ನಮ್ಮನ್ನು ಸ್ವಾಗತಿಸುತ್ತವೆ. ಉದ್ಯಾನವನದ ವಿನ್ಯಾಸವೂ ಆಕರ್ಷಕವಾಗಿದೆ.
ಕಾಶ್ಮೀರದ ಸಾಂಪ್ರದಾಯಿಕ ಉಡುಪನ್ನು ತೊಟ್ಟು ಫೋಟೊ ತೆಗಿಸಿಕೊಳ್ಳುವುದಕ್ಕೆ ಇಲ್ಲಿ ಅವಕಾಶವಿದೆ. ಉಡುಪುಗಳನ್ನು ಬಾಡಿಗೆಗೆ ಕೊಡುವುದಲ್ಲದೆ ಫೋಟೋ ಕೂಡ ತೆಗೆದುಕೊಡುತ್ತಾರೆ. ಇದರ ಶುಲ್ಕವನ್ನು ಮೊದಲೇ ಚೌಕಾಸಿ ಮಾಡಿ ನಿಗದಿಪಡಿಸಿಕೊಳ್ಳುವುದು ಒಳ್ಳೆಯದು.
ನಿಷಾದ್‌ಭಾಗ್ ಎದುರಿಗೆ ಇರುವ ದಾಲ್ ಸರೋವರ ನೋಡಬೇಕಾದ ಸ್ಥಳವೇ. ಅಲ್ಲಿನ ದೋಣಿ ವಿಹಾರ ಮತ್ತು ದೋಣಿಮನೆಗಳಲ್ಲಿನ ವಾಸ್ತವ್ಯ ಪ್ರವಾಸಿಗರ ಮೆಚ್ಚಿನದು. ನಿಷಾದ್‌ಭಾಗ್ ಭೇಟಿ ಬಹಳ ಕಾಲ ನೆನಪಿನಲ್ಲಿ ಉಳಿಯುವಂಥ ಅನುಭವವನ್ನು ನಮಗೆ ನೀಡುತ್ತದೆ. ಮತ್ತೂಮ್ಮೆ ಮಗದೊಮ್ಮೆ ನೋಡಬೇಕೆಂಬ ಹಂಬಲವನ್ನೂ ನಿಷಾದ್‌ಭಾಗ್ ಉಂಟುಮಾಡುತ್ತದೆ.
ಶ್ರೀನಗರವನ್ನು ನೇರವಾಗಿ ವಿಮಾನದ ಮೂಲಕ ತಲುಪಬಹುದು. ಹತ್ತಿರದ ರೈಲು ನಿಲ್ದಾಣ ಜಮ್ಮು ತಾವಿ 305 ಕಿ. ಮೀ.ದೂರವಿದೆ. ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ 1 ಮಾರ್ಗವಾಗಿ ಶ್ರೀನಗರಕ್ಕೆ ಬರಬಹುದು. ಶ್ರೀನಗರವನ್ನು ಸಂದರ್ಶಿಸಲು ಫೆಬ್ರವರಿಯಿಂದ ಜುಲೈ ಸೂಕ್ತಕಾಲ.
ಕೆ.ಪಿ.ಸತ್ಯನಾರಾಯಣ