Advertisement

20 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳ ಆರಂಭ

09:37 PM May 05, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳ ಫ‌ಲಿತಾಂಶ ಪ್ರಕಟಗೊಂಡು ಬೇಸಿಗೆ ರಜೆಗಳು ಸಮೀಪಿಸುತ್ತಾ ಶೈಕ್ಷಣಿಕ ವರ್ಷದ ಹೊಸ್ತಿಲಲ್ಲಿರುವ ಜಿಲ್ಲೆಯಲ್ಲಿ 2019-20ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಬರೋಬ್ಬರಿ 20 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.

Advertisement

1ನೇ ತರಗತಿಯಿಂದ ಆಂಗ್ಲ ಮಾಧ್ಯಮ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಖಾಸಗಿ ಶಾಲೆಗಳ ಅಬ್ಬರದ ಜೊತೆಗೆ ಆಂಗ್ಲ ಭಾಷೆ ವ್ಯಾಮೋಹದಿಂದ ಸರ್ಕಾರಿ ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ತೀವ್ರ ಪ್ರಮಾಣ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯ ಸರ್ಕಾರಿ ಹಿ. ಪ್ರಾ. ಶಾಲೆಗಳಲ್ಲಿ ಈ ವರ್ಷದಿಂದ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ತರಗತಿಗಳನ್ನು ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಸರ್ಕಾರಿ ಶಾಲೆಗಳ ಅಸ್ತಿತ್ವ ಭೀತಿ: ಜಿಲ್ಲೆಯಲ್ಲಿ ಸರ್ಕಾರಿ ಕಿರಿಯ ಹಾಗೂ ಹಿ. ಪ್ರಾ. ಶಾಲೆಗಳು ಸುಮಾರು ಎರಡು ಸಾವಿರದಷ್ಟಿವೆ. ಆದರೆ ಜಿಲ್ಲೆಯಲ್ಲಿ ಆಂಗ್ಲ ಶಾಲೆಗಳು ನಾಯಿಕೊಡೆಗಳಂತೆ ಸ್ಥಾಪನೆಗೊಂಡು ಸರ್ಕಾರಿ ಶಾಲೆಗಳ ಅಸ್ತಿತ್ವವನ್ನು ಅಲುಗಾಡುವಂತೆ ಮಾಡಿದೆ. ಕಳೆದ 10 ವರ್ಷದಲ್ಲಿ ಜಿಲ್ಲೆಯಲ್ಲಿ 100 ಕ್ಕೂ ಹೆಚ್ಚು ಕನ್ನಡ ಶಾಲೆಗಳು ಮಕ್ಕಳ ಸಂಖ್ಯೆ ಕುಸಿತದಿಂದ ಮುಚ್ಚಲಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಕಳೆದ ವರ್ಷವೇ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸುವ ಬಗ್ಗೆ ನಿರ್ಧರಿಸಿತ್ತು.

ಆಗ ರಾಜ್ಯದ ಕನ್ನಡಪರ ಸಂಘಟನೆಗಳು ಹಾಗೂ ಕೆಲ ಸಾಹಿತಿಗಳ ತೀವ್ರ ವಿರೋಧದಿಂದ ಸರ್ಕಾರ ಹಿಂದೆ ಸರಿದಿತ್ತು. ಆದರೆ ಈ ವರ್ಷ ಪ್ರತಿ ಜಿಲ್ಲೆಯಲ್ಲಿ ಸೀಮಿತ ಸಂಖ್ಯೆಯಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲು ನಿರ್ಧರಿಸಿರುವ ಇಲಾಖೆ ಜಿಲ್ಲೆಯ ಆರು ತಾಲೂಕುಗಳಲ್ಲಿ ಒಟ್ಟು 20 ಶಾಲೆಗಳಲ್ಲಿ ಮಾತ್ರ ಆಂಗ್ಲ ಮಾಧ್ಯಮ ತರಗತಿ ಆರಂಭಿಸಿ ಸಕಲ ಸಿದ್ಧತೆ ಕೈಗೊಂಡಿದೆ. ಜೂನ್‌ ತಿಂಗಳಲ್ಲಿ ಆರಂಭಗೊಳ್ಳಲಿರುವ ಶೈಕ್ಷಣಿಕ ವರ್ಷದಿಂದ ಆಂಗ್ಲ ಮಾಧ್ಯಮ ತರಗತಿಗಳು ನಡೆಯಲಿವೆ.

ಜಿಲ್ಲೆಯಲ್ಲಿ 20 ಶಾಲೆಗಳು ಆಯ್ಕೆ: ಜಿಲ್ಲೆಯಲ್ಲಿ ಸದ್ಯಕ್ಕೆ ಒಟ್ಟು 20 ಸರ್ಕಾರಿ ಹಿ. ಪ್ರಾ. ಶಾಲೆಗಳಲ್ಲಿ ಮಾತ್ರ ಆಂಗ್ಲ ಮಾಧ್ಯಮ ಆರಂಭಿಸುತ್ತಿದ್ದು, ಆ ಪೈಕಿ ಚಿಂತಾಮಣಿ ತಾಲೂಕಿನಲ್ಲಿ 4, ಗೌರಿಬಿದನೂರು ತಾಲೂಕಿನಲ್ಲಿ 4, ಶಿಡ್ಲಘಟ್ಟ ತಾಲೂಕಿನಲ್ಲಿ 4, ಗುಡಿಬಂಡೆಯಲ್ಲಿ 1, ಬಾಗೇಪಲ್ಲಿ ತಾಲೂಕಿನಲ್ಲಿ 3 ಹಾಗೂ ಚಿಂತಾಮಣಿ ತಾಲೂಕಿನಲ್ಲಿ ಒಟ್ಟು 4 ಸರ್ಕಾರಿ ಹಿ. ಪ್ರಾ. ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ನಡೆಸಲಾಗುತ್ತದೆ.

Advertisement

ಶಿಕ್ಷಕರಿಗೆ ತರಬೇತಿ: ಪೋಷಕರು ಮಕ್ಕಳನ್ನು ಈ ಶಾಲೆಗಳಲ್ಲಿ ಕನ್ನಡ ಅಥವಾ ಆಂಗ್ಲ ಮಾಧ್ಯಮದಲ್ಲಿ ಸೇರಿಸಲು ಅವಕಾಶ ಇರುತ್ತದೆ. 1 ನೇ ತರಗತಿಯಿಂದ ಆಂಗ್ಲ ಮಾಧ್ಯಮ ತರಗತಿ ಆರಂಭಗೊಳ್ಳಲಿವೆ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌.ಜಿ.ನಾಗೇಶ್‌ ಅವರನ್ನು ಸಂಪರ್ಕಿಸಿದ ಉದಯವಾಣಿಗೆ ಈ ಕುರಿತು ಮಾಹಿತಿ ನೀಡಿದರು. ಈಗಾಗಲೇ ಆಂಗ್ಲ ಮಾಧ್ಯಮ ತರಗತಿಗಳು ಆರಂಭಗೊಳ್ಳಲಿರುವ ಶಾಲೆಗಳಲ್ಲಿನ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಆಯಾ ಶಾಲೆಗಳಲ್ಲಿರುವ ಶಿಕ್ಷಕರಿಗೆ ತರಬೇತಿ ನೀಡಿ ಅಭ್ಯಾಸ ನಡೆಸಲಾಗುತ್ತದೆ ಎಂದರು.

ಒಟ್ಟಾರೆ ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳನ್ನು ಉಳಿಸಬೇಕು. ಖಾಸಗಿ ಶಾಲೆಗಳಿಗೆ ತಕ್ಕ ಪೈಪೋಟಿ ನೀಡಬೇಕೆಂಬ ಮಹತ್ವಕಾಂಕ್ಷೆಯನ್ನು ಹೊತ್ತು ಈ ವರ್ಷದ ಶೈಕ್ಷಣಿಕ ಸಾಲಿನಿಂದ ಜಿಲ್ಲೆಯ 20 ಸರ್ಕಾರಿ ಹಿ. ಪ್ರಾ. ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ನಡೆಸಲು ನಿರ್ಧರಿಸಿ ತಕ್ಕ ಸಿದ್ದತೆಗಳನ್ನು ನಡೆಸುತ್ತಿದೆ. ಆದರೆ ಇದಕ್ಕೆ ಪೋಷಕರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಎಲ್ಲಿ ? ಯಾವ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಾಲೆ: ಜಿಲ್ಲೆಯಲ್ಲಿ ಒಟ್ಟು 20 ಶಾಲೆಗಳಲ್ಲಿ 2019-20ನೇ ಸಾಲಿನಿಂದ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಲು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಚಿಂತಾಮಣಿ: ನಗರದ ವೆಂಕಟಗಿರಿಕೋಟೆ ಹಿ.ಪ್ರಾ. ಶಾಲೆ ಹಾಗೂ ಕೆನರಾ ಬ್ಯಾಂಕ್‌ ಸಮೀಪ ಇರುವ ಬಾಲಕರ ಸ.ಹಿ.ಪ್ರಾ. ಶಾಲೆ. ಬಟ್ಲಹಳ್ಳಿ ಸ.ಹಿ.ಪ್ರಾ. ಶಾಲೆ, ಕೈವಾರದ ಸರ್ಕಾರಿ ಹಿ.ಪ್ರಾ.ಶಾಲೆ.

ಬಾಗೇಪಲ್ಲಿ: ತಾಲೂಕಿನಲ್ಲಿ ಚೇಳೂರು ಸರ್ಕಾರಿ ಹಿ. ಪ್ರಾ. ಶಾಲೆ, ಮಾರ್ಗನುಕುಂಟೆ ಸ. ಹಿ.ಪ್ರಾ.ಶಾಲೆ ಹಾಗೂ ಬಾಗೇಪಲ್ಲಿ ಪಟ್ಟಣದಲ್ಲಿರುವ ಸ.ಹಿ.ಪ್ರಾ.ಶಾಲೆ, ಶಿಡ್ಲಘಟ್ಟ ತಾಲೂಕಿನಲ್ಲಿ ಪಟ್ಟಣದ ಕೋಟೆ ಸರ್ಕಾರಿ ಬಾಲಕರ ಹಿ. ಪ್ರಾ. ಶಾಲೆ, ದೊಡ್ಡತೇಕಹಳ್ಳಿ ಸ.ಹಿ.ಪ್ರಾ. ಶಾಲೆ ಹಾಗೂ ಬಶೆಟ್ಟಿಹಳ್ಳಿ ಸ.ಹಿ.ಪ್ರಾ.ಶಾಲೆ ಹಾಗೂ ಸಾದಲಿ ಸರ್ಕಾರಿ ಹಿ. ಪ್ರಾ. ಶಾಲೆ.

ಗೌರಿಬಿದನೂರು ತಾಲೂಕಿನಲ್ಲಿ ಪಟ್ಟಣದ ಕೋಟೆ ಸರ್ಕಾರಿ ಮಾದರಿ ಹಿ.ಪ್ರಾ.ಶಾಲೆ, ಸೊಣಗಾನಹಳ್ಳಿ ಸರ್ಕಾರಿ ಹಿ.ಪ್ರಾ.ಶಾಲೆ, ಡಿ.ಪಾಳ್ಯ ಸರ್ಕಾರಿ ಹಿ.ಪ್ರಾ.ಶಾಲೆ, ಹುದಗೂರು ಸ.ಹಿ.ಪ್ರಾ. ಶಾಲೆ, ಗುಡಿಬಂಡೆ ಪಟ್ಟಣದಲ್ಲಿ ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಹಿ.ಪ್ರಾ. ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಲು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಜಿಲ್ಲೆಯಲ್ಲಿ 2019-20ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಒಟ್ಟು 20 ಸರ್ಕಾರಿ ಹಿ. ಪ್ರಾ. ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಇಲಾಖೆ ಈಗಾಗಲೇ 20 ಶಾಲೆಗಳನ್ನು ಗುರುತಿಸಿ ಆಯಾ ಶಾಲೆಗಳ ಶಿಕ್ಷಕರಿಗೆ ಆಂಗ್ಲಭಾಷೆ ತರಬೇತಿ ನೀಡಲಾಗುತ್ತಿದೆ. 20 ಶಾಲೆಗಳಲ್ಲಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಎರಡು ಇದ್ದು, ಯಾವುದನ್ನು ಬೇಕಾದರೂ ಆರಿಸಿಕೊಳ್ಳಬಹುದು. 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಆರಂಭಗೊಳ್ಳಲಿದೆ.
-ಎಸ್‌.ಜಿ.ನಾಗೇಶ್‌, ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next