ಬಹುಶಃ ಲಕ್ಷ್ಮೀ ಅಂದರೆ, ಒಂದಷ್ಟು ಮಂದಿಗೆ ಗೊಂದಲ ಆಗಬಹುದು. ಅದೇ “ಜೂಲಿ ಲಕ್ಷ್ಮೀ’ ಅಂದರೆ, ಓ ಅವರಾ ಅನ್ನೋ ಉದ್ಗಾರ ಬರದೇ ಇರದು. ಅಂತಹ ಜೂಲಿ ಲಕ್ಷ್ಮಿ ಕನ್ನಡ ಮಾತ್ರವಲ್ಲ, ತೆಲುಗು, ತಮಿಳು, ಮಲಯಾಳಂ ಹಾಗು ಬಾಲಿವುಡ್‌ನಲ್ಲೂ ಮಿಂದೆದ್ದವರು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪಯಣ ಬೆಳೆಸಿದರೂ ಜೂಲಿ ಲಕ್ಷ್ಮೀ ಹೆಸರು ಗೊತ್ತಿರದೇ ಇರದು. ಲಕ್ಷ್ಮೀ ಅಂದಾಕ್ಷಣ, ಮನವ ಕಾಡುವ ರೂಪಸಿಯ ನೆನಪಾಗುತ್ತೆ, ಆಕಾಶದಿಂದ ಧರೆಗಿಳಿದು ಬಂದ ಚಂದನದಗೊಂಬೆ ಎಂಬ ಹಾಡು ಗುನುಗುತ್ತದೆ. ಸಿನಿಮಾ ಮಂದಿಗೆ ಲಕ್ಷ್ಮೀ ಅಂದೊಡನೆ, ಹತ್ತಾರು ಭಾವನೆಗಳು ಗರಿಗೆದರುತ್ತವೆ. ಒಂದಿಡೀ ತಲೆಮಾರಿಗೆ ಲಕ್ಷ್ಮೀ ಕನಸಿನ ಹುಡುಗಿಯಾಗಿ ಕಾಡುವ ಮಾತೂ ಸುಳ್ಳಲ್ಲ. ಭಾರತೀಯ ಚಿತ್ರರಂಗ ಕಂಡ ಬ್ಯೂಟಿಫುಲ್ ನಟಿ ಲಕ್ಷ್ಮೀ. ಚಂದನವನದ ಪರಮಸುಂದರಿಯಾಗಿರುವ ಅವರು, ಸಿನಿಜರ್ನಿಯಲ್ಲಿ ಅರ್ಧಶತಮಾನ ಕಳೆದರೂ ಇಂದಿಗೂ ಸಿನಿಮಾರಂಗದಿಂದ ದೂರ ಉಳಿದಿಲ್ಲ. ಚತುರ್ಭಾಷೆ ನಟಿಯಾಗಿ ಈವರೆಗೆ 600 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ರಾಷ್ಟ್ರ, ರಾಜ್ಯ ಹಾಗೂ ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡವರು. ಬೆಂಗಳೂರಿನ ಮಲ್ಲೇಶ್ವರಂನಲ್ಲೇ ಆಡಿ ಬೆಳೆದ ಲಕ್ಷ್ಮೀ, ತಮ್ಮ ಹದಿಹರೆಯದ ಹದಿನಾರನೇ ವಯಸ್ಸಿಗೆ ಸಿನಿ ಲೋಕಕ್ಕೆ ಕಾಲಿಟ್ಟವರು. ಒಂದೇ ವರ್ಷದಲ್ಲಿ ಮೂರು ಭಾಷೆಯ ಚಿತ್ರಗಳಲ್ಲಿ ನಟಿಸುವ ಮೂಲಕ ದಾಖಲೆ ಬರೆದವರು. “ಗೋವಾದಲ್ಲಿ ಸಿಐಡಿ 999′ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದ ಲಕ್ಷ್ಮೀ, ಕನ್ನಡದಲ್ಲಿ ಈವರೆಗೆ ಸುಮಾರು 54 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರಸ್ತುತ ಕಿರುತೆರೆಯಲ್ಲೂ ಮಿಂಚುವ ಮೂಲಕ ಇಂದಿಗೂ ತಮ್ಮ ಸಿನಿಜರ್ನಿಯಲ್ಲಿ ಬಿಜಿಯಾಗಿರುವ ಲಕ್ಷ್ಮೀ, ಚಲನಚಿತ್ರ ಆಕಾಡೆಮಿ ನಡೆಸಿದ “ಬೆಳ್ಳಿಹೆಜ್ಜೆ’ಯಲ್ಲಿ ಮನದ ಮಾತು ಹಂಚಿಕೊಂಡಿದ್ದಾರೆ. ಅವರೇ ಹೇಳಿದ ಒಂದಷ್ಟು ಹಳೆಯ ನೆನಪಿನಬುತ್ತಿ ಅವರದೇ ಮಾತುಗಳಲ್ಲಿ…
ಓವರ್ ಟು ಲಕ್ಷ್ಮೀ
Advertisement
ಸ್ವೀಟ್ ಸಿಕ್ಸ್ಟೀನ್‌ನಲ್ಲಿ ಸಿನ್ಮಾ ಆಕರ್ಷಣೆ!“ನಾನು ನನ್ನ ಸಿನಿಜರ್ನಿ ಶುರುಮಾಡಿದ್ದು, ಅದೂ 16ನೇ ವಯಸ್ಸಲ್ಲಿ. ಅಷ್ಟಕ್ಕೂ ಈ ಸಿನಿಮಾರಂಗಕ್ಕೆ ಬರಲು ಕಾರಣ ಗೊತ್ತಾ? ಆಕರ್ಷಣೆ ಮತ್ತು ಪಾಪ್ಯುಲಾರಿಟಿ. ಎಲ್ಲರಂತೆ ನಂಗೂ ಸಿನ್ಮಾ ಆಕರ್ಷಿಸಿದ್ದು ನಿಜ. ಇಲ್ಲಿ ನಾನೇನೂ ಅಂತಹ ದೊಡ್ಡ ಸಾಧನೆ ಮಾಡಿಲ್ಲ. ನನಗಿಂತಲೂ ಅದ್ಭುತ ಸಾಧನೆ ಮಾಡಿರೋರು ಇದ್ದಾರೆ. ನಮ್ಮಂತಹ ಆರ್ಟಿಸ್ಟ್‌ಗಳ ಪ್ಲಸ್ ಪಾಯಿಂಟ್ ಏನೆಂದರೆ, ತೆರೆಯ ಹಿಂದೆ ಪ್ರತಿಭಾವಂತರು, ಬುದ್ಧಿಜೀವಿಗಳು ಕೆಲಸ ಮಾಡುತ್ತಾರೆ, ನಾವು ಕ್ಯಾಮೆರಾ ಮುಂದೆ ನಿಂತು ನಟನೆ ಮಾಡಿ ಚಪ್ಪಾಳೆ ತಟ್ಟಿಸಿಕೊಳ್ತೀವಿ. ನಿಜಕ್ಕೂ ತೆರೆಯ ಹಿಂದೆ ನಿರ್ದೇಶಕರು, ಬರಹಗಾರರು, ನಿರ್ಮಾಪಕರು ಕೆಲಸ ಮಾಡುತ್ತಾರೆ. ಅವರು ಮಾಡಿದ ಒಳ್ಳೆಯ ಕೆಲಸದಿಂದಾಗಿ, ನಮ್ಮಂತಹ ನಟಿಯರು ಬೆಳಕಿಗೆ ಬರುತ್ತಾರೆ, ಬೆಳೆಯುತ್ತಾರೆ. ಇನ್ನೊಂದು ವಿಷಯ ಹೇಳಲೇಬೇಕು ನಾವೇನೋ ಸಿನಿಮಾ ಮಾಡಿ, ಸಂಭಾವನೆ ರೂಪದಲ್ಲಿ ಲಕ್ಷ ಲಕ್ಷ ಪಡೆಯುತ್ತೇವೆ. ಆದರೆ, ಸಿನಿಮಾ ಏನಾದರೂ ಸೋತರೆ, ನಿರ್ಮಾಪಕರಿಗೆ ಹಲವು ಲಕ್ಷಗಳು ನಷ್ಟವಾಗುತ್ತವೆ. ಈವರೆಗೆ ಕನ್ನಡದಲ್ಲಿ 54 ಸಿನ್ಮಾ ಮಾಡಿದ್ದೇನೆ. ಎಲ್ಲಾ ಚಿತ್ರಗಳೂ ಗೆದ್ದಿವೆ ಎನ್ನುವುದಾದರೆ, ಆ ಕ್ರೆಡಿಟ್ ಆಯಾ ಸಿನಿಮಾ ನಿರ್ದೇಶಕ, ನಿರ್ಮಾಪಕ, ಬರಹಗಾರರಿಗೆ ಸಲ್ಲಬೇಕು. ಇಂದು ನನಗೆ ಎಲ್ಲವೂ ಸಿಕ್ಕಿದೆಯೆಂದರೆ, ಅದು ಪ್ರೇಕ್ಷಕ. ಅವರು ಚಿತ್ರಮಂದಿರದಲ್ಲಿ ಎರಡು ತಾಸು ಕುಳಿತು ನೋಡಿದ್ದರಿಂದಲೇ ಇಂದು ನಮಗೆ ಸಕ್ಸಸ್ ಸಿಕ್ಕಿರೋದು. ಅಂತಹವರನ್ನು ಕೂರಿಸುವ ಶಕ್ತಿ ನಿರ್ದೇಶಕರಿಗೆ ಬಿಟ್ಟರೆ ಯಾರಿಗೂ ಇಲ್ಲ.
ನಾನು ಕನ್ನಡಕ್ಕೆ ಕಾಲಿಟ್ಟಿದ್ದು 1968-69 ರ ಆಸುಪಾಸು. “ಗೋವಾದಲ್ಲಿ ಸಿಐಡಿ 999′ ಚಿತ್ರದ ಮೂಲಕ. ನಿರ್ದೇಶಕರಾದ ದೊರೆ-ಭಗವಾನ್ ಅವರು ನನ್ನ ಕಾಲ್‌ಶೀಟ್ ಪಡೆಯೋಕೆ ಬಂದು, ಏನಮ್ಮಾ ಏನ್ ತಗೋತ್ತೀಯಾ ಅಂದಾಗ, ನಾನು ದುಡ್ಡು ತಗೋತಿನಿ ಸಾರ್ ಅಂದಿದ್ದೆ. ಆ ವಯಸ್ಸಲ್ಲಿ ನನಗೆ ಒಂದಷ್ಟು ಚೂಟಿತನ ಜಾಸ್ತಿ ಇತ್ತು. ಮನೆಯಲ್ಲಿ ನಾನೊಬ್ಬಳೇ ಮಗಳು, ಓವರ್ ಮುದ್ದು ಮಾಡಿದ್ದರು. ಹಾಗಾಗಿ ತುಂಟತನವಿತ್ತು. ಕನ್ನಡಿಗರೂ ಸಹ ನನ್ನ ಮುದ್ದು ಮಾಡಿಯೇ ಬೆನ್ನು ತಟ್ಟಿ ಬೆಳೆಸಿದ್ದಾರೆ. ಕನ್ನಡದ ಮೊದಲ ಸಿನಿಮಾಗೆ ನಾನು ಭಗವಾನ್ ಬಳಿ 2500 ರೂ. ಸಂಭಾವನೆ ಕೇಳಿದ್ದೆ. ಆ ಕಾಲದಲ್ಲಿ ಅದು ದೊಡ್ಡ ಅಮೌಂಟ್. ಅಷ್ಟು ಹಣ ಕೇಳಲು ಕಾರಣ, ಆಗ ವಜ್ರದ ಓಲೆ 3 ಸಾವಿರ ರೂ. ಇತ್ತು. ಅದನ್ನು ತಗೋಬೇಕು ಎಂಬ ಆಸೆಯಿಂದ 2500 ಸಂಭಾವನೆ ಕೇಳಿದ್ದೆ. ಆ ವಯಸ್ಸಲ್ಲಿ ನಮ್ಮಂತಹವರಿಗೆ ಆಭರಣದ ಮೇಲೆ ಆಸೆಯಲ್ಲವೆ. ಈಗ 2500 ರೂ. ಮುಂದೆ ಸೊನ್ನೆಗಳು ಹೆಚ್ಚಾಗಿವೆ ಬಿಡಿ. ಈ ಸೊನ್ನೆ ಸೇರೋಕೆ ಹಾರ್ಡ್‌ವರ್ಕ್, ಡೆಡಕೇಷನ್ ಬೇಕು. ನಿರ್ದೇಶಕನ ಮೇಲೆ ಕಲಾವಿದರಿಗೆ ಗೌರವ ಇರಬೇಕು. ಎಷ್ಟೇ ದೊಡ್ಡದ್ದಾಗಿ ಬೆಳೆದರೂ ನಿರ್ದೇಶಕನಿಗೆ ಗೌರವ ಕೊಡದಿದ್ದರೆ ಅದು ವೇಸ್ಟ್. ಅವರ ಆಶೀರ್ವಾದ ಪಡೆಯದಿದ್ದರೆ ಮೇಲೆ ಬರೋಕೆ ಸಾಧ್ಯವಿಲ್ಲ.
Related Articles
“ಗೋವಾದಲ್ಲಿ ಸಿಐಡಿ 999′ ಚಿತ್ರ ಅರ್ಧ ಚಿತ್ರೀಕರಣ ನಡೆದಿತ್ತು. ಭಗವಾನ್ ಅವರು “ಸ್ವಿಮ್ಮಿಂಗ್ ಬರುತ್ತೇನಮಾ’ ಅಂತ ಕೇಳಿದ್ದರು. ನಾನು ಯೆಸ್ ಬರುತ್ತೆ ಅಂದಿದ್ದೆ. ವಿಷಯ ಏನಪ್ಪಾ ಅಂದ್ರೆ, ಆ ಸೀನ್‌ನಲ್ಲಿ ಸ್ವಿಮ್ಮಿಂಗ್‌ಫೂಲ್‌ಗೆ ಜಂಪ್ ಮಾಡಿ ಸ್ವಿಮ್ ಮಾಡಬೇಕಿತ್ತು. ನೀರಲ್ಲಿ ಬಿದ್ದೆ, ಮೇಲೇಳ್ಳೋಕೆ ಆಗಲಿಲ್ಲ. ಆಗ ಎಲ್ಲರೂ ಗಾಬರಿಯಾದರು. ಕೊನೆಗೆ ಸೆಟ್‌ನಲ್ಲಿದ್ದವರು ನನ್ನ ಮೇಲೆತ್ತಿದ್ದರು. ಭಗವಾನ್, ಗರಂ ಆಗಿ ಸ್ವಿಮ್ಮಿಂಗ್ ಬರುತ್ತೆ ಅಂದಿದ್ಯಲ್ಲಮ್ಮ, ಯಾಕೆ ಹಾಗೆ ಹೇಳಿದ್ದೆ ಅಂದ್ರು, ಏನ್ಮಾಡೋದು, ಸಿನ್ಮಾ ಅವಕಾಶ ಕೈ ತಪ್ಪಿದರೆ, ಅದರಲ್ಲೂ ಇನ್ನೂ 500 ರೂ.ಬೇರೆ ಬಾಕಿ ಇತ್ತು. ಈಜುವುದೆಂದರೆ, ನೀರಲ್ಲಿಳಿದು ಕೈ ಆಡಿಸಿದರೆ ಬರುತ್ತೆ ಅಂದುಕೊಂಡು ಧುಮುಕಿದ್ದೆ. ಆದರೆ, ಅಷ್ಟು ಕಷ್ಟ ಅಂತ ಗೊತ್ತಿರಲಿಲ್ಲ. ಈಗ ಬಹಳ ನಟಿಯರು ಕ್ಯಾಮೆರಾ ಮುಂದೆ ನಿಂತರೆ ನಟನೆ ಬರುತ್ತೆ ಅಂದುಕೊಂಡಿದ್ದಾರೆ. ಆದರೆ, ನಿಂತ ಮೇಲಷ್ಟೇ ಅದರ ಕಷ್ಟ ಗೊತ್ತಾಗೋದು.
Advertisement
ಅದು ಅಂಬರೀಷ್ ನಟನೆಯ “ಅಂತ’ ಚಿತ್ರದ ಚಿತ್ರೀಕರಣ. ನಿರ್ದೇಶಕ ರಾಜೇಂದ್ರಸಿಂಗ್ ಬಾಬು, ದೃಶ್ಯವೊಂದಕ್ಕೆ ಬನಿಯನ್‌ಗೆ ನಿಜ ರಕ್ತ ಹಾಕಿಸಿದ್ದರು. ತುಂಬ ಕೆಟ್ಟ ವಾಸನೆ ಅದು. ತಡಕ್ಕೊಳ್ಳೋಕೆ ಆಗುತ್ತಿರಲಿಲ್ಲ. ಆದರೆ, ನಾನೊಬ್ಬ ನಟಿ, ಚೇಂಜ್ ಮಾಡಿ ಅಂತ ಹೇಳುವಂತಿಲ್ಲ. ಯಾಕೆಂದರೆ, ಅವರೆಲ್ಲರೂ ತಿಂಗಳುಗಟ್ಟಲೆ ಕೂತು ಸ್ಕ್ರಿಪ್ಟ್ ಮಾಡಿರ್ತಾರೆ. ಬಡ್ಡಿಗೆ ಹಣ ತಂದು ಚಿತ್ರಕ್ಕೆ ಹಾಕಿರುತ್ತಾರೆ. ಎಂತಹ ಪಾತ್ರವಿದ್ದರೂ ಸಹಿಸಿಕೊಂಡು ಮಾಡಬೇಕು. ಹಾಗೆ ಆ ದೃಶ್ಯ ಚೆನ್ನಾಗಿ ಬಂದಿತ್ತು. ಅಂತಹ ವಾಸನೆ ಇದ್ದರೂ ನಾನು ನನ್ನ ಕರ್ತವ್ಯ ನಿರ್ವಹಿಸಿದ್ದೆ. ಕಲಾವಿದರಿಗೆ ಮೊದಲು ಡೆಡಿಕೇಷನ್ ಇರಬೇಕು. ಆಗ ಮಾತ್ರ ಅಂದುಕೊಂಡಿದ್ದು ಸಾಧಿಸಲು ಸಾಧ್ಯ.
ವೀಣೆ ನುಡಿಸೋದು ನಂಗಿಷ್ಟ…ನಮ್ಮನೇಲಿ ತಾತ, ನನಗೆ ಸಂಗೀತ ಕಲಿಸೋಕೆ ಒಬ್ಬ ಮಾಸ್ಟರ್‌ನ ನೇಮಿಸಿದ್ದರು. ನನಗೋ ಹಾಡು ಕಲಿಯೋಕೆ ಇಷ್ಟವಿರಲಿಲ್ಲ. ಆ ಮಾಸ್ಟರ್ ಮನೆಗೆ ಬಂದರೆ ಸಾಕು, ಹೊಟ್ಟೆ ನೋವು ಅಂತ ರೆಸ್ಟ್ ರೂಮ್‌ಗೆ ಹೋಗುತ್ತಿದ್ದೆ. ಅವರಿಗೆ ಅರ್ಧಗಂಟೆ ಮಾತ್ರ ಟೈಮ್ ಇರುತ್ತಿತ್ತು. ತಾತಾ ಬೇಗ ಬಾರೇ, ಅಂದ್ರೂ, ಹೊಟ್ಟೆ ನೋವು ಅಂತ ಅರ್ಧ ಗಂಟೆ ಟೈಮ್ ಕಳೆಯುತ್ತಿದ್ದೆ. ಆ ಮಾಸ್ಟರ್ ಹೋದ ಮೇಲೆ ಹೊರಬಂದು, ಮಾಸ್ಟರ್ ಹೋಗಿಬಿಟ್ರಾ ಅಂತ ಕೇಳ್ತಾ ಇದ್ದೆ. ಕೊನೆಗೆ ನನ್ನ ತಾತ, ಇವಳನ್ನು ಹೀಗೆ ಬಿಟ್ಟರೆ ಸಂಗೀತ ಕಲಿಯೋಲ್ಲ ಅಂತ, ವೀಣೆ ನುಡಿಸುವ ಕ್ಲಾಸ್‌ಗೆ ಹಾಕಿದರು. ನನಗೆ ಸಂಗೀತ ಉಪಕರಣ ನುಡಿಸೋದು ಅಂದ್ರೆ ಇಷ್ಟ. ಹಾಗಾಗಿ ನಾನು ಅದನ್ನು ಶ್ರದ್ಧೆಯಿಂದ ಕಲಿತೆ. ಎಲ್ಲರೂ ನನ್ನದು ಹಸ್ಕಿ ವಾಯ್ಸ ಅಂತಾರೆ, ನನಗೆ ಹಾಡೋಕೆ ಬರಲ್ಲ. ಏನಾದ್ರೂ ಹಾಡಿದ್ರೆ…, ಅಷ್ಟೇ ಕತೆ… ಜನಗಣಮನ ಬಿಟ್ಟರೆ ಬೇರೆ ಹಾಡೋಕೆ ಬರಲ್ಲ ನಂಗೆ. ನಾನು ಐದು ಭಾಷೆಗಳಲ್ಲಿ ನಿರರ್ಗಳವಾಗಿ ಮಾತಾಡ್ತೀನಿ. ಈಗಲೂ ಚಾಲೆಂಜ್ ಮಾಡ್ತೀನಿ, ಬೇಕಾದರೆ ಅಡ್ವಾನ್ಸ್ ಕೊಡಿ. 20 ಭಾಷೆಯಲ್ಲಿ ಮಾತಾಡಿ ತೋರಿಸ್ತೀನಿ! ಆರ್ಟಿಸ್ಟ್ ಗಳಿಗೆ ಭಾಷೆ ಮುಖ್ಯ. ಎಲ್ಲಾ ಭಾಷೆ ಕಲಿತರೆ ಕಲಾವಿದರಾಗಿ ಬೆಳೆಯಲು ಸಾಧ್ಯ. ಆಗಿನ ಕಾಲದಲ್ಲಿ ಎಲ್ಲರೂ ಎಲ್ಲಾ ಭಾಷೆ ಕಲಿಯುತ್ತಿದ್ದರು. ಮಲಯಾಳಂನ “ಚಟ್ಟಕಾರಿ’ ಸಿನಿಮಾ ಮಾಡುವಾಗ, ನನಗೆ ಮಲಯಾಳಿ ಭಾಷೆ ಗೊತ್ತಿರಲಿಲ್ಲ. ಆಗ ಆಲ್ಲಿನ ಅಸೋಸಿಯೇಟ್, ನನಗೆ ಭಾಷೆ ಕಲಿಸಿದರು. ಕಲಿತೆ, ಸುಲಭವಾಯ್ತು. “ನಾ ನಿನ್ನ ಮರೆಯಲಾರೆ’ ಶೂಟಿಂಗ್ ವೇಳೆ, ಭಾರ್ಗವ ಅವರು, ಡೈಲಾಗ್ ಹೇಳಿಕೊಡೋರು. ಬರೆದುಕೊಳ್ಳಿ ಅಂತ ಹೇಳ್ತಾ ಇದ್ದರು. ನಾನು ಕೇಳಿಸಿಕೊಂಡೇ, ನೆನಪಲ್ಲಿಟ್ಟುಕೊಂಡು ಕ್ಯಾಮೆರಾ ಮುಂದೆ ಡೈಲಾಗ್ ಹೇಳುತ್ತಿದ್ದೆ. ನಾವು ಏನು ಮಾಡ್ತೀವಿ ಅಂತ ತೀರ್ಮಾನ ಮಾಡಿಕೊಂಡು, ಕರೆಕ್ಟ್ ರೂಟ್ ಹಿಡಿದರೆ ಸಾಧಿಸಲು ಸಾಧ್ಯ. ನನ್ನ ಯಶಸ್ಸಿನ ಗುಟ್ಟು, ಬೇರೇನೂ ಅಲ್ಲ, ಅದು ಪ್ರೇಕ್ಷಕರು. ಟೀನೇಜರ್ ನೋಟವೇ ಬೇರೆ..!
ನಟ, ನಟಿಯರಿಗೆ ಮೊದಲು ಬದ್ಧತೆ ಇರಬೇಕು. ನಾ ಕಂಡಂತೆ ಡಾ.ರಾಜ್‌ಕುಮಾರ್ ಫ್ಯಾಮಿಲಿಯಲ್ಲಿರುವ ಮೂವರು ಮಕ್ಕಳಲ್ಲೂ ಅದು ಇದೆ. ಹಾಗಂತ ಬೇರೆಯವರಲ್ಲಿ ಇಲ್ಲವೆಂದಲ್ಲ, ಡಾ.ರಾಜ್‌ಕುಮಾರ್ ಅವರ ವಿಸಿಟಿಂಗ್ ತಗೊಂಡ್ ಬಂದಿರುವುದರಿಂದ ಆ ಮೂವರಲ್ಲಿ ವಿನಯ, ತಾಳ್ಮೆಇದೆ. ನನಗೆ ಈ ಜೀನ್ಸ್, ಲಿವಿಸ್, ಅಡಿಡಾಸ್ ಮೇಲೆ ಅಷ್ಟು ನಂಬಿಕೆ ಇಲ್ಲ. ಅದನ್ನ ನಂಬೋದಿಲ್ಲ ಕೆಲವು ಸಲ ಮೇಷ್ಟ್ರು ಮಕ್ಕಳೇ ಮುಠಾಳರಾಗ್ತಾರೆ. ಡಾಕ್ಟರ್ ಮಕ್ಕಳು ಆಸ್ಪತ್ರೆಯಲ್ಲಿ ಮಲಗ್ತಾರೆ. ಕಲಾವಿದರಿಗೆ ಒಳ್ಳೇ ವಾತಾವರಣ ಮುಖ್ಯ. ಪಾರ್ವತಮ್ಮ ಅವರ ತಾಳ್ಮೆ ಎಲ್ಲವನ್ನೂ ಕಲಿಸಿದೆ. ಇನ್ನು, “ನಾ ನಿನ್ನ ಮರೆಯಲಾರೆ’ ಶೂಟಿಂಗ್ ಸಾಂಗ್ ಸಂದರ್ಭವದು. ನಾನು ಮೈಕ್ರೋ ಸ್ಕರ್ಟ್ ಹಾಕಿದ್ದೆ. ಲವ್‌ಸಾಂಗ್ ಆಗಿದ್ದರಿಂದ ಒಂದಷ್ಟು ರೊಮ್ಯಾಂಟಿಕ್ ಆಗಿರಬೇಕಿತ್ತು. ಅಲ್ಲಿ ನಿರ್ದೇಶಕರು, ಟೆಕ್ನೀಷಿಯನ್ಸ್ ಇದ್ದರೆ ಸಮಸ್ಯೆ ಇರಲ್ಲ, ಅವರು ಕೆಲಸ ಕಡೆಯಷ್ಟೇ ಗಮನ ಕೊಡ್ತಾರೆ. ಆದರೆ, ಶೂಟಿಂಗ್ ನೋಡೋಕೆ ಬರುವ ಟೀನೇಜರ್ ನೋಡುವ ನೋಟವೇ ಬೇರೆ. ಹಾಗಾಗಿ ಅಂದು ರವಿಚಂದ್ರನ್ ಮತ್ತು ಶಿವರಾಜ್‌ಕುಮಾರ್ ಅವರನ್ನು ಹೊರಗೆ ಕಳಿಸಿದರೆ ಮಾತ್ರ ಕೆಲಸ ಮಾಡ್ತೀನಿ ಅಂತ ಹೇಳಿ ಅವರನ್ನ ಹೊರಗೆ ಕಳಿಸಿದ್ದೆ. ಈಗಲೂ ಮೈಂಡ್‌ನಲ್ಲಿಟ್ಟುಕೊಂಡು ರವಿ, ಶಿವು ಸಿಕ್ಕಾಗೆಲ್ಲಾ ನಮ್ಮನ್ನ ಹೊರಗೆ ಕಳಿಸಿದ್ರಲ್ವಾ? ಅಂತಾನೇ ಇರ್ತಾರೆ. ಈಗ ಬರ್ರಪ್ಪಾ ಬೇಕಾದ್ರೆ ಸಾಂಗ್ ಮಾಡೋಣ… ಅಂತ ತಮಾಷೆ ಮಾಡ್ತೀನಿ. ಹೋಮ್‌ವರ್ಕ್ ಇಂದಿಗೂ ಇದೆ
ನಿಜ ಹೇಳ್ತೀನಿ ಎಲ್ಲಾ ನಟ, ನಟಿಯರಿಗೂ ಒಮ್ಮೆ ಮಲಯಾಳಂ ಸಿನಿಮಾ ಮಾಡುವ ಆಸೆ ಇದ್ದೇ ಇರುತ್ತೆ. 1972-73ರಲ್ಲಿ ಕ್ಯಾಮೆರಾಮೆನ್ ವಿಲ್ಸನ್, ನನಗೆ ಮಲಯಾಳಿ ಸಿನಿಮಾ ಮಾಡೋಣ ಅಂದಿದ್ದರು. ಆಗ ನಾನು ತೆಲುಗಿನಲ್ಲಿ ಬಿಜಿ ಇದ್ದೆ. ಕನ್ನಡದಲ್ಲೇ ಮಾಡಲು ಆಗದಷ್ಟು ಬಿಜಿ. “ಚಟ್ಟಕಾರಿ’ ಸಿನಿಮಾ ಮಾಡುವ ಅವಕಾಶ ಸಿಕು¤. ಅಲ್ಲಿ ಸಾಕಷ್ಟು ಕಲಿತೆ. ನಿರ್ದೇಶಕರು ಯಾರೇ ಇರಲಿ, ಕಲ್ಲಿನಂತಿರುವ ಕಲಾವಿದರನ್ನು ಕೆತ್ತಿ ಶಿಲೆಯನ್ನಾಗಿಸುತ್ತಾರೆ. ನನಗೆ ತೆಲುಗು, ತಮಿಳು, ಮಲಯಾಳಂ ಚಿತ್ರರಂಗದ ವಾತಾವರಣ ಇಷ್ಟವಾಗುತ್ತೆ. ಅಲ್ಲಿ ಎಂಥಾ ಬಿಗ್ ಆರ್ಟಿಸ್ಟ್‌ಗಳೇ ಇರಲಿ, ಎಲ್ಲರೂ ಒಂದೇ ಎಂಬ ಭಾವನೆ. ಮಲಯಾಳಂ ಚಿತ್ರರಂಗದಲ್ಲಂತೂ ಈಗಲೂ ಡೌಂಟ್ ಟು ಅರ್ಥ್. ಸಂತಸದ ವಿಷಯ ಅಂದ್ರೆ, ನಾನು ಮಲಯಾಳಂನಲ್ಲಿ ಮಾಡಿದ “ಚಟ್ಟಕಾರಿ’ ಬೆಂಗಳೂರಲ್ಲಿ ಯಶಸ್ವಿ ಪ್ರದರ್ಶನವಾಯ್ತು. ಆ ಚಿತ್ರಕ್ಕೆ ನಾನು ಹೋಮ್‌ವರ್ಕ್ ಮಾಡಿದ್ದೆ. ಇಲ್ಲಿವರೆಗೂ ಹೋಮ್‌ವರ್ಕ್ ಮಾಡ್ತಾನೇ ಇದೀನಿ. ಇಲ್ಲಿ ಸಿಗೋ ಸೌಲಭ್ಯ ಬೇರೆಲ್ಲೂ ಸಿಗಲ್ಲ
ಈಗಿನವರಿಗೆ ನಾನು ಸಲಹೆ ಕೊಡಲ್ಲ. ಅವರಿಗೆ ಟಿಪ್ಸ್ ಇಷ್ಟ ಆಗಲ್ಲ. ಇರುವುದು ಒಂದೇ ಲೈಫ್ ಅದನ್ನು ಚೆನ್ನಾಗಿ ಬಾಳಿ. ಇಲ್ಲಿ ಎಲ್ಲರಿಗೂ ಗೆಲಲ್ಲಲು ಸಾಧ್ಯವಿದೆ. ತಾಯಿ, ತಂದೆ ಬಿಟ್ಟರೆ, ಯಾರೂ ಫ್ರೆಂಡ್ಸ್ ಇಲ್ಲ ಅಂತ ಅಥೆìçಸಿಕೊಳ್ಳಿ. ಕೊನೆಯವರೆಗೆ ಅಪ್ಪ, ಅಮ್ಮ ಇಬ್ಬರೇ ನಿಮ್ಮೊಂದಿಗೆ ಇರೋರು. ಎಲ್ಲರಿಗೂ ಸಮಸ್ಯೆ ಬರುತ್ತೆ. ಧೈರ್ಯವಾಗಿ ಎದುರಿಸಿ, ನನಗೂ ಪರ್ಸನಲ್ ಪ್ರಾಬ್ಲಿಮ್ಸ್ ಬಂತು. ಆಲೋಚನೆ ಮಾಡುತ್ತಲೇ ಅಳುತ್ತಿದ್ದೆ. ಹೀಗೆ ಸುಮ್ಮನೆ ಕುಳಿತು ಅತ್ತರೆ ಏನು ಪ್ರಯೋಜನ? ಇದನ್ನೇ ಕ್ಯಾಮೆರಾ ಮುಂದೆ ಅತ್ತರೆ ಅವಾರ್ಡ್, ರಿವಾರ್ಡ್ ಎಲ್ಲವೂ ಸಿಗುತ್ತಲ್ವಾ ಅಂತ ಆಗಲೇ ತೀರ್ಮಾನಿಸಿದೆ. ಮಿಸ್ ಮಾಡ್ಕೊಂಡರೆ ಲೈಫ್ ಹಾಳಾಗುತ್ತೆ. ಹಾಗೆ ಆಗೋಕೆ ಬಿಡಬೇಡಿ. ನಂಗೆ ಹಸಿವು ಹೆಚ್ಚಾದರೆ ಕೋಪ ಜಾಸ್ತಿ. ಟೈಮ್‌ಗೆ ಸರಿಯಾಗಿ ನಾನು ಊಟ ಮಾಡಬೇಕು. ಇಲ್ಲದಿದ್ದರೆ ರೇಗಾಡಿಬಿಡ್ತೀನಿ. ಚಿತ್ರೀಕರಣ ಸಂದರ್ಭದಲ್ಲಿ ಅಂತಹ ಎಷ್ಟೋ ಘಟನೆಗಳು ನಡೆದಿದ್ದುಂಟು. ಆ ಹಸಿವು ಸಂದರ್ಭದಲ್ಲಿ ಮಾತ್ರ ಕೋಪಿಸಿಕೊಳ್ತಾ ಇದ್ದೆ. ಒಂದು ಮಾತು ನೆನಪಿಟ್ಟುಕೊಳ್ಳಿ. ಟಾಟಾ ಬಿರ್ಲಾ, ಅಂಬಾನಿ, ಯಾರೇ ದೊಡ್ಡ ವ್ಯಕ್ತಿಗಳಿರಲಿ, ನಿಮ್ಮನ್ನು ಪ್ರೀತಿಯಿಂದ ಮಾತಾಡಿಸಿ, ಮನೆಯವರೆಗೆ ಕಾರು ಕಳುಹಿಸಿ, ಸ್ಥಳಕ್ಕೆ ಕರೆಸಿಕೊಂಡು, ಕಾಫಿ, ತಿಂಡಿ ಕೊಟ್ಟು, ಕೆಲಸ ಮುಗಿದ ಮೇಲೆ ನಿಮಗೆ ಬಾಟಾ ಕೊಟ್ಟು ಕಳಿಸೋದು, ಸಿನಿಮಾ ಇಂಡಸ್ಟ್ರಿ ಒಂದೇ. ಅದು ಬಿಟ್ಟರೆ ಬೇರೆ ಎಲ್ಲೂ ಈ ರೀತಿ ಸೌಲಭ್ಯವಿಲ್ಲ. ಅನ್ನದಾತನನ್ನು ಮರೆತರೆ ಕಲಾವಿದರು ಬೆಳೆಯಲ್ಲ. ಈ ಚಿತ್ರರಂಗದಲ್ಲಿ ಎಲ್ಲವನ್ನೂ ಕಾಣಬಹುದು. ಇಂತಹ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಒಂದು ಉದಾಹರಣೆ ಹೇಳುವುದಾದರೆ, ನನಗೆ ಕಾರಾಗೃಹ ಶಿಕ್ಷೆ ಅಂತ ಹಣೆಯಲ್ಲಿ ಬರೆದಿತ್ತೋ ಏನೋ, ಅದು “ಮಾತೃವಾತ್ಸಲ್ಯ’ ಸಿನಿಮಾ ಇರಬೇಕು. ಅಲ್ಲಿ ನನಗೆ ಜೈಲು ಶಿಕ್ಷೆ ಆಗಿರುತ್ತೆ. ಒಂದು ಜೈಲಲ್ಲಿ ಶೂಟಿಂಗ್ ನಡೆಯುತ್ತಿತ್ತು. ಅಲ್ಲಿ ಗಲ್ಲಿಗೇರಿಸುವ ಸೀನ್ ಅದು. ಅಲ್ಲಿ ದೊಡ್ಡ ಹಗ್ಗ ಇತ್ತು. ನನ್ನ ಸಣ್ಣ ಕುತ್ತಿಗೆಗೆ ಅಷ್ಟೊಂದು ದೊಡ್ಡ ಹಗ್ಗ ಬೇಕಿತ್ತಾ ಅನಿಸಿತ್ತು. ಶಾಟ್‌ಗೆ ರೆಡಿಯಾಗುತ್ತಿದ್ದೆ. ಅಲ್ಲಿದ್ದ ಜೈಲರ್ ಬಂದು, ಮೇಡಮ್, ಇಂದು ಮುಂಜಾನೆ ಇದೇ ಹಗ್ಗದಲ್ಲಿ ಒಬ್ಬನನ್ನು ಗಲ್ಲಿಗೇರಿಸಿದ್ದೆವು ಅಂತಂದಾಗ ನನಗೆ ಹೇಗಾಗಬೇಡ, ಆ ಹಗ್ಗದಲ್ಲಿ ಎಷ್ಟು ಮಂದಿ ಗಲ್ಲಿಗೇರಿದ್ದಾರೆ ಅಂತ ಪ್ರಶ್ನಿಸಿದಾಗ, ಆ ಹಗ್ಗದಲ್ಲಿ ನಾಲ್ಕು ಜನ ಅಂದ್ರು, ಸೋ, ಅಂತಹ ಅನುಭವ, ಸಿನಿಮಾ ರಂಗ ಬಿಟ್ಟರೆ ಬೇರೆಲ್ಲೂ ಸಿಗೋಕೆ ಛಾನ್ಸೇ ಇಲ್ಲ. ಡಾ.ರಾಜ್‌ಕುಮಾರ್ ಒಬ್ಬ ಮಹಾನ್‌ಪುರುಷರು
ನಾ ಕಂಡಂತೆ ಡಾ.ರಾಜ್‌ಕುಮಾರ್ ಅಪರೂಪದ ನಟರು. ಅವರೊಬ್ಬ ಮಹಾನ್‌ಪುರುಷ. ಅವರಿಗೆ ಕೋಪ ಅನ್ನೋದೇ ಇರಲಿಲ್ಲ. ಎಷ್ಟೋ ಸಲ ನಾನು, ಸಾರ್, ಒಂದ್ಸಲನಾದರೂ ಕೋಪ ಮಾಡ್ಕೊಳ್ಳಿ ಸಾರ್ ಅಂತಿದ್ದೆ. ಯಾಕಮ್ಮಾ ಕೋಪ ಮಾಡ್ಕೊಳ್ಳೋದು ಅಂತಿದ್ದರು. ಅವರು ಲೆಜೆಂಡ್‌ಗಿಂತಲೂ ದೊಡ್ಡವರು. ಏನೋ ಒಂದು ಬ್ಯಾಲೆನ್ಸ್ ಇತ್ತೇನೋ, ಹಾಗೆ ನೋಡಿಕೊಂಡು ಬರೋಣ ಅಂತ ಇಲ್ಲಿಗೆ ಬಂದು ಹೋಗಿರುವ ಮಹಾನ್‌ಪುರುಷ ಅವರು. ಕನ್ನಡ ಬಿಟ್ಟರೆ ಬೇರೆ ಯಾವ ಭಾಷೆಯಲ್ಲೂ ನಟಿಸದ ಅಪರೂಪದ ನಟ ಅವರು. ನಾವು ಯಾವುದೇ ಸೆಟ್‌ನಲ್ಲಿದ್ದರೂ ಬಂದು ಮಾತಾಡಿಸಿ, ನೀವು ಆ ಚಿತ್ರದಲ್ಲಿ ಎಷ್ಟೊಂದು ಚೆನ್ನಾಗಿ ನಟಿಸಿದ್ದೀರಿ ಅಂತ ಹೇಳ್ಳೋರು. ನಿಜವಾಗಿಯೂ ಅಂತಹ ರಸಿಕ ಇನ್ನೊಬ್ಬ ಹುಟ್ಟೋಲ್ಲ ರೀ. ವಿಷ್ಣುವರ್ಧನ್ ಕೂಡ ಒಳ್ಳೇ ನಟ. ಯಾಕೆ ಅಷ್ಟು ಬೇಗ ಹೊರಟು ಹೋದ್ರೋ ಗೊತ್ತಿಲ್ಲ. ಇನ್ನೊಬ್ಬರ ಬಗ್ಗೆ ಕೆಟ್ಟದ್ದಾಗಿ ಮಾತಾಡಿದವರಲ್ಲ. ಅಂಬರೀಷ್ ಕೂಡ ಅಷ್ಟೇ ಸೆಟ್‌ನಲ್ಲಿ ತಮಾಷೆಯಾಗಿ ಮಾತಾಡುತ್ತ ನಗಿಸುವ ವ್ಯಕ್ತಿತ್ವದವರು. ಆದರೆ, ವಿಷ್ಣು, ಅಂಬಿ ನಿರ್ದೇಶಕರಿಗೆ ಗೌರವ ಕೊಡುತ್ತಿದ್ದರು. ಆಗ ಅವರಿಗೆ ನಾವು ಗೌರವ ಕೊಡುತ್ತಿದ್ದರಿಂದಲೇ, ಇಂದು ನಮ್ಮ ಮೇಲೆ ಇಷ್ಟೊಂದು ಪ್ರೀತಿ ತೋರಿಸುತ್ತಿದ್ದೀರಿ. ಸರೋಜಮ್ಮ, ಶಿವಾಜಿ ಗಣೇಶ್ ನಂಗಿಷ್ಟ
ನನಗೆ ಕೋಪ ಜಾಸ್ತಿ. ಕಾರಣ ಟೈಮ್‌ಗೆ ಸರಿಯಾಗಿ ಊಟ ಮಾಡದಿದ್ದರೆ ಹಾಗೆ ಆಗ್ತಾ ಇತ್ತು. ನಂಗೆ ಉಪವಾಸ ಮಾಡೋರನ್ನ ಕಂಡರೆ ಆಗಲ್ಲ. ಅದರಲ್ಲಿ ನಂಬಿಕೆ ಇಲ್ಲ. ತಿನ್ನಬೇಕು ಅನಿಸಿದರೆ, ಸಿಕ್ಕಿದ್ದು ತಿಂತೀನಿ. ಹೊಟ್ಟೆಗೆ ಮೋಸ ಮಾಡಬಾರದು. ಎಷ್ಟೋ ಸಲ ಚಿತ್ರೀಕರಣ ಸಮಯದಲ್ಲಿ ಊಟ ಟೈಮ್‌ಗೆ ಆಗದಿದ್ದಾಗ, ಕೋಪಿಸಿಕೊಂಡ ಉದಾಹರಣೆ ಇದೆ. ಕೊನೆಗೆ ಮೊಸರನ್ನ ಸಿಕ್ಕರೂ ಸಾಕು ತಿಂದು ಸಮಾಧಾನಪಡುತ್ತಿದ್ದೆ. ಇನ್ನೊಂದು ವಿಷಯ, ನನಗೆ ಈ ಜೀರೋ ಸೈಜ್ ಮೇಲೆ ನಂಬಿಕೆ ಇಲ್ಲ. ಏನಿದ್ದರೂ ಊಟದ ಕ್ಯಾರಿಯರ್‌ಪ್ಯಾಕ್ ಮೇಲೆ ಮಾತ್ರ ನಂಬಿಕೆ. ಯಾಕ್ರೀ ಊಟ ಮಾಡದೆ ಸಾಯಬೇಕು? ನಿಮ್ಮನ್ನು ನೀವು ಮೊದಲು ಪ್ರೀತಿಸಿ, ಆಗ ಇನ್ನೊಬ್ಬರು ನಿಮ್ಮನ್ನು ಪ್ರೀತಿಸದಿದ್ದರೂ ಪರವಾಗಿಲ್ಲ. ನಾನು ಎಂಜಿಆರ್ ಅವರಿಂದ ನಾಯಕಿ ಹೇಗಿರಬೇಕು, ಹೇಗಿರಬಾರದು ಅನ್ನೋದನ್ನ ಕಲಿತೆ. ನನಗೆ ಬಿ.ಸರೋಜಾದೇವಿ ಅವರೆಂದರೆ ಇಷ್ಟ. ಶಿವಾಜಿಗಣೇಶ್ ಅಚ್ಚುಮೆಚ್ಚು. ಅವರೆಲ್ಲರನ್ನು ನೋಡಿ ಕಲಿತಿದ್ದು ಬಹಳಷ್ಟು ಇದೆ. ನಂಗೆ ಸೌಥ್ ಮೆಂಟಲ್ ಕಂಫರ್ಟ್
ನಾನು ಹಿಂದಿಯ “ಜೂಲಿ’ ನಂತರ ಶೈನ್ ಆಗಲಿಲ್ಲ. ಬಾಲಿವುಡ್‌ನಲ್ಲಿ ಹೆಚ್ಚು ಇರಲು ಆಗಲಿಲ್ಲ. ಸೌತ್‌ನಲ್ಲಿ ಸಿಕ್ಕ ಸಕ್ಸಸ್ ಅಲ್ಲಿ ಸಿಗಲಿಲ್ಲ. ಇಲ್ಲಿ ಐದು ಸಿನಿಮಾ ಮಾಡೋದು ಒಂದೇ, ಹಿಂದಿಯಲ್ಲಿ ಒಂದು ಸಿನಿಮಾ ಮಾಡೋದು ಒಂದೇ. ಅಲ್ಲಿ ಒಂದು ಸಿನಿಮಾ ಮಾಡೋಕೆ ಅಷ್ಟೊಂದು ಟೈಮ್ ತಗೋತ್ತಿದ್ದರು. ಅಷ್ಟಕ್ಕೂ ಅಲ್ಲಿನ ವಾತಾವರಣ ನನಗೆ ಇಷ್ಟ ಆಗಲಿಲ್ಲ. ನಾನು ಆ ದಿನಗಳಲ್ಲೇ ನಾಲ್ಕು ಭಾಷೆಗಳಲ್ಲಿ ಬಿಜಿ ಇದ್ದೆ. ನ್ಯಾಷನ್‌ಲ್ ಅವಾರ್ಡ್ ಕೂಡ ಬಂದಿತ್ತು. ಸಿಕ್ಕಾಪಟ್ಟೆ ಸಿನಿಮಾಗಳೂ ಇದ್ದವು. ನಂಗೆ ಸೌತ್ ಮೆಂಟಲ್ ಕಂಫರ್ಟ್ ಎನಿಸಿತ್ತು. ಸೋ, ಇಲ್ಲೇ ಇರೋಣ ಅಂತ ತೀರ್ಮಾನ ಮಾಡಿದೆ. ನಟನೆ ಜತೆಗೆ ನಾನು ಒಂದು ಸಿನಿಮ ನಿರ್ದೇಶನ ಮಾಡಿದೆ. ಅದು “ಮಕ್ಳಳ ಸೈನ್ಯ’ ನನ್ನ ತಂದೆ ವೈ.ರಾವ್. ಕನ್ನಡದ ಮೊದಲ ಚಿತ್ರ ನಿರ್ದೇಶಿಸಿದ್ದರು. ಅದು ನನ್ನಲ್ಲೂ ಆಸೆ ಮೂಡಿಸಿತ್ತು. ಬಾಲಚಂದರ್ ಬಳಿ ಕೇಳಿಕೊಂಡು ನಿರ್ದೇಶಕಿಯಾಗಿದ್ದೆ. ಆದರೆ, ಮತ್ತೆ ಅಂತಹ ತಪ್ಪು ಮಾಡಲು ಹೋಗಲಿಲ್ಲ! ಬರಹ: ವಿಜಯ್ ಭರಮಸಾಗರ; ಚಿತ್ರಗಳು: ಮನು ಮತ್ತು ಡಿ.ಸಿ. ನಾಗೇಶ್