Advertisement

ನಮ್ಮ ಸಂಸಾರವೆಂಬ ಸುಂದರ ವಾಸ್ತು

10:08 AM Feb 22, 2020 | mahesh |

ಹದಿನೇಳು ವರ್ಷದ ಹಿಂದೆ ಮದುವೆಯಾಗಿ ಈ ಬೃಹತ್‌ ಮನೆಯೊಳಗೆ ಕಾಲಿಟ್ಟಾಗ ನನಗೆ ವಾಸ್ತುಶಾಸ್ತ್ರದ ಬಗ್ಗೆ ತಿಳಿವಳಿಕೆಯೇ ಇರಲಿಲ್ಲ. ಅತ್ತೆ ಸರಸ್ವತಿ ಅವರಾಗಲಿ, ಮಾವ ಕೃಷ್ಣ ಭಟ್ಟರಾಗಲಿ ಇಲ್ಲದೇ ಇದ್ದ ಆ ಸಂದರ್ಭದಲ್ಲಿ ಮನೆಗೆ ನನ್ನನ್ನು ಬರಮಾಡಿಕೊಂಡಿದ್ದು ನನ್ನ ಕೊನೆಯ ನಾದಿನಿ ಸತ್ಯಭಾಮಾ. ಈ ಮನೆಯ ಸಂಸ್ಕೃತಿಯನ್ನು ಪರಿಚಯಿಸಿದ್ದು ಅವಳೇ. ಸುಮಾರು ಎಂಟೂವರೆ ಎಕರೆ ತೋಟವನ್ನು ನಿರ್ವಹಿಸುವುದು ಹೇಗೆ ಮತ್ತು ಮನೆಯ ದೈನಂದಿನ ಶಿಷ್ಟಾಚಾರಗಳನ್ನು ಪಾಲಿಸುವುದು ಹೇಗೆ ಎಂದು ತಿಳಿಸಿಕೊಟ್ಟವಳು. ಪುತ್ತೂರಿನ ನನ್ನ ತವರು ಮನೆಯಲ್ಲಿಯೂ ಕೃಷಿಕಾಯಕ ಇದ್ದುದರಿಂದ ನನಗೆ ಇಂತಹ ಮನೆಯನ್ನು ನಿಭಾಯಿಸುವ ಅರಿವು ಇತ್ತಷ್ಟೇ.

Advertisement

ಹಾಗೆ ಬದುಕಿನ ದಾರಿ ತಾನಾಗಿಯೇ ತೆರೆಯುತ್ತ ಹೋಯಿತು. ವಾಸ್ತುತಜ್ಞರಾಗಿ ಇವರು ಈಗಾಗಲೇ ಸುಮಾರು 250 ದೇವಸ್ಥಾನಗಳಿಗೆ ವಾಸ್ತು ಸಲಹೆ ಮಾಡಿದ್ದಾರೆ. ಮಾವ ಮುನಿಯಂಗಳ ಕೃಷ್ಣ ಭಟ್ಟರು ಪ್ರಸಿದ್ಧ ವಾಸ್ತುಶಾಸ್ತ್ರಜ್ಞರು ಮಾತ್ರವಲ್ಲ, ಜ್ಯೋತಿಷಿಯೂ ಹೌದು. ಅವರ ಮಾರ್ಗದರ್ಶನದಲ್ಲಿ ಪ್ರಸಾದ್‌ ಕೂಡ ವಾಸ್ತು ಅಧ್ಯಯನ ಮಾಡಿದ್ದಾರೆ.

ಪ್ರತೀ ಭಾನುವಾರ ಮನೆಯಲ್ಲಿಯೇ ಇದ್ದು, ದೂರದೂರಿನಿಂದ ಬರುವವರೊಡನೆ ಸಮಾಲೋಚನೆ ನಡೆಸುತ್ತಾರೆ. ಇವರು ಈ ಕೆಲಸವನ್ನು ಇಷ್ಟಪಟ್ಟು ಮಾಡುವುದರಿಂದ ಮನೆಯ ಎಲ್ಲ ಕೆಲಸದ ಹೊಣೆ ನನ್ನದೇ. ಯಾಕೆಂದರೆ, ಇವರಿಗೆ ವಾಸ್ತುಕ್ಷೇತ್ರ ಎಷ್ಟು ಇಷ್ಟವೋ, ಕೃಷಿ ಕ್ಷೇತ್ರವೂ ಅಷ್ಟೇ ಇಷ್ಟ. ಬೆಳಿಗ್ಗೆ ಎದ್ದವರೇ ತೋಟದ ಕಡೆಗೆ ಹೋಗಿ ಒಂದು ರೌಂಡ್‌ ಹಾಕಿ, ಎಲ್ಲ ಕೆಲಸ ಕಾರ್ಯಗಳು ಸಾಂಗವಾಗಿ ನೆರವೇರಿದೆಯೇ ಎಂದು ಗಮನಿಸದೇ ಇದ್ದರೆ ಅವರ ದಿನವೇ ಆರಂಭವಾಗುವುದಿಲ್ಲ. ಬೆಳಗ್ಗಿನ ಕೆಲಸ ಮುಗಿಸಿ ಅವರು ಹೊರಡುವವರೆಗೆ ಅವರ ಫೋನ್‌ಗೆ ನಾನೇ ಒಡತಿ ಅಥವಾ ಅವರ ಪರ್ಸನಲ್‌ ಸೆಕ್ರೆಟರಿ ಎನ್ನಿ.

“ಈ ವೃತ್ತಿಯಿಟ್ಟುಕೊಂಡೂ ಹಳ್ಳಿಯಲ್ಲಿ ಯಾಕೆ ವಾಸವಿದ್ದೀರಿ?’ ಎಂದು ನಮಗೆ ಅನೇಕರು ಕೇಳುತ್ತಾರೆ. ಆದರೆ, ಕೃಷಿ ಕ್ಷೇತ್ರ ಕೊಡುವ ತೃಪ್ತಿಯನ್ನು ಮತ್ಯಾವುದೇ ಕ್ಷೇತ್ರವೂ ಕೊಡುವುದಿಲ್ಲ. ಮನೆಮುಂದಿನ ತೋಟ, ಉತ್ತಮ ಊಟ, ಹಾಯಾದ ತಂಗಾಳಿ ಮತ್ತೆಲ್ಲಿ ಸಿಗುವುದು. ಪೇಟೆಗೆ ಹೋದರೆ ಬೇಕಾದಷ್ಟು ದುಡ್ಡು ಸಂಪಾದಿಸಬಹುದು. ಆದರೆ, ಬೇಕಾದಷ್ಟು ದುಡ್ಡು ಕೊಟ್ಟರೂ ಈ ತೋಟವನ್ನು ಸುಳಿದು ಬರುವ ತಂಪಾದ ತಂಗಾಳಿ ಸಿಕ್ಕೀತೆ? ಇವರು ಹೇಳುವ ಈ ಮಾತುಗಳು ನೂರಕ್ಕೆ ನೂರರಷ್ಟು ನಿಜ ಎಂದು ನನಗೂ ಅನಿಸಿದೆ.

ಕೃಷಿಯೆಂದರೆ ಬರೇ ಅಡಿಕೆ, ಕಾಳುಮೆಣಸು, ತೆಂಗು ಅಷ್ಟೇ ಅಲ್ಲವಲ್ಲ. ಅವುಗಳ ನಡುವೆ ಬದುಕಿಗೆ ಬೇಕಾದ ಎಷ್ಟೊಂದು ವಸ್ತುಗಳು ಲಭಿಸುತ್ತವೆ. ಉದಾಹರಣೆಗೆ, ಹಲಸು ಎಷ್ಟೊಂದು ಸಮೃದ್ಧ ಬೆಳೆ. ಇವರಿಗೋ ಹಲಸಿನ ಉಪ್ಪುಸೊಳೆ ಸೋಂಟೆ ಅಂದರೆ ತುಂಬಾ ಇಷ್ಟ. ಅದಕ್ಕಾಗಿ ಬೇಸಿಗೆಯಲ್ಲಿಯೇ ಹಲಸಿನ ಹಣ್ಣನ್ನು ಕುಯ್ದು ಸೊಳೆಗಳನ್ನು ಬೇಯಿಸಿ ಉಪ್ಪು ಹಾಕಿ ಇಟ್ಟುಕೊಂಡಿರುತ್ತೇನೆ. ಹಲಸಿನ ಹಪ್ಪಳವೆಂದರೆ ಪಂಚಪ್ರಾಣ. ಅದಕ್ಕೆ ಇನ್ನಷ್ಟು ರುಚಿ ಬರಲಿ ಎಂದು ನಾನು ಮಸಾಲೆ ಪಾಪ್ಪಡ ಮಾಡುವುದನ್ನೂ ಕಲಿತುಕೊಂಡಿದ್ದೇನೆ. ಮಗ ಅನಿರುದ್ಧ ಕೃಷ್ಣ ಮತ್ತು ಮಗಳು ಅಭಿಜ್ಞಾ ಸರಸ್ವತಿಗೂ ಹೊಸ ಅಡುಗೆಗಳೆಂದರೆ ಇಷ್ಟ. ಇಷ್ಟೆಲ್ಲ ಖುಷಿ ಕೊಡುವ ಕೃಷಿಯನ್ನು ಬಿಡುವುದಕ್ಕಾಗುತ್ತದೆಯೆ? ಹಾಗೆಂದು, ನಿಭಾಯಿಸುವುದು ಬಹಳವೇನೂ ಸುಲಭವಲ್ಲ.

Advertisement

ಇವರ ಕೃಷಿಪ್ರೀತಿ ಅಷ್ಟಕ್ಕೇ ಮುಗಿಯುವುದಿಲ್ಲ. ಹೂವಿನ ಗಿಡಗಳೆಂದರೆ ನನ್ನಂತೆ ಇವರಿಗೂ ಇಷ್ಟ. ಇಷ್ಟು ಬ್ಯುಸಿ ಕೆಲಸಗಳಿದ್ದರೂ, ನರ್ಸರಿಗೆ ಹೋಗಿ ಯಾವೆಲ್ಲ ಚಂದದ ಹೂವಿನ ಗಿಡಗಳಿವೆ ಎಂದು ನೋಡಿ ತಂದುಕೊಡುತ್ತಾರೆ. ಗುಲಾಬಿ ಹೂವುಗಳು ಕುಂಡಗಳಲ್ಲಿ ಮನೆಮುಂದೆ ಅರಳುವಾಗ ಎಷ್ಟು ಖುಷಿ ಪಡುತ್ತಾರೆ ! ನಿಜಕ್ಕೂ ಇವೆರಡೂ ನಮ್ಮ ನಡುವೆ ಇರುವ ಸಮಾನ ಆಸಕ್ತಿ.

ಇವರ ಮಾರ್ಗದರ್ಶನದಲ್ಲಿ ನಿರ್ಮಾಣವಾದ ಅನೇಕ ದೇವಾಲಯಗಳನ್ನು ನೋಡಿದ್ದೇನೆ. ಕಲ್ಲು ಮತ್ತು ಮರದ ಕೆತ್ತನೆಯ ದೇವಾಲಯಗಳು ತುಂಬ ಸುಂದರವಾಗಿ ಕಾಣುತ್ತವೆ. ಹಿಂದಿನ ಕಾಲದಲ್ಲಿ ಕಲ್ಲಿನ ದೇವಾಲಯಗಳನ್ನು ನಿರ್ಮಿಸುವಾಗ ಎರಡು ಕಲ್ಲು ಕಂಬಗಳನ್ನು ಜೋಡಿಸಲು ಸಿಮೆಂಟು ಅಥವಾ ಗಾರೆ ಎಂಬ ಅಂಟು ಇರಲಿಲ್ಲ. ಆಗೆಲ್ಲ ಎರಡು ಕಲ್ಲುಗಳ ನಡುವಿನ ನಿರ್ವಾತದ (vಚccuಞಛಿ jಟಜಿnಠಿ) ಮೂಲಕ ಅವುಗಳನ್ನು ಬಂಧಿಸುವ ತಂತ್ರವನ್ನು ಅಳವಡಿಸಲಾಗುತ್ತಿತ್ತು. ಪುರಾತನ ಕಲ್ಲಿನ ನಿರ್ಮಾಣಗಳನ್ನು ಗಮನಿಸಿದರೆ ಇದು ಗೊತ್ತಾಗುತ್ತದೆ. ಉದಾಹರಣೆಗೆ, ಕಾಳಹಸ್ತಿ ದೇವಸ್ಥಾನವನ್ನು ಗಮನಿಸಬಹುದು. ಅದೇ ತಂತ್ರವನ್ನು ಬಳಸಿ ಅಂದರೆ, ಸಿಮೆಂಟು ಬಳಸದೇ ಇವರು, ತಲಕಾವೇರಿಯಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಇಂತಹ ವಿಚಾರಗಳ ಬಗ್ಗೆ ಅವರು ನನ್ನೊಡನೆ ಹೆಚ್ಚೇನೂ ಚರ್ಚೆ ಮಾಡುವುದಿಲ್ಲ. ಆದರೆ, ಕುತೂಹಲದಿಂದ ಕೇಳಿದರೆ ಹೇಳುತ್ತಾರೆ.

ಇವರ ಅಜ್ಜನ ತಂದೆಯವರು ಇಕ್ಕೇರಿ ಶಿವಪ್ಪ ನಾಯಕರ ಆಸ್ಥಾನ ವಿದ್ವಾಂಸರಾಗಿದ್ದವರು. ಆ ಸಂದರ್ಭದಲ್ಲಿ ಬದಿಯಡ್ಕದ ಅಣಿಲೆ ಎಂಬಲ್ಲಿ ರಾಜರು ನೀಡಿದ ಉಂಬಳಿ ಆಸ್ತಿಯನ್ನು ಆಧರಿಸಿ, ವೇದ, ಓದು, ಅಧ್ಯಯನದಲ್ಲಿ ನಿರತರಾಗಿದ್ದರು. ಆದರೆ, ಟಿಪ್ಪುಸುಲ್ತಾನ್‌ ಜೊತೆ ಬೇಕಲ ಯುದ್ಧ ನಡೆದಾಗ ಸೋಲು ಉಂಟಾಯಿತು. ರಾಜನು ಸೋತ ಬಳಿಕ ರಾಜನ ಕಡೆಯವರನ್ನು ಗೆದ್ದವರು ಸುಮ್ಮನೆ ಬಿಡುತ್ತಾರೆಯೆ? ಹಾಗಾಗಿ, ಎಲ್ಲವನ್ನೂ ತ್ಯಜಿಸಿದ ಕುಟುಂಬ ವಲಸೆ ಹೋಯಿತು. ಕೆಲವರು ಪಾಲಾ^ಟ್‌ ಕಡೆಗೆ ವಲಸೆಹೋದರೆ, ಅಜ್ಜನವರು ಮುನಿಯಂಗಳಕ್ಕೆ ಬಂದು ನೆಲೆಸಿದರು. ಭೂಮಿ, ಆಸ್ತಿಯನ್ನು ಕಳೆದುಕೊಳ್ಳಬಹುದು; ವಿದ್ಯೆಯನ್ನು ಯಾರೂ ಅಪಹರಿಸಲಾಗದು. ವೇದಾಧ್ಯಯನ, ಜ್ಯೋತಿಷ ಸಿದ್ಧಿ, ಶಾಸ್ತ್ರಾಧ್ಯಯನ ಗೊತ್ತಿದ್ದುದರಿಂದ ಕುಟುಂಬವು ಹೇಗೋ ಮತ್ತೂಮ್ಮೆ ಜೀವನವನ್ನು ಕಟ್ಟಿಕೊಳ್ಳುವುದು ಸಾಧ್ಯವಾಯಿತು. ಅತ್ತ ಪಾಲಾ^ಟ್‌ ಕಡೆ ಹೋದವರೂ ವಿದ್ಯೆಯನ್ನೇ ಆಧರಿಸಿ ಬದುಕು ಕಟ್ಟಿಕೊಂಡರು. ಮಾವ ಮುನಿಯಂಗಳ ಕೃಷ್ಣ ಭಟ್ಟರು ಈ ಗೋಪಾಳಿಯಲ್ಲಿ ಮನೆಕಟ್ಟಿ ನೆಲೆಸಿದರು.

ನನ್ನ ತವರುಮನೆಯಲ್ಲಿಯೂ ಪೌರೋಹಿತ್ಯವೇ ಮುಖ್ಯವಾದ್ದರಿಂದ ಆಚಾರ-ವಿಚಾರಗಳು ನನಗೆ ಹೊಸದೆನಿಸಲಿಲ್ಲ. ಅಪ್ಪ ಮಿತ್ತೂರು ಕೇಶವ ಭಟ್‌ ಇತ್ತೀಚೆಗಷ್ಟೇ ಅಗಲಿದರು. ಚಿಕ್ಕಂದಿನಲ್ಲಿ ಅಲ್ಪಸ್ವಲ್ಪ ಸಂಗೀತ ಕಲಿತದ್ದರಿಂದ ಈಗಲೂ ಹಾಡುತ್ತೇನೆ. ಮನೆ ಕೆಲಸಗಳ ಸವಾಲನ್ನು ಎದುರಿಸುವುದಕ್ಕೆ ನನಗೆ ಈಗ ಅಮ್ಮನೇ ಸ್ಫೂರ್ತಿ. ಅಂದ ಹಾಗೆ ಅಮ್ಮನ ಹೆಸರು ದೇವಕಿ. ಆಕೆ ಎಲ್ಲವನ್ನೂ ಹೇಗೆ ನಿಭಾಯಿಸುತ್ತಿದ್ದಳ್ಳೋ, ಅದುವೇ ನನಗೆ ಮಾರ್ಗದರ್ಶನ.

ಹ್ಮ್! ಇವರಿಗೆ ಪಕ್ಕನೇ ಸಿಟ್ಟುಬರುವುದೂ ಇದೆ. ಆಗೆಲ್ಲ ನಾನು ಸುಮ್ಮನಿದ್ದುಬಿಡುತ್ತೇನೆ. ತುಸುವೇ ಹೊತ್ತಿಗೆ ಆ ಸಿಟ್ಟು ಜರ್ರನೆ ಇಳಿದು ಹೋಗುತ್ತದೆ ಎಂಬ ಭರ್ತಿ ವಿಶ್ವಾಸ ನನಗಿದೆಯಲ್ಲ. ಬೇಗನೇ ಸಿಟ್ಟು ಬರುವುದು ಯಾವುದಕ್ಕೆ ಎನ್ನುತ್ತೀರಿ? ಕಪಾಟಿನಲ್ಲಿ ರೆಫ‌ರೆನ್ಸ್‌ಗೆ ಅಂತ ತಂದಿಟ್ಟುಕೊಂಡ ವಾಸ್ತು ಸಂಬಂಧಿ ಪುಸ್ತಕಗಳು ಇದ್ದ ಜಾಗದಲ್ಲಿ ಇಲ್ಲದೇ ಇದ್ದರೆ ಕಂಡಾಬಟ್ಟೆ ಕೋಪ ಬರುತ್ತದೆ. ಧೂಳು ಒರೆಸಿ ಇಡುವಾಗ ಜಾಗ ತಪ್ಪಿದರೆ ಬೈಗಳು ಗ್ಯಾರೆಂಟಿ. ತಂತ್ರಸಮುತ್ಛಯ ಹಾಗೂ ಶಿಲ್ಪಿರತ್ನ, ಮಯಮತ, ಮನುಷ್ಯಾಲಯ ಚಂದ್ರಿಕಾ ಸದಾ ಅವರ ಕೈಗೆ ಸಿಗುವಂತಿರಬೇಕು. ವಾಸ್ತು ಎಂದರೆ ಅಥರ್ವವೇದದ ಉಪವೇದ ಎನ್ನುತ್ತಾರೆ. ಹಾಗಾಗಿ, ಇದಕ್ಕೆ ಸಂಬಂಧಿಸಿದ ಇನ್ನೂ ನೂರಾರು ಪುಸ್ತಕಗಳನ್ನು ರೆಫ‌ರೆನ್ಸ್‌ಗಾಗಿ ಇಟ್ಟುಕೊಂಡಿದ್ದಾರೆ.

ಅವರು ವಾಸ್ತುತಜ್ಞರಾದ್ದರಿಂದ ಮನೆಯಲ್ಲಿಯೂ ವಸ್ತುಗಳನ್ನು ಇಡುವ ಜಾಗಗಳನ್ನು ಅವರೇ ನಿಗದಿ ಮಾಡುತ್ತಾರೆ. ಭಾರವಾದ ವಸ್ತುಗಳು ಎಲ್ಲಿರಬೇಕು, ಕುಡಿಯುವ ನೀರಿನ ಬಿಂದಿಗೆ ಎಲ್ಲಿರಬೇಕು, ಕಪಾಟು ಎಲ್ಲಿರಬೇಕು ಎಂಬುದನ್ನೂ ಅವರೇ ನಿರ್ಧರಿಸುತ್ತಾರೆ. ಬೆಳಿಗ್ಗೆ ಎದ್ದ ತಕ್ಷಣ ಮನೆಯ ಮುಂದಿನ ಬಾಗಿಲನ್ನೇ ತೆಗೆಯಬೇಕು, ಮುಖತೊಳೆದ ಕೂಡಲೇ ದೇವರ ದೀಪ ಹಚ್ಚಿ ಶಂಖ ಊದಿದ ಬಳಿಕವೇ ಇತರ ಕೆಲಸಗಳು ಶುರು. ಕುಡಿಯುವ ನೀರು ಈಶಾನ್ಯಕ್ಕೆ, ಗ್ರೈಂಡರ್‌ ದಕ್ಷಿಣಕ್ಕೆ. ಹೀಗೆ… ಅವರ ಮಾತನ್ನು ನಾನು ಪಾಲಿಸುತ್ತೇನೆ. ಅದು ನನಗೆ ಅಭಿಮಾನವೂ ಹೌದು, ಖುಷಿಯೂ ಹೌದು.

ಈ ಮನೆಯೇ ನನ್ನ ಪ್ರಪಂಚವಾಗಿದೆ. ಮೊದಲ ಬಾಣಂತನಕ್ಕೆಂದು ತವರಿಗೆ ಹೋಗಿದ್ದೇನಷ್ಟೇ. ಅದಾದ ಬಳಿಕ ಒಂದು ದಿನವೂ ನಾನು ಮನೆಯಿಂದ ಹೊರಹೋದವಳಲ್ಲ. ಹಾಗಾಗಿ, ಅವರಿಗೆ ಸ್ವಂತ ಅಡುಗೆ ಮಾಡಿಕೊಳ್ಳುವ ಸಂದರ್ಭವೇ ಬರಲಿಲ್ಲ ಎನ್ನಿ. ಅವರೇ ಕೆಲವೊಮ್ಮೆ ಚಹಾ ಮಾಡಿಕೊಳ್ಳುವುದುಂಟು. ನನಗಂತೂ ಆತಿಥ್ಯ-ಅಡುಗೆ ಕೆಲಸ ಇಷ್ಟ.
-ವೀಣಾ ಪ್ರಸಾದ್‌ ಮುನಿಯಂಗಳ

ಫೊಟೊ : ಲೋಕೇಶ್‌ ಬಿ. ಎನ್‌.
-ವೀಣಾ ಪ್ರಸಾದ್‌ ಮುನಿಯಂಗಳ

Advertisement

Udayavani is now on Telegram. Click here to join our channel and stay updated with the latest news.

Next