ಸಕಲೇಶಪುರ: ಅಡಕೆ ಕದ್ದೊಯ್ಯಲು ರೈತನ ಜಮೀನಿನಲ್ಲಿ ಬೆಳೆಯಲಾಗಿದ್ದ ಅಡಕೆ ಮರಗಳನ್ನೇ ಕತ್ತರಿಸಿರುವ ಘಟನೆ ಪಟ್ಟಣದ ಸಮೀಪ ನಡೆದಿದೆ.
ತಾಲೂಕಿನ ಕಸಬಾ ಹೋಬಳಿ ಬೈಕೆರೆ ಗ್ರಾಮದ ಹೇಮಾವತಿ ಹೊಳೆ ಹಾಗೂ ರೈಲ್ವೆ ಸೇತುವೆ ಪಕ್ಕದಲ್ಲಿ ಪಟ್ಟಣದ ನಿವೃತ್ತ ಶಾಲಾ ಶಿಕ್ಷಕರಾದ ಸುಬ್ರಹ್ಮಣ್ಯ ಎಂಬವರು ಸುಮಾರು 3 ಎಕರೆ ಜಾಗದಲ್ಲಿ ಕಷ್ಟಪಟ್ಟು ಅಡಕೆ ಹಾಗೂ ಕಾಫಿ ಬೆಳೆದಿದ್ದರು. ಬುಧವಾರ ರಾತ್ರಿ ದುಷ್ಕರ್ಮಿಗಳು ಸುಮಾರು 15 ಮರ ಕತ್ತರಿಸಿ ಅಡಕೆಗೊನೆಗಳನ್ನು ಕದ್ದೊಯ್ದಿದ್ದಾರೆ.
ಇದನ್ನೂ ಓದಿ:- ತೇಜಸ್ವಿ ಪ್ರತಿಷ್ಠಾನದಿಂದ ಕನ್ನಡ ಕೈ ಬರಹ ಸ್ಪರ್ಧೆ
ರೈತನ ಕಣ್ಣೀರು:ಅಪಾರ ಪ್ರಮಾಣದ ಅಡಕೆ ಕದ್ದೊಯ್ದಿರುವುದಲ್ಲದೆ ಸುಮಾರು 15 ವರ್ಷ ಶ್ರಮ ಪಟ್ಟು ಬೆಳೆಸಿದ ಅಡಕೆ ಮರ ನೆಲದ ಪಾಲಾಗಿದ್ದು ರೈತ ಸುಬ್ರಹ್ಮಣ್ಯ ಕಣ್ಣೀರು ಹಾಕುವಂತಾಗಿದೆ. ಅಡಕೆ ದರ ಟನ್‌ಗೆ ಸುಮಾರು 45 ಸಾವಿರಕ್ಕೂ ಹೆಚ್ಚಿದ್ದು ಈ ಹಿನ್ನೆಲೆ ಕೆಲವು ಕಿಡಿಗೇಡಿಗಳು ಮರ ಹತ್ತಿ ಅಡಕೆ ಕುಯ್ಯಲಾಗದೆ ಮರಗಳನ್ನೇ ಕತ್ತರಿಸಿದ್ದಾರೆ.
ಈ ಕುರಿತು ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸಲು ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಕಸಬಾ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಲೋಹಿತ್ ಕೌಡಹಳ್ಳಿ ಒತ್ತಾಯಿಸಿದ್ದಾರೆ.