ಕಾರವಾರ: ದೇಶದ ಹಿರಿಯರು ಹೋರಾಟದಿಂದ ಸ್ವತಂತ್ರಗೊಳಿಸಿಕೊಟ್ಟ ನಂತರ 1950ರಲ್ಲಿ ಸಂವಿಧಾನವನ್ನು ಜಾರಿಗೆ ತಂದು ನಮ್ಮ ದೇಶ ಗಣರಾಜ್ಯವಾಗಿದೆ. ಪ್ರಜಾಪ್ರಭುತ್ವ ಮಾದರಿ ಸರ್ಕಾರದಲ್ಲಿ ಎಲ್ಲರೂ ಬದುಕುವ ಸಮಾನ ಅವಕಾಶವನ್ನು ಸಂವಿಧಾನ ಕಲ್ಪಿಸಿದೆ. ಸಂವಿಧಾನದ ಮೂಲ ಸ್ವರೂಪ, ಆಶಯಗಳಿಗೆ ಧಕ್ಕೆ ಬಾರದಂತೆ ಹಲವು ತಿದ್ದುಪಡಿ ಮಾಡಲಾಗಿದೆ. ಆದರೆ ಸಂವಿಧಾನದ ಮೂಲ ಸ್ವರೂಪ ಬದಲಾವಣೆಗೆ ಕೈ ಹಾಕಿಲ್ಲ. ಅದು ಸಾಧ್ಯವೂ ಇಲ್ಲ ಎಂದು ರಾಜ್ಯ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ಕಾರವಾರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು.
ಕಾರವಾರ ಜಿಲ್ಲಾಡಳಿತದ ಭವನಕ್ಕೆ 10 ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಸಚಿವರು ಘೋಷಿಸಿದರು. ತಾಲೂಕುಗಳಿಗೆ ಮಿನಿ ವಿಧಾನಸೌಧಗಳ ನಿರ್ಮಾಣ ನಡೆದಿದೆ. ಅವಶ್ಯ ಹಣ ಬಿಡುಗಡೆ ಮಾಡಲಾಗಿದೆ ಎಂದರು.
ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಯತ್ನ: ಕಾರವಾರದಲ್ಲಿ ಸೀಬರ್ಡ್ ನೌಕಾನೆಲೆ ವಿಮಾನ ನಿಲ್ದಾಣವನ್ನು ನಾಗರಿಕರಿಗೂ ಬಳಸುವಂತೆ ವಿಸ್ತರಿಸುವ ಪ್ರಕ್ರಿಯೆಗೆ ಬಹಳ ಹಿಂದೆ ನೇವಿ ಜೊತೆ ಒಪ್ಪಂದ ಆಗಿದೆ. ಜನರಿಗೆ ತೊಂದರೆಯಾಗದಂತೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಕಾರವಾರ ಸಮೀಪ ವಿಮಾನ ನಿಲ್ದಾಣವಾದರೆ ಪ್ರವಾಸೋದ್ಯಮ, ಕೈಗಾರಿಕೆ ಮತ್ತು ನಗರಗಳ ಅಭಿವೃದ್ಧಿಗೆ ಅವಕಾಶ ಹೆಚ್ಚಲಿವೆ ಎಂದರು.
ಪೋಡಿ ಮುಕ್ತ ಗ್ರಾಮಗಳು: ಪೋಡಿ ಮುಕ್ತ ಗ್ರಾಮಗಳ ಯೋಜನೆಯಲ್ಲಿ ಈಗಾಗಲೇ 11809 ಗ್ರಾಮಗಳ ಪೋಡಿ ಪ್ರಕ್ರಿಯೆ ಮುಗಿದಿದೆ. 18853 ಗ್ರಾಮಗಳ ಸರ್ವೆ ಆಗಲಿದೆ. ರಾಜ್ಯದಲ್ಲಿ 800 ಸರ್ವೇಯರ್‌ಗಳನ್ನು ನೇಮಿಸಿಕೊಳ್ಳಲಾಗಿದೆ ಎಂದು ಸಚಿವ ದೇಶಪಾಂಡೆ ಹೇಳಿದರು.
ಸಮಾರಂಭದಲ್ಲಿ ಶಾಸಕಿ ರೂಪಾಲಿ ನಾಯ್ಕ, ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ತಾಪಂ ಅಧ್ಯಕ್ಷೆ ಪ್ರಮೀಳಾ ನಾಯ್ಕ, ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಜಿಪಂ ಸಿಇಓ ಮೊಹಮ್ಮದ್ ರೋಶನ್, ಎಸ್ಪಿ ವಿನಾಯಕ ಪಾಟೀಲ, ಇತರರು ಇದ್ದರು.