Advertisement

ಕಾಮಗಾರಿ ವೇಳೆ ಎರಡು ಬಾರಿ ಕುಸಿದಿದ್ದ ತಡೆಗೋಡೆ

05:05 PM Dec 07, 2017 | |

ಗುತ್ತಕಾಡು: ಕಿನ್ನಿಗೋಳಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಗುತ್ತಕಾಡಿನಿಂದ ಕೊಲ್ಲೂರು ಪದವು ಹೋಗುವ ರಸ್ತೆಯಲ್ಲಿ ಗುತ್ತಕಾಡಿನ ರಸ್ತೆಯ ಅಂಚಿನಲ್ಲಿ ಕೆರೆಯೊಂದು ಇದ್ದು, ವಾಹನ ಚಾಲಕರಿಗೆ ತುಂಬಾ ಅಪಾಯಕಾರಿಯಾಗಿದೆ.

Advertisement

ಇಲ್ಲಿನ ಕೆರೆ ದಂಡೆಯ ಮೇಲೆ ಕೆಲವು ವರ್ಷಗಳ ಹಿಂದೆಯೇ ರಸ್ತೆ ಕಾಮಗಾರಿ ಮಾಡಿದ್ದು, ಆ ವೇಳೆ, ಕೆಳಭಾಗದಲ್ಲಿ ಮಾತ್ರ ತಡೆಗೋಡೆ ನಿರ್ಮಾಣ ಮಾಡಿತ್ತು. ಮೇಲಿನ ಭಾಗದಲ್ಲಿ ಆವರಣ ಗೋಡೆ ನಿರ್ಮಿಸಿಲ್ಲ. ನೀರಿನ ರಭಸಕ್ಕೆ ಕೆರೆಯ ತಡೆಗೋಡೆ ಕಾಮಗಾರಿ ಎರಡು ಬಾರಿ ಕುಸಿತ ಕಂಡಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ದಾರಿ ದೀಪ, ಸೂಚನ ಫ‌ಲಕವಿಲ್ಲ
ಗುತ್ತಕಾಡಿನಿಂದ ಕೊಲ್ಲೂರು ಪದವು ರಸ್ತೆಯಲ್ಲಿ ಕೆರೆಯ ಪರಿಸರವನ್ನು ದಟ್ಟವಾದ ಕಾಡು ಆವರಿಸಿದೆ. ಕತ್ತಲಲ್ಲಿ ಸಂಚಾರ ಮಾಡುವವರಿಗೆ ಅದು ಕೆರೆ ಎಂಬುದೇ ಗೋಚರವಾಗುವುದಿಲ್ಲ. ಹಗಲು ಹೊತ್ತಿನಲ್ಲಿ ಶಾಲಾ ವಾಹನ, ರಿಕ್ಷಾ ಹಾಗೂ ಬಸ್‌ ಸಂಚಾರ ಈ ರಸ್ತೆಯಲ್ಲಿ ಆಗುತ್ತಿದ್ದು, ಎಲ್ಲಿಯೂ ಅಪಾಯವನ್ನು ಸೂಚಿಸುವ ಫಲಕವನ್ನು ಹಾಕಿಲ್ಲ. 

ರಸ್ತೆಗಿಂತ ಕೆರೆ ಸುಮಾರು 20 ಅಡಿ ಆಳದಲ್ಲಿದ್ದು, ನಿಯಂತ್ರಣ ತಪ್ಪಿ ಬಿದ್ದರೆ ಅಪಾಯ ನಿಶ್ಚಿತ. ಇದನ್ನು ತಪ್ಪಿಸಲು ರಸ್ತೆಯ ಪಕ್ಕ ಸುಮಾರು 30 ಮೀ. ಉದ್ದಕ್ಕೆ ತಡೆಗೋಡೆ ಅಗತ್ಯವಿದ್ದು, ಕುಸಿಯುತ್ತಿರುವ ಮೋರಿಯ ಮರು ನಿರ್ಮಾಣವೂ ಆಗಬೇಕಿದೆ. ಜನವರಿ ತನಕ ನೀರು ಹರಿದು ಹೋಗುತ್ತಿದ್ದು, ಈ ಹಿಂದೆ ಕೃಷಿ ಕಾರ್ಯಕ್ಕೆ ಬಳಸಲಾಗುತ್ತಿತ್ತು. ಅದರ ಪಕ್ಕದಲ್ಲಿ ಇದ್ದ ಮೋರಿಯ ಇಕ್ಕೆಲಗಳೂ ಕುಸಿಯುವ ಹಂತದಲ್ಲಿದ್ದು, ಅಪಾಯಕಾರಿಯಾಗಿದೆ.

ಕೆರೆಯಲ್ಲಿ ತ್ಯಾಜ್ಯದ ರಾಶಿ
ಈ ಹಿಂದೆ ಎರಡು ಕೆರೆಗಳು ಇದ್ದು, ಕಾಲ ಕ್ರಮೇಣ ಒಂದು ಮುಚ್ಚಿ ಹೋಗಿದೆ. ಮೇ ತಿಂಗಳಿನ ತನಕ ಕೆರೆಯಲ್ಲಿ ನೀರು ಇರುವುದಾದರೂ ಅದರಲ್ಲಿ ಮೂಟೆಗಟ್ಟಲೆ ಕಸ, ತ್ಯಾಜ್ಯ ಹಾಗೂ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಎಸೆದಿರುವುದರಿಂದ, ನೀರು ಉಪಯೋಗಕ್ಕಿಲ್ಲದಂತಾಗಿದೆ. 

Advertisement

ಸಾಮಾನ್ಯ ಸಭೆಯಲ್ಲಿ ಪ್ರಸ್ತಾವಿಸಲಾಗುವುದು
ಗುತ್ತಕಾಡಿನ ಕೆರೆಯು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿದೆ. ಖಾಸಗಿಯವರದಾದರೂ ರಸ್ತೆಗೆ ಬಿಟ್ಟು ಕೊಟ್ಟ ಜಾಗದ ಪಕ್ಕದಲ್ಲಿ ಇದೆ. ಆದರೆ, ಈ ಹಿಂದೆ ಕಾಮಗಾರಿ ನಡೆಸುವ ಸಂದರ್ಭದಲ್ಲಿ ತಡೆಗೋಡೆ ಮಾಡಿಲ್ಲ. ಈ ಬಗ್ಗೆ ಗ್ರಾಮ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ವಿಷಯ ಮಂಡನೆ ಮಾಡಲಾಗುವುದು.
ಅರುಣ್‌ ಪ್ರದೀಪ್‌ ಡಿ’ಸೋಜಾ,
   ಪಂಚಾಯತ್‌ ಅಭಿವೃದ್ಧಿ ಅಧಿಕಾರಿ

ರಘುನಾಥ ಕಾಮತ್‌ ಕೆಂಚನಕೆರೆ

Advertisement

Udayavani is now on Telegram. Click here to join our channel and stay updated with the latest news.

Next