Advertisement

Biodiversity; ಪರ್ವತಗಳ ರಕ್ಷಣೆಯಲ್ಲಿ ಅಡಗಿದೆ ಜೀವವೈವಿಧ್ಯದ ಸಮತೋಲನ

11:31 PM Dec 10, 2023 | Team Udayavani |

ಪ್ರಕೃತಿಯೇ ಒಂದು ವಿಸ್ಮಯಗಳ ಗುತ್ಛ. ಪ್ರಕೃತಿಯ ಪ್ರತಿಯೊಂದು ಅಂಶವೂ ಎಷ್ಟು ಸುಂದರವೋ ಅಷ್ಟೇ ಕೌತುಕ. ಪ್ರಕೃತಿಯ ಇಂತಹ ವೈಶಿಷ್ಟéಗಳಲ್ಲಿ ಪರ್ವತವೂ ಒಂದು. ಕೇವಲ ಭೂ ವೈವಿಧ್ಯ ಮಾತ್ರವಲ್ಲದೆ ಜೀವವೈವಿಧ್ಯದ ಆಧಾರ ಸ್ತಂಭ ಕೂಡ ಈ ಪರ್ವತ, ಬೆಟ್ಟ-ಗುಡ್ಡಗಳಾಗಿವೆ. ಆದರೆ ವರ್ಷಗಳುರುಳಿದಂತೆ ಬದಲಾಗುತ್ತಿರುವ ಹವಾಮಾನ, ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ಪರ್ವತಗಳು, ಬೆಟ್ಟ-ಗುಡ್ಡಗಳು ಅಪಾಯವನ್ನು ಎದುರಿಸುತ್ತಿವೆ. ಇದನ್ನು ಮನಗಂಡ ಜಾಗತಿಕ ಸಮುದಾಯ ಕಳೆದೆರಡು ದಶಕಗಳಿಂದೀಚೆಗೆ ಪರ್ವತಗಳ ಸಂರಕ್ಷಣೆಯ ನಿಟ್ಟಿನಲ್ಲಿ ಕಾರ್ಯೋನ್ಮು ಖವಾಗಿವೆ. ಪರ್ವತಗಳ ಸುಸ್ಥಿರ ಅಭಿವೃದ್ಧಿ ಹಾಗೂ ಪರ್ವತಗಳ ರಕ್ಷಣೆಯ ಕುರಿತು ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸಲು ಪ್ರತೀ ವರ್ಷ ಡಿಸೆಂಬರ್‌ 11ರಂದು ಅಂತಾರಾಷ್ಟ್ರೀಯ ಪರ್ವತ ದಿನವನ್ನು ಆಚರಿಸಲಾಗುತ್ತದೆ.

Advertisement

ಜವಾಬ್ದಾರಿ ಅರಿತು ವ್ಯವಹರಿಸಬೇಕಿದೆ ಪ್ರವಾಸಿಗರು
ಜಗತ್ತಿನ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಪರ್ವತಗಳಿಗೆ ಮೊದಲ ಸ್ಥಾನ ಎಂದರೆ ಅತಿಶಯೋಕ್ತಿಯಲ್ಲ. ಎತ್ತರದ ಪ್ರದೇಶಗಳಿಗೆ ತೆರಳಿ ಮುಗಿಲಿಗೆ ಕೈಚಾಚಲು ಇಷ್ಟಪಡದವರೇ ಇಲ್ಲ. ಇನ್ನು ಚಾರಣಪ್ರಿಯರಂತೂ ಪರ್ವತ ಪ್ರದೇಶಗಳು ಅಚ್ಚುಮೆಚ್ಚಿನ ತಾಣ. ಇದರಿಂದ ಪರ್ವತ, ಬೆಟ್ಟ, ಗುಡ್ಡಗಳ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಬೆಳೆಯುತ್ತಿದೆ. ಆದರೆ ಪ್ರವಾಸ, ಚಾರಣದ ಸಂದರ್ಭ ದಲ್ಲಿ ಪ್ರವಾಸಿಗರು ತೋರುವ ಕೆಲವು ಅಸಹ್ಯ ವರ್ತನೆಗಳು ಪರಿಸರ ವ್ಯವಸ್ಥೆಗೆ ಮುಳುವಾಗಿದೆ. ಪ್ರವಾಸಿಗರು ತಾವು ತೆಗೆದುಕೊಂಡು ಹೋಗುವ ತಿಂಡಿ, ತಿನಿಸುಗಳ ಪ್ಲಾಸ್ಟಿಕ್‌ ಪೊಟ್ಟಣಗಳು, ನೀರು, ತಂಪು ಪಾನೀಯದ ಬಾಟಲಿಗಳು ಮತ್ತಿತರ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆದು ಪರಿಸರಕ್ಕೆ ಹಾನಿ ಉಂಟು ಮಾಡುತ್ತಿದ್ದಾರೆ. ಇದು ಅಲ್ಲಿನ ಜೀವವೈವಿಧ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತಿದೆ. ಪ್ರವಾಸಿಗರು ತಮ್ಮ ಜವಾಬ್ದಾರಿಯನ್ನು ಅರಿತು ವ್ಯವಹರಿಸುವುದು ಅಗತ್ಯ.

ಆಚರಣೆಯ ಹಿನ್ನೆಲೆ
ಪರ್ವತ ಪ್ರದೇಶಗಳ ಆವಶ್ಯಕತೆಯನ್ನು ಮನಗಂಡು, ಅದರ ಸುಸ್ಥಿರ ಅಭಿವೃದ್ಧಿಯ ಅಗತ್ಯ ಮತ್ತು ಪ್ರಾಮುಖ್ಯವನ್ನು ಎತ್ತಿಹಿಡಿಯಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2002ರಲ್ಲಿ ಡಿಸೆಂಬರ್‌ 11 ಅನ್ನು ಅಂತಾರಾಷ್ಟ್ರೀಯ ಪರ್ವತ ದಿನವನ್ನಾಗಿ ಆಚರಿಸುವ ನಿರ್ಧಾರ ಕೈಗೊಂಡಿತು. ಅದರಂತೆ 2003ರಿಂದ ಇದು ಅಧಿಕೃತವಾಗಿ ಜಾರಿಗೆ ಬಂದಿತು.

ಈ ವರ್ಷದ ಧ್ಯೇಯ
ಪ್ರತೀವರ್ಷ ಒಂದೊಂದು ಧ್ಯೇಯವಾಕ್ಯದೊಂದಿಗೆ ವಿಶ್ವದಾದ್ಯಂತ ಪರ್ವತ ದಿನವನ್ನು ಆಚರಿಸಲಾಗುತ್ತದೆ. “ಪರ್ವತ ಪರಿಸರ ವ್ಯವಸ್ಥೆಗಳನ್ನು ಮರುಸ್ಥಾಪಿಸುವುದು’- ಈ ಬಾರಿಯ ಅಂತಾರಾಷ್ಟ್ರೀಯ ಪರ್ವತ ದಿನದ ಧ್ಯೇಯವಾಗಿದೆ. ಪರ್ವತ ಪರಿಸರ ವ್ಯವಸ್ಥೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದ ರೊಂದಿಗೆ ಪ್ರಾಕೃತಿಕ ಪರಿಹಾರ ಮತ್ತು ಹೂಡಿಕೆಗೆ ಉತ್ತೇಜಿಸುವುದು ಇದರ ಉದ್ದೇಶವಾಗಿದೆ.

*ಭೂಮಿಯ ಮೇಲ್ಮೆ„ಯ ಶೇ. 27ರಷ್ಟು ಭಾಗವನ್ನು ಪರ್ವತಗಳು ಆವರಿಸಿವೆ.
*ವಿಶ್ವದ ಒಟ್ಟಾರೆ ಜನಸಂಖ್ಯೆ ಶೇ. 15ರಷ್ಟು ಜನರು ಪರ್ವತ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.
*ಪ್ರಪಂಚದ ಅರ್ಧದಷ್ಟು ಜನಸಂಖ್ಯೆಗೆ ಪರ್ವತಗಳು, ಬೆಟ್ಟ-ಗುಡ್ಡಗಳೇ ಸಿಹಿನೀರಿನ ಮೂಲಗಳಾಗಿವೆ.
* ಹಲವಾರು ಔಷಧೀಯ ಗಿಡಮೂಲಿಕೆಗಳ ಮೂಲನೆಲೆ ಇದೇ ಪರ್ವತ, ಬೆಟ್ಟ-ಗುಡ್ಡಗಳು.
* ಪ್ರಪಂಚದಲ್ಲಿ ಶೇ. 80ರಷ್ಟು ಆಹಾರ ಪೂರೈ ಸುವ 20 ಸಸ್ಯ ಪ್ರಭೇದಗಳಲ್ಲಿ 6 ಪ್ರಭೇದ ಗಳು ಪರ್ವತ ಪರಿಸರದಲ್ಲಿ ಬೆಳೆಯುತ್ತವೆ.
* ಸಮೀಕ್ಷೆಯೊಂದರ ಪ್ರಕಾರ ಶೇ. 84ರಷ್ಟು ಪರ್ವತ ದಲ್ಲಿನ ಸಸ್ಯ ಮತ್ತು ಜೀವ ಪ್ರಭೇದಗಳು ಅಳಿವಿನಂಚಿನಲ್ಲಿವೆ.

Advertisement

ಮಾರಕವಾಗುತ್ತಿರುವ ಮಾನವ ಹಸ್ತಕ್ಷೇಪ
ಅಭಿವೃದ್ಧಿ ಹೆಸರಿನಲ್ಲಿ ನಡೆಯುವ ಪರಿಸರ ವಿರೋಧಿ ಕಾಮಗಾರಿಗಳು, ಈ ಬೆಟ್ಟ, ಗುಡ್ಡಗಳ ಪ್ರದೇಶದಲ್ಲಿ ಎಗ್ಗಿಲ್ಲದೆ ನಡೆಯುವ ಅಕ್ರಮ ಗಣಿಗಾರಿಕೆ, ಪರ್ವತ ಪ್ರದೇಶಗಳು ಮತ್ತದರ ಕಣಿವೆ ಪ್ರದೇಶಗಳಲ್ಲಿರುವ ಅರಣ್ಯದ ನಾಶ ಮತ್ತಿತರ ಚಟುವಟಿಕೆಗಳು ಕೂಡ ಪರ್ವತಗಳು ಮತ್ತು ಬೆಟ್ಟ-ಗುಡ್ಡಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಪರ್ವತ, ಬೆಟ್ಟ,ಗುಡ್ಡಗಳು ನಮ್ಮ ಪರಿಸರದ ಅವಿಭಾಜ್ಯ ಅಂಗವಾಗಿದ್ದು, ಇವೆಲ್ಲದರ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಮುಂದಿನ ಪೀಳಿಗೆಗೆ ಸುಸ್ಥಿರ ಪರಿಸರವನ್ನು ಹಸ್ತಾಂತರಿಸಬೇಕಿರುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ.

ಜೀವವೈವಿಧ್ಯದ ಸಮತೋಲನಕ್ಕೆ ಪರ್ವತಗಳ ಉಳಿವು ಅಗತ್ಯ
ಜಾಗತಿಕವಾಗಿ ಹವಾಮಾನದಲ್ಲಾಗುತ್ತಿರುವ ಬದಲಾವಣೆ, ಮಿತಿಮೀರಿದ ಶೋಷಣೆ ಮತ್ತು ಮಾಲಿನ್ಯದಿಂದ ಪರ್ವತಗಳು ಅಪಾಯದಲ್ಲಿವೆ. ಪರ್ವತಗಳ ಹಿಮನದಿಗಳು ಕರಗಿ ಸಿಹಿನೀರಿನ ಮೂಲಗಳ ಮೇಲೆ ಅಡ್ಡ ಪರಿಣಾಮವನ್ನು ಬೀರುತ್ತಿವೆ. ಅಷ್ಟೇ ಅಲ್ಲದೇ ಮಣ್ಣಿನ ಸವಕಳಿಗೆ ಕಾರಣವಾಗಿ ವ್ಯವಸಾಯ ಮತ್ತು ತಳಭಾಗದಲ್ಲಿ ವಾಸಿಸುತ್ತಿರುವ ಜನರ ಜೀವನಕ್ಕೆ ತೊಂದರೆಯುಂಟಾಗುತ್ತಿದೆ. ಜೀವ ಸರಪಳಿಯು ಸರಿಯಾಗಿ ಕಾರ್ಯ ನಿರ್ವಹಿಸಲು ಜೀವವೈವಿಧ್ಯದ ಸಮತೋಲನ ಅತ್ಯಗತ್ಯ. ಆದ್ದರಿಂದ ಪರ್ವತದ ಉಳಿವಿಗೆ ಶ್ರಮಿಸುವುದು ಪ್ರತಿಯೊಬ್ಬರ ಕರ್ತವ್ಯ. ಅಂತಾರಾಷ್ಟ್ರೀಯ ಪರ್ವತ ದಿನದ ಆಚರಣೆ ಹೆಸರಿಗಷ್ಟೇ ಸೀಮಿತವಾಗದೇ ಪರ್ವತದ ಉಳಿವಿನ ಕೆಲಸವಾಗಲಿ. ಅದಕ್ಕೆ ನಾವು ಕೈಜೋಡಿಸೋಣ.

ಸುಶ್ಮಿತಾ ನೇರಳಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next