ಬೆಂಗಳೂರು: ಜೈಲಿಗೆ ಹೋಗಿ ಬಂದವರನ್ನು ಹಾರಹಾಕಿ ಸತ್ಕರಿಸುವ ಕೆಟ್ಟ ಸಂಸ್ಕೃತಿ ನಮ್ಮ ಸಮಾಜದಲ್ಲಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದ್ದಾರೆ.
ಕುಮಾರಕೃಪಾ ರಸ್ತೆಯ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ವೀ ಸಿಕ್ಸ್ ಕಲಾವಿದರ ತಂಡ ಹಮ್ಮಿಕೊಂಡಿರುವ ವಿವಿಧ ಚಿತ್ರಕಲಾ ಪ್ರದರ್ಶನವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದಿಂದಲೇ ಜನರಿಗೆ ಅನ್ಯಾಯವಾಗುತ್ತದೆ ಎಂಬ ಅಂಶ ನನಗೆ ತಿಳಿದಿದ್ದೇ ಲೋಕಾಯುಕ್ತ ಸಂಸ್ಥೆಗೆ ಬಂದ ನಂತರ. ಜನರ ಸೇವೆ ಮಾಡಬೇಕಾದ ಜನಪ್ರತಿನಿಧಿಗಳು ಹಾಗೂ ಆಡಳಿತ ಮಾಡುವ ಅಧಿಕಾರಿಗಳೇ ಬಹುಪಾಲು ಭ್ರಷ್ಟಾಚಾರ ಮಾಡುತ್ತಿರುವುದು ವಿಷಾದನೀಯ ಎಂದರು.
ದಿನದಿಂದ ದಿನಕ್ಕೆ ಭ್ರಷ್ಟಾಚಾರ ಪ್ರಮಾಣ ಏರುತ್ತಲೇ ಇದ್ದು, 1985ರಲ್ಲಿ ರಾಜೀವ್ ಗಾಂಧಿ ಹೇಳಿದಂತೆ ಅಂದಿನ ಕಾಲಕ್ಕೆ ಸರ್ಕಾರ ಯಾವುದೇ ಕೆಲಸಕ್ಕೆ ಹಣ ಬಿಡುಗಡೆ ಮಾಡಿದರೆ 1 ರೂ.ನಲ್ಲಿ 15 ಪೈಸೆಯಾದರೂ ಜನರಿಗೆ ತಲುಪುತ್ತಿತ್ತು. ಆದರೆ, ಇಂದು ಸರ್ಕಾರ 10 ನರೂ. ನೀಡಿದರೂ ಅದರಲ್ಲಿ 15 ಪೈಸೆ ಕೂಡ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂದು ಹೇಳಿದರು.
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಲ್ಲಿ ಬಿಜೆಪಿಯಲ್ಲಿ ಶೇ.37, ಕಾಂಗ್ರೆಸ್‌ನಲ್ಲಿ ಶೇ.22 ಹಾಗೂ ಜೆಡಿಎಸ್‌ನಲ್ಲಿ ಶೇ.20ರಷ್ಟು ಅಭ್ಯರ್ಥಿಗಳು ಅಪರಾಧ ಹಿನ್ನಲೆ ಉಳ್ಳವರಾಗಿದ್ದಾರೆ. ಆದ್ದರಿಂದ ಈ ಬಾರಿಯಾದರೂ ಕೊಂಚ ಆಲೋಚಿಸಿ, ಸೂಕ್ತ ಅಭ್ಯರ್ಥಿಗೆ ಮತ ಹಾಕುವ ಅನಿವಾರ್ಯತೆ ಇದೆ ಎಂದರು. ಕಲಾವಿದ ಪಿ.ಸಂಪತ್ ಕುಮಾರ್, ಶಿವಾನಂದ ಭಾಗವಹಿಸಿದ್ದರು.
ವೀ ಸಿಕ್ಸ್ ತಂಡದ ಸದಸ್ಯರಾದ ಗಣಪತಿ ಅಗ್ನಿಹೋತ್ರಿ, ಮೋಹನ್ ಜಂಗಿಡ್, ರೇಣು ಬರಿವಾಲ್, ಕೃಷ್ಣಾ ವಿಠuಲ್ ಕುಚಾನ್, ಜಯಂತ್ ಬಿ.ಹುಬ್ಳಿ, ಆನಂದ್ ಬೇಕ್ವಾಡ್, ಶೋಭಾ ಅನಿಲ್ ಪಾಟಿ ಅವರ ಚಿತ್ರ ಕಲಾಕೃತಿಗಳು ಮೇ 16ರವರೆಗೆ ಪ್ರದರ್ಶನಗೊಳ್ಳಲಿವೆ.
ಆಕರ್ಷಕ ಚಿತ್ರಗಳ ಪ್ರದರ್ಶನಳ: ಗುರುವಾರ ಆರಂಭವಾದ ಈ ಚಿತ್ರಕಲಾ ಪ್ರದರ್ಶನ ಮೇ 16ರವರೆಗೆ ನಡೆಯಲಿದ್ದು, ವೀ ಸಿಕ್ಸ್ ತಂಡದ ಸದಸ್ಯರ ಕೂಂಚದಲ್ಲಿ ಮೂಡಿಬಂದಿರುವ 50ಕ್ಕೂ ಹೆಚ್ಚು ಅತ್ಯಾಕರ್ಷಕ ಚಿತ್ರಗಳು ಪ್ರದರ್ಶನಕ್ಕಿವೆ.
1ಗಿ1 ರಿಂದ 6ಗಿ6 ಗಾತ್ರದಲ್ಲಿ ಸಾಂಪ್ರದಾಯಿಕ ಹಾಗೂ ಸೌಂದರ್ಯಕ್ಕೆ ಶೈಲಿಗೆ ಸಂಬಂಧಿಸಿದ ಮಾನವೀಕ, ಅಮೂರ್ತ ಹಾಗೂ ವಸ್ತು ಕೇಂದ್ರಿತ ಚಿಂತನೆಗಳನ್ನು ಆಧರಿಸಿದ ಚಿತ್ರಗಳು ಗಮನಸೆಳೆಯುತ್ತವೆ. ಈ ಚಿತ್ರಗಳು 10 ಸಾವಿರದಿಂದ ಆರಂಭವಾಗಿ 1.5 ಲಕ್ಷ ರೂ.ವರೆಗೂ ಬೆಲೆಬಾಳಲಿದ್ದು, ಆಸಕ್ತರು ಖರೀದಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.