ಯಾದಗಿರಿ: ಜಿಲ್ಲೆಯಾದ್ಯಂತ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ ಕಾರ್ಯಕ್ರಮ ಜ.30ರಿಂದ ಫೆ.13ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.30ರಂದು ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಆಯೋಜಿಸಿರುವ ಮಹಾತ್ಮ ಗಾಂಧೀಜಿ ಹುತಾತ್ಮ ದಿನಾಚರಣೆಯಲ್ಲಿ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನಕ್ಕೆ ಚಾಲನೆ ನೀಡಲಾಗುವುದು. ಅದರಂತೆ ತಾಲೂಕು ಮಟ್ಟದಲ್ಲಿ ಮತ್ತು ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಆಚರಿಸಲಾಗುವುದು. ಈ 15 ದಿನಗಳ ಅವಧಿಯಲ್ಲಿ ಕುಷ್ಠರೋಗಿಗಳನ್ನು ಪತ್ತೆ ಹಚ್ಚುವ ಜೊತೆಗೆ ಚಿಕಿತ್ಸೆ ಕೊಡಿಸಲಾಗುವುದು ಎಂದು ಹೇಳಿದರು.
ಆತಂಕ ಬೇಡ: 2017ರಿಂದ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ ಹಮ್ಮಿಕೊಳ್ಳಲಾಗುತ್ತಿದೆ. ಆರಂಭದಲ್ಲಿಯೇ ರೋಗ ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದು ಮತ್ತು ಕುಷ್ಠರೋಗಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಆಂದೋಲನದ ಮುಖ್ಯ ಉದ್ದೇಶವಾಗಿದೆ. ಈ ರೋಗವನ್ನು ಬಹುವಿಧ ಔಷಧ ಚಿಕಿತ್ಸೆಯಿಂದ ಗುಣಪಡಿಸಬಹುದಾಗಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ. ಔಷಧ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುತ್ತದೆ ಎಂದು ತಿಳಿಸಿದರು.
49 ಜನರಿಗೆ ಚಿಕಿತ್ಸೆ: ಕುಷ್ಠರೋಗವು ಮುಖ್ಯವಾಗಿ ನರ ಮತ್ತು ಚರ್ಮದ ಕಾಯಿಲೆಯಾಗಿದ್ದು, ಮೈಕೊಬ್ಯಾಕ್ಟೀರಿಯಂ ಲೆಪ್ರ ಎಂಬ ರೋಗಾಣುವಿನಿಂದ ಬರುತ್ತದೆ. ಈ ರೋಗ ಕಾಣಿಸಿಕೊಳ್ಳಲು 2 ರಿಂದ 5 ವರ್ಷ ಬೇಕು. ಚಿಕಿತ್ಸೆ ಹೊಂದದ ಕುಷ್ಠರೋಗಿ ಸೀನಿದಾಗ ಅಥವಾ ಕೆಮ್ಮಿದಾಗ ಹೊರಬರುವ ಬ್ಯಾಕ್ಟೀರಿಯಾದಿಂದ ರೋಗ ಹರಡುತ್ತದೆ. ದೇಹದ ಮೇಲೆ ತಿಳಿ ಬಿಳಿ ಅಥವಾ ತಾಮ್ರ ಬಣ್ಣದ ಸ್ಪರ್ಶ ಜ್ಞಾನವಿಲ್ಲದ ಮಚ್ಚೆ ಹಾಗೂ ಕೈ-ಕಾಲುಗಳಲ್ಲಿ ಜೋಮು ಉಂಟಾಗುವುದು ರೋಗದ ಪ್ರಾರಂಭಿಕ ಲಕ್ಷಣಗಳಾಗಿವೆ. ಜಿಲ್ಲೆಯಲ್ಲಿ 49 ಜನ ಕುಷ್ಠರೋಗದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ರೋಗ ಜಾಗೃತಿ: ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ| ಭಗವಂತ ಅನವಾರ ಮಾತನಾಡಿ, ಕುಷ್ಠರೋಗದ ಬಗ್ಗೆ ಶಾಲಾ-ಕಾಲೇಜುಗಳಲ್ಲಿ ಭಾಷಣ, ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಿ ಸ್ಪರ್ಶ ಕುಷ್ಠರೋಗದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಜ.30ರಂದು ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕುಷ್ಠರೋಗ ನಿರ್ಮೂಲನೆಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕೊಡುಗೆ ಕುರಿತು ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿಗಳು ಯಾದಗಿರಿ ಜಿಲ್ಲೆಯನ್ನು ಕುಷ್ಠರೋಗ ಮುಕ್ತವಾಗಿಸುವ ಕುರಿತು ಸಂದೇಶ ನೀಡುವರು ಎಂದು ಹೇಳಿದರು.
ದೇಹದ ಮೇಲಿನ ಯಾವುದೇ ಮಚ್ಚೆ ಕುಷ್ಠರೋಗದ ಲಕ್ಷಣವಾಗಿರಬಹುದು. ಆದ್ದರಿಂದ ಮಚ್ಚೆಗಳನ್ನು ಗುಪ್ತವಾಗಿರಿಸದೇ ವೈದ್ಯರಿಗೆ ತೋರಿಸಬೇಕು. ಚಿಕಿತ್ಸೆ ಅವಧಿ 6ರಿಂದ 12 ತಿಂಗಳು ಇದ್ದು, ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದು. ರೋಗದ ಪ್ರಾರಂಭಿಕ ಹಂತದಲ್ಲಿ ಕ್ರಮಬದ್ಧ ಬಹುವಿಧ ಔಷಧ ಚಿಕಿತ್ಸೆ ಪಡೆಯುವುದರಿಂದ ಸಂಪೂರ್ಣ ಗುಣಮುಖ ಹಾಗೂ ಅಂಗವಿಕಲತೆ ತಡೆಗಟ್ಟಬಹುದು ಎಂದು ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಹಬೀಬ್ ಉಸ್ಮಾನ್ ಪಟೇಲ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದಾರ ಶಂಕರ ಹಾಜರಿದ್ದರು.
ಆಂದೋಲನ ಅವಧಿಯಲ್ಲಿ ಗ್ರಾಪಂ ಮಟ್ಟದಲ್ಲಿ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಿ, ಜನರಿಗೆ ಪ್ರಶ್ನೆ ಕೇಳುವ ಮೂಲಕ ರೋಗ ಪತ್ತೆ ಹಚ್ಚಲಾಗುವುದು. ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ, ಕುಷ್ಠರೋಗದ ಬಗ್ಗೆ ಅರಿವು ಮೂಡಿಸಲಿದ್ದಾರೆ.
•ಡಾ| ಭಗವಂತ ಅನವಾರ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ