ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ ಗೌರಮ್ಮ ಚನ್ನಪ್ಪ ಹಲಗತ್ತಿ ದತ್ತಿ ಅಡಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಳೆದ 3 ವರ್ಷಗಳಿಂದ ಕೊಡ ಮಾಡುತ್ತಿರುವ “ಶ್ರಮಿಕ ಮಹಿಳೆ ಸೇವಾ ಪ್ರಶಸ್ತಿ’ಯನ್ನು ಈ ಸಾಲಿನಲ್ಲಿ ಇಬ್ಬರು ಮಹಿಳೆಯರಿಗೆ ನೀಡಲಾಗುತ್ತಿದೆ.
ವಿಕಲಚೇತನಳಾಗಿರುವ ಮಹಿಳೆಯೊಬ್ಬಳು 40 ವರ್ಷಗಳ ಕಾಲ ನಿರಂತರ ಶ್ರಮಪಟ್ಟು ಶಾಲೆ ಕಟ್ಟಿ ಬೆಳೆಸಿ, ಇಂದು 5000 ಸಾವಿರ ಮಕ್ಕಳಿಗೆ ಉತ್ಕೃಷ್ಟ ಶಿಕ್ಷಣ ನೀಡಲು ಕಾರಣರಾದ ದಾವಣಗೆರೆಯ ಸಿದ್ಧಗಂಗಾ ಶಾಲೆಯ ಪ್ರಧಾನ ಗುರುಮಾತೆ ಜಸ್ಟಿನ್ ಡಿ.ಸೋಜ ಅವರಿಗೆ “ಶ್ರಮಿಕ ಮಹಿಳೆ ಸೇವಾ ಪ್ರಶಸ್ತಿ-2016′ ನೀಡಿ ಗೌರವಿಸುತ್ತಿದೆ.
ಹಾಗೆಯೇ 2017ರ ಪ್ರಶಸ್ತಿಯನ್ನು ಅನಕ್ಷರಸ್ಥ ಮಹಿಳೆ, ದಲಿತ ಸಮುದಾಯದಲ್ಲಿ ಜನಿಸಿದ ದ್ಯಾಮವ್ವ ಮುಸ್ಯಪ್ಪ ಮಾದರ ಅವರಿಗೆ ನೀಡಲಾಗುತ್ತಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಮಾ.25ರಂದು ಸಂಜೆ 5 ಗಂಟೆಗೆ ಕವಿಸಂನಲ್ಲಿ ಜರುಗಲಿದೆ. ಮುಂಡರಗಿ ತೋಂಟದಾರ್ಯಮಠದ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.
ಶ್ರಮಿಕ ಮಹಿಳೆ ಪ್ರಶಸ್ತಿಯನ್ನು ಡಾ|ಗುರುಲಿಂಗ ಕಾಪಸೆ ಅವರು ದಾವಣಗೆರೆಯ ಜಸ್ಟಿನ್ ಡಿ.ಸೋಜ ಹಾಗೂ ಕಲಹಾಳದ ದ್ಯಾಮವ್ವ ಮುಸ್ಯಪ್ಪ ಮಾದರ ಅವರಿಗೆ ಪ್ರದಾನ ಮಾಡುವರು. ಅತಿಥಿಗಳಾಗಿ ಕತೆಗಾರ್ತಿ ಡಾ| ವಿನಯಾ ಒಕ್ಕುಂದ, ಜಿಲ್ಲಾಧಿಕಾರಿ ಡಾ|ಎಸ್.ಬಿ. ಬೊಮ್ಮನಹಳ್ಳಿ, ಹೊಸತು ಪತ್ರಿಕೆಯ ಸಂಪಾದಕ ಡಾ|ಸಿದ್ಧನಗೌಡ ಪಾಟೀಲ, ಜನಪದ ವಿದ್ವಾಂಸರಾದ ಡಾ| ಶ್ರೀಶೈಲಹುದ್ದಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಆರ್.ಸಿ.ಹಲಗತ್ತಿ ಆಗಮಿಸಲಿದ್ದಾರೆ.
ನಾಡೋಜ ಡಾ| ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಧಾರವಾಡ ರತಿಕಾ ನೃತ್ಯ ನಿಕೇತನದ ನಾಗರತ್ನಾ ಹಡಗಲಿ ನ್ಯತ್ಯ ಕಾರ್ಯಕ್ರಮ ನಡೆಸಿಕೊಡುವರು. ಇದೇ ಸಂದರ್ಭದಲ್ಲಿ ದತ್ತಿ ದಾನಿ ಗೌರಮ್ಮ ಚೆನ್ನಪ್ಪ ಹಲಗತ್ತಿ ಅವರು 95 ಪೂರೈಸಿದ ಹಿನ್ನೆಲೆಯಲ್ಲಿ ಬಂಧು-ಬಳಗ ಹಾಗೂ ಸಾರ್ವಜನಿಕರು ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಮಾರ್ಚ ತಿಂಗಳ ದತ್ತಿ ಕಾರ್ಯಕ್ರಮ ಸಂಯೋಜಕರಾದ ಶಂಕರ ಹಲಗತ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.