ಕೆ.ಆರ್.ಪುರ: ಕಿಡಿಗೇಡಿಗಳು ಗುಂಪೊಂದು ಕಲ್ಲುಗಳನ್ನು ಎಸೆದು ಮನೆಯ ಕಿಟಕಿ ಗಾಜು ಪುಡಿ ಮಾಡಿದ್ದಲ್ಲದೆ, ಮನೆ ಮುಂದೆ ನಿಲ್ಲಿಸಿದ್ದ ಆಟೋಗಳನ್ನು ಜಖಂಗೊಳಿಸಿದ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಚನ್ನಸಂದ್ರದಲ್ಲಿ ಶನಿವಾರ ರಾತ್ರಿ ನಡೆದಿದೆ.
ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಕೆ.ಚನ್ನಸಂದ್ರ ಗ್ರಾಮದ ಮುನೇಶ್ವರಸ್ವಾಮಿ ದೇವಾಲಯದ ಬಳಿ ಬಂದ ಕೆಲ ಕಿಡಿಗೇಡಿಗಳು, ರಸ್ತೆ ಬದಿ ನಿಲ್ಲಿಸಿದ್ದ 6 ಆಟೋಗಳನ್ನು, ಕಲ್ಲು ಹಾಗೂ ದೊಣ್ಣೆಗಳನ್ನು ಬಳಸಿ ಜಖಂಗೊಳಿಸಿದ್ದಾರೆ. ಇದೇ ವೇಳೆ ಮನೆಯೊಂದರ ಕಿಟಕಿ ಗಾಜುಗಳ ಕೂಡ ಪುಡಿಗಟ್ಟಿದ್ದಾರೆ.
ಹೊರಗೆ ಭಾರೀ ಸದ್ದಾಗುತ್ತಿದ್ದುದನ್ನು ಕೇಳಿ ಸ್ಥಳೀಯರು ಮನೆಯಿಂದ ಹೊರಬರುವಾಗ, ಮನೆಯಿಂದ ಹೊರಬರದಂತೆ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ. ರಾಮಮೂರ್ತಿನಗರ ವ್ಯಾಪ್ತಿಯಲ್ಲಿ ಇತ್ತೀಚೆಗೆ ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗಿದ್ದು, ಅವರೇ ಈ ಕೃತ್ಯ ಎಸಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಶಿವಾಜಿನಗರ, ಕಮ್ಮನಹಳ್ಳಿ, ಟ್ಯಾನರಿ ರಸ್ತೆ, ಬಾಬುಸಪಾಳ್ಯ, ಲಿಂಗರಾಜಪುರ ಭಾಗಗಳಿಂದ ಬರುವ ಪುಂಡರು, ಕಳೆದ ಐದಾರು ತಿಂಗಳಿನಿಂದ ಕೆ.ಚನ್ನಸಂದ್ರದ ಮುನೇಶ್ವರಸ್ವಾಮಿ ದೇವಸ್ಥಾನದ ಬಳಿ ಕುಳಿತು ಗಾಂಜಾ ಸೇವಿಸುತ್ತಿದ್ದಾರೆ. ಇದನ್ನು ಪ್ರಶ್ನಿಸುವ ಸ್ಥಳೀಯ ನಿವಾಸಿಗಳನ್ನು ಅವಾಚ್ಯವಾಗಿ ನಿಂದಿಸಿ ಗಲಾಟೆ ಮಾಡುತ್ತಿದ್ದಾರೆ.
ಮುನೆಶ್ವರಸ್ವಾಮಿ ದೇವಾಲಯ ಗಾಂಜಾ ಅಡ್ಡೆಯಾಗಿದ್ದು, ವ್ಯಸನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದೆವು. ಈ ವಿಷಯ ತಿಳಿದು ತಡರಾತ್ರಿ ಬಂದ 15ಕ್ಕೂ ಹೆಚ್ಚು ದುಷ್ಕರ್ಮಿಗಳು, ವಾಹನ, ಮನೆಗೆ ಹಾನಿ ಮಾಡಿದ್ದಾರೆ ಎಂದು ಸ್ಥಳೀಯ ನಿವಾಸಿ ಜನಾರ್ದನ್ ಅರೋಪಿಸಿದ್ದಾರೆ.
ರಾಜಧಾನಿಯ ವಿವಿಧ ಭಾಗಗಳಿಂದ ಬರುವ ಗಾಂಜಾ ವ್ಯಸನಿಗಳು ಇಲ್ಲಿನ ಮುನೇಶ್ವರಸ್ವಾಮಿ ದೇವಾಲಯದಲ್ಲೇ ಕುಳಿತು ಗಾಂಜಾ ಸೇವಿಸುತ್ತಾರೆ. ಈ ಬಗ್ಗೆ ಸ್ಥಳೀಯರು ಪೊಲೀಸ್ ಠಾಣೆಗೆ ದೂರು ನೀಡಿದರೂ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ. ಹೀಗಾಗಿ ದೇವಾಲಯದ ಆವರಣದಲ್ಲಿ ಗಾಂಜಾ ಸೇವನೆ ಮಾಡುವವರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ.
ಗಾಂಜಾ ವ್ಯಸನಿಗಳ ಹಾವಳಿಯಿಂದಾಗಿ, ರಾತ್ರಿ ವೇಳೆ ಸಾರ್ವಜನಿಕರು ಓಡಾಡುವುದೂ ಕಷ್ಟವಾಗಿದೆ. ಶನಿವಾರ ರಾತ್ರಿ ಅಟ್ಟಹಾಸ ಮೆರೆದ ದುಷ್ಕರ್ಮಿಗಳು, ಮನೆಯೊಂದರ ಕಿಟಕಿ ಗಾಜು ಪುಡಿ ಮಾಡಿ, ಆ ಮನೆ ಮಾಲೀಕರಿಗೆ ಬೆದರಿಕೆ ಹಾಕಿದ್ದಾರೆ. ಈ ಕಿಡಿಗೇಡಿಗಳ ಹಾವಳಿಗೆ ಪೊಲೀಸರು ಅದಷ್ಟೂ ಬೇಗ ಕಡಿವಾಣ ಹಾಕಬೇಕು ಎಂದು ಬಿಬಿಎಂಪಿ ಮಾಜಿ ಸದಸ್ಯ ಕಲ್ಕೆರೆ ಶ್ರೀನಿವಾಸ್ ಒತ್ತಾಯಿಸಿದ್ದಾರೆ.