ಬೆಂಗಳೂರು: ನಗರದ ವಿವಿಧೆಡೆ ಇರುವ ವಾಣಿಜ್ಯ ಮಳಿಗೆಗಳಿಂದ ಲಕ್ಷಾಂತರ ರೂ. ಹಣ ಸಂಗ್ರಹಿಸಿ ಕೊಂಡೊಯ್ಯುತ್ತಿದ್ದ ರೈಟರ್ ಸೇಫ್ಗಾರ್ಡ್ ಸಂಸ್ಥೆಯ ಇಬ್ಬರು ಸಿಬ್ಬಂದಿಯನ್ನು ಅಡ್ಡಗಟ್ಟಿದ ಆರು ಮಂದಿ ದುಷ್ಕರ್ಮಿಗಳು 24ಲಕ್ಷ ರೂ. ಹಣ ದರೋಡೆ ಮಾಡಿ ಪರಾರಿಯಾಗಿರುವ ಘಟನೆ ವಿಲ್ಸನ್‌ಗಾರ್ಡ್‌ನ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಶಿವಾಜಿನಗರ ನಿವಾಸಿ ದೇವೇಂದ್ರ ಮತ್ತು ವಿಲ್ಸನ್‌ಗಾರ್ಡ್‌ನ್ ನಿವಾಸಿ ಮಂಜುನಾಥ್ ಹಲ್ಲೆಗೊಳಗಾದವರು. ಕಳೆದ ಐದು ವರ್ಷಗಳಿಂದ ರೈಟರ್ ಸೇಫ್ಗಾರ್ಡ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ದೇವೇಂದ್ರ ಮತ್ತು ಮಂಜುನಾಥ್, ಪ್ರತಿ ನಿತ್ಯ ನಗರದ ವಿವಿಧೆಡೆ ಇರುವ ಔಷಧಿ ಮಳಿಗೆಗಳು, ಬಟ್ಟೆ ಅಂಗಡಿಗಳು ಸೇರಿ ವಿವಿಧ ವಾಣಿಜ್ಯ ಮಳಿಗೆಗಳಿಂದ ಲಕ್ಷಾಂತರ ರೂ. ಹಣ ಸಂಗ್ರಹಿಸಿ ಸಂಸ್ಥೆಗೆ ಜಮೆ ಮಾಡುತ್ತಿದ್ದರು.
ಸೋಮವಾರ ಕೂಡ ರಾಜಾಜಿನಗರ, ಕೆ.ಜಿ.ಹಳ್ಳಿ ಸೇರಿದಂತೆ ವಿವಿಧೆಡೆಯ ವ್ಯಾಪಾರ ಮಳಿಗೆಗಳಿಂದ 24 ಲಕ್ಷ ರೂ. ಹಣ ಸಂಗ್ರಹಿಸಿದ್ದಾರೆ. ಬಳಿಕ ರಾತ್ರಿ 10 ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಶಾಂತಿನಗರದಲ್ಲಿರುವ ಕೆಎಸ್‌ಆರ್‌ಟಿಸಿ ಸರ್ವೀಸ್ ರಸ್ತೆಯಲ್ಲಿ ಹೋಗುತ್ತಿದ್ದರು. ಇದೇ ವೇಳೆ ಮೂರು ಬೈಕ್‌ಗಳಲ್ಲಿ ಹಿಂಬಾಲಿಸಿಕೊಂಡು ಬಂದ ಆರು ಮಂದಿ ದುಷ್ಕರ್ಮಿಗಳು, ದೇವೇಂದ್ರ ಮತ್ತು ಮಂಜುನಾಥ್ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದು ಕೆಳಗೆ ಬೀಳಿಸಿದ್ದಾರೆ.
ನಂತರ ಹೆಲ್ಮೆಟ್ ಹಾಗೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬ್ಯಾಗ್‌ನಲ್ಲಿದ್ದ 24 ಲಕ್ಷ ರೂ. ಹಣವನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದರು. ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳ ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದ್ದು, ಪರಿಚಯಸ್ಥರೇ ಕೃತ್ಯವೆಸಗಿರುವ ಸಾಧ್ಯತೆಯಿದೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ವಿಲ್ಸನ್‌ಗಾರ್ಡ್‌ನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇವಾ ಶುಲ್ಕ: ಪ್ರಸ್ತುತ ದಿನಗಳಲ್ಲಿ ಲಕ್ಷಾಂತರ ರೂ. ವ್ಯಾಪಾರ ನಡೆಸುವ ಅಂಗಡಿ ಮಾಲೀಕರು ಅಭದ್ರತೆ ದೃಷ್ಟಿಯಿಂದ ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಸಲು ಹಿಂದೇಟು ಹಾಕುತ್ತಾರೆ. ಅಂತಹ ವ್ಯಾಪಾರಿಗಳು ಪ್ರತಿನಿತ್ಯದ ವಹಿವಾಟಿನ ಹಣವನ್ನು ಈ ಸಂಸ್ಥೆ ಸಿಬ್ಬಂದಿ ಕೊಟ್ಟು, ಸ್ವೀಕೃತಿ ರಸೀದಿ ಪಡೆಯುತ್ತಾರೆ. ಬಳಿಕ ಈ ಸಂಸ್ಥೆ ಮರು ದಿನ ಅಥವಾ ಅದೇ ದಿನ ನಿರ್ದಿಷ್ಟ ವ್ಯಾಪಾರಿ ಖಾತೆಗೆ ಹಣ ಜಮೆ ಮಾಡುತ್ತದೆ. ಇದಕ್ಕೆ ಸಂಸ್ಥೆ ಇಂತಿಷ್ಟು ಸೇವಾ ಶುಲ್ಕ ವಿಧಿಸುತ್ತದೆ ಎಂದು ಪೊಲೀಸರು ಹೇಳಿದರು.