ಅದಿಲಾಬಾದ್/ನವದೆಹಲಿ: ಕರ್ನಾಟಕದ ಕೋಲಾರದಿಂದ ಹೊರಟಿದ್ದ ಟೊಮಾಟೊ ತುಂಬಿದ ಟ್ರಕ್‌ಗೆ ತೆಲಂಗಾಣ ಪೊಲೀಸರು ರಕ್ಷಣೆ ನೀಡಿರುವಂಥ ಅಚ್ಚರಿಯ ಘಟನೆ ಅದಿಲಾಬಾದ್‌ನಲ್ಲಿ ನಡೆದಿದೆ.
]ಬರೋಬ್ಬರಿ 22 ಲಕ್ಷ ರೂ. ಮೌಲ್ಯದ 18 ಟನ್ ಟೊಮಾಟೊ ಹೊತ್ತ ಟ್ರಕ್ ಕೋಲಾರದಿಂದ ದೆಹಲಿಗೆ ತೆರಳುತ್ತಿತ್ತು. ಹೈದರಾಬಾದ್- ನಾಗ್ಪುರ ರಾಷ್ಟ್ರೀಯ ಹೆದ್ದಾರಿಯ ಮವಾಲಾ ಮಂಡಲ್‌ಗೆ ತಲುಪುತ್ತಿದ್ದಂತೆ ಏಕಾಏಕಿ ಟ್ರಕ್ ರಸ್ತೆಯ ಒಂದು ಬದಿಗೆ ಉರುಳಿತು. ಒಳಗಿದ್ದ ಟೊಮಾಟೊಗಳ ಪೆಟ್ಟಿಗೆಗಳು ರಸ್ತೆ ಮೇಲೆ ಹರಡಿಕೊಂಡವು.
ಮೊದಲೇ ಟೊಮಾಟೊ ಬೆಲೆ ಕೆಜಿಗೆ 200ರಿಂದ 250 ರೂ. ತಲುಪಿರುವ ಈ ಹೊತ್ತಲ್ಲಿ ಇನ್ನೇನು ಸ್ಥಳೀಯರು ಅಲ್ಲಿಗೆ ಧಾವಿಸಿ ಬಂದು ಟೊಮಾಟೊ ಹೊತ್ತೂಯ್ಯುತ್ತಾರೆ ಎಂಬ ಸುಳಿವು ಸಿಗುತ್ತಲೇ ಪೊಲೀಸರು ಕಾರ್ಯಪ್ರವೃತ್ತರಾದರು. ಮವಾಲಾ ಸಬ್ ಇನ್‌ಸ್ಪೆಕ್ಟರ್ ವಿಷ್ಣುವರ್ಧನ್ ಅವರು ಟೊಮಾಟೊಗಳನ್ನು ಕಾಯಲು ನಾಲ್ವರು ಪೊಲೀಸರನ್ನು ತತ್‌ಕ್ಷಣವೇ ನಿಯೋಜಿಸಿದರು. ಇವರ ಜೊತೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಒಂದು ತಂಡವೂ ಟ್ರಕ್ ಸುತ್ತ ಗಸ್ತು ತಿರುಗಲು ಆರಂಭಿಸಿತು. ಸಂಜೆಯ ವೇಳೆಗೆ ಎಲ್ಲ ಟೊಮಾಟೊಗಳನ್ನು ಖಾಲಿ ಮಾಡಿ ಬೇರೊಂದು ಲಾರಿಗೆ ತುಂಬಿ ಕಳುಹಿಸಿದ ಮೇಲೆಯೇ ಪೊಲೀಸರು ವಾಪಸಾದರು.
ಕೆಜಿಗೆ 80 ರೂ.ಗೆ ಟೊಮಾಟೊ ಮಾರಾಟಕ್ಕೆ ನಿರ್ಧಾರ
ಟೊಮಾಟೊ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ, ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ಕೊಂಚ ತಗ್ಗಿಸಿ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಭಾನುವಾರದಿಂದ ಕೆಜಿಗೆ 80 ರೂ.ನಂತೆ ಮಾರಾಟ ಮಾಡಲು ನಿರ್ಧರಿಸಿದೆ. ದೆಹಲಿಯ ವಿವಿಧ ಭಾಗಗಳಲ್ಲಿ ಸಂಚಾರಿ ವ್ಯಾನ್‌ಗಳ ಮೂಲಕ ಶುಕ್ರವಾರ ಕೆಜಿಗೆ 90 ರೂ.ನಂತೆ ಟೊಮಾಟೊ ಮಾರಾಟ ಮಾಡಲು ಆರಂಭಿಸಲಾಗಿತ್ತು. ಈಗ ಅದನ್ನು 80ರೂ.ಗೆ ಇಳಿಸಲಾಗಿದೆ.
“ದೇಶದ 500ಕ್ಕೂ ಹೆಚ್ಚು ಸ್ಥಳಗಳಲ್ಲಿ ಪರಿಸ್ಥಿತಿಯ ಮರು ಮೌಲ್ಯಮಾಪನದ ನಂತರ, ಜು.16ರಿಂದ ಕೆಜಿಗೆ 80 ರೂ.ನಂತೆ ಟೊಮಾಟೊ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಬೆಲೆಗಳು ಅಸಾಧಾರಣವಾಗಿ ಹೆಚ್ಚಾಗಿರುವ ದೇಶದ ಹಲವಾರು ಸ್ಥಳಗಳಲ್ಲಿ ಸರ್ಕಾರದ ಮಧ್ಯಸ್ಥಿಕೆಯಿಂದಾಗಿ ಟೊಮಾಟೊ ಸಗಟು ದರದಲ್ಲಿ ಇಳಿಕೆ ಕಂಡುಬಂದಿದೆ’ ಎಂದು ಸರ್ಕಾರ ತಿಳಿಸಿದೆ.