ಬೆಂಗಳೂರು: ಭಾನುವಾರ ನಗರದ ಹೋಟೆಲ್‌ನಲ್ಲಿ ವಿಚಾರವಾದಿಗಳ ವೇದಿಕೆ ಕರ್ನಾಟಕ ಸಂಘ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ 2016ನೇ ಸಾಲಿನ ಪೆರಿಯಾರ್ ಪ್ರಶಸ್ತಿಯನ್ನು ಕೋಟಗಾನಹಳ್ಳಿ ರಾಮಯ್ಯ ಮತ್ತು 2017ನೇ ಸಾಲಿನ ಪ್ರಶಸ್ತಿಯನ್ನು ಮರಣೋತ್ತರವಾಗಿ ಗೌರಿ ಲಂಕೇಶ್ ಅವರಿಗೆ ಸಮರ್ಪಿಸಲಾಯಿತು.
ಸಮಾರಂಭದಲ್ಲಿ ಮಾತನಾಡಿದ ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಅನಂತಮೂರ್ತಿಯವರ ಪುಸ್ತಕದ ಒಂದು ಮಾತನ್ನು ಕಲಬುರ್ಗಿ ಅವರು ಸಭೆಯಲ್ಲಿ ಉಲ್ಲೇಖ ಮಾಡಿದ್ದರು. ಅದೇ ಅವರ ಹತ್ಯೆಗೆ ಕಾರಣವಾಯಿತು. ಕಲ್ಬುರ್ಗಿ ಮತ್ತು ಗೌರಿಯ ಹಂತಕರು ಹಿಂದೂ ಭಯೋತ್ಪಾದಕರಾಗಿದ್ದಾರೆ. ಅವರನ್ನು ಶೀಘ್ರವೇ ಬಂಧಿಸಬೇಕು. ಇಲ್ಲದಿದ್ದರೆ ಮುಂದೆ ಮತ್ತೂಬ್ಬ ವಿಚಾರವಾದಿ ಹತ್ಯೆಯಾಗಲಿದೆ ಎಂದರು.
ಸ್ವಾಮೀಜಿ ಹತ್ಯೆ ಹೇಳಿಕೆ ನೀಡಿದ್ದರು: ಕಲಬುರ್ಗಿ ಹತ್ಯೆಗೆ ಹದಿನೈದು ದಿನದ ಮುಂಚೆ ಪ್ರಣವಾನಂದ ಸ್ವಾಮೀಜಿ ಸುದ್ದಿಗೋಷ್ಠಿ ಕರೆದು ಐದು ಜನರ ಪ್ರಾಣ ತೆಗೆಯುತ್ತೇನೆ ಎಂದಿದ್ದರು. ಈಗ ಇಬ್ಬರ ಕೊಲೆಯಾಗಿದೆ. ಮುಂದೆ ನಾನು ಮತ್ತು ಭಗವಾನ್ ಲಿಸ್ಟ್‌ನಲ್ಲಿದ್ದೇವೆ ಎಂದ ಅವರು, ಹತ್ಯೆ ಪ್ರಾಯೋಜಕರ ವಿಚಾರಣೆ ನಡೆಸಿದರೆ ಹಂತಕರು ಯಾರೆನ್ನುವುದು ಗೊತ್ತಾಗಲಿದೆ. ಹತ್ಯೆ ಪ್ರಾಯೋಜಕರು ಕರ್ನಾಟಕದವರು. ಆದರೆ ಎಲ್ಲಿಂದಲೋ ಬಾಡಿಗೆ ಕೊಲೆಗಾರರನ್ನು ತಂದಿರಬಹುದು.
ಗೌರಿ ಹತ್ಯೆಗೆ ನ್ಯಾಯ ಸಿಗಲಿದೆ ಅನ್ನೋ ನಂಬಿಕೆ ನನಗಿಲ್ಲ. ಸನಾತನ ಸಂಸ್ಕೃತಿಯಲ್ಲಿ ಹಿಂಸೆಯ ಎರಡು ಮಾದರಿಗಳಿವೆ, ಒಂದು ವಧೆ, ಮತ್ತೂಂದು ಬಲಿ. ಈ ಬಲಿ ಸಂಸ್ಕೃತಿ ತನ್ನ ಹಿತಾಸಕ್ತಿಗಾಗಿ ತನ್ನವರನ್ನೆ ಅಂತ್ಯಗೊಳಿಸುವುದು.ಮತ್ತೂಂದು ವಧೆ ಸಂಸ್ಕೃತಿಯೂ ತನ್ನ ಹಿತಾಸಕ್ತಿಗಾಗಿ ಅನ್ಯರನ್ನು ಬಲಿ ಕೊಡುವುದು ಎಂದು ಹೇಳಿದರು.
ಪತ್ರಕರ್ತ ಅಗ್ನಿ ಶ್ರೀಧರ್ ಮಾತನಾಡಿ, ಮೀಸಲಾತಿ ಇಲ್ಲದಿದ್ದರೆ ದಲಿತರು ಒಂದು ಕಾರ್ಪೊರೇಟರ್ ಸ್ಥಾನವನ್ನೂ ಗೆಲ್ಲಲು ಸಾಧ್ಯವಿಲ್ಲ. ಶಾಸಕರಾಗುವುದು ಕನಸಿನ ಮಾತು. ಮೀಸಲಾತಿ ಶಿಕ್ಷಣ ಕ್ಷೇತ್ರಕ್ಕೆ ಮಾತ್ರವೆಂದೇ ತಿಳಿದಿರುವ ದಲಿತರಿಗೆ ಅದರ ಮಹತ್ವದ ಅರಿವಿಲ್ಲ ಎಂದರು.
ಕಲಬುರ್ಗಿ ಅವರ ಕೊಲೆಯಾಗಿ ಎರಡು ವರ್ಷ ಆದರೂ ಇನ್ನೂ ಪ್ರಕರಣ ಪತ್ತೆಯಾಗಿಲ್ಲ. ಆಗಲೇ ಗೌರಿ ಲಂಕೇಶ್ ಹತ್ಯೆ ಆಗಿದೆ. ರಾಜ್ಯದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ ಎಂದರು. ಸಮಾರಂಭದಲ್ಲಿ ಆರ್‌ಪಿಐ ಮುಖಂಡ ಎಂ.ವೆಂಕಟಸ್ವಾಮಿ, ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ಲೋಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.