Advertisement

ಇಂಗ್ಲೆಂಡ್‌ ಓಟಕ್ಕೆ ಮಳೆ, ವಾರ್ನರ್‌ ಅಡ್ಡಿ

06:15 AM Dec 30, 2017 | Team Udayavani |

ಮೆಲ್ಬರ್ನ್: ಆ್ಯಶಸ್‌ ಕಳೆದುಕೊಂಡ ಬಳಿಕವಾದರೂ ಒಂದಿಷ್ಟು ಪ್ರತಿಷ್ಠೆ ಉಳಿಸಿಕೊಳ್ಳುವ ಇಂಗ್ಲೆಂಡಿನ ಪ್ರಯತ್ನಕ್ಕೆ ಮಳೆ ಅಡ್ಡಿಯಾಗಿದೆ. ಜತೆಗೆ ಮೊದಲ ಇನ್ನಿಂಗ್ಸಿನ ಶತಕವೀರ ಡೇವಿಡ್‌ ವಾರ್ನರ್‌ ತಡೆಯಾಗಿ ನಿಂತಿದ್ದಾರೆ. ಇದರೊಂದಿಗೆ “ಬಾಕ್ಸಿಂಗ್‌ ಡೇ’ ಟೆಸ್ಟ್‌ ಪಂದ್ಯ ಬಹುತೇಕ ಡ್ರಾದತ್ತ ಸಾಗಿದಂತೆ ಕಾಣುತ್ತದೆ.

Advertisement

ಆರಂಭಕಾರ ಅಲಸ್ಟೇರ್‌ ಕುಕ್‌ ಅವರ ಅಜೇಯ ದ್ವಿಶತಕ ಸಾಹಸದಿಂದ 9 ವಿಕೆಟಿಗೆ 491 ರನ್‌ ಮಾಡಿದ್ದ ಇಂಗ್ಲೆಂಡ್‌ 4ನೇ ದಿನವಾದ ಶುಕ್ರವಾರ ಮೊದಲ ಎಸೆತಕ್ಕೇ ಕೊನೆಯ ವಿಕೆಟನ್ನು ಕಳೆದುಕೊಂಡಿತು. ಯಾವುದೇ ರನ್‌ ಗಳಿಸದ ಜೇಮ್ಸ್‌ ಆ್ಯಂಡರ್ಸನ್‌ ಬಾನ್‌ಕ್ರಾಫ್ಟ್ಗೆ ಕ್ಯಾಚಿತ್ತು ಕಮಿನ್ಸ್‌ಗೆ ವಿಕೆಟ್‌ ಒಪ್ಪಿಸಿದರು. ಕುಕ್‌ 244ರಲ್ಲೇ ಅಜೇಯರಾಗಿ ಉಳಿದರು.

164 ರನ್‌ ಹಿನ್ನಡೆಯ ಬಳಿಕ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯ 2 ವಿಕೆಟಿಗೆ 103 ರನ್‌ ಗಳಿಸಿದೆ. ಲಂಚ್‌ ಬಳಿಕ ಆಗಾಗ ಸುರಿಯಲಾರಂಭಿಸಿದ ಮಳೆಯಿಂದಾಗಿ ಆಸೀಸ್‌ಗೆ 43.5 ಓವರ್‌ ಆಟ ಮಾತ್ರ ಸಾಧ್ಯವಾಯಿತು. ಎಡಗೈ ಆರಂಭಕಾರ ಡೇವಿಡ್‌ ವಾರ್ನರ್‌ 40 ರನ್‌, ನಾಯಕ ಸ್ಟೀವನ್‌ ಸ್ಮಿತ್‌ 25 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಬಾನ್‌ಕ್ರಾಫ್ಟ್ (27) ಮತ್ತು ಖ್ವಾಜಾ (11) ಈಗಾಗಲೇ ಔಟಾಗಿದ್ದಾರೆ.

ಈ 2 ವಿಕೆಟ್‌ಗಳನ್ನು ಇಂಗ್ಲೆಂಡ್‌ ಮೊದಲ ಅವಧಿಯಲ್ಲೇ ಹಾರಿಸಿತ್ತು. ಆಸ್ಟ್ರೇಲಿಯದ ಲಂಚ್‌ ಸ್ಕೋರ್‌ 2ಕ್ಕೆ 70 ರನ್‌. ಆಗ ಕಾಂಗರೂ ಪಡೆಗೆ ಆತಂಕ ಎದುರಾಗಿತ್ತು. ಅನಂತರ ಮಳೆಯೇ ಹೆಚ್ಚಿನ ಆಟವಾಡಿದ್ದರಿಂದ ಇಂಗ್ಲೆಂಡ್‌ ಯೋಜನೆ ವಿಫ‌ಲವಾಗುತ್ತ ಹೋಯಿತು. ಕೊನೆಯ 2 ಅವಧಿಗಳಲ್ಲಿ ಆಡಲು ಸಾಧ್ಯವಾದದ್ದು 18.5 ಓವರ್‌ಗಳ ಆಟ ಮಾತ್ರ. ಶನಿವಾರ ಮೆಲ್ಬರ್ನ್ನಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆ. ಹಾಗೆಯೇ “ಬಾಕ್ಸಿಂಗ್‌ ಡೇ ಟೆಸ್ಟ್‌’ ಸ್ಪಷ್ಟ ಫ‌ಲಿತಾಂಶ ಕಾಣುವ ಸಾಧ್ಯತೆಯೂ ಕಡಿಮೆ.

ಕುಕ್‌ ಮತ್ತೂಂದು ದಾಖಲೆ
ತೀವ್ರ ರನ್‌ ಬರಗಾಲದಿಂದಾಗಿ ತಂಡದಲ್ಲಿ ಸ್ಥಾನ ಪಡೆಯುವುದೇ ಅನುಮಾನ ಎಂಬಂತಿದ್ದ ಇಂಗ್ಲೆಂಡ್‌ ಆರಂಭಿಕ ಅಲಸ್ಟೇರ್‌ ಕುಕ್‌ ಮೆಲ್ಬರ್ನ್ನಲ್ಲಿ ಅಜೇಯ 244 ರನ್‌ ಬಾರಿಸುವ ಮೂಲಕ ಪುನರ್ಜನ್ಮ ಪಡೆದಿದ್ದಾರೆ. ಈ ಮ್ಯಾರಥಾನ್‌ ಇನ್ನಿಂಗ್ಸ್‌ ವೇಳೆ ಬಹಳಷ್ಟು ದಾಖಲೆಗಳ ಮೂಲಕವೂ ಸುದ್ದಿಯಾದರು.

Advertisement

ಕೊನೆಯದೆಂಬಂತೆ, ಆರಂಭಿಕನಾಗಿ ಕಣಕ್ಕಿಳಿದು ತಂಡ ಆಲೌಟ್‌ ಆಗುವಾಗಲೂ ಅಜೇಯವಾಗಿ ಉಳಿದ ಸಾಧನೆ ಮೂಲಕ ಕುಕ್‌ ಮತ್ತೂಂದು ದಾಖಲೆ ಸ್ಥಾಪಿಸಿದ್ದಾರೆ. ಹೀಗೆ ಪೂರ್ತಿಗೊಂಡ ಇನ್ನಿಂಗ್ಸ್‌ ವೇಳೆ ಕೊನೆಯ ವರೆಗೂ ಅಜೇಯವಾಗಿ ಉಳಿದು ಅತ್ಯಧಿಕ ರನ್‌ ಪೇರಿಸಿದ ಆರಂಭಕಾರ ಎಂಬ ವಿಶ್ವದಾಖಲೆ ಈಗ ಕುಕ್‌ ಪಾಲಾಗಿದೆ (244). ವೆಸ್ಟ್‌ ಇಂಡೀಸ್‌ ವಿರುದ್ಧ ನಡೆದ 1972ರ ಕಿಂಗ್‌ಸ್ಟನ್‌ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡಿನ ಓಪನರ್‌ ಗ್ಲೆನ್‌ ಟರ್ನರ್‌ ಅಜೇಯ 223 ರನ್‌ ಬಾರಿಸಿದ ದಾಖಲೆ ಪತನಗೊಂಡಿತು.

ಇಂಗ್ಲೆಂಡಿನ ಆರಂಭಿಕನೋರ್ವ ಹೀಗೆ ಔಟಾಗದೆ ಉಳಿದ 8ನೇ ನಿದರ್ಶನ ಇದಾಗಿದೆ. ಕೊನೆಯ ಸಲ ಈ ಸಾಧನೆಗೈದ ಇಂಗ್ಲೆಂಡ್‌ ಓಪನರ್‌ ಜೆಫ್ ಬಾಯ್ಕಟ್‌. 1979ರ ಪರ್ತ್‌ ಟೆಸ್ಟ್‌ನಲ್ಲಿ ಬಾಯ್ಕಟ್‌ ಅಜೇಯ 99 ರನ್‌ ಮಾಡಿದ್ದರು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-327 ಮತ್ತು 2 ವಿಕೆಟಿಗೆ 103 (ವಾರ್ನರ್‌ ಬ್ಯಾಟಿಂಗ್‌ 40, ಬಾನ್‌ಕ್ರಾಫ್ಟ್ 27, ಸ್ಮಿತ್‌ ಬ್ಯಾಟಿಂಗ್‌ 25, ಆ್ಯಂಡರ್ಸನ್‌ 20ಕ್ಕೆ 1, ವೋಕ್ಸ್‌ 24ಕ್ಕೆ 1). ಇಂಗ್ಲೆಂಡ್‌-491 (ಕುಕ್‌ ಔಟಾಗದೆ 244, ರೂಟ್‌ 61, ಬ್ರಾಡ್‌ 56, ಕಮಿನ್ಸ್‌ 117ಕ್ಕೆ 4, ಹ್ಯಾಝಲ್‌ವುಡ್‌ 95ಕ್ಕೆ 3, ಲಿಯೋನ್‌ 109ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next