Advertisement

ನೃತ್ಯ ಜಾತ್ರೆಗೆ ಮನಸೋತ ಕಲಾರಾಧಕರು

11:19 AM Jan 28, 2018 | |

ಬೆಂಗಳೂರು: ಪ್ರಸಿದ್ಧ ನೃತ್ಯ ಕಲಾವಿದೆ ವೈಜಯಂತಿ ಕಾಶಿಯವರ ಪರಿಕಲ್ಪನೆಯಲ್ಲಿ ಮೂಡಿ ಬಂದ ದೇಶದ ಮೊದಲ ನೃತ್ಯ ಮೇಳ “ಡಾನ್ಸ್‌ ಜಾತ್ರೆ-2018’ರ ಏಳನೇ ಆವೃತ್ತಿ ದೇಶದ ಖ್ಯಾತನಾಮ ನೃತ್ಯ ಕಲಾವಿದರ ಸಮಾಗಮಕ್ಕೆ ವೇದಿಕೆಯಾಯಿತು. 

Advertisement

ಶಾಂಭವಿ ಸ್ಕೂಲ್‌ ಆಫ್ ಡಾನ್ಸ್‌ ಅರ್ಪಿಸಿದ ಎರಡು ದಿನಗಳ ಡಾನ್ಸ್‌ ಜಾತ್ರೆಗೆ ಶನಿವಾರ ಕನಕಪುರ ರಸ್ತೆಯ ಶಂಕರ ಫೌಂಡೇಷನ್‌ನಲ್ಲಿ ಚಾಲನೆ ಸಿಕ್ಕಿತು. ನೃತ್ಯಕ್ಕೆ ಸಂಬಂಧಿಸಿದ ಪ್ರದರ್ಶನಗಳು, ಸಂವಾದ, ಕಾರ್ಯಾಗಾರ, ಸ್ಪರ್ಧೆ ಇವೆಲ್ಲವೂ ಒಂದೇ ವೇದಿಕೆಯಲ್ಲಿ ಮೂಡಿ ಬಂದವು. ಸಂಜೆ ಯುವ ಶಾಸ್ತ್ರೀಯ ನೃತ್ಯ ಕಲಾವಿದರು ನಡೆಸಿಕೊಟ್ಟ “ಫ್ಯಾಷನ್‌ ಶೋ’ ನೃತ್ಯ ಕಲೆಗೆ ಹೊಸ ವ್ಯಾಖ್ಯಾನ ನೀಡಿತು. 

ಬೆಳಗ್ಗೆ 10.30ರಿಂದ ಸಂಜೆ 5.30ರವರೆಗೆ ಕಾರ್ಯಾಗಾರ, ಸ್ಪರ್ಧೆಗಳು ಮತ್ತು ನೃತ್ಯಪ್ರದರ್ಶನ ನಡೆಯಿತು. ಬೆಂಗಳೂರಿನ ಪದ್ಮಿನಿ ರವಿ, ಕಾರ್ತಿಕ್‌ ತಂತ್ರಿ, ಶೋಭಾ ಶಶಿಕುಮಾರ್‌, ಚಾಂದಿನಿ ಸುಬ್ಬಯ್ಯ, ಓಡಿಶಾದ ರತಿಕಾಂತ್‌ ಮಹಾಪಾತ್ರ ವಿವಿಧ ನೃತ್ಯ ಪ್ರಕಾರಗಳ ವಿವರಣೆ ಮತ್ತು ನೃತ್ಯ ಪ್ರದರ್ಶನದ ಮೂಲಕ ಕಾರ್ಯಾಗಾರ ನಡೆಸಿಕೊಟ್ಟರು. ನೃತ್ಯದಲ್ಲಿ ತಾಳ ಮತ್ತು ಸಂಗೀತದ ಬಗ್ಗೆ ವೈಜಯಂತಿ ಕಾಶಿ ಹಾಗೂ ಅರುಣ್‌ಕುಮಾರ್‌ ಅವರ ಜುಗಲ್‌ಬಂದಿ ನೃತ್ಯಾಸಕ್ತರನ್ನು ಮೈನವಿರೇಳಿಸಿತು. ಇದೇ ವೇಳೆ ಕಿರಿಯರ ಮತ್ತು ಹಿರಿಯ ವಿಭಾಗದ ಸ್ಪರ್ಧೆಗಳು ನಡೆದವು.

ಸಂಜೆ ವೆಂಕಟೇಶ್‌ ನಾಟ್ಯ ಮಂದಿರದ ಗುರು ರಾಧಾ ಶ್ರೀಧರ್‌ ಅವರಿಂದ “ಲಯ ಲಾಸ್ಯ ಲಹರಿ’ ನೃತ್ಯ ಪ್ರದರ್ಶನ. ಕೋಲ್ಕೋತಾದ ಉದಯಶಂಕರ್‌ ಘರಾಣಾಗೆ ಸಂಬಂಧಿಸಿದ ಹರಿತಾಲ್‌ ನೃತ್ಯ ಕೇಂದ್ರದಿಂದ “ಹೃದಯಭಾವನಾ’ ಪ್ರದರ್ಶನ, ಭುವನೇಶ್ವರದ ರತಿಕಾಂತ್‌ ಮಹಾಪಾತ್ರ ಹಾಗೂ ಸೃಜನ್‌ ಅವರಿಂದ ಓಡಿಸ್ಸಿ ನೃತ್ಯ ಮೂಕವಿಸ್ಮಿತರನ್ನಾಗಿಸಿತು.

ಹೊಸ ಭಾಷ್ಯ ಬರೆದ “ಫ್ಯಾಷನ್‌ ಶೋ’: ಶಾಸ್ತ್ರೀಯ ನೃತ್ಯ ಪ್ರಕಾರಗಳ ವೇಷಭೂಷಣಗಳನ್ನು ಅವುಗಳ ಮೂಲ ಸ್ವರೂಪಕ್ಕೆ ಧಕ್ಕೆ ಆಗದಂತೆ ಆಧುನಿಕ ಶೈಲಿಯ ಸುಧಾರಿತ ರೂಪದಲ್ಲಿ ಪ್ರಸ್ತುತಪಡಿಸುವ “ಫ್ಯಾಷನ್‌ ಶೋ’ ನೃತ್ಯ ಪ್ರಕಾರಗಳಿಗೆ ಹೊಸ ಭಾಷ್ಯ ಬರೆದಂತಿತ್ತು. ಸುಮಾರು 30ಕ್ಕೂ ಹೆಚ್ಚು ಯುವ ನೃತ್ಯ ಕಲಾವಿದರು ಭರತನಾಟ್ಯ, ಕುಚುಪುಡಿ, ಓಡಿಶಿ ಮೋಹಿನಿ ಆಟಂ, ಕಥಕ್‌, ಬೇಲೂರು-ಹಳೆಬೀಡು ಶಿಲ್ಪಕನೆ ನೆನಪಿಸುವ ಶಿಲಾ ಭಂಜಿಕಾ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಿದ್ದು, ನೃತ್ಯಾಸಕ್ತರನ್ನು ಕೆಲ ಕಾಲ ಮೈಮರೆಯುವಂತೆ ಮಾಡಿತು. 

Advertisement

ಜಾತ್ರೆಯಲ್ಲಿಂದು: ಬೆಳಿಗ್ಗೆ 10.30ರಿಂದ ಸಂಜೆ 5.30ರವರೆಗೆ ಕಥಕ್‌ ಬಗ್ಗೆ ನವದೆಹಲಿಯ ರಾಜೇಂದ್ರ ಗಂಗನಿ, ಕಲರಿಪ್ಪಾಯಟ್‌ ಬಗ್ಗೆ ತಿರುವನಂತಪುರಂನ ರಾಮ್‌ಕುಮಾರ್‌, ಭರತನಾಟ್ಯದಲ್ಲಿ ಪುರುಷ ಪಾತ್ರದ ಬಗ್ಗೆ ಮುಂಬೈನ ದೀಪಕ್‌ ಮುಜುಂದಾರ್‌, ಜಾನಪದ ಪರಂಪರೆ-ಕಥೆಗಳು ಮತ್ತು ಚಲನವಲಗಳ ಬಗ್ಗೆ ಬೆಂಗಳೂರಿನ ಸ್ನೇಹ ಕಪ್ಪಣ್ಣ, ಅಷ್ಟ ನಾಯಿಕ ಬಗ್ಗೆ ಮಂಗಳೂರಿನ ಡಾ. ಶ್ರೀವಿಧ್ಯಾ ಮುರಳೀಧರ್‌, ಝುಂಬಾ ಫಿಟ್‌ನೆಸ್‌ ಬಗ್ಗೆ ಬೆಂಗಳೂರಿನ ರಾಗಿಣಿ ಚಂದ್ರನ್‌ ಅವರು ನೃತ್ಯಸಹಿತ ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಅಲ್ಲದೇ ಕಿರಿಯ ಮತ್ತು ಹಿರಿಯ ವಿಭಾಗದ ಸ್ಪರ್ಧೆಗಳು ನಡೆಯಲಿವೆ. 

Advertisement

Udayavani is now on Telegram. Click here to join our channel and stay updated with the latest news.

Next