ಧಾರವಾಡ: ದೇಶಕ್ಕೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಮಾದರಿಯಾಗಿದೆ. ಈ ಕೃವಿವಿ ಕೈಗೊಳ್ಳುವ ವಿಧಾನಗಳನ್ನು ದೇಶದ ವಿವಿಧ ಕೃಷಿ ವಿವಿಗಳು ಅನುಕರಣೆಗೆ ಮುಂದಾಗಿವೆ ಎಂದು ವಿಶ್ರಾಂತ ಕುಲಪತಿ ಡಾ| ಜೆ.ಎಚ್. ಕುಲಕರ್ಣಿ ಹೇಳಿದರು.
ಕೃಷಿ ಮೇಳದ ಕೊನೆಯ ದಿನವಾದ ಸೋಮವಾರ ಬೆಳಗ್ಗೆ ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳ ಶ್ರೇಷ್ಠ ಯುವ ಕೃಷಿಕ, ಶ್ರೇಷ್ಠ ಯುವ ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ತಾವು ಧಾರವಾಡ ಕೃವಿವಿಗೆ ಕುಲಪತಿ ಆಗಿದ್ದಾಗ ಕೇವಲ 4-5 ಲಕ್ಷ ಜನರು ಮಾತ್ರ ಮೇಳಕ್ಕೆ ಬರುತ್ತಿದ್ದರು.
ಇದೀಗ 14-15 ಲಕ್ಷ ಜನರು ಬರುತ್ತಿರುವುದು ಮೇಳದ ಮಹತ್ವ ಬಿಂಬಿಸುತ್ತದೆ ಎಂದರು. ಮೇಳದಲ್ಲಿ ಕೃಷಿಗೆ ಸಂಬಂಧಿಸಿದ ಕೃಷಿ ಯಂತ್ರೋಪಕರಣ, ಹೊಸ ಸಲಕರಣೆ, ರೈತರು ಹಾಗೂ ವಿಜ್ಞಾನಿಗಳ ಅವಿಷ್ಕಾರ, ಇನ್ನಿತರ ವಸ್ತುಗಳು ಒಂದೇ ಸೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ದೊರೆಯುವಂತೆ ಮಾಡುತ್ತಿರುವುದು ಮೇಳದ ಆಕರ್ಷಣೆಯನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸತೊಡಗಿದೆ ಎಂದರು.
ಧಾರವಾಡ ಕೃವಿವಿ ಆಯೋಜಿಸುವ ಕೃಷಿ ಮೇಳಕ್ಕೆ ದೆಹಲಿಯ ಐಸಿಎಆರ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಹರ್ಯಾಣ ಸೇರಿದಂತೆ ವಿವಿಧ ಕೃವಿವಿಗಳು ಇದೇ ಮಾದರಿಯಡಿ ಕೃಷಿ ಮೇಳ ಆಯೋಜನೆಗೆ ಮುಂದಾಗಿರುವುದು ಧಾರವಾಡ ಕೃವಿವಿ ಸಾಧನೆ ಸಂದ ಗೌರವವಾಗಿದೆ ಎಂದು ಹೇಳಿದರು.
ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದು, ಉತ್ತಮ ಭವಿಷ್ಯ ಹಾಗೂ ಕೃಷಿ ಕ್ಷೇತ್ರದ ಹಿತ ದೃಷ್ಟಿಯಿಂದ ಯುವಕರನ್ನು ಕೃಷಿಯತ್ತ ಆಕರ್ಷಿಸಬೇಕು. ಕೃಷಿಯಲ್ಲಿ ಲಾಭದ ಭರವಸೆ ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು. ಧಾರವಾಡ ಕೃವಿವಿ ಕುಲಪತಿ ಡಾ| ಡಿ.ಪಿ. ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅವಿಭಜಿತ ಧಾರವಾಡ ಜಿಲ್ಲೆಯ ಶ್ರೇಷ್ಠ ಯುವ ಕೃಷಿಕ ಹಾಗೂ ಶ್ರೇಷ್ಠ ಯುವ ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ಕೆಲವರು ಅನುಭವ ಹಂಚಿಕೊಂಡರು. ಕೃವಿವಿ ಆಡಳಿತ ಮಂಡಳಿ ಸದಸ್ಯರು ಇನ್ನಿತರರು ಇದ್ದರು.