Advertisement

ಎಕ್ಸಿಸ್‌ ಬ್ಯಾಂಕ್‌ನಿಂದ ಮೃತ ರೈತನಿಗೂ ಬಂಧನ ವಾರೆಂಟ್‌

06:00 AM Nov 05, 2018 | |

ಬೆಳಗಾವಿ: ಎಕ್ಸಿಸ್‌ ಬ್ಯಾಂಕ್‌ನಲ್ಲಿ ಪಡೆದ ಸಾಲವನ್ನು ನಿಗದಿತ ವೇಳೆ ಪಾವತಿಸಿಲ್ಲ ಎಂಬ ಕಾರಣಕ್ಕೆ ಕೋಲ್ಕತಾ ಕೋರ್ಟ್‌ನಿಂದ ಜಾರಿಯಾಗಿರುವ ಅರೆಸ್ಟ್‌ ವಾರೆಂಟ್‌ ಮೃತಪಟ್ಟ ರೈತನ ಹೆಸರಿಗೂ ಬಂದಿದ್ದು ಈಗ ಚರ್ಚೆಯ ವಿಷಯವಾಗಿದೆ.

Advertisement

ಸವದತ್ತಿ ತಾಲೂಕಿನ ಏಣಗಿ ಗ್ರಾಮದ ಬಾಳಪ್ಪ ಮೂಗಪ್ಪ ಕುರುಬಗಟ್ಟಿ (58) ಎಂಬ ರೈತನನ್ನು ಬಂ ಧಿಸುವಂತೆ ವಾರೆಂಟ್‌ ಜಾರಿ ಮಾಡಲಾಗಿದೆ. ಪಡೆದ ಸಾಲದ ಮೊತ್ತ ಹೆಚ್ಚಾಗುತ್ತಿದ್ದಂತೆ ನೋಟಿಸ್‌ಗೆ ಹೆದರಿ ನೊಂದು ರೈತ ಬಾಳಪ್ಪ ಹಾಸಿಗೆ ಹಿಡಿದಿದ್ದರು. ನಂತರ 29 ಜೂನ್‌ 2014ರಲ್ಲಿ ಮೃತಪಟ್ಟಿದ್ದಾರೆ. ಈಗ ಇವರ ಹೆಸರಿನ ಮೇಲೂ ಅರೆಸ್ಟ್‌ ವಾರೆಂಟ್‌ ಜಾರಿಯಾಗಿದ್ದು, ವಿವಾದಕ್ಕೆ ಕಾರಣವಾಗಿದೆ.

ರೈತ ಬಾಳಪ್ಪ ಕುರುಬಗಟ್ಟಿ 2009ರಲ್ಲಿ 3.50 ಲಕ್ಷ ಸಾಲ ಪಡೆದಿದ್ದರು. ಅದರಂತೆ 2013ರವರೆಗೆ ಸಾಲ ತುಂಬುತ್ತ ಬಂದಿದ್ದರು. ಆದರೆ ಬಡ್ಡಿ ಸೇರಿ ಸಾಲದ ಮೊತ್ತ ಹೆಚ್ಚಾಗುತ್ತ ಹೋಯಿತು. ಪಡೆದ ಸಾಲಕ್ಕಿಂತಲೂ ಅ ಧಿಕ ಹಣ ತುಂಬಬೇಕು ಎಂಬ ನೋಟಿಸ್‌ಗಳು ಬರಲಾರಂಭಿಸಿದವು. ಹೀಗಾಗಿ 2013-14ರಲ್ಲಿ ಬೆಳಗಾವಿ ಕೋರ್ಟ್‌ನಲ್ಲಿ ದಾವೆ ಹೂಡಲಾಗಿತ್ತು. ನೋಟಿಸ್‌ಗಳಿಂದ ಆತಂಕಕ್ಕೀಡಾದ ರೈತ ಅನಾರೋಗ್ಯಕ್ಕಿಡಾಗಿ ಮೃತಪಟ್ಟಿದ್ದಾರೆ. ಸದ್ಯ 9 ಲಕ್ಷ ರೂ.ತುಂಬಬೇಕು ಎಂಬ ಸಮನ್ಸ್‌ ಜಾರಿಯಾಗಿದೆ. ಜತೆಗೆ ಅರೆಸ್ಟ್‌ ವಾರೆಂಟ್‌ ಕೂಡ ಬಂದಿದೆ.

ಇದೇ ಗ್ರಾಮದ ಬಸಪ್ಪ ಹುಬ್ಬಳ್ಳಿ, ಚನ್ನಮಲ್ಲಪ್ಪ ಕರಡಿಗುದ್ದಿ, ಭೀಮಪ್ಪ ಪೂಜಾರ, ಯಲ್ಲಪ್ಪ ಪೂಜೇರಿ ಅವರಿಗೂ ಅರೆಸ್ಟ್‌ ವಾರೆಂಟ್‌ ಹೊರಡಿಸಲಾಗಿದೆ. ಎಕ್ಸಿಸ್‌ ಬ್ಯಾಂಕ್‌ನಲ್ಲಿ 2009ರಲ್ಲಿ ಇವರು ಸಾಲ ಪಡೆದಿದ್ದಾರೆ. ಜಿಲ್ಲೆಯಲ್ಲಿ ಸಾಲ ತುಂಬದ 180 ರೈತರ ವಿರುದ್ಧ ಕೇಸುಗಳು ದಾಖಲಾಗಿದ್ದು, ಅನೇಕ ರೈತರಿಗೆ ನೋಟಿಸ್‌ ಬಂದಿವೆ.

ಸಾಲ ಭದ್ರತೆಗಾಗಿ ಎಕ್ಸಿಸ್‌ ಬ್ಯಾಂಕ್‌, ರೈತರಿಂದ ಖಾಲಿ ಚೆಕ್‌ಗೆ ಸಹಿ ಪಡೆದಿತ್ತು. ಸಾಲ ಮರುಪಾವತಿ ಆಗದಿದ್ದಕ್ಕೆ ಚೆಕ್‌ ಬೌನ್ಸ್‌ ಮಾಡಿಸಿ, ರೈತರ ಮೇಲೆ ಕೋಲ್ಕತಾ ನ್ಯಾಯಾಲಯದಲ್ಲಿ ಕೇಸ್‌ ದಾಖಲಿಸಿತ್ತು. ಅ.17ರಂದು ಸಮನ್ಸ್‌ ಜಾರಿ ಮಾಡಲಾಗಿತ್ತು. ಬಹಳ ಹಳೆಯ ಸಾಲವಾಗಿದ್ದರಿಂದ ಅರೆಸ್ಟ್‌ ವಾರೆಂಟ್‌ ಕೂಡ ಬಂದಿದೆ.

Advertisement

ಸವದತ್ತಿ ತಾಲೂಕಿನ ಐವರು ರೈತರಿಗೆ ಅರೆಸ್ಟ್‌ ವಾರೆಂಟ್‌ ಬಂದಿದ್ದು, ಈಗಾಗಲೇ ಎಸ್‌ಪಿ ಹಾಗೂ ಬ್ಯಾಂಕ್‌ ಅ ಕಾರಿಗಳೊಂದಿಗೆ ಚರ್ಚಿಸಲಾಗಿದೆ. ವಾರೆಂಟ್‌ಗಳನ್ನು ಹಿಂಪಡೆಯುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ರೈತರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳ ಕಾರ್ಯಾಲಯದಿಂದಲೂ ಸೂಚನೆ ಬಂದಿದೆ.
– ಡಾ| ಎಸ್‌.ಬಿ.ಬೊಮ್ಮನಹಳ್ಳಿ, ಜಿಲ್ಲಾ ಧಿಕಾರಿ

ಸಾಲ ತುಂಬದ ಏಣಗಿ ಗ್ರಾಮದ ರೈತರಿಗೆ ಬಂಧನ ವಾರೆಂಟ್‌ ಜಾರಿ ಆಗಿದ್ದು ನಿಜ. ಕೋಲ್ಕತಾ ಕೋರ್ಟ್‌ ಈ ವಾರೆಂಟ್‌ಗಳನ್ನು ಕಳುಹಿಸಿದೆ. ಐವರಿಗೆ ಮಾತ್ರ ವಾರೆಂಟ್‌ ಪ್ರತಿಗಳು ಬಂದಿವೆ. ಸಾಲ ತುಂಬಲಿಲ್ಲ ಎಂಬ ಕಾರಣಕ್ಕೆ ಸುಮಾರು 180ಕ್ಕೂ ಹೆಚ್ಚು ರೈತರ ವಿರುದ್ಧ ಕೇಸ್‌ ದಾಖಲಾಗಿವೆ. ಈ ಬಗ್ಗೆ ಈಗಾಗಲೇ ಅ ಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ.
– ಸುಧೀರಕುಮಾರ ರೆಡ್ಡಿ, ಎಸ್‌ಪಿ ಬೆಳಗಾವಿ

ಸಾಲ ಮನ್ನಾ ಮಾಡಿರುವುದಾಗಿ ಸಿಎಂ ಘೋಷಿಸಿದ್ದಾರೆ. ಆದರೆ, ಇನ್ನೂ ಬ್ಯಾಂಕ್‌ನವರ ಕಿರುಕುಳ ಮಾತ್ರ ತಪ್ಪಿಲ್ಲ. ಸಾಲ ವಸೂಲಾತಿ ಮಾಡುವುದನ್ನು ಬ್ಯಾಂಕ್‌ನವರು ನಿಲ್ಲಿಸಿಲ್ಲ. ಮೂರು ವರ್ಷಗಳಿಂದ ಬರಗಾಲ ಕಾಡುತ್ತಿದೆ. ಹೀಗಾಗಿ ರೈತರು ಸಾಲ ತುಂಬಲು ಹೇಗೆ ಸಾಧ್ಯ? ಕೂಡಲೇ ಸಾಲ ವಸೂಲಾತಿಗೆ ಕಡಿವಾಣ ಹಾಕಲು ಸಿಎಂ ನಿರ್ದೇಶನ ನೀಡಬೇಕು.
– ಕುರುಬೂರು ಶಾಂತಕುಮಾರ, ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ

ಎಕ್ಸಿಸ್‌ ಬ್ಯಾಂಕ್‌ನಿಂದ ರೈತರ ಬಂಧನಕ್ಕೆ ವಾರೆಂಟ್‌ ಹೊರಡಿಸಿರುವುದು ಸರಿಯಲ್ಲ. ಮೊದಲು ಎಕ್ಸಿಸ್‌ ಬ್ಯಾಂಕ್‌ನವರನ್ನೇ ಬಂಧಿಸಬೇಕು. ರೈತರಿಗೆ ಯಾವುದೇ ತೊಂದರೆ ಕೊಡಬಾರದು ಎಂದು ಹೇಳಿದಾಗಲೂ ಈ ರೀತಿ ಮಾಡಿರುವುದು ಸರಿಯಲ್ಲ.
– ಬಸವರಾಜ ಹೊರಟ್ಟಿ, ವಿಧಾನ ಪರಿಷತ್‌ ಸಭಾಪತಿ

ಆರ್‌ಬಿಐ ಮಾರ್ಗದರ್ಶಿ ಪ್ರಕಾರ ಬ್ಯಾಂಕ್‌ನವರು ನಡೆದುಕೊಳ್ಳುತ್ತಿಲ್ಲ. ಇಷ್ಟೆಲ್ಲ ಆಗುತ್ತಿದ್ದರೂ ಕೇಂದ್ರ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಈ ವಿಷಯದಲ್ಲಿ ಕೇಂದ್ರ ಹಣಕಾಸು ಸಚಿವರು ಗಮನ ಹರಿಸಬೇಕು.
-ಎನ್‌.ಎಚ್‌. ಕೋನರಡ್ಡಿ, ಮಾಜಿ ಶಾಸಕ

ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿ ಆದೇಶ ಹೊರಡಿಸಿದೆ. ಆದರೂ ಕೃಷಿ ಸಂಬಂಧಿ ಸಾಲ ಪಡೆದ ಈ ರೈತರಿಗೆ ನೋಟಿಸ್‌ ಹಾಗೂ ಅರೆಸ್ಟ್‌ ವಾರೆಂಟ್‌ ನೀಡುತ್ತಿರುವ ಎಕ್ಸಿಸ್‌ ಬ್ಯಾಂಕ್‌ ಉದ್ಧಟತನ ತೋರುತ್ತಿದೆ.
– ಮಹಾಂತೇಶ ಕಮತ, ಭಾರತೀಯ ಕೃಷಿಕ ಸಮಾಜ ರಾಜ್ಯ ಸಂಘಟನಾ ಕಾರ್ಯದರ್ಶಿ
 

Advertisement

Udayavani is now on Telegram. Click here to join our channel and stay updated with the latest news.

Next