ಬೆಂಗಳೂರು: ನಗರದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಮತ್ತು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೆಗ್ಗಡೆ ನಗರದ ಮೊಹಮ್ಮದ್ ಅಲಿ (29) ಹಾಗೂ ಹೊಸಕೋಟೆಯ ಸೈಯದ್ ಜಾಫರ್ (21) ಎಂಬ ಆರೋಪಿಗಳನ್ನು ಕೊತ್ತನೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಇವರಿಂದ 50 ಸಾವಿರ ರು. ಮೌಲ್ಯದ 1.5 ಕೆ.ಜಿ.ಗಾಂಜಾ, 2,000 ರು.ನಗದು ಮತ್ತು ಒಂದು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ನೆರೆ ರಾಜ್ಯ ಆಂಧ್ರಪ್ರದೇಶದಲ್ಲಿ ಗಾಂಜಾ ಖರೀದಿ ಮಾಡಿ ನಗರಕ್ಕೆ ತರುತ್ತಿದ್ದ ಆರೋಪಿಗಳು, ಕೊತ್ತನೂರು ಠಾಣಾ ವ್ಯಾಪ್ತಿಯ ಹೆಗ್ಗಡೆನಗರ ಮತ್ತು ಹೊಸಕೋಟೆಯ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಮಾಹಿತಿಯನ್ನಾಧರಿಸಿ ದಾಳಿ ನಡೆಸಿ ಮಾಲು ಸಮೇತ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೂಂದು ಪ್ರಕರಣದಲ್ಲಿ ಕಾಲೇಜು ವಿದ್ಯಾರ್ಥಿಗಳು, ಪರಿಚಯಸ್ಥ ಗಿರಾಕಿಗಳಿಗೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಾಲು ಸಮೇತ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಭುವನೇಶ್ವರಿನಗರ ಬಾಬುರೆಡ್ಡಿ ಪಾಳ್ಯದ ಮುನಾವರ್ ಪಾಷಾ ( 42) ಬಂಧಿತ. ಈತನಿಂದ 1 ಕೆ.ಜಿ 300 ಗ್ರಾಂ ಗಾಂಜಾ, ಮೊಬೈಲ್, ಹಣ ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ವ್ಯವಸ್ಥಿತ ರೀತಿಯಲ್ಲಿ ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರಗಳ ಮೂಲಕ ಗಾಂಜಾ ತರಿಸುತ್ತಿದ್ದ. ನಂತರ ಇಲ್ಲಿಯೇ ಸಣ್ಣ-ಸಣ್ಣ ಪ್ಯಾಕೆಟ್‌ಗಳ ಮೂಲಕ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.