Advertisement

ಪತ್ನಿ ಕೊಂದು ತಲೆಮರೆಸಿಕೊಂಡಿದ್ದವನ ಬಂಧನ

11:20 AM Oct 10, 2017 | Team Udayavani |

ಬೆಂಗಳೂರು: ಪತ್ನಿಯನ್ನ ತಾನೇ ಕೊಲೆ ಮಾಡಿ ಬೇರೆ ಯಾರೋ ಅತ್ಯಾಚಾರವೆಸಗಿ ಕೊಲೆಗೈದಿದ್ದಾರೆ ಎಂದು ಬಿಂಬಿಸಿ ತಲೆಮರೆಸಿಕೊಂಡಿದ್ದ ಪತಿಯನ್ನು ನಾಲ್ಕು ತಿಂಗಳ ಬಳಿಕ ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಮಂಡ್ಯದ ನಾಗಮಂಗಲ ತಾಲೂಕು ಮೂಲದ ಕುಮಾರ್‌(36) ಬಂಧಿತ ಪತಿ. ಟ್ರ್ಯಾಕ್ಟರ್‌ ಚಾಲಕ ಹಾಗೂ ಪೇಂಟಿಂಗ್‌ ಕೆಲಸ ಮಾಡುವ ಆರೋಪಿ, ಜೂನ್‌ 20ರಂದು ಪತ್ನಿ ಪಾರ್ವತಿಯನ್ನು ಗೋಡೆಗೆ ಗುದ್ದಿಸಿ ಕೊಲೆಗೈದಿದ್ದಾನೆ. ಬಳಿಕ ತನ್ನ ಮೇಲೆ ಕೊಲೆ ಆರೋಪ ಬರಬಾರದೆಂದು ಆಕೆಯ ಮೈ ಮೇಲಿನ ಬಟ್ಟೆಗಳನ್ನು ಕಳಚಿ ಬೆತ್ತಲೆ ಮಾಡಿ ಅತ್ಯಾಚಾರವೆಸಗಿ ಕೊಲೆಗೈದಿದ್ದಾರೆ ಎಂದು ಬಿಂಬಿಸಿ ಪರಾರಿಯಾಗಿದ್ದಾನೆ.

ಕೊಲೆ ಕುರಿತು ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಆರೋಪಿಯ ಕೃತ್ಯ ಬೆಳಕಿಗೆ ಬಂದಿದೆ. ಜತೆಗೆ ಮನೆ ಬಳಿಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಆರೋಪಿಯ ಸುಳಿವು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮಂಡ್ಯ, ಮೈಸೂರು ಸೇರಿದಂತೆ ಹತ್ತಾರು ಕಡೆಗಳಲ್ಲಿ ಆರೋಪಿಗಾಗಿ ಹುಡುಕಾಟ ನಡೆಸಿದಾಗ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಇದೀಗ ನಾಗರಬಾವಿಯಲ್ಲಿರುವ ಮೊದಲೇ ಪತ್ನಿ ಭಾಗ್ಯಳನ್ನು ಭೇಟಿಯಾಗಲು ಬಂದಾಗ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ನಿತ್ಯ ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಮೊದಲ ಪತ್ನಿ ಭಾಗ್ಯ ಪತಿಯಿಂದ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು. ಹೀಗಾಗಿ ಆರೋಪಿ ಮೂರು ವರ್ಷಗಳ ಹಿಂದೆ ಮೊದಲನೇ ಪತ್ನಿಗೆ ತಿಳಿಯದಂತೆ ಪತಿಯನ್ನ ಕಳೆದುಕೊಂಡಿದ್ದ ಉತ್ತರ ಕರ್ನಾಟಕ ಮೂಲದ ಪಾರ್ವತಿ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದು, 5 ತಿಂಗಳ ಮಗು ಇದೆ. ಇಲ್ಲಿಯೂ ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದ ಆರೋಪಿ, ಜಗಳ ಬಿಡಿಸಲು ಬರುವ ಸ್ಥಳೀಯರೊಂದಿಗೆ ಅಕ್ರಮ ಸಂಬಂಧವಿದೆ ಎಂದು ಮತ್ತಷ್ಟು ಹಿಂಸೆ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬೆತ್ತಲೆ ಮಾಡಿದ್ದ ಆರೋಪಿ: ಜುನ್‌ 20 ರಂದು ಮದ್ಯ ಸೇವಿಸಿ ಮನೆಗೆ ಬಂದಿದ್ದ ಆರೋಪಿ, ಪತ್ನಿ ಪಾರ್ವತಿಯೊಂದಿಗೆ ಜಗಳವಾಡಿದ್ದಾನೆ. ಇದು ವಿಕೋಪಕ್ಕೆ ಹೋಗಿದ್ದು, ಪತ್ನಿ ಮುಂದೆಲೆ ಕೂದಲು ಹಿಡಿದು ಹತ್ತಾರು ಬಾರಿ ಗೋಡೆಗೆ ಗುದ್ದಿದ್ದ. ತೀವ್ರ ಗಾಯದಿಂದ ಬಳಲಿ ಸ್ಥಳದಲ್ಲೇ ಸಾವನ್ನಪ್ಪಿದ ಪಾರ್ವತಿಯನ್ನು ಹಾಸಿಗೆ ಮೇಲೆ ಮಲಗಿದ್ದ 5 ತಿಂಗಳ ಮಗುವಿನ ಪಕ್ಕದಲ್ಲೇ ಈಕೆಯನ್ನು ಮಲಗಿಸಿದ್ದಾನೆ.

Advertisement

ಜತೆಗೆ ಬೆಳಗ್ಗೆ 5 ಗಂಟೆವರೆಗೆ ಆಕೆಯೊಂದಿಗೆ ಮಲಗಿದ್ದ. ನಂತರ ಆಕೆಯ ಬಟ್ಟೆಯನ್ನು ಕಳಚಿ, ಅತ್ಯಾಚಾರವೆಸಗಿ ಕೊಲೆಗೈದಿದ್ದಾರೆ ಎಂದು ಚಿತ್ರಣ ಬರುವಂತೆ ಮಾಡಿ ನಸುಕಿನಲ್ಲಿ ಮನೆಯಿಂದ ನಾಪತ್ತೆಯಾಗಿದ್ದ. ಮರುದಿನ ಬೆಳಗ್ಗೆ ಅಳುತ್ತಿದ್ದ ಮಗುವಿನ ಶಬ್ಧ ಕೇಳಿದ ಸ್ಥಳೀಯರು ಮನೆಯ ಬಾಗಿಲು ಒಡೆದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಳಿವು ಕೊಟ್ಟ ಮರಣೋತ್ತರ  ಪರೀಕ್ಷೆ: ಘಟನೆ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಬೆತ್ತೆಲೆಯಾಗಿ ಸಾವನ್ನಪ್ಪಿದ್ದರಿಂದ ಅತ್ಯಾಚಾರವೆಸಗಿ ಕೊಲೆಯಾಗಿರಬಹುದು ಎಂದು ಶಂಕಿಸಿದ್ದರು. ಆದರೆ, ಸೂಕ್ತ ಸಾಕ್ಷ್ಯಾಗಳು ಇರಲಿಲ್ಲ. ಜತೆಗೆ ಆಕೆಯ ದೇಹದ ಯಾವುದೇ ಭಾಗದಲ್ಲಿ ಗಾಯದ ಗುರುತುಗಳು ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತಲೆಯಲ್ಲಿ ರಕ್ತಹೆಪ್ಪುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ವಿಧಿವಿಜ್ಞಾನ ಪರೀಕ್ಷಾ ವರದಿ ಬಂದಿದೆ.

ನಂತರ ತನಿಖೆ ಚುರುಕುಗೊಳಿಸಿದ ಪೊಲೀಸರು ಮನೆಯ ಅಕ್ಕ-ಪಕ್ಕದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕುಮಾರ್‌ ಹೋಗಿರುವುದು ಕಂಡು ಬಂದಿತ್ತು. ಈತನ ಬಗ್ಗೆ ಇನ್ನಷ್ಟು ಮಾಹಿತಿ ಸಂಗ್ರಹಿಸಿ ಮಂಡ್ಯ, ಮೈಸೂರಿನ ಎಲ್ಲೆಡೆ ಹುಡುಕಾಟ ನಡೆಸಿದರು ಸಿಕ್ಕಿರಲಿಲ್ಲ. ಮತ್ತೂಂದೆಡೆ ಆರೋಪಿ ಘಟನೆ ಬಳಿಕ ಎಲ್ಲಿಯೂ ಮೊಬೈಲ್‌ ಬಳಸಿಲ್ಲ. ಇದು ತನಿಖೆಗೆ ದೊಡ್ಡ ತಲೆನೋವಾಗಿತ್ತು. 

ಪೊಲೀಸರಿಗೇ ಪರೀಕ್ಷೆ!: ಆರೋಪಿ ನಾಲ್ಕು ತಿಂಗಳ ಬೇರೆ ಬೇರೆ ಜಿಲ್ಲೆಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ, ನಾಗರಬಾವಿಯಲ್ಲಿರುವ ಮೊದಲ ಪತ್ನಿಯನ್ನು ಭೇಟಿಯಾಗಿ, ನಂತರ ಸ್ನೇಹಿತನನ್ನು ಮಾತನಾಡಿಸುವದರ ಜತೆಗೆ ಪ್ರಕರಣ ಸಂಬಂಧ ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ತಿಳಿದು ಕೊಳ್ಳಲು ನಗರಕ್ಕೆ ಬಂದಿದ್ದ. ಈ ಮಾಹಿತಿ ಅರಿತ ಅನ್ನಪೂರ್ಣೇಶ್ವರಿನಗರ ಠಾಣೆ ಇನ್‌ಸ್ಪೆಕ್ಟರ್‌ ಕೃಷ್ಣ ತಮ್ಮ ತಂಡದೊಂದಿಗೆ ದಾಳಿ ನಡೆಸಿ ನಮ್ಮೂರ ತಿಂಡಿ ಹೋಟೆಲ್‌ ಬಳಿ ಇದ್ದ ಕುಮಾರ್‌ನನ್ನು ಬಂಧಿಸಿದ್ದು,ವಿಚಾರಣೆ ವೇಳೆ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next