Advertisement

ಕಾರವಾರ ತೀರದಲ್ಲಿ ಕಡಲ್ಕೊರೆತ ಭೀತಿ

07:50 PM Jun 28, 2021 | Team Udayavani |

ಕಾರವಾರ: ಇಲ್ಲಿನ ಅರಬ್ಬೀ ಸಮುದ್ರ ತೀರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು ಒಂದು ಕಿ.ಮೀ. ಉದ್ದಕ್ಕೆ ಅಲ್ಲಲ್ಲಿ ಕಡಲ್ಕೊರೆತ ಉಂಟಾಗಿದೆ. ನಗರದ ಟಾಗೋರ್‌ ಕಡಲ ತೀರದ ಅಜ್ವಿ ಹೋಟೆಲ್‌ ಹಿಂದಿನ ಕಡಲತೀರ, ಹನುಮಾನ್‌ ಪ್ರತಿಮೆ ಸನಿಹದ ಕಡಲು ಹಾಗೂ ದಿವೇಕರ್‌ ಕಾಲೇಜಿನ ಹಿಂಭಾಗ, ರಾಕ್‌ ಗಾರ್ಡನ್‌ ಹಿಂಭಾಗದ ಹತ್ತಿರ ತೀವ್ರ ಕಡಲ ಕೊರೆತ ಕಾಣಿಸಿಕೊಂಡಿದೆ.

Advertisement

ಮಳೆಗಾಲದಲ್ಲಿ ಕಡಲ್ಕೊರೆತ ಸಾಮಾನ್ಯವಾಗಿದ್ದು, ಈ ವರ್ಷ ಕಡಲ ಅಬ್ಬರಕ್ಕೆ ಹಲವು ಗಾಳಿ ಮರಗಳು ಹಾಗೂ ನೆರಳು ಗೋಪುರಗಳು ದಂಡೆಗೆ ಉರುಳಿವೆ. ಟಾಗೋರ್‌ ಕಡಲತೀರದಿಂದ ಹಿಡಿದು ಅಳ್ವೆವಾಡದ ದಿವೇಕರ್‌ ಕಾಲೇಜಿನ ಹಿಂಬದಿವರೆಗೂ ಕಡಲ್ಕೊರೆತ ಹೆಚ್ಚಾಗಿದ್ದರಿಂದ ವಿಪರೀತ ಮರಳಿನ ಸವಕಳಿ ಉಂಟಾಗಿದೆ. ಇದೇ ಪ್ರದೇಶದಲ್ಲಿರುವ ರಾಕ್‌ ಗಾರ್ಡನ್‌ ಹಾಗೂ ಅಜ್ವಿ ಹೊಟೇಲ್‌ ಹಿಂಭಾಗದಲ್ಲಿ ಸಮುದ್ರದ ಅಬ್ಬರ ಜೋರಾಗಿದ್ದರಿಂದ ಅಲ್ಲಿನ ಕಾಂಪೌಂಡ್‌ ಗೋಡೆ ಕುಸಿದು ಹಾನಿಗೊಳಗಾಗಿದೆ. ಕಳೆದ ಎರಡು ಮೂರು ವರ್ಷಗಳಿಂದಲೂ ರಾಕ್‌ ಗಾರ್ಡ್‌ನ್‌ ಕಾಂಪೌಂಡ್‌ವರೆಗೆ ಕಡಲ ಕೊರೆತ ಉಂಟಾಗಿದ್ದರಿಂದ ಈ ವರ್ಷ ಮತ್ತಷ್ಟು ಕಲ್ಲಿನ ತಡೆಗೋಡೆ ಹಾಕಲಾಗಿತ್ತು. ಆದರೆ ಈ ವರ್ಷವೂ ಸಮುದ್ರದ ಅಲೆಗಳ ಅಬ್ಬರ ಜೋರಾಗಿದ್ದರಿಂದ ರಾಕ್‌ ಗಾರ್ಡನ್‌ ಕಂಪೌಂಡ್‌ ವರೆಗೆ ಅಲೆಗಳು ಅಬ್ಬರಿಸುತ್ತಿದೆ.

ರಾಕ್‌ ಗಾರ್ಡನ್‌ಗೆ ಸಮುದ್ರ ಕೊರೆತದಿಂದಾಗಿ ಹಾನಿಯಾಗುವ ಸಂಭವ ಹೆಚ್ಚಾಗಿದೆ. ಕಾರವಾರ ತಾಲೂಕಿನ ಅಲಿಗದ್ದಾ, ಮಾಜಾಳಿ, ದೇವಬಾಗ, ನಗರದ ಮಕ್ಕಳ ಉದ್ಯಾನವನದ ಬಳಿ, ಚಾಪೆಲ್‌ ವಾರ್‌ಶಿಪ್‌ ಮ್ಯೂಸಿಯಂ ಸೇರಿದಂತೆ ಹಲವೆಡೆ ಕಡಲ್ಕೊರೆತ ಆರಂಭಗೊಂಡಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರಕ್ಕೆ ಮರಳು ಕೊಚ್ಚಿ ಹೋಗಿ ಕೊರೆತ ಉಂಟಾಗುತ್ತಿದೆ. ಇಲ್ಲಿನ ಹನುಮಾನ ಮೂರ್ತಿಯಿಂದ ರಾರ್ಕ್‌ಗಾರ್ಡನ್‌ವರೆಗೆ ಕಡಲ ಕೊರತೆ ತಡೆಯಲು ಲೋಕೋಪಯೋಗಿ ಇಲಾಖೆಯಿಂದ ಲಕ್ಷಾಂತರ ರೂ. ಅನುದಾನದಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಚಾಲನೆ ನೀಡಲಾಗಿತ್ತು. ಆದರೆ ಸ್ಥಳೀಯ ಸಾಂಪ್ರದಾಯಿಕ ಮೀನುಗಾರರು ಮೀನುಗಾರಿಕೆ ನಡೆಸಲು ಹಾಗೂ ದೋಣಿ ನಿಲುಗಡೆ ಮಾಡಲು ಸಮಸ್ಯೆಯಾಗುತ್ತದೆ ಎಂದು ಪ್ರತಿಭಟನೆ ನಡೆಸಿದ್ದರಿಂದ ತಡೆಗೋಡೆ ನಿರ್ಮಾಣ ಕೈಬಿಡಲಾಗಿತ್ತು. ರಾಕ್‌ ಗಾರ್ಡನ್‌ ಬಳಿ ಹಾಕಲಾಗಿದ್ದ ಕಲ್ಲು ಬಂಡೆಗಳ ಸುತ್ತಲಿನ ಮರಳು ಸಮುದ್ರ ಸೇರಿದೆ. ಅಜ್ವಿ ಹೊಟೇಲ್‌ ಹಿಂಭಾಗದ ಪ್ರದೇಶದಲ್ಲಿ ದಾಸ್ತಾನಿಟ್ಟಿರುವ ಪುಟಾಣಿ ರೈಲ್ವೆಗಳ ಹಳಿಗಳ ಅಡಿ ಮರಳು ಅಲೆಯ ರಭಸಕ್ಕೆ ಕೊಚ್ಚಿ ಹೋಗಿದೆ. ಪರಿಣಾಮ ಹಳಿಗಳು ಸಮುದ್ರ ಸೇರುವ ಸಾಧ್ಯತೆಗಳಿವೆ. ಸಮುದ್ರ ದಂಡೆಯಲ್ಲಿ ಸಾರ್ವಜನಿಕರು ಕುಳಿತುಕೊಳ್ಳಲು ಹಾಕಲಾಗಿದ್ದ ಪರಗೋಲಾ ಸಮುದ್ರದ ಆರ್ಭಟಕ್ಕೆ ನೆಲಕ್ಕೆ ಉರುಳಿವೆ.

ಗಾಳಿ ಮರಗಳು ನೆಲಕ್ಕೆ: ಕೋಡಿಭಾಗ ಅಳ್ವೆವಾಡದ ದಿವೇಕರ್‌ ಕಾಲೇಜು ಹಾಗೂ ಸಾಗರ ದರ್ಶನ ಹಾಲ್‌ ಹಿಂಭಾಗದಲ್ಲಿ ಸಮುದ್ರದ ಭಾರೀ ಅಲೆಗಳು ಸೃಷ್ಟಿಯಾಗಿದ್ದರಿಂದ ಮರಳು ಸವಕಳಿ ಹೆಚ್ಚಿನ ಪ್ರಮಾಣದಲ್ಲಿ ಆಗಿದೆ. ಈ ಪ್ರದೇಶದಲ್ಲಿ ಭಾರೀ ಗಾತ್ರದ ಅಲೆಗಳು ಏಳುತ್ತಿದ್ದರಿಂದ ಕೆಲವು ಮರಗಳು ಬುಡಸಮೇತ ಉರುಳಿ ಬಿದ್ದಿವೆ. ಇನ್ನಷ್ಟು ಮರಗಳ ಬೇರು ಮೇಲೆದ್ದಿದ್ದು ಉರುಳುವ ಹಂತಕ್ಕೆ ತಲುಪಿದೆ. ಕಡಲ ಕೊರೆತ ತಪ್ಪಿಸಲು ಕೆಲವು ಕಡೆಗಳಲ್ಲಿ ಹಾಕಲಾಗಿದ್ದ ಕಲ್ಲು ಬಂಡೆಗಳು ಮೇಲೆದ್ದಿದ್ದು ಸುತ್ತಮುತ್ತಲಿನ ಮರಳು ಸಮುದ್ರ ಪಾಲಾಗಿದೆ.

ಸವಕಳಿ ತಡೆಯುವ ಬಂಗುಡೆ ಬಳ್ಳಿ: ಕಡಲತೀರದ ಬಳಿ ಹೇರಳವಾಗಿ ಬೆಳೆಯುವ ಬಂಗುಡೆ ಬಳ್ಳಿಯಿಂದಾಗಿ ಸಮುದ್ರ ಕೊರೆತ ತಡೆಯಲು ಸಾಧ್ಯವಾಗುತ್ತದೆ. ಆದರೆ ಕಾರವಾರದ ಕೆಲವೆಡೆ ಕಡಲತೀರಗಳಲ್ಲಿ ಈ ಬಂಗುಡೆ ಬಳ್ಳಿಯು ವ್ಯಾಪಕ ಪ್ರಮಾಣದಲ್ಲಿ ಇಲ್ಲದಿರುವ ಕಾರಣ ಕಡಲ್ಕೊರೆತ ತೀವ್ರವಾಗುತ್ತಿದೆ ಎಂಬುದು ಪರಿಸರ ಪ್ರೇಮಿಗಳ ಮಾತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next