Advertisement

ಆಹಾರ ಬೆಳೆಗಳಲ್ಲಿ ಕುಲಾಂತರಿ ಅಳವಡಿಕೆ

12:51 PM Jan 06, 2017 | Team Udayavani |

ಕಲಬುರಗಿ: ಸಾಂಪ್ರದಾಯಿಕ ಕೃಷಿ ಬದಲಾಗಬೇಕಿದೆ. ತಳಿ ಅಭಿವೃದ್ಧಿ, ಕುಲಾಂತರಿ ತಳಿಗಳನ್ನು ಆಹಾರ ಬೆಳೆಗಳಲ್ಲಿ ಅಳವಡಿಸಲು ಒತ್ತು ನೀಡುವ ಮುಖಾಂತರ ಹೊಸ ಸಂಶೋಧನೆಗಳತ್ತ ಸಂಶೋಧಕರು ಮುಖ ಮಾಡಬೇಕಿದೆ ಎಂದು ಗುಲಬರ್ಗಾ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ|ಎಸ್‌.ಆರ್‌. ನಿರಂಜನ್‌ ಹೇಳಿದರು. 

Advertisement

ಗುವಿವಿ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ| ಶ್ರೀನಾಥರಾವ್‌ ವಯೋನಿವೃತ್ತಿ ಅಂಗವಾಗಿ ಗುರುವಾರ ಆಯೋಜಿಸಿದ್ದ ಔಷಧೀಯ ಸಸ್ಯಗಳ ಪ್ರಸ್ತುತತೆ ಕುರಿತ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಹವಾಮಾನ ವೈಪರಿತ್ಯ, ಬಳಕೆಯಾಗದ ತಂತ್ರಜ್ಞಾನ, ಮುಂದಾಲೋಚನೆ, ಮಾರುಕಟ್ಟೆ ವಿಮರ್ಶೆ ಇಲ್ಲದೆಯೆ ಬೆಳೆ ಬೆಳೆಯುವುದರಿಂದ ಕೃಷಿ ನಷ್ಟದಾಯಕವಾಗಿದೆ. ರೈತರು ಹಾಗೂ ಯುವ ಜನತೆ ಒಕ್ಕಲುತನದಿಂದ ವಿಮುಖವಾಗುತ್ತಿದ್ದಾರೆ. ಈ ಹಂತದಲ್ಲಿ ಕೃಷಿ ಸಮಾಜದ ಅಭಿವೃದ್ಧಿ, ರೈತರಿಗೆ ಪೂರಕವಾಗುವಂಥ ಗುಣಮಟ್ಟದ ಸಂಶೋಧನೆಗಳು ಹೆಚ್ಚಾಗಬೇಕಿದೆ ಎಂದರು. 

ಸಂಶೋಧನೆ ಎನ್ನುವುದನ್ನು ಒಮ್ಮೆ ಮಾಡಿ ಕೈಬಿಡುವುದಲ್ಲ. ಇದೊಂದು ನಿರಂತರ ಪ್ರಕ್ರಿಯೆ. ಸಂಶೋಧನೆ ಕೇವಲ ಈ ಭಾಗಕ್ಕೆ ಸೀಮಿತವಾಗದೆ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಗಳಿಸುವಂತಾಗಬೇಕು ಎಂದರು. 

ಕ್ಲಿನಿಕ್‌ ಚಿಂತನೆ: ಗುಲಬರ್ಗಾ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದಲ್ಲಿ ಕ್ರಾಪ್‌ ಕ್ಲಿನಿಕ್‌ ಆರಂಭಿಸುವ ಚಿಂತನೆ ನಡೆದಿದೆ. ಈ ಕುರಿತು ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ. ಬೀಜ, ಸಸ್ಯಗಳ ಪರೀಕ್ಷೆ, ರೈತರಿಗೆ ಮಾರ್ಗದರ್ಶನ ಮಾಡಲು ಕ್ಲಿನಿಕ್‌ ಬಹು ಉಪಯೋಗಿ ಆಗಲಿದೆ ಎಂದರು. 

Advertisement

ಹೈದರಾಬಾದ ಉಸ್ಮಾನಿಯಾ ವಿಶ್ವವಿದ್ಯಾಲಯ ವಿಜ್ಞಾನಿ ಪ್ರೊ| ಪಿ.ಬಿ. ಕವಿಕಿಶೋರ ಮಾತನಾಡಿ, ಔಷಧೀಯ ಸಸ್ಯಗಳು ಮತ್ತು ವಿವಿಧ ರೋಗಗಳ ಚಿಕಿತ್ಸೆಯಲ್ಲಿ ಅವುಗಳ ಪಾತ್ರ ಕುರಿತು ವಿವರಿಸಿದರು. ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎ.ಎಚ್‌. ರಾಜಾಸಾಬ್‌ ಮಾತನಾಡಿ, ಇವತ್ತು ಭೂಮಿ ಮೇಲೆ ಬಹಳಷ್ಟು ಸಸ್ಯ ಸಂಕುಲ ವಿನಾಶದತ್ತ ಸರಿಯುತ್ತಿದೆ.

ಕೆಲವು ಪ್ರಭೇದಗಳಂತೂ ಈಗಾಗಲೇ ಕಣ್ಮರೆಯಾಗಿವೆ. ಇವುಗಳ ಕುರಿತು ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಗುವಿವಿ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿಯಿಂದ ಸಂಶೋಧನೆ ಮಾಡಬೇಕು ಎಂದರು. ಪ್ರೊ| ಶ್ರೀನಾಥರಾವ್‌ ಅವರ ಮೊದಲ ಸಂಶೋಧನಾ ವಿದ್ಯಾರ್ಥಿಗಳಾದ ಪ್ರೊ| ಮಾಧವ ನಾಯ್ಡು, ಪ್ರೊ| ಎ.ಸದಾನಂದಮ್‌ ವಿಶೇಷ ಉಪನ್ಯಾಸ ನೀಡಿದರು. ವಿಭಾಗದ ಮುಖ್ಯಸ್ಥೆ ಪ್ರೊ| ಪ್ರತಿಮಾ ಮಠದ ಸ್ವಾಗತಿಸಿದರು. ಡಾ| ರಾಮಗೋಪಾಲ ಪರಿಚಯಿಸಿದರು. 

ಡಾ| ಬಿ.ಗೋವಿಂದರಾಮ ನಿರೂಪಿಸಿದರು. ಡಾ| ಕಿರಣ ಘಂಟಿ ವಂದಿಸಿದರು. ವಿಜಯಪುರ ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಕೆ.ಪಿ. ಶ್ರೀನಾಥ, ವಾರಂಗಲ್‌ ಕಾಕತೀಯ ವಿವಿ ವಿಶ್ರಾಂತ ಕುಲಪತಿ ಪ್ರೊ| ವಿದ್ಯಾವತಿ, ಸಂಶೋಧನಾ ವಿದ್ಯಾರ್ಥಿಗಳಾದ ಡಾ| ಬುಜರ್ಕೆ, ಡಾ| ಕವಿರಾಜ, ಡಾ| ವಿಜಯ, ಡಾ| ಹೊನ್ನಾಳೆ, ಡಾ| ರಾಮಗೋಪಾಲ ಕಾರ್ಯಕ್ರಮ ನಡೆಸಿಕೊಟ್ಟರು. ವಯೋನಿವೃತ್ತಿ ಹೊಂದಿದ ಪ್ರೊ| ಶ್ರೀನಾಥರಾವ್‌ ಅವರನ್ನು ದಂಪತಿ ಸಮೇತ ಸತ್ಕರಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next