Advertisement

ವಿರಕ್ತ ಮಠಾಧೀಶರು ಸ್ಪಷ್ಟ ನಿಲುವು ತೋರಲಿ

01:09 PM Oct 23, 2017 | Team Udayavani |

ಹುಬ್ಬಳ್ಳಿ: ಲಿಂಗಾಯತ ಸ್ವತಂತ್ರ ಧರ್ಮ ವಿಚಾರದಲ್ಲಿ ಬಸವ ತತ್ವದಡಿಯಲ್ಲಿಯೇ ಅಸ್ತಿತ್ವ ಕಂಡುಕೊಂಡಿರುವ ವಿರಕ್ತ ಮಠಗಳ ಮಠಾಧೀಶರು ತಮ್ಮ ದ್ವಂದ್ವತೆ ಹಾಗೂ ಎರಡು ಕಡೆಗೂ ನಮ್ಮ ಸಹಮತ ಇದೆ ಎಂಬ ನಿಲುವು ಬಿಟ್ಟು ಸ್ಪಷ್ಟತೆ ವ್ಯಕ್ತಪಡಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಒತ್ತಾಯಿಸಿದರು. 

Advertisement

ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಅಂಗವಾಗಿ ನವೆಂಬರ್‌ 5ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಡೆಯಲಿರುವ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪಂಚಪೀಠಾಧೀಶ್ವರರು ತಾವು ವೀರಶೈವ ಧರ್ಮದ ಪರವಾಗಿದ್ದೇವೆ ಎಂದು ಸ್ಪಷ್ಟವಾಗಿ ಹೇಳುತ್ತಿದ್ದು, ಅವರ ಬಗ್ಗೆ ನಾವು ಹೆಚ್ಚು ಗಮನ ನೀಡುವುದಿಲ್ಲ. 

ಲಿಂಗಾಯತ ಸ್ವತಂತ್ರ ಧರ್ಮದ ಒತ್ತಾಯಕ್ಕೆ ನೀವು ಕೈ ಜೋಡಿಸಿ ಎಂದು ಅವರಿಗೆ ಮನವಿ ಮಾಡುತ್ತೇವೆ. ಬರುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದರು. ರಾಜ್ಯದಲ್ಲಿ ಬಸವಣ್ಣನವರ ಹೆಸರಿನಲ್ಲಿ ಅವರ ತತ್ವಾಧಾರದಲ್ಲಿ ಅಸ್ತಿತ್ವ ಕಂಡುಕೊಂಡಿರುವ ವಿರಕ್ತ ಮಠಗಳ ಮಠಾಧೀಶರು ತಾವು ಮಾತ್ರ ಹೋರಾಟ ವಿಚಾರದಲ್ಲಿ ದ್ವಂದ್ವ ನಿಲುವು ಮುಂದುವರಿಸದೆ ತಮ್ಮ ನಿಲುವು ಸ್ಪಷ್ಟಪಡಿಸಬೇಕು.

ವಿರಕ್ತ ಮಠಗಳ ಮಠಾಧೀಶರು ಲಿಂಗಾಯತ ಧರ್ಮ ಹೋರಾಟಕ್ಕೆ ಸ್ಪಂದನೆ ನೀಡಬೇಕಾಗಿದೆ. ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಸಮಾಜದ ಬದುಕಿನ ಹೋರಾಟವಾಗಿದೆ. ಮಠಾಧೀಶರು ಭಕ್ತರ ನಿಲುವಿಗೆ ಸ್ಪಂದಿಸಬೇಕಾಗಿದೆ ಎಂದರು. ಶಿವಯೋಗ ಮಂದಿರದ ಅಧ್ಯಕ್ಷರಾಗಿ ಡಾ| ಸಂಗನಬಸವ ಸ್ವಾಮೀಜಿಯವರು 2003ರಿಂದ ಇದ್ದರೂ ಕ್ಷೇತ್ರದ ಅಭಿವೃದ್ಧಿಯಾಗಿಲ್ಲ.

ಲಿಂಗಾಯತ ಹೋರಾಟಕ್ಕೆ ಜನಬೆಂಬಲವಿಲ್ಲ. ಈ ಬಗ್ಗೆ ಮತದಾನ ನಡೆದರೆ ಶೇ.75ರಷ್ಟು ಜನರು ನಮ್ಮ ಕಡೆ ಇದ್ದಾರೆಂದು ಸಂಗನಬಸವ ಸ್ವಾಮೀಜಿ ಹೇಳಿದ್ದು ಸರಿಯಲ್ಲ. ಎಲ್ಲರನ್ನು ಒಗ್ಗೂಡಿಸಬೇಕಾದ ಮಠಾಧೀಶರೇ ರಾಜಕಾರಣಿಗಳಂತೆ ಮಾತನಾಡಿದರೆ ಹೇಗೆ ಎಂದು ಪ್ರಶ್ನಿಸಿದರು. 25ರಂದು ಸ್ಪಷ್ಟ ನಿರ್ಧಾರ: ಈ ಹಿಂದೆ ವೀರಶೈವ-ಲಿಂಗಾಯತ ಸ್ವತಂತ್ರ ಧರ್ಮ ಪ್ರಸ್ತಾಪ ಎರಡು ಬಾರಿ ತಿರಸ್ಕೃತಗೊಂಡಿದೆ.

Advertisement

ಸಮಾಜಕ್ಕೆ ಸೌಲಭ್ಯ ಪಡೆಯಲು ಲಿಂಗಾಯತ ಸ್ವತಂತ್ರ ಧರ್ಮವೆಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅ.25ರಂದು ವೀರಶೈವ ಮಹಾಸಭಾದವರೊಂದಿಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದ್ದೇವೆ. ಅವರು ಒಪ್ಪಿದರೆ ಸರಿ ಇಲ್ಲವಾದರೆ ಅವರು ವೀರಶೈವ-ಲಿಂಗಾಯತ ಎಂದು ಕೊಡಲಿ, ನಾವು ಲಿಂಗಾಯತ ಸ್ವತಂತ್ರ ಧರ್ಮವೆಂದು ಮನವಿ ಸಲ್ಲಿಸುತ್ತೇವೆ ಎಂದರು. 

ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಬಸವಣ್ಣವರಿಂದ ಲಿಂಗಾಯತ ಶಬ್ದ ಬಂದಿದೆ. ಅಲ್ಪಸಂಖ್ಯಾತ ಧರ್ಮದೊಂದಿಗೆ ಸಮಾಜಕ್ಕೆ ಸರಕಾರಿ ಸೌಲಭ್ಯ ಪಡೆಯಲು ಇನ್ನಾದರೂ ಸಂಘಟಿತ ಹೋರಾಟ ನಡೆಸೋಣ ಎಂದರು.

ಮುಖಂಡರಾದ ರಾಜಣ್ಣಾ ಕೊರವಿ, ಸಿದ್ರಾಮಣ್ಣ ನಡಕಟ್ಟಿ, ಪ್ರೊ| ಬಿ.ವಿ. ಶಿರೂರು, ತಾರಾದೇವಿ ವಾಲಿ, ಚಿಂತಾಮಣಿ ಸಿಂದಗಿ, ಗೊಂಗಣ ಶೆಟ್ಟರ, ಅಕ್ಕಮ್ಮ ನವಲಗುಂದ, ರಾಜಶೇಖರ ಮೆಣಸಿನಕಾಯಿ, ವಿ.ಎಸ್‌. ಅಳಗುಂಡಗಿ ಮಾತನಾಡಿದರು. ಪ್ರೊ| ಎಸ್‌.ವಿ. ಪಟ್ಟಣಶೆಟ್ಟಿ ಇನ್ನಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next