Advertisement

ಪಿಎಸ್‌ಐಗೆ ಚೂರಿ ಹಾಕಿದವರಿಗೆ ಗುಂಡೇಟಿನ ಉತ್ತರ

01:42 PM Mar 27, 2018 | Team Udayavani |

ಬೆಂಗಳೂರು: ನಗರದಲ್ಲಿ ಮತ್ತೆ ಪೊಲೀಸರ ಬಂದೂಕು ಸದ್ದು ಮಾಡಿದೆ. ಯುವತಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ ತಮಿಳುನಾಡು ಮೂಲದ ಇಬ್ಬರು ಆರೋಪಿಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ.

Advertisement

ತಮಿಳುನಾಡಿನ ಧರ್ಮಪುರಿಯ ಶಂಕರ್‌(25) ಮತ್ತು ಸೆಲ್ವಕುಮಾರ್‌(26) ಬಂಧಿತರು. ಆರೋಪಿಗಳನ್ನು ಬಂಧಿಸಲು ಮುಂದಾದ ಪೊಲೀಸರ ಮೇಲೆ ಆರೋಪಿಗಳು ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಗಳತ್ತ ಗುಂಡು ಹಾರಿಸಿದ್ದಾರೆ. ಈ ವೇಳೆ ಗಾಯಗೊಂಡ ಆರೋಪಿಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ದಾಳಿ ವೇಳೆ ಚಾಕು
ಇರಿತಕ್ಕೊಳಗಾದ ಪೊಲೀಸ್‌ ಕಾನ್‌ಸ್ಟೆàಬಲ್‌ ಮಹಾಂತೇಶ್‌ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಮವಾರ ನಸುಕಿನ 3.30ರ ಸುಮಾರಿಗೆ ಹಾಡೋ ಸಿದ್ದಾಪುರ ಬಳಿ ಇಬ್ಬರು ಆರೋಪಿಗಳ ಕಾಲಿಗೆ ಬೆಳ್ಳಂದೂರು ಠಾಣೆ ಇನ್‌ಸ್ಪೆಕ್ಟರ್‌ ವಿಕ್ಟರ್‌ ಸೈಮನ್‌ ಹಾಗೂ ವೈಟ್‌ಫೀಲ್ಡ್‌ ಪಿಎಸ್‌ಐ ಸೋಮಶೇಖರ್‌ ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದು ಡಿಸಿಪಿ ಅಬ್ದುಲ್‌ ಅಹ್ಮದ್‌ ತಿಳಿಸಿದ್ದಾರೆ. ಈಜುಕೊಳವೊಂದರಲ್ಲಿ ತರಬೇತುದಾರ ರಾಗಿರುವ ಯುವತಿ ಮಾ. 18ರ ರಾತ್ರಿ 10 ಗಂಟೆ ಸುಮಾರಿಗೆ ಪರಪ್ಪನ ಅಗ್ರಹಾರ ಕಡೆಯಿಂದ ಕಸವನಹಳ್ಳಿ ರಸ್ತೆಯಲ್ಲಿರುವ ಮೆಡಿಕಲ್‌ ಸ್ಟೋರ್‌ನಲ್ಲಿ ಔಷಧ ತರಲು ಹೋಗುತ್ತಿದ್ದರು.

ಇದೇ ವೇಳೆ ವರ್ತೂರಿನ ತಮ್ಮ ಸಂಬಂಧಿಕರ ಮನೆಯಿಂದ ಇಂಡಿಕಾ ಕಾರಿನಲ್ಲಿ ಬರುತ್ತಿದ್ದ ಆರೋಪಿಗಳು ಮಾರ್ಗ ಮಧ್ಯೆ ಮದ್ಯ ಸೇವಿಸಿದ್ದು, ನಡೆದುಹೋಗುತ್ತಿದ್ದ ಯುವತಿಯನ್ನು ಕಂಡು ಅನುಚಿತವಾಗಿ ವರ್ತಿಸಿದ್ದಲ್ಲದೆ ಕೈ ಹಿಡಿದು ಎಳೆದು ಕಾರಿನೊಳಗೆ ಕೂರಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದರು.

ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಪೊಲೀಸರು ಎಲ್ಲೆಡೆ ನಾಕಾಬಂದಿ ಹಾಕಿ ಕಾರ್ಯಾಚರಣೆ ಆರಂಭಿಸಿದ್ದರು. ಈ ಮಧ್ಯೆ ಕಾರಿನಲ್ಲಿ ತೀವ್ರ ಪ್ರತಿರೋಧ ಒಡ್ಡಿದ ಯುವತಿ ಹೆಬ್ಬಗೋಡಿ ಠಾಣಾ ವ್ಯಾಪ್ತಿಯಲ್ಲಿ ಅವರಿಂದ ತಪ್ಪಿಸಿಕೊಂಡು ಹತ್ತಿರದ ಮಾವನ ಮನೆಗೆ ಹೋಗಿ ಆಶ್ರಯ ಪಡೆದುಕೊಂಡಿದ್ದರು. ಮಾರನೇ ದಿನ ಚಿಕಿತ್ಸೆಗಾಗಿ ಸೆಂಟ್‌ ಜಾನ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಘಟನೆ ಸಂಬಂಧ ಪ್ರಕರಣ ದಾಖಲಾಗುತ್ತಿದ್ದಂತೆ ಯುವತಿಯ ಹೇಳಿಕೆ ಆಧರಿಸಿ ಐದು ವಿಶೇಷ ತಂಡ ರಚಿಸಿದ
ಪೊಲೀಸರು, ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಕಾರಿನ ನೋಂದಣಿ ಸಂಖ್ಯೆ ಮೂಲಕ ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಾಹಿತ ಹೊರ ಬಂದಿದೆ. 

Advertisement

ಕಾಲಿಗೆ ಗುಂಡೇಟು: ಇತ್ತ ಪೊಲೀಸರಿಗೆ ಹೆದರಿದ ಇಬ್ಬರು ಆರೋಪಿಗಳು ತಮಿಳುನಾಡು, ಕೇರಳದಲ್ಲಿ ತಲೆಮರೆಸಿಕೊಂಡಿದ್ದರು. ಈ ಮಾಹಿತಿ ಅರಿತ ಪೊಲೀಸರು ಅಲ್ಲಿಯೂ ಕಾರ್ಯಾಚರಣೆ ನಡೆಸಿದ್ದರು. ಈ ಮಧ್ಯೆ ಮಾ. 25ರಂದು ಆರೋಪಿಗಳು ಬೆಂಗಳೂರಿಗೆ ವಾಪಸಾಗಿದ್ದು, ಪೊಲೀಸರ ತಂಡ ಕಾರ್ಯಾಚರಣೆ ನಡೆಸಿತ್ತು.

ಚಾಕುವಿನಿಂದ ಇರಿತ: ಕಾರ್ಯಾಚರಣೆ ವೇಳೆ ಕಾರಿನಿಂದ ಇಳಿದ ಆರೋಪಿಗಳು ಬಿಎಂಟಿಸಿ ಲೇಔಟ್‌ನ ನಿರ್ಜನ ಪ್ರದೇಶದಲ್ಲಿ ಕಾಡಿನ ಮಧ್ಯೆ ಓಡಿ ತಲೆಮರೆಸಿಕೊಳ್ಳಲು ಮುಂದಾದರು. ಹಿಂಬಾಲಿಸಿದ ಕಾನ್‌ಸ್ಟೆàಬಲ್‌ ಮಹಾಂತೇಶ್‌ ಮುಳವಾಡ ಆರೋಪಿಗಳನ್ನು ಹಿಡಿಯಲು ಯತ್ನಿಸಿದಾಗ ಆರೋಪಿ ಶಂಕರ್‌ ಚಾಕುವಿನಿಂದ ಹೊಟ್ಟೆಗೆ ಇರಿದಿದ್ದಾರೆ. ಅಷ್ಟರಲ್ಲಿ ಜತೆಗಿದ್ದ ಪಿಐ ವಿಕ್ಟರ್‌ ಸೈಮನ್‌
ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದರು. ಕೇಳದಿದ್ದಾಗ ಆರೋಪಿ ಶಂಕರ್‌ನ ಬಲಗಾಲಿಗೆ ಗುಂಡು ಹಾರಿಸಿದರು. ಇದೇ ವೇಳೆ ಪಿಎಸ್‌ಐ ಸೋಮಶೇಖರ್‌ ಮೇಲೆ ಹಲ್ಲೆ ನಡೆಸಿದಾಗ ಸೆಲ್ವಕುಮಾರ್‌ ಮೇಲೆ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿ ಬಂಧಿಸಲಾಯಿತು ಎಂದು ಡಿಸಿಪಿ ಅಬ್ದುಲ್‌ ಅಹ್ಮದ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next