Advertisement

ಕಿರಿಕಿರಿ ರಸ್ತೆಗೆ ಮೋಕ್ಷವಾಗಬೇಕಾಗಿದೆ

06:10 AM Sep 29, 2018 | |

ಕುಂಬಳೆ: ಪೈವಳಿಕೆ ಗ್ರಾಮ ಪಂಚಾಯತ್‌ನ ಗ್ರಾಮೀಣ ಪ್ರದೇಶವಾದ ಸಜಂಕಿಲ ಸಾಗು ಎಂಬಲ್ಲಿ ಶಾಸಕರ ನಿಧಿಯಿಂದ ಸೇತುವೆಯನ್ನು ನಿರ್ಮಿಸಲಾಗಿದೆ. 25 ಲಕ್ಷ ರೂ. ನಿಧಿಯ ಮೂಲಕ ನಿರ್ಮಿಸಿದ ಸೇತುವೆ ರಸ್ತೆ ಆವಳಮಠದಿಂದ ಗಾಳಿಯಡ್ಕ ಮೂಲಕ ಬಾಯಾರು ಪದವಿಗೆ ಸಂಪರ್ಕ ಕಲ್ಪಿಸುವ ಸುಮಾರು 4 ಕಿ.ಮೀ. ಉದ್ದದ ರಸ್ತೆಯಾಗಿದೆ. ಆದರೆ ಈ ರಸ್ತೆಯ ಕೆಲವು ಫಲಾನುಭವಿಗಳು ಸ್ಥಳ ನೀಡಲು ಹಿಂದೇಟು ಹಾಕಿದ ಕಾರಣ ರಸ್ತೆ ಕೆಲಕಡೆಗಳಲ್ಲಿ ಅಗಲ ಕಿರಿದಾಗಿದೆ. ಆದುದರಿಂದ ಈ ರಸ್ತೆಯಲ್ಲಿ ಘನವಾಹನಗಳು ಸಂಚರಿಸಲು ತೊಡಕಾಗಿದೆ.

Advertisement

ಹೊಸ ಸೇತುವೆ ನಿರ್ಮಿಸಿದ ಬಳಿಕ ಸಂಪರ್ಕ ರಸ್ತೆಗೆ ಇಕ್ಕೆಲಗಳಲ್ಲಿ ಮಣ್ಣು ಹಾಕಿರುವುದು ಮಳೆಗೆ ಕೆಸರು ಗದ್ದೆಯಾಗಿದೆ. ಈ ಪ್ರದೇಶಕ್ಕೆ ಡಾಮರು ಹಾಕದೆ ವಾಹನಗಳು ಸಂಚರಿಸಲು ತೊಡಕಾಗಿದೆ. 25 ಲಕ್ಷ ರೂ.ಯಲ್ಲಿ ಕೈಗೊಂಡ ಕಾಮಗಾರಿಯಲ್ಲಿ ಈ ರಸ್ತೆಯ ಮುಂದಿನ ಎತ್ತರ ಪ್ರದೇಶದಲ್ಲಿ ಅಲ್ಪ ಡಾಮರೀಕರಣ ಮಾಡಲಾಗಿದೆ. ಆದರೆ ರಸ್ತೆ ಪೂರ್ತಿ ಡಾಮರು ಹಾಕಿದಲ್ಲಿ ವಾಹನಗಳ ಸಂಚಾರಕ್ಕೆ ಸುಗಮವಾಗಲಿದೆ. ಗುಡ್ಡಗಾಡು ಹಾದಿಯಂತಾಗಿರು ರಸ್ತೆಯನ್ನು ಅಗಲಗೊಳಿಸಿ ಪೂರ್ತಿ ಡಾಮರೀಕರಣ ಮಾಡಬೇಕೆಂಬ ಬೇಡಿಕೆ ಫಲಾನುಭವಿಗಳದು.

ಸ್ಥಳ ನೀಡಿದಲ್ಲಿ ಸುಗಮ ರಸ್ತೆ  
ರಸ್ತೆ ಅಗಲಗೊಳಿಸಲು ರಸ್ತೆಯ ಇಕ್ಕೆಲ ನಿವಾಸಿಗಳು ಉದಾರವಾಗಿ ಸ್ಥಳ ನೀಡಿದಲ್ಲಿ ರಸ್ತೆಯನ್ನು ಅಗಲಗೊಳಿಸಬಹುದು. ಗ್ರಾಮ ಪಂಚಾಯತ್‌ ನಿಧಿಯ ಮೂಲಕ ಮುಂದೆ ಕಾಂಕ್ರಿಟ್‌ ರಸ್ತೆ ನಿರ್ಮಿಸಲಾಗುವುದು.ಆದುದರಿಂದ ರಸ್ತೆ ಅಭಿವೃದ್ಧಿಗೆ ಫಲಾನುಭವಿಗಳ ಸಹಕಾರ ಬೇಕಾಗಿದೆ. ರಸ್ತೆ ಅಗಲಗೊಂಡಲ್ಲಿ ಗ್ರಾಮೀಣ ಪ್ರದೇಶದ ಕೃಷಿಕರಿಗೆ ಈ ರಸ್ತೆ ವರದಾನವಾಗಲಿದೆ.
– ಎಸ್‌. ಸುಬ್ರಹ್ಮಣ್ಯ ಭಟ್‌
ಪೈವಳಿಕೆ ಗ್ರಾಮ ಪಂಚಾಯತ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next