ಬೆಂಗಳೂರು: ಬಿಬಿಎಂಪಿಯು 2018-19ನೇ ಸಾಲಿನಲ್ಲಿ 10 ಸಾವಿರ ಕೋಟಿಗೂ ಅಧಿಕ ಮೊತ್ತದ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದೆ. ಆದರೆ, ಕಳೆದ ವರ್ಷದ ಬಜೆಟ್‌ನಲ್ಲಿ ಘೋಷಿಸಿದ ಕಾರ್ಯಕ್ರಮಗಳ ಅನುಷ್ಠಾನ ಶೇ.60ನ್ನೂ ತಲುಪಿಲ್ಲ.
2017-18ನೇ ಸಾಲಿನಲ್ಲಿ 9,816 ಕೋಟಿ ರೂ. ಮೊತ್ತದ ಬಜೆಟ್ ಮಂಡನೆಯಾಗಿತ್ತು. ಆದರೆ, ಪ್ರಸಕ್ತ ಹಣಕಾಸು ವರ್ಷ ಪೂರ್ಣಗೊಳ್ಳಲು ಒಂದು ತಿಂಗಳು ಬಾಕಿಯಿದ್ದರೂ, ಬಜೆಟ್‌ನಲ್ಲಿ ಘೋಷಿಸಿದ್ದ ಹಲವಾರು ಜನಪ್ರಿಯ ಯೋಜನೆಗಳು ಅನುಷ್ಠಾನವಾಗದೆ ಬಜೆಟ್ ಪುಸ್ತಕದಲ್ಲೇ ಉಳಿದಿರುವುದು ಪಾಲಿಕೆಯ ಆಡಳಿತ ಹಾಗೂ ಕಾರ್ಯವೈಖರಿಗೆ ಸಾಕ್ಷಿಯಾಗಿದೆ.
ಪ್ರಸಕ್ತ ಸಾಲಿನಲ್ಲಿ ಆದಾಯ ಸಂಗ್ರಹದಲ್ಲಿ ಸ್ವಲ್ಪಮಟ್ಟಿನ ಚೇತರಿಕೆ ಕಂಡಿದ್ದು, ಹಣಕಾಸು ಸಂಸ್ಥೆಗಳಿಂದ ಪಡೆದಿರುವ ಸಾಲವನ್ನು ಮರುಪಾವತಿಸುವ ಪ್ರಯತ್ನಕ್ಕೆ ಮುಂದಾಗಿದೆ. ಜತೆಗೆ ಹೊಸ ಸಾಲಕ್ಕೆ ಕೈಹಾಕದ ಪಾಲಿಕೆ ತನ್ನ ಸ್ವಂತ ಆದಾಯವನ್ನು ವೃದ್ಧಿಸಿಕೊಂಡ ಹೊರತಾಗಿಯೂ ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿಸಲಾಗದಂತಹ ಪರಿಸ್ಥಿತಿಯಲ್ಲಿ ಪಾಲಿಕೆಯಿದೆ.
ಪ್ರತಿ ವರ್ಷ ಪಾಲಿಕೆಯಲ್ಲಿ ಹಲವು ಸಾವಿರ ಕೋಟಿ ಮೊತ್ತದ ಬಜೆಟ್ ಮಂಡನೆಯಾಗುತ್ತಿದೆ. ಪ್ರತಿ ಬಾರಿಯ ಬಜೆಟ್‌ನಲ್ಲಿನ ಜನಪ್ರಿಯ ಕಾರ್ಯಕ್ರಮಗಳು ಜನರಲ್ಲಿ ನಿರೀಕ್ಷೆ ಮೂಡಿಸುತ್ತವೆ. ಆದರೆ ಪಾಲಿಕೆಯ ಆಡಳಿತ ವರ್ಗ ಬಜೆಟ್‌ನಲ್ಲಿ ಘೋಷಿತ ಕಾರ್ಯಕ್ರಮಗಳನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ವಿಫಲವಾಗಿದ್ದು, ಬಹಳಷ್ಟು ಕಾರ್ಯಕ್ರಮಗಳು ಘೋಷಣೆಗಳಾಗಿಯೇ ಉಳಿಯುತ್ತಿವೆ.
ಆಸ್ತಿ ತೆರಿಗೆ ಸಂಗ್ರಹ, ಜಾಹೀರಾತು, ಆಪ್ಟಿಕಲ್ ಫೈಬರ್ ಕೇಬಲ್ ಶುಲ್ಕ, ಸುಧಾರಣಾ ಶುಲ್ಕ, ವಾಣಿಜ್ಯ ಪರವಾನಗಿ ಹೀಗೆ ಹಲವಾರು ಆದಾಯ ಮೂಲಗಳಿವೆ. ಆದರೆ ಅವುಗಳಿಂದ ಸಮರ್ಪಕವಾಗಿ ತೆರಿಗೆ ಸಂಗ್ರಹಿಸುವ ಕಾರ್ಯಕ್ಕೆ ಪಾಲಿಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆಸಕ್ತಿ ತೋರಿಲ್ಲ. ಎರಡು ಮೂರು ತಿಂಗಳ ಮೊದಲೇ ಆಸ್ತಿ ತೆರಿಗೆ ಸಂಗ್ರಹ ಅಭಿಯಾನ ಕೈಗೊಂಡು, ನ್ಯಾಯಾಲಯದಲ್ಲಿನ ಪ್ರಕರಣಗಳ ಇತ್ಯರ್ಥಕ್ಕೆ ಮುಂದಾಗಿದ್ದರೆ ಆದಾಯ ಹೆಚ್ಚಾಗುತ್ತಿತ್ತು ಎಂಬುದು ಕೆಲ ಪಾಲಿಕೆ ಸದಸ್ಯರ ಅಭಿಪ್ರಾಯವಾಗಿದೆ.
ಬಿಡುಗಡೆಯಾಗದ ಅನುದಾನ: ಪಾಲಿಕೆಯ ಬಜೆಟ್ ಪ್ರಮುಖವಾಗಿ ಸರ್ಕಾರದ ಅನುದಾನವನ್ನೇ ನೆಚ್ಚಿಕೊಂಡಿದೆ. ಆದರೆ, ಸರ್ಕಾರದಿಂದ ನಿರೀಕ್ಷಿತ ಪ್ರಮಾಣದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಹಲವು ಯೋಜನೆಗಳು ಅನುಷ್ಠಾನಗೊಂಡಿಲ್ಲ. 2016-17ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಸರ್ಕಾರ ಎರಡು ವರ್ಷಗಳಿಗೆ 7,300 ಕೋಟಿ ರೂ. ಅನುದಾನ ನೀಡುವುದಾಗಿ ಘೋಷಿಸಿತ್ತು. ಆದರೆ, ಈವರೆಗೆ ಬಿಡುಗಡೆ ಮಾಡಿರುವುದು 3 ಸಾವಿರ ಕೋಟಿ ರೂ. ಮಾತ್ರ.
ಇಂದಿರಾ ಕ್ಯಾಂಟೀನೇ ದೊಡ್ಡ ಸಾಧನೆ: ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಬಜೆಟ್‌ನಲ್ಲಿ ಘೋಷಿಸಿದ್ದ 198 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾರ್ಯ ಪೂರ್ಣಗೊಂಡಿರುವುದೇ ಪ್ರಸಕ್ತ ಸಾಲಿನ ಪಾಲಿಕೆಯ ಬಹುದೊಡ್ಡ ಸಾಧನೆ. ಉಳಿದಂತೆ ಜಾಹೀರಾತು, ಲೆಕ್ಕಪತ್ರ, ಮಾರುಕಟ್ಟೆಗಳ ನೂತನ ನೀತಿ ಜಾರಿಯಾಗಿಲ್ಲ. ರಸ್ತೆ ಅಗಲೀಕರಣ, ಪೌರವಾಹಿನಿ ತಂಡ ರಚನೆ, ಕಲ್ಯಾಣ ಕಾರ್ಯಕ್ರಮಗಳು, ಅನುಮೋದಿತ ಕ್ರಿಯಾಯೋಜನೆ ಕಾಮಗಾರಿಗಳು ಆರಂಭವಾಗಿಲ್ಲ.
* ಸುನೀಲ್ ಕುಮಾರ್