Advertisement

ಆರ್ಟಿಕಲ್‌ 370 ರದ್ದತಿಗೆ ವರ್ಷ ಐತಿಹಾಸಿಕ ದಿನ

09:10 AM Aug 05, 2020 | mahesh |

ಆರ್ಟಿಕಲ್‌ 370 ಜತೆ 35ಎ ಕೂಡ ಕಳಚಿ ಜಮ್ಮು- ಕಾಶ್ಮೀರದ ಚಹರೆ ಬದಲಾಗಿಬಿಟ್ಟಿದೆ. ಪ್ರತ್ಯೇಕತಾವಾದಿಗಳಿಗೆ, ಭ್ರಷ್ಟ ರಾಜಕಾರಣಿಗಳಿಗೆ ಪೂರಕವಾಗಿದ್ದ ಇವುಗಳ ಅಂತ್ಯ ದೇಶಕ್ಕೆ ಬಲ ತುಂಬಿದೆ.

Advertisement

ಆರ್ಟಿಕಲ್‌ 370. ಜಮ್ಮು-ಕಾಶ್ಮೀರವನ್ನು ಭಾರತ ವಿರೋಧಿ ಕಾರ್ಯಗಳಿಗೆ ಬಳಸಿಕೊಳ್ಳುತ್ತಿದ್ದವರಿಗೆ ದಶಕಗಳಿಂದ ವರ ದಾನವಾಗಿದ್ದ ಆರ್ಟಿಕಲ್‌ 370 ರದ್ದಾಗಿ ಇಂದಿಗೆ ಒಂದು ವರ್ಷ. ಅನುಚ್ಛೇದ 370ರ ರದ್ದತಿಯ ಜತೆಯಲ್ಲೇ ಆರ್ಟಿಕಲ್‌ 35ಎ ಕೂಡ ಕಳಚಿಬಿದ್ದು ಜಮ್ಮು-ಕಾಶ್ಮೀರದ ಚಹರೆಯೇ ಬದಲಾಗಿಬಿಟ್ಟಿದೆ.

ದಶಕಗಳಿಂದ ಕಣಿವೆ ರಾಜ್ಯಕ್ಕೆ ಪ್ರತ್ಯೇಕ ಸ್ಥಾನಮಾನದ ಫ‌ಲಗಳನ್ನು ಕೊಟ್ಟು, ಪ್ರತ್ಯೇಕತಾ ವಾದಿಗಳಿಗೂ ಪೂರಕವಾಗಿದ್ದ ಈ ವಿಧಿಗಳ ಅಂತ್ಯವು ದೇಶದ ಇತಿಹಾಸದಲ್ಲಿ ನವ ಭಾಷ್ಯ ಬರೆಯಿತು. 2019ರ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಮೋದಿ ನೇತೃತ್ವದ ಬಿಜೆಪಿಯ ಪ್ರಮುಖ ಭರವಸೆಗಳಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ಪ್ರತ್ಯೇಕ ಸ್ಥಾನಮಾನವನ್ನು ತೆಗೆದುಹಾಕುವ ಅಂಶವಿತ್ತು. ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಈ ಐತಿಹಾಸಿಕ ಕ್ರಮಕ್ಕೆ ಮುಂದಾಯಿತು ಕೇಂದ್ರ ಸರಕಾರ. ಈ ತೀರ್ಮಾನದ ಜತೆಗೇ ಕಣಿವೆ ರಾಜ್ಯದ ಭೂಗೋಳ ಹಾಗೂ ರಾಜಕೀಯದಲ್ಲಿ ಮಹತ್ತರ ಬದಲಾವಣೆಗೂ ಕೇಂದ್ರ ಮುನ್ನುಡಿ ಬರೆಯಿತು.

ಆ ರಾಜ್ಯವನ್ನು ವಿಭಜಿಸಿ ಲಡಾಖ್‌ ಮತ್ತು ಜಮ್ಮು-ಕಾಶ್ಮೀರ ವೆಂಬ ಎರಡು ನವ ಕೇಂದ್ರಾಡಳಿತ ಪ್ರದೇಶಗಳನ್ನು ಸ್ಥಾಪಿಸಿ ಬಿಟ್ಟಿತು. ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿಗಳು ಹಾಗೂ ಕುಟುಂಬ ರಾಜಕಾರಣಕ್ಕೂ ಕೇಂದ್ರದ ಈ ನಡೆ ದೊಡ್ಡ ಪೆಟ್ಟು ನೀಡಿತು. ಕಣಿವೆ ರಾಜ್ಯವು ಕೇಂದ್ರಾಡಳಿತ ಪ್ರದೇಶಗಳಾಗಿ ಬದಲಾದ ಅನಂತರದಿಂದ, ಆ ಭಾಗದಲ್ಲಿ ನಿರಂತರವಾಗಿ ಘಟಿಸುತ್ತಿದ್ದ ಕಲ್ಲು ತೂರಾಟದ ಘಟನೆಗಳು ನಿಂತಿವೆ, ಉಗ್ರ ದಮನ ಕಾರ್ಯಾಚರಣೆಗಳು ಅತ್ಯಂತ ಯಶಸ್ವಿಯಾಗಿ ನಡೆಯಲಾರಂಭಿಸಿವೆ, ಬಹುಮುಖ್ಯವಾಗಿ ಕಾಶ್ಮೀರದ ಮೂಲಭೂತವಾದಿಗಳ ಕ್ರೌರ್ಯ, ರಕ್ತಪಾತ, ಅತ್ಯಾಚಾರಗಳಿಗೆ ಬಲಿಯಾಗಿ, ರಾತೋರಾತ್ರಿ ತಮ್ಮ ಮನೆಗಳನ್ನು ತೊರೆದು ದಶಕಗಳಿಂದ ಸಂತ್ರಸ್ತರಾಗಿದ್ದ ಕಾಶ್ಮೀರಿ ಹಿಂದೂಗಳಿಗೆ ಮತ್ತೆ ಕಣಿವೆ ಭಾಗದಲ್ಲಿ ನೆಲೆ ಒದಗಿಸುವ ಪ್ರಯತ್ನಗಳಿಗೆ ವೇಗ ದೊರೆತಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನ ಯುವ ಜನಾಂಗಕ್ಕೆ ಉದ್ಯೋಗ, ಶಿಕ್ಷಣ ನೀಡುವ ಕೈಂಕರ್ಯವನ್ನು ನ ಭೂತೋ ನ ಭವಿಷ್ಯತಿ ಎನ್ನುವಂತೆ ವೃದ್ಧಿಸಲಾಗಿದ್ದು, ಈ ಕಾರ್ಯಗಳೆಲ್ಲ ಜಮ್ಮು-ಕಾಶ್ಮೀರ ಹಾಗೂ ಲಡಾಖ್‌ನ ಚಹರೆಯನ್ನು ಸಂಪೂರ್ಣವಾಗಿ ಬದಲಿಸುವ ಹಾದಿಯಲ್ಲಿವೆ. ನಿಸ್ಸಂಶಯವಾಗಿಯೂ ಸ್ವತಂತ್ರ ಭಾರತದ ಇತಿಹಾಸದಲ್ಲಿ ಆಗಸ್ಟ್‌ 5 ಐತಿಹಾಸಿಕ ದಿನವಾಗಿ ನೆನಪಿನಲ್ಲಿ ಉಳಿಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next