ಚಿಂತಾಮಣಿ: ತಾಲೂಕಿನ ಮುರುಗಮಲ್ಲ ಹೋಬಳಿ ವೈ.ಕುರುಪಲ್ಲಿಯಿಂದ ಯಗವಕೋಟೆ ಗ್ರಾಮಕ್ಕೆ ತೆರಳಲು ಹಿಂದಿನಿಂದಲೂ ಇಂದಿನವರೆಗೆ ಇದ್ದ ಕಾಲುದಾರಿಯನ್ನು ಕೆಲ ಪ್ರಭಾವಿ ವ್ಯಕ್ತಿಗಳು ದಾರಿಯನ್ನು ಮುಚ್ಚಿಹಾಕಿದ್ದಾರೆ. ಈ ಕುರಿತು ಸರ್ವೆ ಮಾಡಿ ದಾರಿಯನ್ನು ಉಳಿಸಿಕೊಡಿ ಎಂದು ಸಂಬಂಧಪಟ್ಟ ಸರ್ವೆ ಮತ್ತು ಕಂದಾಯ ಅಧಿಕಾರಿಗಳಿಗೆ ಮನವಿ ಮಾಡಿದರೂಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವೈ.ಕುರಪಲ್ಲಿ ಗ್ರಾಮಸ್ಥರು ಆರೋಪಿಸಿದ್ದಾರೆ.
ದಾರಿ ಇಲ್ಲದಿರುವುದರಿಂದ ತೊಂದರೆ: ಯಗವಕೋಟೆ ಗ್ರಾಮ ಗ್ರಾಪಂ ಕೇಂದ್ರವಾಗಿದ್ದು ಇಲ್ಲಿ ಪ್ರತಿ ಬುಧವಾರ ವಾರದ ಸಂತೆ ನಡೆಯುವುದರಿಂದ ಸುತ್ತಮುತ್ತಲ ಗ್ರಾಮಸ್ಥರು ಸೇರಿದಂತೆ ವೈ.ಕುರಪಲ್ಲಿ ಗ್ರಾಮಸ್ಥರು ಸರಕು ಸೇವೆ, ತರಕಾರಿ ಮತ್ತಿತರ ಸಾಮಗ್ರಿಗಳನ್ನು ಕೊಂಡುಕೊಂಡು ಬರಲು ಅನಾದಿ ಕಾಲದಿಂದಲೂ ಯಗವಕೋಟೆ ಗ್ರಾಮಕ್ಕೆ ಕಾಲು ದಾರಿಯಲ್ಲೇ ಜನರು ತೆರಳುತ್ತಾರೆ.
ಪ್ರಯೋಜನವಾಗಿಲ್ಲ: ಕಾಯಿಲೆ ಚಿಕಿತ್ಸೆಗೆ ಆಸ್ಪತ್ರೆಗೆ ತೆರಳುವ ಜನ ಹಾಗೂ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಇದೇ ಕಾಲುದಾರಿ ಮೂಲಕವೇ ಹೋಗುತ್ತಾರೆ. ಆದರೆ ಈ ಕಾಲುದಾರಿಯನ್ನು ಕೆಲವು ಪ್ರಭಾವಿ ವ್ಯಕ್ತಿಗಳು ಆಕ್ರಮಿಸಿಕೊಂಡು ಮುಚ್ಚಿದ್ದರ ಪರಿಣಾಮ ಜನರು ಪರದಾಡುವಂತಾಗಿದೆ.
ಕಂಡುಕಾಣದಂತೆ ಇದ್ದಾರೆ: ಗ್ರಾಮಸ್ಥರೆಲ್ಲಾ ಒಂದಾಗಿ ಮನವಿ ಪತ್ರ ಬರೆದು 100 ಹೆಚ್ಚು ಮಂದಿ ಸಹಿ ಹಾಕಿ ದಾರಿಯನ್ನು ಉಳಿಸಿಕೊಡಿ ಎಂದು ತಾಲೂಕು ತಹಶೀಲ್ದಾರ್, ಸರ್ವೆ ಅಧಿಕಾರಿಗಳು, ಕಂದಾಯ ವೃತ ನಿರೀಕ್ಷಕರಿಗೆ ಹಾಗೂ ಗ್ರಾಮ ಲೆಕ್ಕಿಗರಿಗೆ ಮನವಿ ಮಾಡಿದರೂ ಕೂಡ ಕ್ರಮ ಕೈಗೊಳ್ಳದ ಅಧಿಕಾರಿಗಳು ಬಲಾಡ್ಯರ ಹಣದ ಆಸೆಗೆ ಒಳಗಾಗಿ ಕಂಡುಕಾಣದಂತೆ ಇದ್ದಾರೆ ಎಂದು ದೂರಿದ್ದಾರೆ.
ಗ್ರಾಮದ ನಕಾಶೆ ಪರಿಶೀಲಿಸಿ ದಾರಿಯನ್ನು ಅತಿಕ್ರಮಿಸಿಕೊಂಡಿರುವವರಿಂದ ಬಿಡಿಸಿಕೊಡುವಂತೆ ಸಾರ್ವಜನಿಕರು ಕಂದಾಯ ಇಲಾಖೆ ಸಚಿವರ ಆದಿಯಾಗಿ ರಾಜ್ಯಪಾಲರಿಗೆ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ತಹಶೀಲ್ದಾರ್ ಮುಖಾಂತರ ದೂರು ನೀಡಿದ್ದು, ಈ ಬಗ್ಗೆ ತಕ್ಷಣವೇ ಅಧಿಕಾರಿಗಳು ಗಮನಹರಿಸಿ ಕೂಡಲೇ ಕ್ರಮ ಕೈಗೊಂಡು ಮುಚ್ಚಿರುವ ಕಾಲುದಾರಿ ತೆರವು ಮಾಡಿಕೊಡಬೇಕೆಂದು ದೂರಿನಲ್ಲಿ ಆಗ್ರಹಿಸಿದ್ದಾರೆ.
ದೂರಿನಲ್ಲಿ ವೈ.ಕುರುಪಲ್ಲಿ ಗ್ರಾಮಸ್ಥರಾದ ಮುನಿಕೃಷ್ಣ, ಮಂಜು.ಕೆ.ಎಸ್, ಸಿಂಧು.ಕೆ.ಎಸ್, ಕೃಷ್ಣಾರೆಡ್ಡಿ, ಶ್ರೀನಿವಾಸರೆಡ್ಡಿ, ರಘೂನಾಥರೆಡ್ಡಿ, ವೆಂಕಟೇಶ್‌ರೆಡ್ಡಿ, ಪವಿತ್ರ, ಜೋತ್ಯ, ರತ್ನಮ್ಮ, ಕೆ.ವಿ.ಕೃಷ್ಣಾರೆಡ್ಡಿ ಸೇರಿದಂತೆ ನೂರಾರೂ ಮಂದಿ ಸಾರ್ವಜನಿಕರು ಕಾಲುದಾರಿ ಮಾಡಿಕೊಡುವಂತೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರತರ ಹೋರಾಟವನ್ನು ರೂಪಿಸಲಾಗುವುದೆಂದು ಎಚ್ಚರಿಸಿದ್ದಾರೆ.