ಕಾರ್ಕಳ: ನಕ್ಸಲ್ ನಿಗ್ರಹ ಪಡೆಯ ಎನ್ಕೌಂಟರ್ನಲ್ಲಿ ಹತ್ಯೆಗೀಡಾದ ನಕ್ಸಲ್ ವಿಕ್ರಂ ಗೌಡ ಅವರ ಮೃತದೇಹ ಸಾಗಿಸುತ್ತಿದ್ದ ಅಂಬ್ಯುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಡಿಗೆ ಜಾರಿದ ಘಟನೆ ಹೆಬ್ರಿ ಕೂಡ್ಲು ರಸ್ತೆಯಲ್ಲಿ ಬುಧವಾರ(ನ.೨೦) ಮಧ್ಯಾಹ್ನ ವೇಳೆ ನಡೆದಿದೆ. ಆದರೆ ಇದರಿಂದ ಯಾರಿಗೂ ಗಾಯ ಸಂಭವಿಸಿಲ್ಲ.
ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಬುಧವಾರ ಬೆಳಿಗ್ಗೆ ನಡೆದ ಮರಣೋತ್ತರ ಪರೀಕ್ಷೆಯ ಬಳಿಕ ವಿಕ್ರಂ ಗೌಡ ಮೃತದೇಹವನ್ನು ಸಹೋದರ ಸುರೇಶ್ ಗೌಡ ಹಾಗೂ ಸಹೋದರಿ ಸುಗುಣ ಅವರಿಗೆ ಹಸ್ತಾಂತರಿಸಲಾಯಿತು. ಅಲ್ಲಿಂದ ಅಂಬ್ಯುಲೆನ್ಸ್ ಮೂಲಕ ಮೃತದೇಹವನ್ನು ಅವರ ಹುಟ್ಟೂರು ಹೆಬ್ರಿ ಸಮೀಪದ ಕೂಡ್ಲುಗೆ ಕೊಂಡೊಯ್ಯಲಾಯಿತು. ಅಂಬ್ಯುಲೆನ್ಸ್ ನಲ್ಲಿ ಸುರೇಶ್ ಗೌಡ ಇದ್ದರು.
ಅಂಬ್ಯುಲೆನ್ಸ್ ಸಾಗುತ್ತಿದ್ದಾಗ ದಾರಿ ಮಧ್ಯೆ ದನ ಅಡ್ಡ ಬಂದಿದ್ದು, ಇದರಿಂದಾಗಿ ಚಾಲಕನ ನಿಯಂತ್ರಣ ತಪ್ಪಿದ ಅಂಬ್ಯುಲೆನ್ಸ್ ರಸ್ತೆ ಬದಿ ಚರಂಡಿಯತ್ತ ಸಾಗಿದೆ. ಯಾವುದೇ ಅಪಘಾತ ಆಗಿಲ್ಲ ಮತ್ತು ಗಾಯಗಳಾಗಿಲ್ಲ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ ಕೆ.ಅರುಣ್ ಸ್ಪಷ್ಟಪಡಿಸಿದ್ದಾರೆ.
ಈ ಸಂದರ್ಭ ಸ್ಥಳೀಯರೆಲ್ಲಾ ಸೇರಿಕೊಂಡು ಅಂಬ್ಯುಲೆನ್ಸ್ ಅನ್ನು ಮೇಲಕ್ಕೆ ದೂಡಿ ರಸ್ತೆಗೆ ತಂದರು. ಬಳಿಕ ಅಂಬ್ಯುಲೆನ್ಸ್ ಮನೆಯತ್ತ ಸಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Tragedy: ಶಾಲಾ ಆವರಣದಲ್ಲೇ ಶಿಕ್ಷಕಿಯ ಬರ್ಬರ ಹತ್ಯೆ… ಮದುವೆ ನಿರಾಕರಿಸಿದ್ದೆ ಮುಳುವಾಯಿತು