Advertisement

ಸದಾಕಾಲ ಬಾಗಿಲು ಮುಚ್ಚಿರುವ ಅಂಬೇಡ್ಕರ್‌ ನಿಗಮ

05:33 PM Jun 25, 2022 | Team Udayavani |

ದೊಡ್ಡಬಳ್ಳಾಪುರ: ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಅಂಬೇಡ್ಕರ್‌ ಅಭಿವೃದ್ಧಿ ನಿಗಮಕ್ಕೆ ಕಚೇರಿ ನೀಡಿದರೂ, ಒಂದೇ ಒಂದು ದಿನ ಬಾಗಿಲು ತೆಗೆದಿಲ್ಲ. ಜನರಿಗೆ ಸ್ಪಂದಿಸುವಲ್ಲಿ ನಿಗಮದ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥಗೌಡ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

Advertisement

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ನಿಗಮದ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಇಲ್ಲಿ ಜವಾಬ್ದಾರಿ ವಹಿಸಿಕೊಂಡು ನಾಲ್ಕು ತಿಂಗಳು ಕಳೆದಿದೆ. ನಿಗಮದ ಅಧಿಕಾರಿಯನ್ನು ಈವರೆಗೆ ಯಾವುದೇ ಸಭೆಗಳಲ್ಲೂ ನೋಡಲೇ ಇಲ್ಲ. ಗ್ರಾಮವಾಸ್ತವ್ಯ ಕಾರ್ಯಕ್ರಮಗಳಲ್ಲಿ ನಿಗಮದ ಕುರಿತ ದೂರುಗಳೇ ಹೆಚ್ಚು ಕೇಳಿ ಬರುತ್ತಿವೆ. ಪ.ಜಾತಿ, ಪಂಗಡದ ಜನರ ಕಲ್ಯಾಣಕ್ಕೆ ಸ್ಪಂದಿಸಬೇಕಾದ ನಿಗಮದ ಅಧಿಕಾರಿಗಳೇ ಬೇಜವಾಬ್ದಾರಿಯಾಗಿ ಕಾರ್ಯನಿರ್ವಹಿಸಿದರೆ ಸಹಿಸಲಾಗದು ಎಂದರು.

ಕಚೇರಿಗೆ ನಾಮಫಲಕ ಹಾಕಿಲ್ಲ: ಇಲ್ಲಿ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಬೇರೆ ಕಡೆಗೆ ವರ್ಗಾವಣೆ ಮಾಟಡಿಸಿಕೊಂಡು ಹೋಗಿ. ನಿಗಮದ ಕಚೇರಿಗೆ ನಾಮಫಲಕ ಹಾಕಿಲ್ಲ. ಇಲ್ಲಿನ ಅಧಿಕಾರಿ ಯಾವಾಗ ಸಿಗುತ್ತಾರೆ ಎಂಬುದೇ ಜನರಿಗೆ ತಿಳಿಯುತ್ತಿಲ್ಲ ಎಂದು ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧಿಕಾರಿ ಪಲ್ಲವಿ ಅವರನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧಿಕಾರಿ ಪಲ್ಲವಿ ಅವರು, ಎರಡು ತಾಲೂಕಿನ ಜವಾಬ್ದಾರಿ ಹಾಗೂ ಸ್ಥಳ ಪರಿಶೀಲನೆ ಇರುವುದರಿಂದ ಕಚೇರಿಗೆ ನಿಯಮಿತವಾಗಿ ಬರಲಾಗುತ್ತಿಲ್ಲ. ಕೂಡಲೇ ಕಚೇರಿಗೆ ನಾಮಫಲಕ ಹಾಕಿಸಲಾಗುವುದು. ಜತೆಗೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಕಚೇರಿಯಲ್ಲಿ ಇರುತ್ತೇನೆ ಎಂದರು.

ಯೋಜನೆ ಅನುಷ್ಠಾನಕ್ಕೆ ನಿರ್ಲಕ್ಷ್ಯ: ಪ್ರತಿ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸಲು ಜಲಜೀವನ್‌ ಮಿಷನ್‌ ನಡಿ ನೂರು ಕೋಟಿ ಹಣ ಮೀಸಲಿರಿಸಲಾಗಿದೆ. ಆದರೆ ಯೋಜನೆ ಕುರಿತು ಐದು ತಿಂಗಳಾದರೂ ಕ್ರಿಯಾಯೋಜನೆ ರೂಪಿಸಿಲ್ಲ. ಈಗಾಗಲೇ ಅರ್ಧ ವರ್ಷ ಮುಗಿಯುತ್ತಿದೆ. ಗುತ್ತಿಗೆ ಪಡೆದ ಏಜೆನ್ಸಿಯವರು ಡಿಪಿಆರ್‌ ತಿದ್ದುಪಡಿ ನೆಪ ಹೇಳಿ ಕಾಲ ತಳುತ್ತಿದ್ದು, ಅಧಿಕಾರಿಗಳು ಕೂಡ ಯೋಜನೆ ಅನುಷ್ಠಾನಕ್ಕೆ ನಿರ್ಲಕ್ಷ್ಯ ವಹಿಸಿರುವುದು ತರವಲ್ಲ ಎಂದರು.

ಅಧಿಕಾರಿಗೆ ನೋಟಿಸ್‌ ನೀಡಲು ಸೂಚನೆ: ಸಭೆಗೆ ಗೈರಾಗಿದ್ದ ಸಹಕಾರ ಉಪನಿಬಂಧಕರ ಕಚೇರಿ ಅಧಿಕಾರಿಗೆ ನೋಟಿಸ್‌ ನೀಡುವಂತೆ ಸೂಚಿಸಲಾಯಿತು. ಮೀನುಗಾರಿಕೆ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಇಲಾಖೆ ವತಿಯಿಂದ ಹಾಜರಾಗಿದ್ದ ಸಿಬ್ಬಂದಿಯೊಬ್ಬರು ಪ್ರಗತಿ ವಿವರಿಸಲು ತಡವರಿಸಿದರು. ಕೆರೆಗಳ ಮಾಹಿತಿ, ಮೀನು ಸಾಕಾಣಿಕೆ ಮಾಡಿರುವ ವಿವರವೂ ಸಮರ್ಪಕವಾಗಿರಲಿಲ್ಲ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶ್ರೀನಾಥಗೌಡ, ಮೀನುಗಾರಿಕೆ
ಇಲಾಖೆ ಅತ್ಯಂತ ಅದ್ವಾನ ಹಿಡಿದಿದೆ. ಕೆಲಸ ಮಿತಿ ಕಡಿಮೆ ಇದ್ದರೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು. ಜಿಪಂ ಮುಖ್ಯ ಯೋಜನಾಧಿಕಾರಿ ಹಾಗೂ ತಾಪಂ ಆಡಳಿತಾಧಿಕಾರಿ ನರಸಿಂಹ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next