ಕೆ.ಆರ್.ನಗರ/ಮೈಸೂರು: ಕುಮಾರ ಸ್ವಾಮಿ ಸರ್ಕಾರಕ್ಕೆ ಕಂಟಕವಿದೆ ಎಂಬುದೆಲ್ಲಾ ಮಾಧ್ಯಮಗಳ ಊಹಾಪೋಹ. ಮೈತ್ರಿ ಸರ್ಕಾರದಲ್ಲಿ ಸಣ್ಣಪುಟ್ಟ ಗೊಂದಲ ಹೊರತುಪಡಿಸಿ ಸರ್ಕಾರ ಸುಗಮವಾಗಿ ಸಾಗಲು ಮಿತ್ರ ಪಕ್ಷ ಕಾಂಗ್ರೆಸ್‌ನ ಶಾಸಕರೆಲ್ಲರೂ ಮುಖ್ಯಮಂತ್ರಿಯವರಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ತಿಳಿಸಿದರು.
ತಾಲೂಕು ಬಂಡಹಳ್ಳಿಯಲ್ಲಿ ಗುರುವಾರ ನಡೆದ ಲಕ್ಷ್ಮೀದೇವಿ ದೇಗುಲ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಏಕಪಕ್ಷ ಅಧಿಕಾರದಲ್ಲಿದ್ದಾಗಲೇ ಹತ್ತು-ಹಲವು ಸಮಸ್ಯೆಗಳು ಸಾಮಾನ್ಯ. ಮೈತ್ರಿ ಸರ್ಕಾರವೆಂದಾಗ ಅಭಿಪ್ರಾಯ ಬೇಧ ಹೆಚ್ಚು. ಇದರಿಂದ ಸರ್ಕಾರಕ್ಕೇನೂ ತೊಂದರೆಯಿಲ್ಲ. ಎಷ್ಟೇ ಕಷ್ಟವಾದರೂ ರೈತರ ಸಾಲಮನ್ನಾ ಮಾಡುತ್ತಾರೆ ಎಂದರು.
ಸಚಿವ ಸಾ.ರಾ.ಮಹೇಶ್ ಮಾತನಾಡಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರಕ್ಕೆ ಅಂಟಿಕೊಂಡು ಕುಳಿತವರಲ್ಲ. ಬಿಜೆಪಿಯವರು ತಮ್ಮ ಜವಾಬ್ದಾರಿ ಮರೆತು ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜ ಶ್ರೀ ಆಶೀರ್ವಚನ ನೀಡಿದರು.
ಸಿಎಂ ಟೆಂಪಲ್‌ರನ್: ನನ್ನ ಪತಿ ಐದು ವರ್ಷ ಅಧಿಕಾರಾವಧಿ ಪೂರೈಸಲಿ. ರೈತರು, ಬಡವರ ಸಂಕಷ್ಟ ನಿವಾರಣೆಯಾಗಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿದ್ದೇನೆ. ನನಗೆ ದೇವರ ಮೇಲೆ ಅಪಾರ ನಂಬಿಕೆ, ಶ್ರದ್ಧೆಯಿದ್ದು, ನನ್ನ ಪತಿ ದೇವರ ಕೃಪೆಯಿಂದಷ್ಟೆ ಎರಡು ಬಾರಿ ಮುಖ್ಯಮಂತ್ರಿಯಾಗಲು ಸಾಧ್ಯವಾಗಿದೆ.
ಹೀಗಾಗಿ ನಾನು ಕುಮಾರಸ್ವಾಮಿಯ ವರನ್ನು ಬಲವಂತವಾಗಿ ಪದೇ ಪದೆ ದೇವಾಲಯಗಳಿಗೆ ಕರೆದುಕೊಂಡು ಹೋಗುತ್ತೇನೆ. ಇದನ್ನೇ ಸಿಎಂ ಟೆಂಪಲ್ ರನ್, ಟೆಂಪಲ್ ರನ್ ಎಂದು ಮಾಧ್ಯಮ ದವರು ಅಪಹಾಸ್ಯ ಮಾಡುತ್ತಾರೆ ಎಂದು ಅನಿತಾ ಕುಮಾರಸ್ವಾಮಿ ತಿಳಿಸಿದರು.