ಮಂಗಳೂರು: ಮಂಗಳೂರಿನ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನದಿಂದ ಮಂಗಳೂರು ಪಾಲಿಕೆಯು ಅತ್ಯುತ್ತಮ ಕೆಲಸಗಳನ್ನು ನಿರಂತರವಾಗಿ ಕೈಗೊಳ್ಳುತ್ತ ಬಂದಿದೆ. ನಗರದ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಮಂಗಳೂರು ಪಾಲಿಕೆಯ 2016-17ನೇ ನಗರ ಬಡತನ ನಿರ್ಮೂಲನಾ ಕೋಶದ ವಿವಿಧ ಯೋಜನೆಗಳಡಿ ಹಲವು ಫಲಾನುಭವಿಗಳಿಗೆ ಮಂಗಳೂರು ಪುರಭವನದಲ್ಲಿ ಶುಕ್ರವಾರ ವಿವಿಧ ಸವಲತ್ತು ವಿತರಿಸಿ ಅವರು ಮಾತನಾಡಿದರು.
ಅಂಗವಿಕಲರಿಗೆ ಅನುಕಂಪ, ಸಹಾನುಭೂತಿಯ ಬದಲು ಅವರಿಗೆ ಆದ್ಯತೆಯ ನೆಲೆಯಲ್ಲಿ ಸಮಾಜದಲ್ಲಿ ಗೌರವಯುತವಾಗಿ ಜೀವಿಸಲು ಅಗತ್ಯವಾದ ಅನುಕೂಲಗಳನ್ನು ಒದಗಿಸುವುದು ಅಗತ್ಯಎಂದರು.
ಮೇಯರ್ ಕವಿತಾ ಸನಿಲ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಜೆ.ಆರ್. ಲೋಬೋ, ಮೊದಿನ್ ಬಾವಾ ಮುಖ್ಯ ಅತಿಥಿಗಳಾಗಿದ್ದರು.
ಮನಪಾ ಸ್ಥಾಯೀ ಸಮಿತಿ ಅಧ್ಯಕ್ಷರಾದ ಅಬ್ದುಲ್ ರವೂಫ್, ಸಬಿತಾ ಮಿಸ್ಕಿತ್, ಮುಖ್ಯ ಸಚೇತಕ ಎಂ. ಶಶಿಧರ ಹೆಗ್ಡೆ, ಸದಸ್ಯರಾದ ಅಪ್ಪಿ, ಮಹಾಬಲ ಮಾರ್ಲ, ಪುರುಷೋತ್ತಮ ಚಿತ್ರಾಪುರ, ಬಶೀರ್ ಅಹ್ಮದ್, ವಿನಯ್‌ರಾಜ್, ಪ್ರವೀಣ್ ಚಂದ್ರ ಆಳ್ವ, ರತಿಕಲಾ, ಪ್ರಕಾಶ್, ಕೇಶವ ಮರೋಳಿ, ಕವಿತಾ, ಅಖೀಲಾ ಆಳ್ವ, ಝುಬೇದಾ, ಶೈಲಜಾ, ಮನಪಾ ಆಯುಕ್ತ ಮುಹಮ್ಮದ್ ನಝೀರ್ ಮುಂತಾದವರು ಉಪಸ್ಥಿತರಿದ್ದರು.
ಸವಲತ್ತು ವಿತರಣೆ: ಕಾರ್ಯಕ್ರಮದಲ್ಲಿ 2016-17ನೇ ಸಾಲಿನ ಮಹಾನಗರ ಪಾಲಿಕೆಯ ಶೇ. 3ರ ಅಂಗವಿಕಲ ಕಲ್ಯಾಣ ಕಾರ್ಯಕ್ರಮ, ಶೇ. 7.25 ಇತರ ಬಡಜನರ ಕಾರ್ಯಕ್ರಮ, ಶೇ. 24.10 ಎಸ್‌ಸಿ- ಎಸ್‌ಟಿ ಮೀಸಲು ನಿಧಿಯಡಿ 952 ಫಲಾನುಭವಿಗಳಿಗೆ 88.71 ಲಕ್ಷ ರೂ.ಗಳ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು. ಶೇ. 7.25 ಯೋಜನೆಯಡಿ 60 ಜನರಿಗೆ ಆಟೋರಿಕ್ಷಾ ಖರೀದಿಗಾಗಿ 30 ಲಕ್ಷ ರೂ. ಧನಸಹಾಯ ಮಂಜೂರಾಗಿದ್ದು, 37 ಫಲಾನುಭವಿಗಳಿಗೆ ಬ್ಯಾಂಕ್‌ಗಳಿಂದ ಸಾಲ ಮಂಜೂರು ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 1706 ಫಲಾನುಭವಿಗಳು 1.97 ಕೋಟಿ ರೂ. ಮೊತ್ತದ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದರು.
ಕಾಂಗ್ರೆಸ್ ಸದಸ್ಯರು ಗೈರು: ಶುಕ್ರವಾರದ ಕಾರ್ಯಕ್ರಮದ ಬಗ್ಗೆ ಮೇಯರ್ ತನ್ನ ಗಮನಕ್ಕೆ ತಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಪಾಲಿಕೆಯ ನೂತನ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ನಾಗವೇಣಿ ಅವರು ಮನಪಾ ಸಾಮಾನ್ಯ ಸಭೆಯಲ್ಲಿ ಗುರುವಾರ ಧರಣಿ ನಡೆಸಿ ಸಭಾತ್ಯಾಗ ಮಾಡಿದ್ದರು. ಅವರ ಜತೆಗೆ ಕಾಂಗ್ರೆಸ್‌ನ ಕೆಲವು ಕಾರ್ಪೊರೇಟರ್‌ಗಳು, ವಿಪಕ್ಷ ಸದಸ್ಯರು ಸಭಾತ್ಯಾಗ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ನಾಗವೇಣಿ ಸೇರಿದಂತೆ ಸಭಾತ್ಯಾಗ ನಡೆಸಿದ್ದ ಬಹುತೇಕ ಕಾಂಗ್ರೆಸ್ ಸದಸ್ಯರು ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಗೈರುಹಾಜರಾಗಿದ್ದರು. ಜನಪ್ರತಿನಿಧಿಗಳು ವೈಯಕ್ತಿಕ ವಿಚಾರಕ್ಕೆ ಪ್ರಾಮುಖ್ಯತೆ ನೀಡದೆ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಸಚಿವ ರಮಾನಾಥ ರೈ ತಿಳಿಸಿದರು.