Advertisement

ಕೃಷಿ ವಲಯ ರೈತರ ಹಿಡಿತದಲ್ಲಿಲ್ಲ

12:02 PM Jul 29, 2018 | Team Udayavani |

ಬೆಂಗಳೂರು: ರಸಗೊಬ್ಬರ, ಬೀಜೋತ್ಪನ್ನ ಸೇರಿದಂತೆ ಕೃಷಿಗೆ ಸಂಬಂಧಿಸಿದ ಯಾವ ವಲಯವೂ ರೈತರ ಹಿಡಿತದಲ್ಲಿಲ್ಲ. ಎಲ್ಲವೂ ಖಾಸಗಿ ಸಂಸ್ಥೆಗಳ ಪಾಲಾಗಿರುವುದರಿಂದ ರೈತರ ಆತ್ಮಹತ್ಯೆ ಹೆಚ್ಚಾಗುತ್ತಿದೆ ಎಂದು ಪತ್ರಕರ್ತ ಪಿ.ಸಾಯಿನಾಥ್‌ ಕಳವಳ ವ್ಯಕ್ತಪಡಿಸಿದರು.

Advertisement

ನಗರದ ನಯನ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1995-96ರಿಂದ ಎನ್‌ಡಿಎ ಹಾಗೂ ಯುಪಿಎ ಸರ್ಕಾರ ಕೃಷಿಯಲ್ಲಿ ಕಾರ್ಪೊರೇಟ್‌ ಸಂಸ್ಥೆಗಳ ಹಸ್ತಕ್ಷೇಪಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಡಲು ಪ್ರಯತ್ನಿಸುತ್ತಲೇ ಬಂದಿದೆ ಎಂದು ಆರೋಪಿಸಿದರು.

ಕೃಷಿಯ ಯಾವ ವಲಯವೂ ಇಂದು ರೈತರ ಹಿಡಿತದಲ್ಲಿಲ್ಲ. ಬೀಜೋತ್ಪನ್ನ, ರಸಗೊಬ್ಬರ ಪೂರೈಕೆ ಸೇರಿದಂತೆ ಎಲ್ಲವೂ ಖಾಸಗಿಯವರ ಪಾಲಾಗಿದೆ. ರೈತ ಕೃಷಿ ಮಾಡುವುದಕ್ಕಷ್ಟೇ  ಸೀಮಿತನಾಗಿದ್ದಾನೆ. ಇದು ಬದಲಾಗಬೇಕು. ಕೃಷಿ ವಲಯ ಸಂಪೂರ್ಣ ರೈತರ ಹಿಡತಕ್ಕೆ ಬರಬೇಕು ಎಂದು ಹೇಳಿದರ‌ು.

ಕೃಷಿ ಬೇಕಾದ ವಿದ್ಯುತ್‌, ನೀರು ಪೂರೈಕೆಯೂ ಖಾಸಗೀಕರಣಗೊಂಡಿದೆ. ರೈತರ ಬಳಿ ಯಾವುದೂ ಉಳಿದಿಲ್ಲ. ರೈತರು ಖಾಸಗಿ ಸಂಸ್ಥೆಗಳ ಮೊರೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಬ್ಯಾಂಕ್‌ಗಳು ರೈತರಿಗೆ ಸಾಲ ನೀಡುವ ಬದಲಿಗೆ ನೀರವ್‌ ಮೋದಿ, ವಿಜಯ್‌ ಮಲ್ಯ ಮೊದಲಾದ ಉದ್ಯಮಿಗಳಿಗೆ ಕೋಟ್ಯಾಂತರ ರೂ.ಗಳ ಸಾಲವನ್ನು ಸುಲಭವಾಗಿ ನೀಡುತ್ತಿವೆ. ರೈತರು ದೇಶಾದ್ಯಂತ ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು.

ಕೇಂದ್ರ ಸರ್ಕಾರ ಕೃಷಿ ಉತ್ಪಾದನಾ ವೆಚ್ಚದ ವ್ಯಾಖ್ಯಾನವನ್ನೇ ಬದಲಿಸಿ, ರೈತರಿಗೆ ತಪ್ಪು ಮಾಹಿತಿ ನೀಡುತ್ತಿದೆ. ಕನಿಷ್ಠ ಬೆಂಬಲ ಬೆಲೆ ಹಾಗೂ ಸಾಲ ಮನ್ನಾವಷ್ಟೇ ರೈತರ ಬೇಡಿಕೆಯಲ್ಲ. ರೈತರು ಹತ್ತಾರು ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಕೃಷಿ ನಷ್ಟದಿಂದ ದೇಶಾದ್ಯಂತ ಲಕ್ಷಾಂತರ ರೈತರು ಕೃಷಿ ಕಾರ್ಮಿಕರಾಗಿ ಬದಲಾಗಿದ್ದಾರೆ. ಕೃಷಿಗೆ ಬೇಕಾದಷ್ಟು ನೀರು, ವಿದ್ಯುತ್‌ ಪೂರೈಕೆಯಾಗುತ್ತಿಲ್ಲ. ಕೃಷಿ ಭೂಮಿ ಕೈಗಾರಿಕಾ ವಲಯವಾಗಿ ಪರಿವರ್ತನೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ದೆಹಲಿ ಚಲೋ: ರೈತರ ಎಲ್ಲ ಸಮಸ್ಯೆಗೂ ಸ್ವಾಮಿನಾಥನ್‌ ವರದಿಯ ಅನುಷ್ಠಾನವೇ ದಾರಿ. ಇದಕ್ಕಾಗಿ ನವೆಂಬರ್‌ 30ರಂದು ದೆಹಲಿ ಚಲೋ ಹಮ್ಮಿಕೊಳ್ಳಲಾಗಿದೆ. ದೇಶಾದ್ಯಂತ ಲಕ್ಷಾಂತರ ರೈತರು ಇದರಲ್ಲಿ ಭಾಗಹಿಸಲಿದ್ದಾರೆ. ಪ್ರೊ.ಎಂ.ಎಸ್‌.ಸ್ವಾಮಿನಾಥನ್‌ ಅವರ ಅಧ್ಯಕ್ಷತೆಯಲ್ಲಿ ರಚನೆಯಾದ ಸಮಿತಿ ನೀಡಿರುವ ವರದಿಯ ಅನುಷ್ಠಾನ ಅತ್ಯಗತ್ಯವಾಗಿದೆ ಎಂದರು.

ಮಹಾರಾಷ್ಟ್ರದಲ್ಲಿ ಈಗಾಗಲೇ ಲಕ್ಷಾಂತರ ರೈತರು ವಿವಿಧ ಬೇಡಿಕೆ ಈಡೇರಿಸಿಕೊಳ್ಳಲು ಪ್ರತಿಭಟನಾ ರ್ಯಾಲಿ ನಡೆಸಿ, ದೇಶದ ಗಮನ ಸೆಳೆದಿದ್ದಾರೆ. ಪಂಜಾಬ್‌, ಹರಿಯಾಣ, ಮಧ್ಯಪ್ರದೇಶ ಹೀಗೆ ಎಲ್ಲ ಭಾಗದಲ್ಲೂ ರೈತರು ಪ್ರತಿಭಟನೆ ನಡೆಸಿದ್ದಾರೆ. ದೇಶದ ಎಲ್ಲ  ಭಾಗದಲ್ಲೂ ಸ್ವಾಮಿನಾಥನ್‌ ವರದಿಗಾಗಿ ರೈತರು ಧ್ವನಿ ಎತ್ತುತ್ತಿದ್ದಾರೆ. ಕೇಂದ್ರ ಸರ್ಕಾರದ  ಮೇಲೆ ಒತ್ತಡ ಹೇರಲು ನ.30ರಂದು ದೆಹಲಿ ಚಲೋ ನಡೆಯಲಿದೆ ಎಂದು ವಿವರಿಸಿದರು.

ದೆಹಲಿಯ ಹತ್ತು ಭಾಗದಿಂದ ರ್ಯಾಲಿ ಹೊರಡಲಿದೆ. ಇದರ ಸಿದ್ಧತೆಗೆ ವಿವಿಧ ರೀತಿಯಲ್ಲಿ ಪ್ರಚಾರಾಂದೋಲನ ಆರಂಭಿಸಲಿದ್ದೇವೆ. ವಿದ್ಯಾರ್ಥಿಗಳು, ಉಪನ್ಯಾಸಕ, ಪ್ರಾಧ್ಯಾಪಕರು, ವಿಜ್ಞಾನಿಗಳು, ಎಂಜಿನಿಯರ್‌ಗಳು, ನೌಕರರು, ಅಧಿಕಾರಿಗಳು ಹೀಗೆ ಎಲ್ಲ ವರ್ಗದ ಜನರ ಸಹಕಾರವೂ ರೈತರ ಚಳವಳಿಗೆ ಅಗತ್ಯವಿದೆ. ರೈತರ ಉಳಿವಾಗಿ ಸಂಘಟಿತ ಹೋರಾಟ ನಡೆಸಬೇಕಿದೆ ಎಂದು ಹೇಳಿದರು.

ಸ್ವಾಮಿನಾಥನ್‌ ವರದಿ ಸಲ್ಲಿಕೆಯಾಗಿ ದಶಕ ಕಳೆದರೂ, ಸಂಸತ್‌ನಲ್ಲಿ ಕನಿಷ್ಠ ಮೂರು ಗಂಟೆ ಚರ್ಚೆಯಾಗಿಲ್ಲ. ಪ್ರಧಾನಿ ಮೋದಿ ಸರ್ಕಾರ ತನ್ನ ಬಜೆಟ್‌ನಲ್ಲಿ ಸ್ವಾಮಿನಾಥನ್‌ ವರದಿ ಅನುಷ್ಠಾನದ ಬಗ್ಗೆ ಉಲ್ಲೇಖೀಸಿದೆ. ಆದರೆ, ಸಂಸತ್‌ನಲ್ಲಿ ಈ ಕುರಿತು ಯಾವ ಚರ್ಚೆ ನಡೆಸಿಲ್ಲ ಎಂದರು. ರಂಗಕಮ್ಮಿ ಪ್ರಸನ್ನ, ಪತ್ರಕರ್ತ ಜಿ.ಎನ್‌. ಮೋಹನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next