ಅದು ಮಂಡ್ಯದಲ್ಲಿರುವ ಒಂದು ಹಳ್ಳಿ. ಅಲ್ಲಿ ಊರಿಗೆ ಊರನ್ನೇ ಹೆದರಿಸಿ, ಹದ್ದುಬಸ್ತಿನಲ್ಲಿಟ್ಟುಕೊಂಡ ಒಬ್ಬ ಗೌಡ. ಈ ಗೌಡನಿಗೆ ಗೀತಾ ಎನ್ನುವ ಸುರಸುಂದರಿ ಮಗಳು. ಗೀತಾಳನ್ನು ಮದುವೆಯಾಗಲು ಒಂದು ಕಡೆ ಗೌಡನ ಭಾಮೈದುನನ ಪ್ಲಾನ್. ಮತ್ತೂಂದು ಕಡೆ ತನ್ನ ಮಗಳನ್ನು ತನ್ನ ಜಾತಿ, ಆಸ್ತಿ-ಅಂತಸ್ತಿಗೆ ಹೊಂದುವಂತ ಹುಡುಗನಿಗೆ ಕೊಟ್ಟು ಮದುವೆ ಮಾಡಬೇಕು ಎಂದು ಗೌಡ.
ಇವರಿಬ್ಬರ ನಡುವೆ ಬೇರೆ ಯಾರಾದರೂ ಈ ಹುಡುಗಿಯ ಮೇಲೆ ಕಣ್ಣು ಹಾಕಿದ್ರೆ, ಅಂಥವರು ಎರಡೂ ಕಡೆಯಿಂದಲೂ ಹಣ್ಣುಗಾಯಿ-ನೀರುಗಾಯಿ. ಮುಂದೆ ಅವರ ಕಥೆ ದೇವರೇ ಗತಿ! ಹೀಗಿರುವಾಗಲೇ, ಕಟಿಂಗ್ ಶಾಪ್ ಇಟ್ಟುಕೊಂಡಿರುವ ಐಬು (ಅಂಗವಿಕಲ) ಹುಡುಗ ಸಚ್ಚಿ, ಗೀತಾಳ ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಳ್ಳುತ್ತಾಳೆ. ತನ್ನ ಹುಡುಗನಿಗೆ ಮೊದಲ ಗಿಫ್ಟ್ ಆಗಿ ರೇಜರ್ ಅನ್ನು ಕೊಡುತ್ತಾಳೆ.
ನೋಡುನೋಡುತ್ತಿದ್ದಂತೆ ಇಬ್ಬರೂ ಊರು ಬಿಟ್ಟು ಪರಾರಿಯಾಗುತ್ತಾರೆ. ಸರಳವಾಗಿ ನಡೆದುಕೊಂಡು ಹೋಗುತ್ತಿದ್ದ ಚಿತ್ರಕಥೆ ಮಧ್ಯಂತರ ತೆಗೆದುಕೊಂಡು, ತೆರೆಮೇಲೆ “ಒಂದು ಸಣ್ಣ ಬ್ರೇಕ್‌ನ ನಂತರ’ ಎಂಬ ಚಿತ್ರದ ಟೈಟಲ್ ದೊಡ್ಡದಾಗಿ ಮೂಡುತ್ತದೆ. ಪ್ರೇಕ್ಷಕರಿಗೆ ಕೊಂಚ ಬ್ರೇಕ್ ಸಿಗುತ್ತದೆ. ಮುಂದೇನಾಗುತ್ತದೆ ಅನ್ನೋದನ್ನ ತಿಳಿಯಬೇಕಾದರೆ, ಚಿತ್ರವನ್ನು “ಒಂದು ಸಣ್ಣ ಬ್ರೇಕ್‌ನ ನಂತರ’ವೇ ನೋಡಬೇಕು.
ಇನ್ನು ಚಿತ್ರದ ಕಥೆಯಲ್ಲಿ ಹೊಸತನವನ್ನು ನಿರೀಕ್ಷಿಸುವ ಯಾವ ಅಂಶಗಳೂ ಇಲ್ಲ. ಕೊನೆಯ ಇಪ್ಪತ್ತು ನಿಮಿಷದ ಚಿತ್ರಕ್ಕಾಗಿ ಒಂದೂವರೆ ಗಂಟೆ ಚಿತ್ರಕಥೆಯನ್ನು ಎಳೆದಾಡಿದಂತಿದೆ. ಅದರಲ್ಲೂ ಮೊದಲರ್ಧ ನೋಡುಗರ ತಾಳ್ಮೆಯನ್ನು ಪರೀಕ್ಷಿಸುವಂತಿದೆ. ಕಥೆ ಮತ್ತು ಚಿತ್ರಕಥೆ ನಿರೂಪಣೆ, ದೃಶ್ಯಗಳ ಜೋಡಣೆಯಲ್ಲಿ ಹೊಂದಾಣಿಕೆಯಿಲ್ಲದೆ ಚಿತ್ರ ಹಲವು ಕಡೆ ಹಳಿ ತಪ್ಪಿದಂತೆ ಕಾಣುತ್ತದೆ.
ಚಿತ್ರದಲ್ಲಿ ತುಂಡು ಹೈಕಳ ಪೋಲಿ ಮಾತುಗಳು, ಮುದುಕರ ಪೋಲಿ ಆಟಗಳನ್ನೇ ಹಾಸ್ಯ ಎಂದು ನಿರ್ದೇಶಕರು ಭಾವಿಸಿದಂತಿದೆ. ಒಂದೆರಡು ಹಾಡುಗಳು ಗುನುಗುವಂತಿದ್ದರೂ, ಅತಿಯಾದ ಮಾತುಗಳು ಹಾಡುಗಳನ್ನೇ ಮರೆಸುವಂತಿವೆ. ಇನ್ನು ಚಿತ್ರದ ನಾಯಕ ಹಿತನ್ ಹಾಸನ್ ಅವರದ್ದು ಕ್ಷೌರಿಕನಾಗಿ, ವಿಕಲಚೇತನ ಪ್ರೇಮಿಯಾಗಿ ಪರವಾಗಿಲ್ಲ ಎನ್ನುವ ಅಭಿನಯ. ಉಳಿದಂತೆ ನಾಯಕಿ ಚೈತ್ರಾ ಮತ್ತಿತರರು ತಮ್ಮ ಪಾತ್ರವನ್ನು ನಿರ್ವಹಿಸಲು ಸಾಕಷ್ಟು ಕಷ್ಟಪಟ್ಟಿರುವುದು ತೆರೆಮೇಲೆ ಕಾಣುತ್ತದೆ.
ಕೆಲವು ಹಾಸ್ಯ ಪಾತ್ರಗಳು ನೋಡುಗರಿಗೆ ಖುಷಿಕೊಡುವುದಕ್ಕಿಂತ, ಕಿರಿಕಿರಿ ತರುತ್ತವೆ. ಅನೇಕ ಕಲಾವಿದರಲ್ಲಿ ಪಕ್ವತೆ, ಪಾತ್ರ ನಿರ್ವಹಣೆ ಕೌಶಲ್ಯ ಇಲ್ಲದಿರುವುದು ದೃಶ್ಯದುದ್ದಕ್ಕೂ ಎದ್ದು ಕಾಣುತ್ತದೆ. ತಾಂತ್ರಿಕವಾಗಿ ಚಿತ್ರದಲ್ಲಿ ನಾಗರಾಜ್ ಉಪ್ಪುಂದ ಛಾಯಾಗ್ರಹಣ ಗಮನ ಸೆಳೆಯುತ್ತದೆ. ಆದರೆ ಸಂಕಲನದಲ್ಲಿ ಹಿಡಿತವಿಲ್ಲದ ಕಾರಣ ಚಿತ್ರದ ದೃಶ್ಯಗಳು ಪರಿಣಾಮಕಾರಿ ಎನಿಸುವುದಿಲ್ಲ. ಹಿನ್ನೆಲೆ ಸಂಗೀತ ಮತ್ತಿತರ ಕೆಲಸಗಳ ಬಗ್ಗೆ ಹೆಚ್ಚು ಮಾತನಾಡದಿರುವುದೇ ಒಳಿತು.
ಚಿತ್ರ: ಒಂದು ಸಣ್ಣ ಬ್ರೇಕ್‌ನ ನಂತರ
ನಿರ್ಮಾಣ: ಸರ್ವಶ್ರೀ (ಕಲರ್‌ಫುಲ್ ಕ್ರಿಸ್ಟಲ್ ಕಂಬೈನ್ಸ್)
ಚಿತ್ರಕಥೆ – ನಿರ್ದೇಶನ: ಅಭಿಲಾಷ್ ಗೌಡ,
ತಾರಾಗಣ: ಹಿತನ್ ಹಾಸನ್, ಅಮ್ಮಣ್ಣಿ, ಸೂರ್ಯ, ಕಿರಣ್, ಚೈತ್ರಾ ಮತ್ತಿತರರು.
* ಜಿ.ಎಸ್.ಕಾರ್ತಿಕ ಸುಧನ್