Advertisement

ಸ್ವಾತಂತ್ರ್ಯ ದಿನದಲ್ಲಿ ಸೈನಿಕರ ಸಾಹಸ, ಸಾಂಸ್ಕೃತಿಕ ವೈಭವ

12:58 PM Aug 16, 2018 | |

ಬೆಂಗಳೂರು: ನಗರದ ಫೀಲ್ಡ್‌ ಮಾರ್ಷಲ್‌ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ನಡೆದ ಸ್ವಾತಂತ್ರೊತ್ಸವ ಅಂಗವಾಗಿ ನಡೆದ ಭಾರತೀಯ ಸೈನಿಕರ ಬೈಕ್‌ ಸಾಹಸ, ಜಿಮ್ನಾಸ್ಟಿಕ್‌ ಪ್ರದರ್ಶನ , ಶಾಲಾ ಮಕ್ಕಳ ನೃತ್ಯದಲ್ಲಿ ದೇಶಭಕ್ತಿಯ ಕಿಚ್ಚು ನೆರೆದಿದ್ದವರನ್ನು ಪುಳಕಿತಗೊಳಿಸಿತು.

Advertisement

 ಗೃಹಲಕ್ಷ್ಮೀ ಬಡಾವಣೆ ಮತ್ತು ನೆಲಗದರನಹಳ್ಳಿ ಸರ್ಕಾರಿ ಶಾಲೆಯ 650 ವಿದ್ಯಾರ್ಥಿಗಳು “ಕ್ರಾಂತಿವೀರ ಮುಂಡರಗಿ ಭೀಮರಾಯ’ ಅವರ ಸಾಧನೆಯನ್ನು ನೃತ್ಯರೂಪಕ ಸಾದರಪಡಿಸಿದರು. ಮಹತ್ಮಗಾಂಧಿ, ಡಾ.ಬಿ.ಆರ್‌.ಅಂಬೇಡ್ಕರ್‌, ಸುಭಾಷ್‌ಚಂದ್ರ ಬೋಸ್‌ ಸಹಿತವಾಗಿ ಮುಂಡರಗಿ ಭೀಮರಾಯ ಮೊದಲಾದ ಸ್ವಾತಂತ್ರ್ಯ ಸೇನಾನಿಗಳನ್ನು ಸ್ಮರಿಸುವ ಹಾಡಿಗೆ ಹೆಜ್ಜೆ ಹಾಕಿ ಮನಮುದಗೊಳಿಸಿದರು.

ಭೈರವೇಶ್ವರ ನಗರದ ಬಿಬಿಎಂಪಿ ಪ್ರೌಢಶಾಲೆ ಮತ್ತು ಪಿಯು ಕಾಲೇಜಿನ 650 ವಿದ್ಯಾರ್ಥಿಗಳು ದೇಶಭಕ್ತಿ ಮೈಲಾರ ಮಹಾದೇವ ಅವರ ಚರಿತ್ರೆಯನ್ನು ನೃತ್ಯದ ಮೂಲಕ ಪ್ರದರ್ಶಿಸಿದರು. ಬನ್ನೇರುಘಟ್ಟ ರಸ್ತೆಯ ಬಿಸ್ಮಿಲ್ಲಾ ನಗರದ ಲಿಲ್ಲಿರೋಸ್‌ ಶಾಲಾ ವಿದ್ಯಾರ್ಥಿಗಳು “ಜೈ ಹಿಂದ್‌-ಜೈ ಭಾರತ್‌’ ಕಲ್ಪನೆಯಡಿ ಕಾರ್ಗಿಲ್‌ ಯುದ್ಧ ಸನ್ನಿವೇಶವನ್ನು ನೃತ್ಯದ ಮೂಲಕ ಪ್ರದರ್ಶಿಸಿದರು. ಹೈದರಬಾದ್‌ನ ಅಂತಾರಾಷ್ಟ್ರೀಯ ಯೋಗಪಟು ಮಾನ್ಸಿ ಗುಲಾಟ  ಮತ್ತು ತಂಡದಿಂದ ಫೇಸ್‌ ಯೋಗ ಪ್ರದರ್ಶನ ನಡೆಯಿತು.

ಸೈನಿಕರ ಸಾಹಸ: ಮದ್ರಾಸ್‌ ಇಂಜಿನಿಯರಿಂಗ್‌ ಗ್ರೂಪ್‌ ಮತ್ತು ಸೆಂಟರ್‌ನ 15 ಸೈನಿಕರ ಜಿಮ್ನಾಸ್ಟಿಕ್‌ನ  ಪ್ರದರ್ಶನ ಆಕರ್ಷಕವಾಗಿತ್ತು. ಮಿಲಿಟರಿ ಎಎಸ್‌ಸಿ ಸೆಂಟರ್‌ ಸೌತ್‌ನ 39 ಸೈನಿಕರು ಬೈಕ್‌ ಮೂಲಕ ಸಾಹಸ ಮೆರೆದರು. ವೇಗವಾಗಿ ಓಡುತ್ತಿರುವ ಬೈಕ್‌ನಲ್ಲಿ  ಸೀಜರ್‌ ಕ್ರಾಸಿಂಗ್‌, ಡೈಮಂಡ್‌ ಕ್ರಾಸಿಂಗ್‌, ಒನ್‌ ಲೆಗ್‌ ರೈಡಿಂಗ್‌, ಸೈಡ್‌ ಬ್ಯಾಲೆನ್ಸಿಂಗ್‌, ಪ್ಲವರ್‌ ಶೋ, ಏಣಿ ಹತ್ತುವುದು, ಪೇಪರ್‌ ಓದುತ್ತಾ ಬೈಕ್‌ ಒಡಿಸುವುದು ಹೀಗೆ ಹತ್ತಾರು ವೈಯಕ್ತಿಕ ಸಾಹಸದ ಜತೆಗೆ ಟ್ಯೂಬ್‌ಲೈಟ್‌ ಜಂಪ್‌, ಬೆಂಕಿಯನ್ನು ಬೈಕ್‌ ಮೂಲಕ ಭೇದಿಸಿದ್ದು ಪ್ರೇಕ್ಷರನ್ನು ರೋಮಾಂಚನಗಳಿಸಿತು.

ಶಿಸ್ತಿನ ಸಂಚಲನ: ಭಾರತೀಯ ಗಡಿ ಭದ್ರತಾ ಪಡೆ, ಕೇಂದ್ರ ಅರೆಸೇನಾ ಪಡೆ (ಮಹಿಳೆಯರು) ಗೋವಾ ರಾಜ್ಯ ಪೊಲೀಸ್‌, ಕೆಎಸ್‌ಆರ್‌ಪಿ,  ಅಗ್ನಿಶಾಮಕ ದಳ, ಅಬಕಾರಿ ದಳ, ಅರಣ್ಯ ಇಲಾಖೆ, ಗೃಹ ರಕ್ಷಕ ದಳ, ಟ್ರಾಫಿಕ್‌ ವಾರ್ಡನ್‌, ಕೆಎಸ್‌ಆರ್‌ಟಿಸಿ ಸೆಕ್ಯೂರಿಟಿ, ಶ್ವಾನದಳ, ಸಿವಿಲ್‌ ಡಿಫೆನ್ಸ್‌, ಎನ್‌ಸಿಸಿ ಬಾಯ್ಸ, ಭಾರತ್‌ ಸ್ಕೌಟ್‌ ಮತ್ತು ಗೈಡ್ಸ್‌ ಶಾಲಾ ತಂಡಗಳು ಸೇರಿ 33 ತಂಡಗಳಿಂದ ಶಿಸ್ತುಬದ್ಧ ಪಥ ಸಂಚಲ ನಡೆಯಿತು. ಸಮರ್ಥನಂ ಮತ್ತು ರಮಣ ಮಹರ್ಷಿ ವಿಕಲಚೇತನ ಸಂಸ್ಥೆಯ ಮಕ್ಕಳು ಪಥ ಸಂಚಲನಕ್ಕೆ ವಿಶೇಷ ಮೆರುಗು ನೀಡಿದರು.

Advertisement

ಪರೇಡ್‌ ಬಹುಮಾನ: ಸ್ವಾತಂತ್ರೊತ್ಸವ ಪಥ ಸಂಚಲನದ 1ನೇ ಗುಂಪಿನಲ್ಲಿ ಬಿಎಸ್‌ಎಫ್ ಪ್ರಥಮ ಹಾಗೂ ಸಿಎಆರ್‌ ಹೆಡ್‌ಕಾಟ್ರಸ್‌ ದ್ವಿತೀಯ ಬಹುಮಾನ ಪಡೆದಿದೆ. 2ನೇ ಗುಂಪಿನಲ್ಲಿ ಅಬಕಾರಿ ಹಾಗೂ ಅರಣ್ಯ ಇಲಾಖೆ ತಂಡ ಕ್ರಮವಾಗಿ ಮೊದಲೆರೆಡು ತಮ್ಮದಾಗಿಸಿಕೊಂಡಿವೆ. 3ನೇ ಗುಂಪಿನಲ್ಲಿ  ಭಾರತೀಯ ಸೇವಾದಳ್‌ ಮತ್ತು ಸಿವಿಲ್‌ ಡಿಫೆನ್ಸ್‌  ಮೊದಲೆರೆಡು ಸ್ಥಾನ ಪಡೆದಿದೆ.

4ಗುಂಪಿನಲ್ಲಿ ಮಿತ್ರಾ ಅಕಾಡೆಮಿ, ಕ್ಲಾರೆನ್ಸ್‌ ಪಬ್ಲಿಕ್‌ ಸ್ಕೂಲ್‌ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆದಿದೆ. 5ನೇ ಗುಂಪಿನಲ್ಲಿ ಬೆಂಗಳೂರು ಇಂಟರ್‌ನ್ಯಾಷನಲ್‌ ಅಕಾಡೆಮಿ ಹಾಗೂ ಲಿಟ್ಲ ಫ್ಲವರ್‌ ಪಬ್ಲಿಕ್‌ ಶಾಲೆಯ ತಂಡ ಮೊದಲೆರೆಡು ಬಹುಮಾನ ತಮ್ಮದಾಗಿಸಿಕೊಂಡಿದೆ. 6ನೇ ಗುಂಪಿನಲ್ಲಿ ಪೊಲೀಸ್‌ ಪಬ್ಲಿಕ್‌ ಸ್ಕೂಲ್‌ ಹಾಗೂ ಪ್ರಸಿಡೆನ್ಸಿ ಸ್ಕೂಲ್‌ ತಂಡ ಬಹುಮಾನ ಪಡೆದಿದೆ.

ಬಿಎಸ್‌ಎಫ್ ಬ್ಯಾಡ್‌ ಸೆಟ್‌ ತಂಡ, ಶ್ವಾನದಳ, ಗೋವಾ ಪೊಲೀಸ್‌ ಹಾಗೂ ಸಮರ್ಥನಂ ಮತ್ತು ರಮಣ ಮಹರ್ಷಿ ಸಂಸ್ಥೆಯ ಮಕ್ಕಳ ತಂಡಕ್ಕೆ ವಿಶೇಷ ಪ್ರಶಸ್ತಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿತರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ವಿಭಾಗದಲ್ಲಿ ಲಲ್ಲಿರೋಸ್‌ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ನೆಲಗದರನಹಳ್ಳಿ ಸರ್ಕಾರಿ ಶಾಲೆ ಮತ್ತು ಬಿಬಿಎಂಪಿ ಪ್ರೌಢಶಾಲೆ ಹಾಗೂ ಪಿಯು ಕಾಲೇಜಿನ  ತಂಡಗಳು ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next