Advertisement

ಆಡಳಿತ ನಡೆಸಲಿ ಇಲ್ಲವೇ ರಾಜೀನಾಮೆ ನೀಡಲಿ

06:44 AM Jan 29, 2019 | Team Udayavani |

ಬೆಂಗಳೂರು: ಮೈತ್ರಿ ಸರ್ಕಾರ ಜನರಿಗೆ ಬೇಡವಾಗಿದ್ದರೆ, ಕಾಂಗ್ರೆಸ್‌ಗೆ ಹೊರೆ ಎನಿಸಿದೆ. ಜೆಡಿಎಸ್‌ಗೂ ತೃತೀಯ ದರ್ಜೆ ನಾಗರಿಕರಂತೆ ನಡೆಸಿಕೊಳ್ಳುತ್ತಿದ್ದಾರೆ ಎಂಬ ಭಾವನೆಯಿದೆ. ಹೀಗಿರುವಾಗ ಯಾವ ಕಾರಣಕ್ಕೆ ಸಮ್ಮಿಶ್ರ ಸರ್ಕಾರ ಇದೆ ಎಂಬುದನ್ನು ಆಡಳಿತ ನಡೆಸುವವರು ಹೇಳಬೇಕು. ಕೂಡಲೇ ನಾಟಕ ನಿಲ್ಲಿಸಿ ಒಳ್ಳೆಯ ಆಡಳಿತ ನೀಡಲಿ, ಇಲ್ಲವೇ ರಾಜೀನಾಮೆ ನೀಡಲಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಗ್ರಹಿಸಿದರು.

Advertisement

ರಾಜ್ಯ ಬಿಜೆಪಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನಕ್ಕೊಂದು ಹೊಸ ನಾಟಕವಾಗಿ ಜನರನ್ನು ಮೂರ್ಖರನ್ನಾಗಿ ಮಾಡುವ ಕೆಲಸ ಮಾಡಬಾರದು. ಸಮ್ಮಿಶ್ರ ಸರ್ಕಾರದಲ್ಲಿ ಯಾರು ಯಾರನ್ನು ಬ್ಲಾಕ್‌ಮೇಲ್‌ ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಕಾಂಗ್ರೆಸ್‌ ತಮಗೆ ಲಾಭವಾಗಬೇಕಾದಾಗ ಜೆಡಿಎಸ್‌ಅನ್ನು ಬ್ಲಾಕ್‌ವೆುಲ್‌ ಮಾಡುತ್ತದೆ. ಜೆಡಿಎಸ್‌ನವರು ಕಾಂಗ್ರೆಸ್‌ನ ಬ್ಲಾಕ್‌ಮೇಲ್‌ ಮಾಡುತ್ತಾರೆ. ಇವರ ಬ್ಲಾಕ್‌ಮೇಲ್‌ ರಾಜಕಾರಣದಲ್ಲಿ ಜನ ಕಂಗೆಟ್ಟಿದ್ದಾರೆ ಎಂದು ದೂರಿದರು.

ಇನ್ನೊಂದೆಡೆ ಸಚಿವರಾದ ಪುಟ್ಟರಂಗಶೆಟ್ಟಿ, ಎಂ.ಟಿ.ಬಿ.ನಾಗರಾಜ್‌, ಶಾಸಕ ಎಸ್‌.ಟಿ.ಸೋಮಶೇಖರ್‌ ಅವರು ಸಿದ್ದರಾಮಯ್ಯ ಅವರೇ ತಮ್ಮ ಪಾಲಿನ ಮುಖ್ಯಮಂತ್ರಿ ಎನ್ನುತ್ತಾರೆ. ಕಾಂಗ್ರೆಸ್‌ನಿಂದ ಡಾ.ಜಿ.ಪರಮೇಶ್ವರ್‌ ಅವರು ಉಪಮುಖ್ಯಮಮತ್ರಿಯಾಗಿದ್ದರೂ ಅವರು ಶಾಸಕಾಂಗ ಪಕ್ಷದ ನಾಯಕರಲ್ಲ. ಇದು ಉಪಮುಖ್ಯಮಂತ್ರಿಯ ಸ್ಥಿತಿ. ಜೆಡಿಎಸ್‌ ಶಾಸಕ ಎ.ಟಿ.ರಾಮಸ್ವಾಮಿ ಲಕ್ಷ್ಮಣರೇಖೆ ಮೀರಬಾರದು ಎನ್ನುತ್ತಾರೆ. ಮತ್ತೂಬ್ಬ ಜೆಡಿಎಸ್‌ ಹಿರಿಯ ಶಾಸಕ ಬಸವರಾಜ ಹೊರಟ್ಟಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಎಲ್ಲ ಗೊಂದಲಮಯವಾಗಿದೆ ಎಂದರು.

ಸಚಿವ ಸಿ.ಎಸ್‌.ಪುಟ್ಟರಾಜು ಅವರು ಬಿಜೆಪಿ- ಜೆಡಿಎಸ್‌ನ 20- 20 ತಿಂಗಳ ಸಮ್ಮಿಶ್ರ ಸರ್ಕಾರವನ್ನು ನೆನಪಿಸಿಕೊಂಡಿದ್ದಾರೆ. ಆಗ ಬಿಜೆಪಿ ಗೌರವಯುತವಾಗಿ ನಡೆಸಿಕೊಂಡಿತ್ತು ಎಂಬುದು ಕಾಂಗ್ರೆಸ್‌ ಸಹವಾಸ ಮಾಡಿದ ನಂತರ ಜೆಡಿಎಸ್‌ಗೆ ಗೊತ್ತಾಗಿದೆ ಎಂದು ಕುಟುಕಿದರು.
ಮುಖ್ಯಮಂತ್ರಿಗಳು ತಾನು ಸಾಂದರ್ಭಿಕ ಶಿಶು, ಜನರ ಮುಲಾಜಿನಲ್ಲಿ ಇಲ್ಲ- ಕಾಂಗ್ರೆಸ್‌ ಮುಲಾಜಿನಲ್ಲಿದ್ದೇನೆ.

ಕ್ಲರ್ಕ್‌ ರೀತಿ ಕೆಲಸ ಮಾಡುತ್ತಿದ್ದೇನೆ. ತಂತಿ ಮೇಲಿನ ನಡಿಗೆಯಂತೆ ಆಡಳಿತ ನಡೆಸುತ್ತಿದ್ದೇನೆ. ವಿಷಕಂಠನಾಗಿದ್ದೇನೆ, ಮೂರನೇ ದಜೇì ನಾಗರಿಕತೆ ನಡೆಸಿಕೊಳ್ಳಬೇಡಿ ಎಂದು ಹೇಳಿದ್ದಾರೆ. ಇದೀಗ ರಾಜೀನಾಮೆ ನೀಡಲು ಸಿದ್ದ ಎಂದು ಹೇಳಿದ್ದಾರೆ. ಎಷ್ಟೇ ಅಪಮಾನವಾದರೂ ಅವರು ರಾಜಿನಾಮೆ ನೀಡುವುದಿಲ್ಲ. ಎಲ್ಲ ಅಪಮಾನವನ್ನುಅಧಿಕಾರಕ್ಕಾಗಿ ಸಹಿಸಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.

Advertisement

ಹೆಣ್ಣು ಮಕ್ಕಳಿಗೆ ಮರ್ಯಾದೆ: ಮರ್ಯಾದೆ ಪುರುಷೋತ್ತಮ ಸಿದ್ದರಾಮಯ್ಯ ಅವರು ಯಾವ ರೀತಿ ಹೆಣ್ಣು ಮಕ್ಕಳಿಗೆ ಮರ್ಯಾದೆ ನೀಡಿದ್ದಾರೆ ಎಂಬುದನ್ನು ಒಮ್ಮೆ ನೋಡಿಕೊಳ್ಳಲಿ. ತಾವು ಕೊಟ್ಟ ಮರ್ಯಾದೆ ತಮ್ಮ ಸುದೀರ್ಘ‌ ರಾಜಕೀಯಕ್ಕೆ ಗೌರವ ತಂದುಕೊಟ್ಟಿದೆ ಎನಿಸಿದರೆ ಮುಂದುವರಿಸಲಿ. ತಾವು ನಡೆದುಕೊಂಡ ರೀತಿ ಸಾರ್ವಜನಿಕ ಸಭ್ಯತೆಗೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ತೋರಿದ ಅಗೌರವ ಎನಿಸಿದರೆ ಕೂಡಲೇ ತಮ್ಮ ಪುತ್ರನಿಗೆ ರಾಜೀನಾಮೆ ನೀಡಲು ಹೇಳಲಿ. ಇಲ್ಲವೇ ತಮ್ಮ ಹಾಗೂ ತಮ್ಮ ಪುತ್ರನನ್ನು ಸಮರ್ಥಿಸಿಕೊಳ್ಳಲಿ ಎಂದು ಸವಾಲು ಹಾಕಿದರು.

ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯದವರು ರೈತ ಮಹಿಳೆಯನ್ನು ನಾಲ್ಕು ವರ್ಷಗಳಿಂದ ಎಲ್ಲಿ ಮಲಗಿದ್ದೆ ಎಂದು ಕೇಳುತ್ತಾರೆ. ಸಚಿವ ಸಾ.ರಾ. ಮಹೇಶ್‌ ಅವರ ಮಹಿಳಾ ಪೊಲೀಸ್‌ ವರಿಷ್ಠಾಧಿಕಾರಿಯನ್ನು ಅವಮಾನಿಸುತ್ತಾರೆ ಎಂದು ಕಿಡಿ ಕಾರಿದರು. ರಾಜ್ಯ ಬಿಜೆಪಿ ಮಹಿಳಾ ಅಧ್ಯಕ್ಷೆ ಭಾರತಿ ಶೆಟ್ಟಿ, ಸಿದ್ದರಾಮಯ್ಯನವರ ರಾಜಕೀಯ ಜೀವನದ ವರ್ತನೆಯನ್ನು ನೋಡಿದರೆ ಅವರಿಗೆ ಗುರಿ ಇರಬಹುದು ಆದರೆ ಗುರು ಇಲ್ಲ ಎಂಬುದು ಸಾಬೀತಾಗುತ್ತದೆ. ಮಹಿಳಾ ಆಯೋಗ ಏನು ಮಾಡುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಎಂದು ವಾಗ್ಧಾಳಿ ನಡೆಸಿದರು.
 
ಗಂಭೀರವಾಗಿ ತೆಗೆದುಕೊಳ್ಳೊಲ್ಲ: ಸ್ವಾಭಿಮಾನ ಇರುವವರು ಖುರ್ಚಿಗೆ ಅಂಟಿಕೊಳ್ಳಬಾರದು. ಹಾಗಿದ್ದರೂ ನಾವು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಕುಮಾರಸ್ವಾಮಿಯು ರಾಜೀನಾಮೆ ನೀಡುವ ಹೇಳಿಕೆ ನೀಡಿದ್ದಾರೆ. ನಂತರ “ನಾನು ಹೇಳಿದ್ದು ಆ ಅರ್ಥದಲ್ಲಿ ಅಲ್ಲ ಬ್ರದರ್‌’ ಎಂದು ನಾಳೆ ಅವರೇ ಹೇಳಿಕೆ ಕೊಡಬಹುದು. ಇನ್ನೂ ಒಂದು ದಿನ ಕಾಯೋಣ. ನಾಳೆಯೂ ಕುಮಾರಸ್ವಾಮಿ ಇದೇ ರೀತಿ ಮಾತನಾಡಿದರೆ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳೋಣ ಎಂದು ವಿಧಾನಸೌಧದಲ್ಲಿನ ಬಿಜೆಪಿ ಶಾಸಕಾಂಗ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ  ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next