ಕೊರಟಗೆರೆ : ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಬೆಟ್ಟ ಶಂಭೋನಹಳ್ಳಿ ಗ್ರಾಮದ ಸರ್ವೇ ನಂಬರ್ 52,10,11,14 ,15 ರಲ್ಲಿ ಗ್ರಾಮದ ಮುಖ್ಯ ರಸ್ತೆಯಿಂದ ನಕಾಶೆ ರಸ್ತೆ ಇರುವ ಕಾರಣ ಗ್ರಾಮದ ರೈತರು ಮತ್ತು ಸಾರ್ವಜನಿಕರು ತಹಶೀಲ್ದಾರ್ ರವರಿಗೆ 17 ಜೂನ್ 2020 ಹಿಂದಿನಿಂದಲೂ ಮನವಿ ಸಲ್ಲಿಸಿದ್ದರು. ಸಂಬಂಧ ಪಟ್ಟ ಅಧಿಕಾರಿಗಳು ಮಾತ್ರ ಸಮಸ್ಯೆಯನ್ನು ಕಾನೂನು ಬದ್ಧವಾಗಿ ಪರಿಹರಿಸಲು ವಿಫಲರಾಗಿದ್ದಾರೆ.
ಅಕ್ಕ ಪಕ್ಕದ ಜಮೀನಿನ ಮಾಲೀಕರು ನಕಾಶೆ ರಸ್ತೆ ಯನ್ನು ಒತ್ತುವರಿ ಮಾಡಿ ರೈತರಿಗೆ ತಮ್ಮ ಜಮೀನುಗಳಿಗೆ ಓಡಾಡಲು ಸಮಸ್ಯೆಯನ್ನು ಉಂಟು ಮಾಡುತ್ತಿರುವುದು ಕಂಡು ಬಂದಿದೆ. ಮೂಲ ನಕಾಶೆ ರಸ್ತೆ ಪಕ್ಕದಲ್ಲಿಯೇ ಹಳ್ಳ ಒಂದು ಹಾದು ಹೋಗುತ್ತಿದ್ದು ಈ ಹಳ್ಳದಲ್ಲಿಯೇ ಓಡಡಾಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮಸ್ಥರಾದ ಪಾರ್ವತಮ್ಮ ಮಾತನಾಡಿ, ನಾವು ಪ್ರತಿ ನಿತ್ಯವು ಹಳ್ಳದಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ನಮಗೆ ತುಂಬಾ ತೊಂದರೆಯಾಗುತ್ತಿದೆ. ನಕಾಶೆ ರಸ್ತೆ ಇರುವಂತೆ ಒತ್ತುವರಿ ಮಾಡಿರುವವರ ವಿರುದ್ದ ಕಾನೂನು ಕ್ರಮ ತೆಗೆದುಕೊಂಡು ಒತ್ತುವರಿ ತೆರವು ಮಾಡಿ ನಮಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.
ಯುವಕ ಮಂಜುನಾಥ್ ಮಾತನಾಡಿ, ಈ ಭಾಗದ ರೈತರಿಗೆ ಹೆಚ್ಚು ತೊಂದರೆ ಆಗುತ್ತಿದೆ. ತಮ್ಮ ತಮ್ಮ ಜಮೀನುಗಳಿಗೆ ಓಡಾಡಲು ಪ್ರತೀ ದಿನವೂ ಹರಸಾಹಸ ಪಡಬೇಕಾಗಿದೆ. ನಾವು ಕಳೆದ ಮೂರು ವರ್ಷಗಳಿಂದ ಈ ನಕಾಶೆ ರಸ್ತೆಗಾಗಿ ಹೋರಾಟ ಮಾಡುತ್ತಿದ್ದೇವೆ ತಹಶೀಲ್ದಾರ್ ರವರಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ನೀಡಿದ್ದೇವೆ ಆದರೂ ಇಲ್ಲಿಯವರೆಗೂ ಯಾವುದೇ ಅನುಕೂಲ ಆಗಿರುವುದಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನಾದರೂ ಸ್ಥಳೀಯ ತಹಶೀಲ್ದಾರ್ , ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಬೇಕೆಂದು ರೈತರು ಮತ್ತು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.