Advertisement
ಇತ್ತೀಚಿನ ದಿನಗಳಲ್ಲಿ ಅನ್ಯ ಪಕ್ಷಗಳಿಂದ ಬಿಜೆಪಿಗೆ ಸೇರುತ್ತಿರುವವರಿಗೆ ಕೆಂಪು ಹಾಸಿನ ಸ್ವಾಗತ ನೀಡುತ್ತಿರುವ ಬಗ್ಗೆ ಮೂಲ ಬಿಜೆಪಿಗರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಸ್ಥಳೀಯ ಮುಖಂಡರನ್ನು ಕಡೆಗಣಿಸಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಾಗುತ್ತಿದ್ದು, ಇದು ಬೇರು ಮಟ್ಟದಲ್ಲಿ ಪಕ್ಷ ಸಂಘಟನೆಗೆ ಅಡ್ಡಿಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
Related Articles
ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದ ಕೆಲವು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರ ನೇಮಕವನ್ನು ಶೀಘ್ರ ಪರಿಷ್ಕರಣೆ ಮಾಡುವಂತೆ ಅಮಿತ್ ಶಾ ಸೂಚಿಸಿ, ಅದಕ್ಕಾಗಿ ಮುರಳೀಧರರಾವ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದ್ದರು. ಫೆ. 10 ಆದರೂ ಸಮಿತಿ ಯಾವುದೇ ಸಭೆ ನಡೆಸದ ಕಾರಣ ಮತ್ತು ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆಯಾಗದ ಕಾರಣ ಮತ್ತೆ ಅಸಮಾಧಾನ ಕಾಣಿಸಿಕೊಂಡಿತ್ತು. ಆ ಸಂದರ್ಭದಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆಗೆ ಆಗಮಿಸಿದ್ದ ಮುರಳೀಧರರಾವ್ ಅವರು ಆ ಜವಾಬ್ದಾರಿ ನನಗೆ ಬಿಡಿ, ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದರು. ಆದರೆ, ಅದಾಗಿ 15 ದಿನ ಕಳೆದರೂ ಪದಾಧಿಕಾರಿಗಳ ಪಟ್ಟ ಪರಿಷ್ಕರಣೆಯಾಗುವ ಲಕ್ಷಣ ಕಾಣಿಸುತ್ತಿಲ್ಲ.
Advertisement
ಹೀಗಾಗಿ ಅಸಮಾಧಾನಗೊಂಡಿದ್ದ ಕೆಲವು ಮುಖಂಡರು ಯಡಿಯೂರಪ್ಪ ಬಣ ಮಾತ್ರವಲ್ಲದೆ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧವೂ ತಿರುಗಿ ಬೀಳಲು ಮುಂದಾಗಿದ್ದರು. ಪದಾಧಿಕಾರಿಗಳ ಪಟ್ಟಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಿದ್ದಲ್ಲದೆ ನಂತರದಲ್ಲಿ ಪ್ರತಿ ಸಂದರ್ಭದಲ್ಲೂ ತಮ್ಮೊಂದಿಗೆ ಇದ್ದ ಈಶ್ವರಪ್ಪ ಅವರು ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿಯಾದ ಬಳಿಕ ಪದಾಧಿಕಾರಿಗಳ ಬದಲಾವಣೆ ಕುರಿತಂತೆ ಮೌನಕ್ಕೆ ಶರಣಾಗಿದ್ದು ಇದಕ್ಕೆ ಕಾರಣವಾಗಿತ್ತು.
ಈ ಮಾಹಿತಿ ತಿಳಿಯುತ್ತಿದ್ದಂತೆ ಈಶ್ವರಪ್ಪ ಅವರು ಮತ್ತೆ ಅತೃಪ್ತರೊಂದಿಗೆ ಚರ್ಚಿಸಿ ನಿಮ್ಮೊಂದಿಗೆ ನಾನಿದ್ದೇನೆ ಎಂಬ ಸಂದೇಶ ರವಾನಿಸಿದ್ದಾರೆ. ಆ ಕಾರಣಕ್ಕಾಗಿಯೇ ಶನಿವಾರ ಬ್ರಿಗೇಡ್ ಸಭೆ ಕರೆದು ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಅಸಮಾಧಾನ ಶಮನಗೊಳ್ಳದಿದ್ದಲ್ಲಿ ಬ್ರಿಗೇಡ್ ಮತ್ತೆ ತನ್ನ ಚಟುವಟಿಕೆ ಚುರುಕುಗೊಳಿಸಬೇಕಾಗುತ್ತದೆ ಎಂಬ ಸಂದೇಶ ರವಾನಿಸಿದ್ದಾರೆ.
ಈ ಮಧ್ಯೆ ಅನ್ಯ ಪಕ್ಷಗಳಿಂದ ಕೆಲವರು ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದು, ಇನ್ನೂ ಕೆಲವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ನಾಯಕರು ಪ್ರಯತ್ನಿಸುತ್ತಿರು ಬಗ್ಗೆಯೂ ಅಪಸ್ವರ ಕೇಳಿಬಂದಿದೆ. ಕುಮಟಾ ಮಾಜಿ ಶಾಸಕ ದಿನಕರಶೆಟ್ಟಿ ಮತ್ತು ಯಲ್ಲಾಪುರದ ಕಾಂಗ್ರೆಸ್ ಮುಖಂಡ ಪ್ರಮೋದ್ ಹೆಗ್ಡೆ ಬಿಜೆಪಿ ಸೇರಿದ್ದು ಹೊರತುಪಡಿಸಿ ಇತರರ ಸೇರ್ಪಡೆ ಬಗ್ಗೆ ಅಸಮಾಧಾನ ಕೇಳಿಬಂದಿದೆ.ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಬಿಜೆಪಿ ಸೇರುವುದಕ್ಕೆ ಬೆಂಬಲ ಇದೆಯಾದರೂ ಮುಂದೇನು ಎಂಬ ಪ್ರಶ್ನೆ ಎದುರಾಗಿದೆ. ಅವರಿಗೆ ಬೈಂದೂರು ಕ್ಷೇತ್ರದಿಂದ ವಿಧಾನಸಭೆಟಿಕೆಟ್ ನೀಡುವ ಬಗ್ಗೆ ಮಾತುಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಆ ಕ್ಷೇತ್ರದಲ್ಲಿ ಅತೃಪ್ತಿ ಕಾಣಿಸಿಕೊಂಡಿದೆ. ಅದೇ ರೀತಿ ಹನೂರು ಕ್ಷೇತ್ರದಿಂದ ಪರಿಮಳಾ ನಾಗಪ್ಪ ಅವರು ಬಿಜೆಪಿಗೆ ಸೇರುತ್ತಿರುವ ಬಗ್ಗೆ ಬಿಜೆಪಿಯ ವಿ.ಸೋಮಣ್ಣ ತಮ್ಮ ಆಪ್ತರಲ್ಲಿ ಅಸಮಾಧಾನ ಹೇಳಿಕೊಂಡಿದ್ದಾರೆ.