Advertisement

ಪ್ರತಿ ಆಸ್ಪತ್ರೆ ಆವರಣದಲ್ಲಿ ಮಾವು ಮಳಿಗೆ ತೆರೆಯಲು ಕ್ರಮ

12:02 PM Apr 29, 2017 | Team Udayavani |

ಬೆಂಗಳೂರು: ತಾಲ್ಲೂಕು ಸೇರಿದಂತೆ ಎಲ್ಲ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಮಾವು ಮಳಿಗೆ ತೆರೆಯಲಾಗುವುದು ಎಂದು ಎಂದು ಆರೋಗ್ಯ ಸಚಿವ ರಮೇಶ್‌ಕುಮಾರ್‌ ತಿಳಿಸಿದ್ದಾರೆ. 

Advertisement

ಹಡ್ಸನ್‌ ವೃತ್ತದಲ್ಲಿರುವ ಹಾಪ್‌ಕಾಮ್ಸ್‌ ಶೀಥಲಗೃಹ ಆವರಣದಲ್ಲಿ ಶುಕ್ರವಾರ ಹಾಪ್‌ಕಾಮ್ಸ್‌ ಹಮ್ಮಿಕೊಂಡಿದ್ದ “ಮಾವು ಹಾಗೂ ಹಲಸು ಮೇಳ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,  “ಈಗಾಗಲೇ ಎಲ್ಲ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕೆಎಂಎಫ್ನ ಉತ್ಪನ್ನಗಳು, ಹಾಪ್‌ಕಾಮ್ಸ್‌ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಾವು ಮಾರಾಟ ಮಳಿಗೆ ತೆರೆಯುವ ಸಂಬಂಧ ಬೆಳೆಗಾರರು ಮತ್ತು ಮಾವು ಅಭಿವೃದ್ಧಿ ಮಂಡಳಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಹೆಜ್ಜೆ ಇಡಲಾಗುವುದು,’ ಎಂದರು. 

ಕನಿಷ್ಠ ಬೆಲೆ ಘೋಷಿಸಬೇಕು: ಎಲ್ಲ ಹಣ್ಣು, ತರಕಾರಿ ಮತ್ತು ಹೂವುಗಳ ಬೆಲೆಗೆ ಸರ್ಕಾರ 6 ತಿಂಗಳು ಮೊದಲೇ ಕನಿಷ್ಠ ಬೆಲೆ ನಿಗದಿಪಡಿಸಬೇಕು. ಇದರಿಂದ ರೈತರು ಬೆಲೆ ಕುಸಿತದಿಂದ ಕಂಗಾಲಾಗುವುದು ತಪ್ಪುತ್ತದೆ. ಈ ಸಂಬಂಧ ಕೃಷಿ ಸಚಿವರೊಂದಿಗೆ ಚರ್ಚಿಸಿದ್ದೇನೆ ಎಂದು ರಮೇಶ್‌ ಕುಮಾರ್‌ ಹೇಳಿದರು. ತೋಟಗಾರಿಕೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಮಾತನಾಡಿ, “ಮೇಳದಲ್ಲಿ ಕಳೆದ ವರ್ಷ 734.15 ಮೆ.ಟ. ಮಾವು ಮತ್ತು  151.80 ಮೆ.ಟ. ಹಲಸು ವಹಿವಾಟು ನಡೆದಿತ್ತು.

ಈ ವರ್ಷ ಕ್ರಮವಾಗಿ ಸಾವಿರ ಮೆ.ಟ. ಮಾವು ಹಾಗೂ 200 ಮೆ.ಟ. ಹಲಸು ಮಾರಾಟ ಮಾಡುವ ಗುರಿ ಇದೆ. ಬೆಂಗಳೂರಿನಲ್ಲಿ ಮಾವು ವ್ಯಾಪಾರಕ್ಕೆ ವಿಪುಲ ಅವಕಾಶ ಇದೆ. ಇದಕ್ಕಾಗಿ ಬಡಾವಣೆಗಳಲ್ಲಿ ಬಿಬಿಎಂಪಿ ಜಾಗ ಕಲ್ಪಿಸಬೇಕು,’ ಎಂದು ಸಚಿವರು ಮೇಯರ್‌ಗೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಸಚಿವ ರಾಮಲಿಂಗಾ ರೆಡ್ಡಿ, ಹಾಪ್‌ಕಾಮ್ಸ್‌ ಅಧ್ಯಕ್ಷ ಜಿ.ಆರ್‌. ಶ್ರೀನಿಧಿವಾಸ್‌, ವ್ಯವಸ್ಥಾಪಕ ನಿರ್ದೇಶಕ ಡಾ.ಬೆಳ್ಳೂರು ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.   

ನಿಯಮ ಸರಳೀಕರಿಸಿ: ಬಿಬಿಎಂಪಿಯ ಪ್ರತಿ ವಾರ್ಡ್‌ಗೆ 2 ಹಾಪ್‌ಕಾಮ್ಸ್‌ ಮಳಿಗೆ ಬೇಕಿದೆ. ಜಾಗ ನೀಡಲು ಪಾಲಿಕೆಯೂ ಸಿದ್ಧ. ಆದರೆ, ಹಾಪ್‌ಕಾಮ್ಸ್‌ ತನ್ನ ನಿಯಮಾವಳಿಗಳನ್ನು ಸರಳೀಕರಿಸಬೇಕಿದೆ ಎಂದು ಮೇಯರ್‌  ಪದ್ಮಾವತಿ ಹೇಳಿದರು. 

Advertisement

275 ಮಳಿಗೆಗಳಲ್ಲಿ ಮಾರಾಟ: ಬೆಂಗಳೂರಿನ 275 ಮಳಿಗೆಗಳಲ್ಲಿ ರಾತ್ರಿ 8.30ರವರೆಗೆ ಮಾವು ಮತ್ತು ಹಲಸು ಮಾರಾಟ ನಡೆಯಲಿದೆ. ಬಿಇಎಲ್‌, ಬೆಮೆಲ್‌, ಇನ್ಫೋಸಿಸ್‌, ವಿಪ್ರೊ ಮತ್ತಿತರ ಪ್ರತಿಷ್ಠಿತ ಕಂಪೆನಿಗಳ ಆವರಣದಲ್ಲೂ ಮೇಳ ನಡೆಯುತ್ತಿದೆ. ಆನ್‌ಲೈನ್‌ ಮೂಲಕವೂ ಖರೀದಿಸಬಹುದು. 

ಮಾವಿನಹಣ್ಣುಗಳಲ್ಲಿ ಬಾದಾಮಿ, ಆಲೊನ್ಸೋ ಮಲಗೋವ, ಕಾಲಪಾಡ್‌, ರಸಪುರಿ, ಮಲ್ಲಿಕಾ, ಸೇಂದೂರ, ದಶೇರಿ, ಬಂಗನ್‌ಪಲ್ಲಿ, ಕೇಸರ್‌, ಸಕ್ಕರೆಗುತ್ತಿ, ತೋತಾಪುರಿ ಮತ್ತಿತರ ತಳಿಗಳನ್ನು ಕಾಣಬಹುದು. ಅದೇ ರೀತಿ, ಹಲಸಿನಲ್ಲಿ ಸಕ್ಕರಾಯಪ್ಪಣ, ತೂಬಿಗೆರೆ, ಚಂದ್ರ, ಬೈರಸಂದ್ರ, ಜಾನಗೆರೆ ಹಲಸು, ಗಮ್‌ಲೆಸ್‌ ಹಲಸು ಮಾರಾಟಕ್ಕೆ ದೊರೆಯಲಿವೆ. 

ಫೋನ್‌ ಪೇನಲ್ಲಿ 10 ಡಿಸ್ಕೌಂಟ್‌ 
ಮಾವು ಮತ್ತು ಹಲಸು ಮೇಳದಲ್ಲಿ ಹಾಪ್‌ಕಾಮ್ಸ್‌ ಮತ್ತು “ಫೋನ್‌ ಪೇ’ ಸಂಸ್ಥೆ ಒಡಂಬಡಿಕೆ ಮಾಡಿಕೊಂಡಿವೆ. ಆ್ಯಪ್‌ ಮೂಲಕ ಕನಿಷ್ಠ 500 ಮೌಲ್ಯದ ಖರೀದಿ ಮಾಡಿದರೆ,  ಗ್ರಾಹಕರಿಗೆ ಶೇ. 10ರಷ್ಟು ರಿಯಾಯ್ತಿ ದೊರೆಯಲಿದೆ. ಫ್ಲಿಪ್‌ಕಾರ್ಟ್‌ ನಲ್ಲೂ ಮಾವು ಖರೀದಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next