Advertisement

ಕೋಳಿ ಸಾಕಾಣಿಕೆ ಕೃಷಿ ವ್ಯಾಪ್ತಿಗೆ ತರಲು ಅಗತ್ಯ ಕ್ರಮ 

09:45 AM Oct 13, 2018 | |

ಬೆಂಗಳೂರು: ಕೋಳಿ ಸಾಕಾಣಿಕೆಯನ್ನು ಉದ್ಯಮ ವಲಯದಿಂದ ಬೇರ್ಪಡಿಸಿ, ಕೃಷಿ ವಲಯದ ವ್ಯಾಪ್ತಿಗೆ ತರಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಜತೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್‌ ನಾಡಗೌಡ ತಿಳಿಸಿದ್ದಾರೆ. ವಿಶ್ವ ಮೊಟ್ಟೆ ದಿನಾಚರಣೆ ಅಂಗವಾಗಿ ಕರ್ನಾಟಕ ಪಶುವೈದ್ಯಕೀಯ ಪರಿಷತ್ತಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೋಳಿ ಸಾಕಾಣಿಕೆ ಕೇಂದ್ರ ಆರಂಭಿಸಲು ಲಕ್ಷ ರೂ.ಗಳ ಬಂಡವಾಳ ಅಗತ್ಯವಿದೆ. ಬ್ಯಾಂಕಿನಲ್ಲಿ ಸಾಲ ಪಡೆದರೆ ಶೇ.17ರಷ್ಟು ಬಡ್ಡಿ ಕಟ್ಟಬೇಕು. ಈ ಕಾರಣದಿಂದ ಅನೇಕ ಬಡ ಮಧ್ಯಮ ವರ್ಗದವರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಕೋಳಿ ಸಾಕಾಣಿಕೆಯನ್ನು ಕೃಷಿ ವಲಯದ ವ್ಯಾಪ್ತಿಗೆ ಒಳಪಡಿಸುವುದರಿಂದ ಸಹಕಾರಿ ಬ್ಯಾಂಕ್‌ಗಳಲ್ಲಿ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೇರಿದಂತೆ ಇತರೆ ಸೌಲಭ್ಯಗಳು ಲಭಿಸುತ್ತವೆ. ಅದನ್ನು ಪಡೆದು ಸಾಕಷ್ಟು ಜನ ಈ ಉಪಕಸುಬಿಗೆ ಮುಂದಾಗುತ್ತಾರೆ. ಆದ್ದರಿಂದ ಕೋಳಿ ಸಾಕಾಣಿಕೆಯನ್ನು ಕೃಷಿ ವಲಯದ ವ್ಯಾಪ್ತಿಗೆ ತರಲು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದರು.

Advertisement

ಇಂದು ಸಣ್ಣ ಹಿಡುವಳಿದಾರರು ಕೃಷಿಯನ್ನೇ ನಂಬಿಕೊಂಡು ಬದುಕು ನಡೆಸುವುದು ಕಷ್ಟಕರವಾಗಿದೆ. ಹೈನುಗಾರಿಕೆ, ಕೋಳಿ ಸಾಕಾಣಿಕೆಯಂತಹ ಉಪಕಸುಬುಗಳ ಅವಶ್ಯಕತೆ ಹೆಚ್ಚಿದೆ. ಇನ್ನು ಕೋಳಿ ಸಾಕಾಣಿಕೆಯನ್ನು ಪ್ರೋತ್ಸಾಹಿಸುತ್ತೇವೆ ಎಂದು ಹೇಳಿಕೊಂಡು ಕೆಲ ಸಂಸ್ಥೆಗಳು ರೈತರಿಗೆ
ಮರಿಗಳನ್ನು ಕೊಟ್ಟು, ಮರಿಗಳು ಬೆಳೆದ ನಂತರ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿ ವಂಚಿಸುತ್ತಿವೆ. ಈ ಬಗ್ಗೆ ನನ್ನ ಗಮನಕ್ಕೂ ಬಂದಿದ್ದು, ಅದಕ್ಕೆ ಕಡಿವಾಣ ಹಾಕಲು ಕುಕ್ಕುಟ ಮಂಡಳಿಯು ಮುಂದಾಗಬೇಕು ಎಂದರು. ಭಾರತ ಮೊಟ್ಟೆ ಉತ್ಪಾದನೆಯಲ್ಲಿ 7ನೇ ಸ್ಥಾನದಲ್ಲಿದೆ. ಮೊಟ್ಟೆ ಸೇವನೆಯಲ್ಲೂ ಹಿಂದಿದ್ದು, ತಜ್ಞ ವೈದ್ಯರ ಪ್ರಕಾರ ಒಬ್ಬ ಮನುಷ್ಯ ವರ್ಷಕ್ಕೆ ಕನಿಷ್ಠ 180 ಮೊಟ್ಟೆ ಸೇವಸಬೇಕು. ಆದರೆ, ಈಗ ಸರಾಸರಿ 69 ಮೊಟ್ಟೆಗಳನ್ನು ಮಾತ್ರ ಸೇವನೆ ಮಾಡುತ್ತಿದ್ದೇವೆ ಎಂದರು.

ಕುಕ್ಕುಟ ಮಹಾಮಂಡಳಿ ಅಧ್ಯಕ್ಷ ಕಾಂತರಾಜ ಮಾತನಾಡಿ, ಕೋಳಿ ಸಾಕಾಣಿಕೆಯನ್ನು ಪ್ರೋತ್ಸಾಹಿಸಲು 6.5 ಲಕ್ಷ ಕೋಳಿ ಮರಿಗಳನ್ನು
ಸರ್ಕಾರದ ಮೂಲಕ ರೈತರಿಗೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಮೊಟ್ಟೆಯನ್ನು ಅಂಗನವಾಡಿ ಹಾಗೂ ಶಾಲೆಗಳ ಬಿಸಿಯೂಟ ಯೋಜನೆಯಲ್ಲಿ
ಸೇರಿಸುವ ಮೂಲಕ ಮಕ್ಕಳಿಗೆ ಪೌಷ್ಟಿಕಾಂಶ ಆಹಾರ ನೀಡುವ ಜತೆಗೆ ಕುಕ್ಕುಟ ಮಹಾಮಂಡಳಿಯನ್ನು ಪ್ರೋತ್ಸಾಹಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು. ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿಯ ಸದಸ್ಯರು ಹಾಗೂ ಪಶುವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು
ಜಾಥಾ ಹಮ್ಮಿಕೊಂಡು ಮೊಟ್ಟೆ ಒಂದು ಪೌಷ್ಟಿಕ ಆಹಾರ. ಮೊಟ್ಟೆ ತಿಂದರೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಜಾಗೃತಿ ಮೂಡಿಸಿದರು.

ರೈತರಿಗೆ ತರಬೇತಿ, ಅಗತ್ಯ ಸೌಲಭ್ಯ ಕುಕ್ಕುಟ ಮಹಾಮಂಡಳಿ ಕಾರ್ಯ ಚಟುವಟಿಕೆ ಒಂದು ಭಾಗಕ್ಕೆ ಸೀಮಿತವಾಗಬಾರದು. ಉತ್ತರ ಕರ್ನಾಟಕದಲ್ಲೂ ಕೋಳಿ ಸಾಕಾಣಿಕೆ ಜನ ಆಸಕ್ತಿ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಕುಕ್ಕುಟ ಮಹಾಮಂಡಳಿಯು ಉತ್ತರ ಕರ್ನಾಟಕ,
ಹೈದರಬಾದ್‌ ಕರ್ನಾಟಕಕ್ಕೂ ತೆರಳಿ ಆ ಭಾಗದ ರೈತರಿಗೂ ತರಬೇತಿ ನೀಡುವ, ಸೌಲಭ್ಯಗಳನ್ನು ಒದಗಿಸುವ ಕಾರ್ಯ ಮಾಡಬೇಕು ಎಂದು ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್‌ ನಾಡಗೌಡ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next