Advertisement

ವಿದೇಶಿ ಕನ್ನಡಿಗರ ಉದ್ದಿಶ್ಯ

06:00 AM Aug 17, 2018 | |

ಇದು ಹಾಲಿವುಡ್‌ ಮಂದಿಯ ಕನ್ನಡ ಸಿನಿಮಾ..!
– ಹಾಗಂತ, ಅಲ್ಲಿನವರೇ ಸೇರಿ ಮಾಡಿದ ಚಿತ್ರವಲ್ಲ. ಅಲ್ಲಿ ನೆಲೆಸಿರುವ ಕನ್ನಡಿಗರ ಚಿತ್ರ. ಅದಕ್ಕೆ ಅವರು ಇಟ್ಟುಕೊಂಡ ಹೆಸರು “ಉದ್ದಿಶ್ಯ’. ಅಮೇರಿಕಾದಲ್ಲಿದ್ದ ಹೇಮಂತ್‌ ಕೃಷ್ಣಪ ನಿರ್ದೇಶಕರು. ಯುಎಸ್‌ನಲ್ಲೇ ನೆಲೆಸಿರುವ ರಾಬರ್ಟ್‌ ಗ್ರೀಫಿನ್‌ ಕಥೆ, ಚಿತ್ರಕಥೆ ಬರೆದಿದ್ದಾರೆ. ಇನ್ನು, ಪಿಲಿಫೀನ್ಸ್‌ ದೇಶದಲ್ಲಿರುವ ಚೇತನ್‌ ರಘುರಾಮ್‌ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಅಲ್ಲಿಗೆ ಇದೊಂದು ವಿದೇಶದಲ್ಲಿರುವ ಕನ್ನಡಿಗರ ಚಿತ್ರ ಎಂಬುದು ಸ್ಪಷ್ಟ. ಚಿತ್ರ ಈಗಾಗಲೇ ಪೂರ್ಣಗೊಂಡಿದ್ದು, ಇತ್ತೀಚೆಗೆ ನಿರ್ದೇಶಕ ಹೇಮಂತ್‌ ಚಿತ್ರದ ಟ್ರೇಲರ್‌ ಮತ್ತು ಒಂದು ಹಾಡು ತೋರಿಸುವ ಮೂಲಕ ಚಿತ್ರದ ಅನುಭವ ಹಂಚಿಕೊಳ್ಳಲೆಂದೇ ಪತ್ರಕರ್ತರ ಎದುರು ಕುಳಿತಿದ್ದರು.

Advertisement

ಹೇಮಂತ್‌ ಅಮೇರಿಕಾದಲ್ಲೇ ಒಂದಷ್ಟು ಕಿರುಚಿತ್ರ ಮಾಡಿ ಅನುಭವ ಪಡೆದಿದ್ದಾರೆ. ಕನ್ನಡದಲ್ಲಿ ಚಿತ್ರ ಮಾಡುವ ಆಸೆ ಚಿಗುದ್ದೇ ತಡ, ವಿಭಿನ್ನ ಕಥೆವುಳ್ಳ ಚಿತ್ರ ಮಾಡಬೇಕು ಅಂತ ನಿರ್ಧರಿಸಿದ್ದಾರೆ. ಅದೇ ವೇಳೆ, ಯುಎಸ್‌ನ ಕಥೆಗಾರ್ತಿ ರಾಬರ್ಟ್‌ ಗ್ರೀಫಿನ್‌ ಬರೆದ ಕಥೆ ಓದಿದ್ದರು. ಅದನ್ನೇಕೆ ಚಿತ್ರ ಮಾಡಬಾರದು ಅಂದುಕೊಂಡು, ಆ ಕಥೆಗಾರ್ತಿಯನ್ನು ಭೇಟಿ ಮಾಡಿ, ಆ ಕಥೆಯ ಹಕ್ಕು ಪಡೆದು ಕನ್ನಡಕ್ಕೆ ಆ ಕಥೆಯನ್ನು ಅನುವಾದಿಸಿಕೊಂಡು ಒಂದುವರೆ ವರ್ಷ ಸ್ಕ್ರಿಪ್ಟ್ ರೆಡಿಮಾಡಿಕೊಂಡು “ಉದ್ಧಿಶ್ಯ’ ಚಿತ್ರ ಮಾಡಿದ್ದಾಗಿ ಹೇಳಿಕೊಂಡರು ಹೇಮಂತ್‌.

ನಿರ್ದೇಶಕ ಹೇಮಂತ್‌ ಇಲ್ಲಿ ನಿರ್ದೇ ಶನದ ಜೊತೆಗೆ ನಾಯಕರಾಗಿಯೂ ಕಾಣಿಸಿಕೊಂಡಿದ್ದಾರೆ. ನಿರ್ಮಾಣ ಕೂಡ ಅವರದೇ. “ಇದೊಂದು ಥ್ರಿಲ್ಲರ್‌ ಚಿತ್ರ. ಜೊತೆಗೆ ಹಾರರ್‌ ಟಚ್‌ ಕೊಡಲಾಗಿದೆ. ಒಂದು ಕೊಲೆಯಾಗುತ್ತೆ. ಅದನ್ನು ನಾಯಕ ಬೆನ್ನತ್ತುತ್ತಾನೆ. ಆಮೇಲೆ ಏನಾಗುತ್ತೆ ಅನ್ನೋದೇ ಕಥೆ. ಹೇಮಂತ್‌ ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲಾ ಸರಿ, ಈ “ಉದ್ಧಿಶ್ಯ’ ಅಂದರೇನು? ಅಂದುಕೊಂಡಿದ್ದು ಆಗದೇ ಅಡೆತಡೆಯಾದರೆ, ಅದನ್ನು ಮೀರೀ ಸಾಧಿಸುವುದಕ್ಕೇ “ಉದ್ಧಿಶ್ಯ’ ಎಂಬ ಹೆಸರು ಅನ್ನುವ ನಿರ್ದೇಶಕರು, ಇಲ್ಲಿ ಕೊಲೆ ತನಿಖೆ ಸಾಧ್ಯವಿಲ್ಲ ಅಂದಾಗ, ಇನ್ನೆಲ್ಲೋ ದಾರಿಯಲ್ಲಿ ತನಿಖೆ ಕೈಗೊಂಡು, ಅಲ್ಲಿ ಗೆಲ್ಲುವ ರೋಚಕ ಸನ್ನಿವೇಶಗಳು ಹೈಲೆಟ್‌. ಮೃಗಾಲಯವೊಂದರಲ್ಲಿ ಪ್ರಾಣಿ ಕೊಲೆಯಿಂದ ಶುರುವಾಗುವ ಚಿತ್ರ ವಿಭಿನ್ನವಾಗಿ ಸಾಗುತ್ತೆ. ಮೈಸೂರು, ಬಳ್ಳಾರಿ, ಮಡಿಕೇರಿ, ಬೆಂಗಳೂರಲ್ಲಿ ಚಿತ್ರೀಕರಣವಾಗಿದೆ’ ಎಂದು ವಿವರ ಕೊಡುತ್ತಾರೆ ಹೇಮಂತ್‌.

ನಾಯಕಿ ಅರ್ಚನಾ ಗಾಯಕ್‌ವಾಡ್‌ಗೆ ಇದು ಮೊದಲ ಚಿತ್ರ. ಕಳೆದ ಒಂದು ದಶಕದಿಂದಲೂ ಕಿರುತೆರೆಯಲ್ಲಿದ್ದ ಅರ್ಚನಾಗೆ, ಇಲ್ಲಿ ತನಿಖೆ ನಡೆಸುವ ಪಾತ್ರ ಸಿಕ್ಕಿದೆಯಂತೆ. “ಇಷ್ಟು ವರ್ಷಗಳ ಅನುಭವ, ಇಲ್ಲಿ ಕೆಲಸ ಮಾಡಲು ಸಾಧ್ಯವಾಗಿದೆ. ಅಭಿನಯಕ್ಕೆ ಹೆಚ್ಚು ಜಾಗ ಸಿಕ್ಕಿದೆ. ಒಬ್ಬ ನಟಿಯಾಗಿ ಈ ಚಿತ್ರ ಮಾಡಿದ್ದು ಖುಷಿ’ ಅಂದರು ಅರ್ಚನಾ.

ಶೇಡ್ರಾಕ್‌ ಸಾಲೊಮನ್‌ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಒಂದೇ ಹಾಡು ಇಲ್ಲಿದ್ದು, ಚಿತ್ರದ ಶಕ್ತಿ ಹಿನ್ನೆಲೆ ಸಂಗೀತ ಎಂಬುದು ಅವರ ಮಾತು.ಛಾಯಾಗ್ರಾಹಕ ಚೇತನ್‌ ರಘುರಾಮ್‌ ಅವರಿಗೆ ಕನ್ನಡ ಚಿತ್ರ ಮಾಡೋಣ ಅಂತ ನಿರ್ದೇಶಕರು ಹೇಳಿದಾಗ, ಕನ್ನಡ ಚಿತ್ರ ಮಾಡಲ್ಲ ಅಂದರಂತೆ. ಕಾರಣ, ಅವರಿಗೆ ಕಮರ್ಷಿಯಲ್‌ಗಿಂದ ಕಲಾತ್ಮಕ ಚಿತ್ರಗಳತ್ತ ಒಲವು ಇತ್ತಂತೆ. ಅದರಲ್ಲೂ ಅವರು ಪಿಲಿಫೀನ್ಸ್‌ನಲ್ಲೇ ಓದಿ ಬೆಳೆದು, ಸಾಕಷ್ಟು ದೇಶ ಸುತ್ತುತ್ತಿದ್ದರಿಂದ ಹೆಚ್ಚು ಒಲವು ಇರಲಿಲ್ಲವಂತೆ. ಕೊನೆಗೆ ಕಥೆ ಕೇಳಿ ಇಷ್ಟವಾಗಿ, ಮೊದಲ ಸಲ ಕನ್ನಡ ಚಿತ್ರಕ್ಕೆ ಕೆಲಸ ಮಾಡಿದ ಖುಷಿ ಹಂಚಿಕೊಂಡರು ಅವರು.

Advertisement

ಚಿತ್ರದಲ್ಲಿ ಮಾಜಿ ಶಾಸಕ ಅಶ್ವಥ ನಾರಾಯಣ ಒಂದು ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ಅಕ್ಷತಾ, ಇತ್ಛ, ಅನಂತವೇಲು, ವಿಜಯ್‌ ಕೌಂಡಿನ್ಯ, ಭರತ್‌, ಚೇತನ್‌ ಇತತರು ನಟಿಸಿದ್ದಾರೆ. ಈಗಾಗಲೇ ಅನೇಕ ದೇಶಗಳ ಫಿಲ್ಮ್ ಫೆಸ್ಟಿವಲ್‌ಗೆ “ಉದ್ದಿಶ್ಯ’ ಅಧಿಕೃತ ಆಯ್ಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next