ಬೆಂಗಳೂರು: ಪೊಲೀಸರ ವಶದಲ್ಲಿದ್ದ ವಂಚನೆ ಪ್ರಕರಣದ ಆರೋಪಿಯೊಬ್ಬ ಅತಿಯಾಗಿ ಗ್ಯಾಸ್ಟ್ರಿಕ್ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಬ್ಬನ್‌ಪಾರ್ಕ್ ಠಾಣೆಯಲ್ಲಿ ನಡೆದಿದ್ದು, ಸದ್ಯ ಆರೋಪಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಆರ್.ಆರ್.ನಗರ ನಿವಾಸಿ ಅಕ್ಷಯ್ ಕುಮಾರ್ (29) ಆತ್ಮಹತ್ಯೆಗೆ ಯತ್ನಿಸಿದ ಆರೋಪಿ. ಈತನ ವಿರುದ್ಧ 2016ರಲ್ಲಿ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲೇ ವಂಚನೆ ಪ್ರಕರಣ ದಾಖಲಾಗಿತ್ತು. ಮೂರು ವರ್ಷಗಳಿಂದ ತನ್ನ ಮೊಬೈಲ್ ನಂಬರ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದ ಆರೋಪಿ,
ಕೆಲ ದಿನಗಳ ಹಿಂದಷ್ಟೇ ತನ್ನ ಹಳೆ ನಂಬರ್‌ವೊಂದನ್ನು ಆನ್ ಮಾಡಿದ್ದಾನೆ. ಈ ಮಾಹಿತಿ ಆಧರಿಸಿ ಇತ್ತೀಚೆಗೆ ಆರೋಪಿಯನ್ನು ಬಂಧಿಸಿ ಫೆ.28ರಂದು ಕೋರ್ಟ್‌ಗೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಆರು ದಿನ ವಶಕ್ಕೆ ಪಡೆದುಕೊಳ್ಳಲಾಗಿತ್ತು ಎಂದು ಪೊಲೀಸರು ಹೇಳಿದರು.
ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದ ಆರೋಪಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲಾಗಿತ್ತು. ವೈದ್ಯರು ನಿತ್ಯ ಮಾತ್ರೆಗಳನ್ನು ಸೇವಿಸಲು ಸೂಚಿಸಿದ್ದರು. ಹೀಗಾಗಿ ಫೆ.28ರಂದು ಮಧ್ಯಾಹ್ನ ಆರೋಪಿಗೆ ಸಿಬ್ಬಂದಿ ಊಟಕ್ಕೂ ಮೊದಲು ಗ್ಯಾಸ್ಟ್ರಿಕ್ ಮಾತ್ರೆ ಕೊಟ್ಟಿದ್ದಾರೆ. ನಂತರ ಊಟ ಕೊಟ್ಟಿದ್ದಾರೆ. ಊಟ ಮಾಡಿದ ಬಳಿಕ ಕುಡಿಯಲು ನೀರು ಬೇಕೆಂದು ಆರೋಪಿ ಕೇಳಿದ್ದಾನೆ. ಹೀಗಾಗಿ ಸಿಬ್ಬಂದಿ ನೀರು ತರಲು ಹೋಗಿದ್ದಾರೆ.
ಇದೇ ವೇಳೆ ಅಲ್ಲಿದ್ದ ಹತ್ತು ಗ್ಯಾಸ್ಟ್ರಿಕ್ ಮಾತ್ರೆಗಳನ್ನು ಒಮ್ಮೆಲೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಸಿಬ್ಬಂದಿ ಕೂಡಲೇ ಆರೋಪಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಸಂಬಂಧ ಅಕ್ಷಯ್ ಕುಮಾರ್ ವಿರುದ್ಧ ಆತ್ಮಹತ್ಯೆಗೆ ಯತ್ನಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಕಬ್ಬನ್‌ಪಾರ್ಕ್ ಪೊಲೀಸರು ಹೇಳಿದರು.