Advertisement

ಯುದ್ಧ ವಿಮಾನಗಳ ಸಾಮರ್ಥ್ಯ ಪ್ರದರ್ಶನ

11:23 AM Feb 15, 2017 | |

ಬೆಂಗಳೂರು: ಸೂರ್ಯಕಿರಣದ ಮಿಂಚು ಮತ್ತು ಸಾರಂಗದ ಮೋಡಿಗೆ ತಲೆದೂಗಿದ ಜನ, ಬಾನಲ್ಲಿ ದೇಶೀಯ ಲೋಹದ ಹಕ್ಕಿಗಳ ಕಾರುಬಾರು, ವಿಮಾನ ಜಾತ್ರೆಯಲ್ಲಿ “ಮೇಕ್‌ ಇಂಡಿಯಾ ಮಂತ್ರ’, ಡಿಆರ್‌ಡಿಒ ತಯಾರಿಸಿದ ಏರ್‌ಬೋರ್ನ್ ಮುನ್ಸೂಚನೆ ಮತ್ತು ನಿಯಂತ್ರಣಾ ವ್ಯವಸ್ಥೆ “ಅವಾಕ್ಸ್‌’ ಸೇನೆಗೆ ಅರ್ಪಣೆ, ಕಾಡಿದ ರಷ್ಯನ್‌ ನೈಟ್‌ ರೈಡರ್, ಫ್ಲೈಯಿಂಗ್‌ ಬುಲ್ಸ್‌ ಅನುಪಸ್ಥಿತಿ…

Advertisement

ಯಲಹಂಕ ವಾಯುನೆಲೆಯಲ್ಲಿ ಮಂಗಳವಾರ ಆರಂಭಗೊಂಡ 11ನೇ ವೈಮಾನಿಕ ಪ್ರದರ್ಶನದಲ್ಲಿ ಮೊದಲ ದಿನ ಕಂಡುಬಂದ ದೃಶ್ಯಗಳಿವು. ಸಾಮಾನ್ಯವಾಗಿ “ಏರೋ ಇಂಡಿಯಾ ಶೋ’ನಲ್ಲಿ ವಿದೇಶಿ ಯುದ್ಧ ವಿಮಾನಗಳ ಆಟಾಟೋಪ ಇರುತ್ತಿತ್ತು. ಆದರೆ, ಈ ಬಾರಿಯ ಪ್ರದರ್ಶನದಲ್ಲಿ ಮೆರೆದಿದ್ದು ದೇಶೀಯ ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು. ಇವುಗಳ ಜತೆಗೆ ತೇಜಸ್‌ನ ಅಬ್ಬರ, ಸುಖೋಯ್‌ ಸು-30ಎಂಕೆಐ, ಗ್ರಿಪನ್‌ ಫೈಟರ್‌, ಫ್ರಾನ್ಸ್‌ನ ರಫೇಲ್‌ ಮತ್ತು ಅಮೆರಿಕದ ಎಫ್-16 ನಡೆಸಿದ ಕಸರತ್ತುಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು. 

500ನೇ ಪ್ರದರ್ಶನ ನೀಡಿದ “ಸೂರ್ಯಕಿರಣ್‌’ ಈ ಬಾರಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಅಂತೆಯೇ ನಿರೀಕ್ಷೆಯನ್ನು ಆ ತಂಡ ಹುಸಿಗೊಳಿಸಲಿಲ್ಲ. ಬಾನಲ್ಲಿ ನಾಲ್ಕು ದಿಕ್ಕುಗಳಿಂದ ನುಗ್ಗಿ ಬರುತ್ತಿದ್ದ ಸೂರ್ಯಕಿರಣ್‌ ವಿಮಾನಗಳು, ಮತ್ತೆ ದಿಕ್ಕಾಪಾಲಾಗುತ್ತಿದ್ದವು. ಇದಕ್ಕೆ ಸಾಥ್‌ ನೀಡಿದ ಸಾರಂಗ್‌ ತಂಡ ಬಾನಲ್ಲಿ ಚಿತ್ತಾರ ಮೂಡಿಸಿತು. ಈ ಮಧ್ಯೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ತರಬೇತಿ ಬಳಸಲಾದ “ಟೈಗರ್‌ ಮಾತ್‌’ ಕೂಡ ತಾನೂ “ಯಾವುದಕ್ಕೂ ಕಮ್ಮಿ ಇಲ್ಲ’ ಎಂದು ಸಾಮರ್ಥ್ಯ ಪ್ರದರ್ಶಿಸಿತು. 

ಕೊಂಚ ನೀರಸ: ಕಳೆದ ಆವೃತ್ತಿಗಳಿಗೆ ಹೋಲಿಸಿದರೆ ಈ ಸಲದ ಪ್ರದರ್ಶನ ತುಸು ಮಂಕಾದಂತೆ ಕಂಡುಬಂತು. ಪ್ರದರ್ಶನದ ಮಳಿಗೆಗಳ ಸಂಖ್ಯೆ ಕಡಿಮೆ ಇವೆ. ಏರೋ ಇಂಡಿಯಾದ ಪ್ರಮುಖ ಆಕರ್ಷಣೆ ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸುವ ಏರೋಬ್ಯಾಟಿಕ್‌ ತಂಡಗಳು ಕೂಡ ಕಡಿಮೆ. ಅದರಲ್ಲೂ ನೈಟ್‌ ರೈಡರ್ ಮತ್ತು ಫ್ಲೈಯಿಂಗ್‌ ಬುಲ್ಸ್‌, ಸ್ಕ್ಯಾಂಡಿನೇವಿಯನ್‌ ತಂಡದ ಲೋಹದ ಹಕ್ಕಿಗಳ ಮೇಲೆ ನರ್ತನ ಕಾಣಲಿಲ್ಲ. ಇದು ಪ್ರೇಕ್ಷಕರಿಗೆ ಕೊಂಚ ನಿರಾಸೆ ಮೂಡಿಸಿತು. 

ಆದರೆ, ಈ ಕುರಿತು ಸ್ಪಷ್ಟನೆ ನೀಡಿದ ರಕ್ಷಣಾ ಕ್ಷೇತ್ರದ ಅಧಿಕಾರಿಗಳು, 11ನೇ ಆವೃತ್ತಿಯ ಏರ್‌ ಇಂಡಿಯಾ ಪ್ರದರ್ಶನವನ್ನು ಮನರಂಜನೆಗಿಂತ ಹೆಚ್ಚಾಗಿ ರಕ್ಷಣಾ ಕ್ಷೇತ್ರ ಮತ್ತು ನಾಗರಿಕ ವಿಮಾನ ಯಾನ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಆಯೋಜಿಸಲಾಗಿದೆ. ಈ ಕಾರಣಕ್ಕಾಗಿ ಯುದ್ಧವಿಮಾನ ಮತ್ತು ಸ್ವದೇಶಿ ನಿರ್ಮಿತ ವಿಮಾನ, ಹೆಲಿಕಾಪ್ಟರ್‌ಗಳಿಗೆ ಆದ್ಯತೆ ನೀಡಲಾಗಿದೆ ಎಂದಿದ್ದಾರೆ.

Advertisement

ಏರೋ ಇಂಡಿಯಾ ಪ್ರದರ್ಶನದಲ್ಲಿ ಮೆರೆದ ಮೇಕ್‌ ಇನ್‌ ಇಂಡಿಯಾ 
ಬೆಂಗಳೂರು:
ಏರೋ ಇಂಡಿಯಾದಲ್ಲಿ “ಮೇಕ್‌ ಇನ್‌ ಇಂಡಿಯಾ’ ಪರಿಕಲ್ಪನೆಯದ್ದೇ ಕಾರುಬಾರು. ಸ್ವದೇಶಿ ನಿರ್ಮಿತ ತೇಜಸ್‌ ಯುದ್ಧ ವಿಮಾನ ನೋಡಲು ಜನ ಮುಗಿಬೀಳುತ್ತಿದ್ದರು. ಎಚ್‌ಎಎಲ್‌, ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ), ಬಿಇಎಲ್‌ ಸಂಸ್ಥೆಗಳ ಯುದ್ದ ಉಪಕರಣಗಳನ್ನು ಕಂಡು ಅಚ್ಚರಿಗೊಂಡರು. ಪೈಲಟ್‌ಗಳೊಂದಿಗೆ, ಯುದ್ಧ ವಿಮಾನ ಸ್ಥಳದಲ್ಲಿ ಸೆಲ್ಫಿ ತೆಗೆದುಕೊಂಡರು.

ಇನ್ನೊಂದೆಡೆ ರಕ್ಷಣಾ ಇಲಾಖೆ ಅಧಿಕಾರಿಗಳು ಯೋಧರ ಸುರಕ್ಷತೆಗೆ ವೈಮಾನಿಕ ಪ್ರದರ್ಶನದಲ್ಲಿ ಏನೇನು ಸೌಕರ್ಯಗಳಿವೆ ಎಂಬುದನ್ನು ಗಮನಿಸುತ್ತಿದ್ದರು. ಅದಕ್ಕಾಗಿ ಯೋಧರಿಗೆ ಸಮವಸ್ತ್ರ, ಹೆಲ್ಮೆಟ್‌ ತಯಾರಿಕಾ ಮಳಿಗೆಯತ್ತ ವಿಶೇಷ ಆಸಕ್ತಿ ತೋರಿಸುತ್ತಿದ್ದರು. ರಕ್ಷಣಾ ಕ್ಷೇತ್ರದಲ್ಲಿ ಮೇಕ್‌ ಇನ್‌ ಇಂಡಿಯಾ ಸಾಕಾರಗೊಳಿಸಲು ರಕ್ಷಣಾ ಸಾಮಾಗ್ರಿಗಳ ಉತ್ಪಾದನೆಯಲ್ಲಿ ದೇಶ ಸ್ವಾವಲಂಬನೆ ಸಾಧಿಸಬೇಕು ಎನ್ನುವ ಸಂದೇಶ ಪ್ರದರ್ಶನದಲ್ಲಿ ಎದ್ದು ಕಾಣುತ್ತಿತ್ತು.

ಮೇಕ್‌ ಇನ್‌ ಇಂಡಿಯಾ ಯೋಜನೆ ಯಶಸ್ವಿಗೊಳಿಸುವ ಚಿಂತನೆಗಳನ್ನು ಎಲ್ಲೆಡೆ ತೆರೆದಿಡಲಾಗಿದೆ. ಪ್ರತಿ ಮಳಿಗೆಯಲ್ಲೂ ಮೇಕ್‌ ಇನ್‌ ಇಂಡಿಯಾ ಪರಿಕಲ್ಪನೆ ರಾರಾಜಿಸುತ್ತಿದೆ. ಏರೋ ಇಂಡಿಯಾ ಪ್ರದರ್ಶನದಲ್ಲಿ ದೇಶ-ವಿದೇಶಗಳ ನೂರಾರು ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಅವುಗಳಲ್ಲಿ ಯುದ್ಧ ವಿಮಾನಗಳಿಗೆ ಅಗತ್ಯ ಇರುವ ಬಿಡಿಭಾಗಗಳ ಉತ್ಪನ್ನ ಕಂಪನಿಗಳದ್ದೇ ಕಾರುಬಾರು. ದೇಶದ ಸಂಸ್ಥೆಗಳು ಮಾತ್ರವಲ್ಲದೆ, ಬ್ರಿಟನ್‌, ಅಮೆರಿಕ ಸೇರಿದಂತೆ ಇತರೆ ದೇಶದ ವಿಮಾನ ತಯಾರಿಕಾ ಬಿಡಿಭಾಗಗಳ ಉತ್ಪನ್ನ ಸಂಸ್ಥೆಗಳು ರಕ್ಷಣಾ ಇಲಾಖೆ ಅಧಿಕಾರಿಗಳನ್ನು ಸೆಳೆಯಲು ಪ್ರಯತ್ನಿಸುತ್ತಿದ್ದವು. 

ಪ್ರದರ್ಶನದಲ್ಲಿ ಯೋಧರಿಗೆ ಸಮವಸ್ತ್ರ, ಹೆಲ್ಮೆಟ್‌ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಮಾಡುವ ಎಂಕೆಯು ಸಂಸ್ಥೆಯ ಮಳಿಗೆ ವಿಶೇಷ ಎನ್ನಿಸಿತು. ವಾಯು, ಭೂ ಸೇನಾಧಿಕಾರಿಗಳು ಈ ಮಳಿಗೆಯತ್ತ ಹೆಚ್ಚಾಗಿ ಆಕರ್ಷಿತಗೊಂಡರು. ಯೋಧರ ಸುರಕ್ಷಿತ ಜಾಕೆಟ್‌, ಹೆಲ್ಮೆಟ್‌ ಸೇರಿದಂತೆ ಇತರೆ ವಸ್ತುಗಳ ಗುಣಮಟ್ಟ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯು ಜಾಕೆಟ್‌ಗಳ ವಿನ್ಯಾಸವು ಮೆಚ್ಚುಗೆಗೆ ಪಾತ್ರವಾಯಿತು. 

ಸೇನೆ ಸೇರಿದ ಅವಾಕ್ಸ್‌ 
ಬೆಂಗಳೂರು:
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿರುವ ಗಡಿಭಾಗದ ಚಲನ-ವಲನಗಳ ಮೇಲೆ ನಿಗಾ ಇಡುವ ಮತ್ತು ಮುನ್ಸೂಚನೆ ಕೊಡುವ “ಏರ್‌ಬೋರ್ನ್ ಮುನ್ಸೂಚನೆ ಮತ್ತು ನಿಯಂತ್ರಣಾ ವ್ಯವಸ್ಥೆ’ಯನ್ನು ಮಂಗಳವಾರ ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಭಾರತೀಯ ವಾಯುಸೇನೆಗೆ ಹಸ್ತಾಂತರಿಸಿದರು.  ಗಡಿ ಭಾಗದ ಚಲನ-ವಲನಗಳ ಬಗ್ಗೆ ಸೂಕ್ಷ್ಮವಾಗಿ ಗಮನ ಕೇಂದ್ರೀಕರಿಸುವ ಎರಡು ಅವಾಕÕ… ವ್ಯವಸ್ಥೆಗಳನ್ನು ಸಂಸ್ಥೆ ಅಭಿವೃದ್ಧಿಪಡಿಸಿದೆ. ಈ ಪೈಕಿ ಒಂದನ್ನು ಹಸ್ತಾಂತರಿಸಲಾಯಿತು. ಮತ್ತೂಂದು ಬರುವ ಜೂನ್‌ನಲ್ಲಿ ಹಸ್ತಾಂತರಗೊಳ್ಳಲಿದೆ. 

ಸಾರಂಗದ ಲೇಡಿ ಟೀಮ್‌ ಮಾತು 
ಸಾರಂಗಕ್ಕೆ ಡಾಕ್ಟ್ರು ನಾನು 
“ಸಾಫ್ಟ್ವೇರ್‌ ಎಂಜಿನಿಯರಿಂಗ್‌ ಮಾಡಿ, ಒಂದು ತಿಂಗಳು ಐಟಿ ಕಂಪೆನಿಯಲ್ಲಿ ಇಂಟರ್ನ್ ಶಿಪ್‌ ಮಾಡಿದೆ. ಆಗ ಜೀವನಪರ್ಯಂತ ಹೀಗೆ ಕಂಪ್ಯೂಟರ್‌ ಮುಖ ನೋಡಬೇಕು ಎನ್ನುವುದನ್ನು ಕಲ್ಪಿಸಿಕೊಂಡೇ. ಜಿಗುಪ್ಸೆ ಆಯಿತು. ಒಂದು ರೀತಿಯಲ್ಲಿ ಈ ಜಿಗುಪ್ಸೆ ಹಾಗೂ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ “ಉಡಾನ್‌’ ಧಾರಾವಾಹಿ ನನಗೆ ಪ್ರೇರಣೆಯಾಯಿತು,” ಸಾರಂಗ್‌ ಹೆಲಿಕಾಪ್ಟರ್‌ ತಂಡದ ತಾಂತ್ರಿಕ ಅಂಶಗಳನ್ನು ನೋಡಿಕೊಳ್ಳುವ ಸಂದೀಪಾ ಸಿಂಗ್‌ ಅವರ ಮಾತುಗಳಿವು. 

ಸಾರಂಗ್‌ ತಂಡದಲ್ಲಿ ಸುಮಾರು 55 ಜನ ಇದ್ದಾರೆ. ಅದರಲ್ಲಿ ಮೂವರು ಮಹಿಳಾ ಸಿಬ್ಬಂದಿ. ಆ ಪೈಕಿ ಹರಿಯಾಣಾ ಮೂಲದ ಸಂದೀಪಾ ಅವರು “ಸಾರಂಗ್‌’ದ “ಡಾಕ್ಟರು’. ಅಂದರೆ ಈ ಹೆಲಿಕಾಪ್ಟರ್‌ನಲ್ಲಿ ಕಾಣಿಸಿಕೊಳ್ಳುವ ತಾಂತ್ರಿಕ ದೋಷಗಳು, ಮಷಿನ್‌ನ ಸ್ಪಂದನೆ ಸೇರಿದಂತೆ ಎಲ್ಲವನ್ನೂ ಸಂದೀಪಾ ನಿರ್ವಹಿಸುತ್ತಾರೆ. ಪ್ರದರ್ಶನದ ನಂತರ ಅವರನ್ನು ಮಾತಿಗೆಳೆದಾಗ ಈ ಅಭಿಪ್ರಾಯ ವ್ಯಕ್ತಪಡಿಸಿದರು. 
 
ನಾನು ಸಾರಂಗದ ಜಾಕಿ
ಫ್ಲೈಟ್‌ ಲೆಫ್ಟಿನೆಂಟ್‌ ತಿಂಜು ಥಾಮಸ್‌ ಮಾತನಾಡಿ, ರೇಡಿಯೊ ಜಾಕಿಗಳಂತೆ “ಸಾರಂಗ್‌’ದ ಜಾಕಿ ಇದ್ದಂತೆ ನಾನು. ನನ್ನ ಮೇಲಿನ ಅಧಿಕಾರಿಗಳು ನೀಡುವ ಸೂಚನೆಗಳಂತೆ ನಾನು “ಸಾರಂಗ್‌’ ನೀಡುವ ಪ್ರದರ್ಶನಕ್ಕೆ ಧ್ವನಿಯಾಗಿರುತ್ತೇನೆ. ಆ ಮೂಲಕ ಜನರಿಗೆ ಮಾಹಿತಿ ನೀಡುತ್ತೇನೆ. ಭಾರತೀಯ ವಾಯುಸೇನೆಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ. ಮುಂದೊಂದು ದಿನ ಮಹಿಳೆಯರೇ ಹೆಚ್ಚಾಗಬಹುದು’ ಎಂದರು. 

ವರ್ಷದಲ್ಲಿ 50 ಪ್ರದರ್ಶನ ನೀಡಿದೆ 
ಸ್ಕ್ವಾಡರ್‌ ಲೀಡರ್‌ ಸ್ನೇಹಾ ಕುಲಕರ್ಣಿ ಮಾತನಾಡಿ, “ವರ್ಷದ ಹಿಂದಷ್ಟೇ ನಾನು ಈ ತಂಡಕ್ಕೆ ಸೇರ್ಪಡೆಗೊಂಡಿದ್ದೇನೆ. ಇದುವರೆಗೂ 50ಕ್ಕೂ ಹೆಚ್ಚು ಪ್ರದರ್ಶನ ಮತ್ತು ತಾಲೀಮುಗಳಲ್ಲಿ ಭಾಗವಹಿಸಿದ್ದೇನೆ. ಬೇರೆ ಬೇರೆ ದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸುವುದೇ ನನಗೆ ಹೆಮ್ಮೆ ಎನಿಸುತ್ತದೆ. ಪ್ರದರ್ಶನದ ವೇಳೆ ನಮ್ಮನ್ನು ನಾನು ಪರೀಕ್ಷೆಗೆ ಒಡ್ಡಿಕೊಳ್ಳುವುದು ಮಾತ್ರವಲ್ಲ; ಹೆಲಿಕಾಪ್ಟರ್‌ ಅನ್ನು ನಾವು ಪರೀಕ್ಷೆಗೆ ಒಡ್ಡಿಕೊಳ್ಳುವಂತೆ ಮಾಡುತ್ತೇವೆ. ಹೀಗಾಗಿ ಉತ್ತಮ ಪ್ರದರ್ಶನ ಸಾಧ್ಯವಾಗುತ್ತದೆ’ ಎಂದು ಹೇಳಿದರು. 

ಪ್ರದರ್ಶನ ನೀಡೋದು ಸುಲಭವಲ್ಲ 
ಸಾರಂಗ್‌ನ ಪೈಲಟ್‌ ಪೃಥ್ವಿ ಪೊನ್ನಪ್ಪ ಮಾತನಾಡಿ, “ಕೇವಲ 5 ಮೀಟರ್‌ ಅಂತರದಲ್ಲಿ ಎರಡು ಹೆಲಿಕಾಪ್ಟರ್‌ಗಳ ಹಾರಿಸುವುದು ಸುಲಭದ ಮಾತಲ್ಲ. ಆದರೆ, ಸಾರಂಗ್‌ ತಂಡ ಇದನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ. ಸಾಧ್ಯವಾದಷ್ಟು ಉತ್ತಮ ಪ್ರದರ್ಶನ ನೀಡುವುದು ನಮ್ಮ ಗುರಿಯಾಗಿರುತ್ತದೆ. 2013ರಲ್ಲಿ ನಾನು ಬದಲಿ ಪೈಲಟ್‌ ಆಗಿದ್ದೆ (ಸ್ಟಾಂಡ್‌ಬೈ). 2015ರಲ್ಲಿ ಪೈಲಟ್‌ ಆಗಿದ್ದೆ. ಈಗ ಮತ್ತೂಮ್ಮೆ ಸಾರಂಗ್‌ದ ಪೈಲಟ್‌ ಆಗಿರುವುದು ಖುಷಿ ಎನಿಸುತ್ತದೆ. ಈಗಾಗಲೇ ಬಹೆÅàನ್‌ ಮತ್ತಿತರ ಕಡೆಗಳಲ್ಲಿ ಪ್ರದರ್ಶನ ನೀಡಿದ್ದೇವೆ. ಮುಂದೆ ನಮ್ಮ ಪ್ರಯಾಣ ಮಲೇಷಿಯಾಕ್ಕೆ’ ಎಂದರು. 

ಹೂಡಿಕೆಗೆ ತಕ್ಕ ಪ್ರೋತ್ಸಾಹ 
“ವೈಮಾನಿಕ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಕ್ಷಿಪ್ರಗತಿಯಲ್ಲಿ ಮುನ್ನಡೆ ಸಾಧಿಸುತ್ತಿದೆ,” ಎಂದು ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಡಾ.ಜಿ.ಸತೀಶ್‌ ರೆಡ್ಡಿ ತಿಳಿಸಿದ್ದಾರೆ.  ಜಾಗತಿಕ ಕಂಪನಿಗಳ ಸಿಇಒಗಳ ಸಂವಾದದಲ್ಲಿ ಮಾತನಾಡಿದ ಅವರು, “ನೂತನ ತಂತ್ರಜ್ಞಾನ ಅಭಿವೃದ್ಧಿಗೆ ಕೇಂದ್ರ ಒತ್ತು ನೀಡುತ್ತಿದೆ. ವೈಮಾನಿಕ ಹಾಗೂ ರಕ್ಷಣಾ ಕ್ಷೇತ್ರಕ್ಕೆ ಅಗತ್ಯವಿರುವ ಉಪಕರಣಗಳನ್ನು ಪೂರೈಕೆ ಮಾಡುವ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳವ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡುತ್ತಿದೆ,” ಎಂದರು. ಆಂಧ್ರಪ್ರದೇಶದ ನಿವೃತ್ತಿ ಅಧಿಕಾರಿ ಮತ್ತು ಉದ್ಯಮಿ ಜೆ.ಕೃಷ್ಣ ಕಿಶೋರ್‌ ಮಾತನಾಡಿ, ಉದ್ಯಮಿಗಳಿಗೆ ಬಂಡವಾಳ ಹೂಡಿಕೆಗೆ ಆಂಧ್ರಪ್ರದೇಶ ಸರ್ಕಾರ ಸುವರ್ಣ ಅವಕಾಶ ಒದಗಿಸಿದೆ. ಕಾನೂನಿನ ತೊಡಕಿಲ್ಲದೆ ಉದ್ಯಮ ಆರಂಭಕ್ಕೆ ಅನುಮತಿ 
ನೀಡಲಾಗುತ್ತಿದೆ ಎಂದರು.  

ಅಮೆರಿಕ ದೊಡ್ಡ ಪಾಲುದಾರ 
ರಕ್ಷಣಾ ಕ್ಷೇತ್ರದಲ್ಲಿ ಅಮೆರಿಕಾವು ಭಾರತದ ಪ್ರಮುಖ ಪಾಲುದಾರ ದೇಶ ಎಂದು ಅಮೆರಿಕಾ ಕಂಪನಿಗಳ ಪೆವಿಲಿಯನ್‌ನ ಹಂಗಾಮಿ ರಾಯಭಾರಿ ಮೇರೀಕೆ ಕಾರ್ಲ್ಸನ್‌ ಹೇಳಿದ್ದಾರೆ. “ದೇಶದ ನೂತನ ರಾಷ್ಟ್ರೀಯ ನೀತಿಯಿಂದಾಗಿ ಉಭಯ ರಾಷ್ಟ್ರಗಳ ಮಧ್ಯೆ ರಕ್ಷಣಾ ವಲಯದಲ್ಲಿ ಗಮನಾರ್ಹ ಬೆಳವಣಿಗೆಗಳು ನಡೆಯಲಿವೆ. ಇದು ಎರಡೂ ದೇಶಗಳ ಬಾಂಧವ್ಯ ವೃದ್ಧಿಗೆ ನೆರವಾಗಲಿದೆ. ಭಾರತದೊಂದಿಗೆ ಪಾಲುದಾರ ರಾಷ್ಟ್ರವಾಗಿ ಕೆಲಸ ಮಾಡುವುದು ಅಮೆರಿಕಾಕ್ಕೆ ಹೆಮ್ಮೆಯ ಸಂಗತಿ. ಅದರಲ್ಲೂ ರಕ್ಷಣಾ ಕ್ಷೇತ್ರದಲ್ಲಿ ಉಭಯ ರಾಷ್ಟ್ರಗಳು ಉತ್ತಮ ಬಾಂಧವ್ಯ ಹೊಂದಿದ್ದು, ಮುಂದಿನ ದಿನಗಳಲ್ಲಿ ಅಮೆರಿಕಾವು ಭಾರತಕ್ಕೆ ಉತ್ತಮ ಗುಣಮಟ್ಟದ ರಕ್ಷಣಾ ಸಾಮಗ್ರಿಗಳನ್ನು ಒದಗಿಸಲಿದೆ. ಜತೆಗೆ ತಾಂತ್ರಿಕತೆಯನ್ನೂ ನೀಡಲಿದೆ,” ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next