Advertisement

ಫೆ.5ಕ್ಕೆ ಜ್ಞಾನಬುತ್ತಿ ಸತ್ಸಂಗ ಕೇಂದ್ರದ 500ನೇ ಕಾರ್ಯಕ್ರಮ

06:44 AM Jan 25, 2019 | Team Udayavani |

ತುಮಕೂರು: ಕಳೆದ 10 ವರ್ಷಗಳಿಂದ ನಗರದಲ್ಲಿ ನಿರಂತರವಾಗಿ ಸಾಹಿತ್ಯ, ಸಂಗೀತ, ನಾಡು-ನುಡಿ, ಭಾರತೀಯ ಸಂಸ್ಕೃತಿಯ ವಿಚಾರವಾಗಿ ಉಪನ್ಯಾಸ ಏರ್ಪಡಿಸುತ್ತಾ ಬಂದಿರುವ ಜ್ಞಾನಬುತ್ತಿ ಸತ್ಸಂಗ ಕೇಂದ್ರದ 500ನೇ ಕಾರ್ಯಕ್ರಮ ಫೆ.5 ರಂದು ಸೋಮೇಶ್ವರಪುರಂನ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಆಯೋಜಿಸಲಾಗಿದೆ ಎಂದು ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಪಿ.ಶಾಂತಿಲಾಲ್‌ ತಿಳಿಸಿದರು.

Advertisement

ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ಮಂಗಳವಾರ ವಿದ್ಯಾವಾಹಿನಿ ಕಾಲೇಜಿನಲ್ಲಿ, ಗುರುವಾರ ಸಾಯಿಬಾಬಾ ದೇವಾಲಯದಲ್ಲಿ ಮತ್ತು ಭಾನುವಾರ ರಾಮದೇವರ ಬೆಟ್ಟದಲ್ಲಿ ನಿರಂತರವಾಗಿ ಕಾರ್ಯಕ್ರಮ ಏರ್ಪಡಿಸುತ್ತಿದ್ದು, ಇದು ಗಿನ್ನಿಸ್‌ ದಾಖಲೆಗೆ ಸೇರಿದೆ ಎಂದರು.

‘ನವರಸಗಳು’: ಇದರ 500ನೇ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸಲು ತೀರ್ಮಾನಿಸಿದ್ದು, ಫೆ.5 ರಂದು ವಾಸವಿ ದೇವಾಲಯದಲ್ಲಿ ಕುಮಾರವ್ಯಾಸ ಭಾರತ ಕಾವ್ಯದಲ್ಲಿರುವ ‘ನವರಸಗಳು’ ಎಂಬ ವಿಷಯ ಕುರಿತು ಗಮಕ ಕಲೆ ಪ್ರದರ್ಶಿಸುವ ಕಾರ್ಯಕ್ರಮವಿದೆ. ಕೆಲ ಸಮಾನ ಮನಸ್ಕ ಗೆಳೆಯರೊಂದಿಗೆ ಕಟ್ಟಿದ ಈ ಸಂಸ್ಥೆ ಈಗ ಹತ್ತು ವರ್ಷ ಪೂರೈಸುತ್ತಾ ಬಂದಿರುವುದು ಸಂತೋಷದ ವಿಚಾರ ಎಂದರು.

ಸಾಹಿತಿಗಳಿಗೆ ಸ್ಫೂರ್ತಿ: ಜ್ಞಾನಬುತ್ತಿ ಸತ್ಸಂಗದ 500ನೇ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ವಕ್ತಾರ ಮುರಳೀಧರ ಹಾಲಪ್ಪ, ಜ್ಞಾನಬುತ್ತಿ ಸತ್ಸಂಗದವರು ಸಾಹಿತ್ಯ ಪರಿಚಯ ಕಾರ್ಯಕ್ರಮವನ್ನು ಆಂದೋಲನದ ರೀತಿ ನಡೆಸಿಕೊಂಡು ಬರುತ್ತಿದ್ದಾರೆ. ಇದು ಮತ್ತಷ್ಟು ಬೆಳೆದು ಹಿರಿಯ, ಕಿರಿಯ ಸಾಹಿತಿಗಳಿಗೆ ಸ್ಫೂರ್ತಿಯಾಗಬೇಕೆಂಬ ಹಿನ್ನೆಲೆಯಲ್ಲಿ ಫೆ.5ಕ್ಕೆ ಕಾರ್ಯಕ್ರಮ ಆಯೋಜಿಸಿದ್ದಾರೆಂದರು.

ನಿವೇಶನಕ್ಕೆ ಶ್ರಮ: ಸಾಹಿತ್ಯ ಸೇವೆಯಲ್ಲಿ ತೊಡಗಿರುವ ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಕಚೇರಿಗೆ ನಿವೇಶನದ ಅಗತ್ಯವಿದ್ದು, ಇದನ್ನು ಒದಗಿಸಿಕೊಡಲು ಶ್ರಮಿಸುವುದಾಗಿ ತಿಳಿಸಿದ ಅವರು, ಸ‌ರ್ಕಾರಿ ಸಂಸ್ಥೆಗಳ ಕಾರ್ಯವೈಖರಿ ನಾಚಿಸುವಂತೆ ಶಿಸ್ತು ಮತ್ತು ಸಮಯ ಪಾಲನೆ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.

Advertisement

ಜ್ಞಾನಬುತ್ತಿ ಸತ್ಸಂಗಕೇಂದ್ರದ ಅಧ್ಯಕ್ಷ ವಿದ್ವಾನ್‌ ಎಂ.ಜಿ.ಸಿದ್ದರಾಮಯ್ಯ ಮಾತನಾಡಿ, ಜ್ಞಾನ ಬುತ್ತಿ ಸತ್ಸಂಗ ಕೇಂದ್ರ ಹಿರಿಯ, ಕಿರಿಯರ ಸಂಗಮವಾಗಿದೆ. ಎಲ್ಲಾ ವಯಸ್ಸಿನ ಸಾಹಿತ್ಯಾಸಕ್ತರು ಇಲ್ಲಿ ಸೇರಿ ಉಪನ್ಯಾಸ ಆಲಿಸುತ್ತಿದ್ದು, ಜಿಲ್ಲಾಡಳಿತ ಕಳೆದ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ತಿಳಿಸಿದರು. ಈ ವೇಳೆ ಕಲಾಶ್ರೀ ಡಾ.ಲಕ್ಷ್ಮಣದಾಸ್‌, ಸಾಹಿತಿ ಎನ್‌.ನಾಗಪ್ಪ, ಮುಸ್ತಾಕ್‌ ಅಹಮದ್‌, ಮುರಳಿ ಕೃಷ್ಣಪ್ಪ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next