ಹುಬ್ಬಳ್ಳಿ: ಇಲ್ಲಿನ ಮಂಟೂರು ರಸ್ತೆಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಾಣಗೊಂಡಿರುವ ಸುಮಾರು 430 ಮನೆಗಳು ಅತ್ಯಂತ ಕಳಪೆಯಾಗಿದ್ದು, ಈ ಬಗ್ಗೆ ರಾಜ್ಯಮಟ್ಟದ ಹಿರಿಯ ಅಧಿಕಾರಿಗಳಿಂದ ತನಿಖೆ ನಡೆಸಿ ತಪ್ಪಿಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ ಒತ್ತಾಯಿಸಿದರು.
ಸೋಮವಾರ ಮನೆಗಳನ್ನು ವೀಕ್ಷಣೆ ಮಾಡಿದ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಆರು ವರ್ಷಗಳ ಹಿಂದೆ ಸುಮಾರು 13.45 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ 430 ಮನೆಗಳು ಅತ್ಯಂತ ಕಳಪೆಯಾಗಿವೆ. ಜನ ವಾಸಿಸಲು ಯೋಗ್ಯವಿಲ್ಲವಾಗಿವೆ.
ಮನೆ ನಿರ್ಮಾಣ ಜವಾಬ್ದಾರಿಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಹಾಗೂ ಫಲಾನುಭವಿಗಳ ಆಯ್ಕೆಯಲ್ಲೂ ಅನ್ಯಾಯದ ಆರೋಪ ಕೇಳಿ ಬಂದಿದ್ದು ಈ ಬಗ್ಗೆಯೂ ತನಿಖೆ ನಡೆಸಬೇಕು ಎಂದರು.ಸರಕಾರ ಒಂದು ಕಡೆ ಆಶ್ರಯ ಯೋಜನೆಯ ಸಾಧನೆ ಬಗ್ಗೆ ಅಂಕಿ-ಅಂಶ ನೀಡುತ್ತಿದೆ.
ಇನ್ನೊಂದು ಕಡೆ ವಾಸಕ್ಕೆ ಯೋಗ್ಯವಿಲ್ಲದ ಇಂತಹ ಮನೆಗಳು ಇದ್ದರೆಷ್ಟು ಬಿಟ್ಟರೆಷ್ಟು ಇದರಿಂದ ಯಾವುದೇ ಫಲಾನುಭವಿಗೂ ಪ್ರಯೋಜನವಾಗದು. ಈ ಕಾರಣದಿಂದಲೇ ಸದನದಲ್ಲಿ ನಾನು ವಸತಿಗಳ ಬಗ್ಗೆ ವಾಸ್ತವಾಂಶ ತಿಳಿಯಲು ಬನ್ನಿ ಎಂದು ವಸತಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಹೇಳಿದರು ಅವರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು.
ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಸ್ಲಂ ಬೋರ್ಡ್‌ನಿಂದ ಅತ್ಯಂತ ಕಳಪೆ ಮನೆಗಳ ನಿರ್ಮಾಣ ಕುರಿತಾಗಿ ಸರಕಾರ ಸ್ವಯಂ ಪ್ರೇರಿತ ತನಿಖೆಗೆ ಮುಂದಾಗಬೇಕು. ಮೊದಲು ತಪ್ಪಿಸ್ಥರ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಇದಕ್ಕೂ ಮೊದಲು ಮನೆಗಳ ಹಂಚಿಕೆ ಇನ್ನಿತರ ವಿಷಯವಾಗಿ ಪಾಲಿಕೆ ಸದಸ್ಯೆ ಸುಧಾ ಮಣಿಕುಂಟ್ಲ ಹಾಗೂ ರಂಗನಾಯಕ ತಪೇಲಾ ಅವರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿದರು. ನೆರೆದಿದ್ದ ಸಾರ್ವಜನಿಕರು ಗುಣಮಟ್ಟದ ಮನೆಗಳನ್ನು ನಿರ್ಮಿಸಬೇಕು.
ಈಗಾಗಲೇ ನೀಡಿದ ಫಲಾನುಭವಿಗಳ ವಾಸಕ್ಕೆ ಅನುಕೂಲ ಮಾಡಿಕೊಡಬೇಕೆಂದು ಕೆಲವರು ಒತ್ತಾಯಿಸಿದರೆ, ಅರ್ಹತೆ ಇದ್ದರೂ ತಮಗೆ ಮನೆ ಸಿಕ್ಕಿಲ್ಲವೆಂದು ಇನ್ನು ಕೆಲವರು ಆರೋಪಿಸಿದರು.