Advertisement

ನಗರದಲ್ಲಿ 28ರಿಂದ ರಾಷ್ಟ್ರೀಯ ಸಿರಿಧಾನ್ಯ ಮೇಳ

12:16 PM Apr 25, 2017 | |

ಬೆಂಗಳೂರು: ಸಾವಯವ ಮತ್ತು ಸಿರಿಧಾನ್ಯ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿಕೊಡುವ ನಿಟ್ಟಿನಲ್ಲಿ ಏಪ್ರಿಲ್‌ 28 ರಿಂದ 30 ವರೆಗೆ ಮೂರು ದಿನ ರಾಷ್ಟ್ರೀಯ ವಾಣಿಜ್ಯ ಮೇಳ ಏರ್ಪಡಿಸಲಾಗಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೆಗೌಡ ಹೇಳಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಬೆಳೆದ ಸಾವಯವ ಮತ್ತು ಸಿರಿಧಾನ್ಯಗಳಿಗೆ ಹೆಚ್ಚಿನ ಮಾರುಕಟ್ಟೆ ಒದಗಿಸಿ ಕೊಡುವುದು ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಬೆಂಗಳೂರು ಅರಮನೆ ಮೈದಾನದ ತ್ರಿಪುರವಾಹಿನಿಯಲ್ಲಿ ಈ ಮೇಳ ಏರ್ಪಡಿಸಲಾಗಿದೆ ಎಂದರು.

ರಾಷ್ಟ್ರೀಯ ಮೇಳದಲ್ಲಿ ಸುಮಾರು 231 ಮಳಿಗೆಗಳನ್ನು ತೆರೆಯಲಾಗುವುದು. ಬಿಗ್‌ ಬಾಸ್ಕೆಟ್‌, ಬ್ರಿಟಾನಿಯಾ, ಎಂಟಿಆರ್‌, ಫ‌ುಡ್‌ ಬಜಾರ್‌, ರಿಲಾಯನ್ಸ್‌ ಸೇರಿದಂತೆ ಅಂತಾರಾಷ್ಟ್ರೀಯ ಸಂಸ್ಥೆಗಳು  ಮೇಳದಲ್ಲಿ ಪಾಲ್ಗೊಳ್ಳುವುದರಿಂದ  ರೈತರು ನೇರವಾಗಿ ಕಂಪನಿಗಳ ಜೊತೆಗೆ ಮಾತುಕತೆ ನಡೆಸಿ, ವ್ಯವಹಾರ ಮಾಡಬಹುದು. ಇದರಿಂದ ಮಧ್ಯವರ್ತಿಗಳ ಹಾವಳಿ ತಡೆಗಟ್ಟಬಹುದು ಮತ್ತು ರೈತರಿಗೂ ಹೆಚ್ಚಿನ ಲಾಭವಾಗಲಿದೆ. ಗ್ರಾಹಕರಿಗೂ ಕಡಿಮೆ ಬೆಲೆಗೆ ಉತ್ಪನ್ನಗಳು ದೊರೆಯಲಿವೆ ಎಂದು ಹೇಳಿದರು.

ಸಾವಯವ ಉತ್ಪನ್ನ ಉತ್ಪಾದನೆಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದೆ. ದೇಶದಲ್ಲಿ 1.82 ಲಕ್ಷ ಟನ್‌ ಸಾವಯವ ಉತ್ಪನ್ನ ಉತ್ಪಾದನೆ ಮಾಡಲಾಗಿದ್ದು, 4500 ಕೋಟಿ ರೂಪಾಯಿ ವ್ಯವಹಾರ ನಡೆಸಲಾಗಿದೆ ಎಂದರು.

ಸಾವಯವ ರೈತರ ಫೆಡರೇಷನ್‌: ರಾಜ್ಯದಲ್ಲಿ ಸಾವಯವ ಕೃಷಿ ಉತ್ಪಾದನೆ ಹೆಚ್ಚಳಕ್ಕೆ ಸರ್ಕಾರ ಪ್ರತಿ ಹೋಬಳಿಯ ಒಂದು ಹಳ್ಳಿಯಲ್ಲಿನ 100 ಎಕರೆ ಪ್ರದೇಶದಲ್ಲಿ ಆಯ್ದ ಎನ್‌ಜಿಒಗಳು ಕೃಷಿಯಲ್ಲಿ ತೊಡಗಬೇಕು. ಪ್ರಸ್ತುತ  ಈ ಯೋಜನೆಯಲ್ಲಿ 566 ಹೋಬಳಿಗಳಲ್ಲಿ 63,677 ಹೆಕ್ಟೇರ್‌ ಪ್ರದೇಶದಲ್ಲಿ 53,829 ರೈತರು ಸಾವಯವ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

Advertisement

ಕೃಷಿ ಇಲಾಖೆ ಮೂಲಕ ಸಾವಯವ ಬೆಳೆ ಬೆಳೆಯುವ ರೈತರ ಫೆಡರೇಶನ್‌ ಸ್ಥಾಪಿಸಲಾಗಿದ್ದು, ಈ ಮೂಲಕ ರೈತರ ಆದಾಯ ಸಂಬಂಧಿ ಸಮಸ್ಯೆಗಳು ಮತ್ತು ಸಾವಯವ ಉತ್ಪನ್ನ ಬೆಳೆಯಲು ಬೇಕಾಗುವ ಬೇಡಿಕೆಗಳನ್ನು ಪರಿಹರಿಸಲಾಗುತ್ತದೆ. ರಾಜ್ಯದಲ್ಲಿ 14 ಫೆಡರೇಶನ್‌ ರಚಿಸಲಾಗಿದೆ ಎಂದು ಹೇಳಿದರು. ಯುವ ಸಮುದಾಯಕ್ಕೆ ಸಾವಯವ ಮತ್ತು ಸಿರಿ ಧಾನ್ಯಗಳ ಮಹತ್ವ ತಿಳಿಸಲು ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಸಿರಿಧಾನ್ಯಗಳ ಫಿಜ್ಜಾ ಬರ್ಗರ್‌
ಸಿರಿ ಧಾನ್ಯಗಳಿಂದ ರೊಟ್ಟಿ, ಮುದ್ದೆ, ಪಾಯಸ, ಪೊಂಗಲ್‌, ಬಾತ್‌ ಅಷ್ಟೇ ಅಲ್ಲದೇ ಫಿಜ್ಜಾ ಬರ್ಗರ್‌ ಸೇರಿದಂತೆ ನಗರ ವಾಸಿಗಳು ಹೆಚ್ಚು ಇಷ್ಟ ಪಡುವ ಆಹಾರ ಪದಾರ್ಥಗಳನ್ನು ಸಿದ್ದಪಡಿಸಬಹುದು. ರಾಷ್ಟ್ರೀಯ ಮೇಳದಲ್ಲಿ ಸಿರಿ ಧಾನ್ಯಗಳಿಂದ ಸಿದ್ಧವಾದ 150 ಕ್ಕೂ ಹೆಚ್ಚು ಬಗೆಯ ಆಹಾರ ಪದಾರ್ಥಗಳ ಮೆನು ಕಾರ್ಡ್‌ ಕೂಡ ಸಿದ್ದ ಪಡಿಸಿ ಮಾರಾಟ ಮಾಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.  

ಮಿಲ್ಲೆಟ್‌ ಮಗ, ಮಿಲ್ಲೆಟ್‌ ಮಗಳು
ಸಿರಿ ಧಾನ್ಯ ಉತ್ಪನ್ನಗಳನ್ನು ಮಕ್ಕಳ ಮೂಲಕ ಹೆಚ್ಚು ಪ್ರಚಾರ ಮಾಡುವ ಆಲೋಚನೆ ಹೊಂದಿರುವ ಕೃಷಿ ಇಲಾಖೆ, ಈ ಕಾರ್ಯಕ್ರಮದ ಪ್ರಚಾರಕ್ಕೆ ಬ್ಯಾನರ್‌ಗಳನ್ನು ಸಿದ್ದಪಡಿಸಿದ್ದು, ಅವುಗಳಿಗೆ ಇಂಗ್ಲಿಷ್‌ನಲ್ಲಿ ಮಿಲ್ಲೆಟ್‌ ಮಗ, ಮಿಲ್ಲೆಟ್‌ ಮಗಳು ಎಂದು ಹೆಸರಿಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next