Advertisement

16ನೇ ಚಿತ್ರಸಂತೆ ಗಾಂಧೀಜಿಗೆ ಅರ್ಪಣೆ

08:15 AM Jan 03, 2019 | Team Udayavani |

ಬೆಂಗಳೂರು: “ಮನೆಗೊಂದು ಕಲಾಕೃತಿ’, ಶೀರ್ಷಿಕೆಯಡಿ ಜ.6 ರಂದು ನಗರದಲ್ಲಿ 16ನೇ ಚಿತ್ರ ಸಂತೆ ನಡೆಯಲಿದ್ದು ರಾಷ್ಟ್ರಪಿತ ಮಹಾತ್ಮಗಾಂಧಿ ಅವರ 150ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಈ ವರ್ಷದ ಚಿತ್ರ ಸಂತೆಯನ್ನು ಗಾಂಧೀಜಿ ಅವರಿಗೆ ಅರ್ಪಿಸಲು ಕರ್ನಾಟಕ ಚಿತ್ರಕಲಾ ಪರಿಷತ್ತು ನಿರ್ಧರಿಸಿದೆ.

Advertisement

ಚಿತ್ರಕಲಾ ಪರಿಷತ್ತಿನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ತಿನ ಅಧ್ಯಕ್ಷ ಬಿ.ಎಲ್‌.ಶಂಕರ್‌, ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ಚಿತ್ರಸಂತೆ ನಡೆಯಲಿದ್ದು, ಬೆಳಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಚಿವ ಡಿ.ಕೆ.ಶಿವಕುಮಾರ್‌, ಮೇಯರ್‌ ಗಂಗಾಬಿಕೆ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಚಿತ್ರಸಂತೆಗೆ ನಾಲ್ಕು ಲಕ್ಷ ಜನ ಸೇರುವ ನಿರೀಕ್ಷೆಯಿದ್ದು, ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ಹಿನ್ನೆಲೆಯಲ್ಲಿ ಡಿಜಿಟಲ್‌ ಹಣಪಾವತಿ ವ್ಯವಸ್ಥೆ ಮಾಡಲಾಗಿದೆ. ಆಹಾರ ಪ್ರಿಯರಿಗಾಗಿ ಪ್ರತ್ಯೇಕವಾಗಿ ಫುಡ್‌ ಕೋರ್ಟ್‌ನ್ನು ನಿರ್ಮಿಸಲಾಗಿದ್ದು ವಿವಿಧ ಶೈಲಿಯ ಖಾದ್ಯಗಳನ್ನು ಸವಿಯಬಹುದಾಗಿದೆ ಎಂದು ಹೇಳಿದರು.

ಗಾಂಧಿ ಕುಟೀರ : ಚಿತ್ರಸಂತೆಗೆ 30ಲಕ್ಷ ರೂ. ಖರ್ಚಾಗಲಿದ್ದು ಸರ್ಕಾರದಿಂದ 20ಲಕ್ಷ ರೂ. ಸಹಾಯ ಧನ ದೊರೆಯುವ ನಿರೀಕ್ಷೆಯಿದೆ. ಈ ಬಾರಿಯ ಚಿತ್ರ ಸಂತೆ ಗಾಂಧೀಜಿ ಕುರಿತ ಸಾರವನ್ನು ನೆನಪಿಸಲಿದೆ. ಗಾಂಧೀಜಿ ಅವರು ಬೆಂಗಳೂರಿಗೆ ಬಂದಾಗಲೆಲ್ಲ ಕುಮಾರ ಕೃಪಾದಲ್ಲೇ ವಾಸ್ತವ್ಯ ಹೂಡುತ್ತಿದ್ದರು.

ಆಗ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿನ ಗಾಂಧಿ ಕುಟೀರದ ಕಲ್ಲು ಬಂಡೆ ಮೇಲೆ ವಿರಮಿಸಿದ್ದರು ಎಂಬುವುದು ಐತಿಹಾಸಿಕ ದಾಖಲೆಯಾಗಿ ಉಳಿದಿದೆ. ಹೀಗಾಗಿ, ಚಿತ್ರಕಲಾ ಪರಿಷತ್ತು ಬಿದಿರಿನಿಂದ ಗಾಂಧಿ ಕುಟೀರವನ್ನು ವಿನ್ಯಾಸಪಡಿಸಿದ್ದು ದೃಶ್ಯ ಕಲೆಯ ಮೂಲಕ ಗಾಂಧೀಜಿ ಅವರಿಗೆ ಗೌರವ ಅರ್ಪಿಸಲಾಗುವುದು ಎಂದು ಶಂಕರ್‌ ತಿಳಿಸಿದರು.

Advertisement

ಕಲಾವಿದರ ಸಂಗಮ: ಈ ಬಾರಿ ಚಿತ್ರಸಂತೆ ಹಲವು ವಿಶೇಷಣಗಳಿಂದ ಕೂಡಿದ್ದು 100 ರೂ.ನಿಂದ 1ಲಕ್ಷ ರೂ.ವರೆಗಿನ ಕಲಾಕೃತಿಯನ್ನು ಕಾಣಬಹುದಾಗಿದೆ. ಪರಿಷತ್ತಿನ ನಾಲ್ಕೂ ಗ್ಯಾಲರಿಗಳಲ್ಲಿ ಆಹ್ವಾನಿತ ಕಲಾವಿದರು ರಚಿಸಿರುವ ಗಾಂಧೀಜಿಯವರ ಕುರಿತಾದ ಕಲಾಕೃತಿಗಳ ಜತಗೆ ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯದ ಕಲಾಕೃತಿಗಳು ಪ್ರದರ್ಶನದಲ್ಲಿ ಇರಲಿದೆ.

ಚಿತ್ರಕಲಾ ಸಮ್ಮಾನ್‌: ಚಿತ್ರಸಂತೆಯ ಭಾಗವಾಗಿ ಪರಿಷತ್ತು ಜ.5 ರಂದು ಬೆಳಗ್ಗೆ 11.30ಕ್ಕೆ ಚಿತ್ರಕಲಾ ಸಮ್ಮಾನ್‌ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದ್ದು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಿದ್ದಾರೆ. ಚಿತ್ರ ನಟ ರಮೇಶ್‌ ಅರವಿಂದ್‌, ಸಚಿವೆ ಡಾ.ಜಯಮಾಲಾ ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು. ಕರ್ನಾಟಕ ಚಿತ್ರಕಲಾ ಪರಿಷತ್ತಿನ ಪ್ರದಾನ ಕಾರ್ಯದರ್ಶಿ ಪ್ರೊ.ಎಂ.ಜೆ.ಕಮಲಾಕ್ಷಿ, ಉಪಾಧ್ಯಕ್ಷ ಹಾಗೂ ಚಿತ್ರಸಂತೆ ಸಮಿತಿ ಅಧ್ಯಕ್ಷ ಪದ್ಮನಾಭ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next