Advertisement

14 ವರ್ಷ ಪ್ರಯತ್ನ: ಅಮ್ಮ ಉಡುಪಿಗೆ

11:53 AM Feb 23, 2017 | Harsha Rao |

ಉಡುಪಿ: ಮಾತಾ ಅಮೃತಾನಂದಮಯಿ ದೇವಿ ಅವರು ಉಡುಪಿಗೆ ಆಗಮಿಸಬೇಕೆಂದು 14 ವರ್ಷಗಳಿಂದ ಪ್ರಯತ್ನಿಸುತ್ತಿದ್ದೆವು. ಈಗ ಆ ಕಾಲ ಕೂಡಿ ಬಂದಿದೆ ಎಂದು ಅಮೃತ ವೈಭವದ ಸ್ವಾಗತ ಸಮಿತಿ ಮತ್ತು ಉಡುಪಿಯ ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಪದಾಧಿಕಾರಿಗಳು ತಿಳಿಸಿದರು.

Advertisement

ನಾವು ಸತತ ಮನವಿ ಮಾಡುತ್ತಿದ್ದರೂ ಅಮ್ಮನವರು ಒಪ್ಪಿರಲಿಲ್ಲ. ಈ ಬಾರಿ ಪರ್ಯಾಯ ಶ್ರೀ ಪೇಜಾವರ ಮಠಾಧೀಶರ, ಸಚಿವರ ಪತ್ರವನ್ನು ತೆಗೆದುಕೊಂಡು ಹೋದಾಗ ಅಮ್ಮ ಉಡುಪಿಗೆ ಬರಲು ಒಪ್ಪಿದರು. ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸವಿದೆ ಎಂದು ಸೇವಾ ಸಮಿತಿ ಅಧ್ಯಕ್ಷ ಶ್ರೀಧರ ಕಿನ್ನಿಮೂಲ್ಕಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಫೆ. 25 ಸಂಜೆ 4 ಗಂಟೆಗೆ ಎಂಜಿಎಂ ಕಾಲೇಜಿನ ಮೈದಾನದಲ್ಲಿ “ಅಮೃತ ವೈಭವ’ ಕಾರ್ಯಕ್ರಮ ಆರಂಭವಾಗಲಿದೆ. ಸೇವಾ ಯೋಜನೆ ಅಂಗವಾಗಿ ಗೋದಾನ, ಅಂಗನವಾಡಿಗಳಿಗೆ ಜಲಶುದ್ಧೀಕರಣ ಉಪಕರಣ ಕೊಡುಗೆ, ಸ್ವತ್ಛತೆ ಕಾರ್ಮಿಕರಿಗೆ ಕಿಟ್‌ ವಿತರಣೆ, ಮಹಿಳಾ ಸಶಕ್ತೀಕರಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಕೆ. ರಘುಪತಿ ಭಟ್‌, ಅಧ್ಯಕ್ಷ ಆನಂದ ಕುಂದರ್‌ ತಿಳಿಸಿದರು.

ಉಪಾಧ್ಯಕ್ಷರಾದ ರಮೇಶ ಕಾಂಚನ್‌, ದಿನೇಶ್‌ ಪುತ್ರನ್‌, ಕೊಳ್ಕೆಬೈಲ್‌ ಕಿಶನ್‌ ಹೆಗ್ಡೆ, ಎರಡೂ ಸಮಿತಿಗಳ ಪ್ರಧಾನ ಕಾರ್ಯದರ್ಶಿ ನವೀನ್‌ ಕುಮಾರ್‌ ಉಪಸ್ಥಿತರಿದ್ದರು. 

ಜಿಲ್ಲೆಯ ಐದೂ ಕ್ಷೇತ್ರಗಳ ಸಮಿತಿ ಪದಾಧಿಕಾರಿಗಳು ಮನೆಮನೆಗಳಿಗೆ ತೆರಳಿ ಆಮಂತ್ರಣ ನೀಡಿದ್ದಾರೆ. ಉಡುಪಿ ಜಿಲ್ಲೆಯಲ್ಲದೆ ಉ.ಕ., ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳು, ಗೋವಾದಿಂದಲೂ ಭಕ್ತರು ಆಗಮಿಸುತ್ತಿದ್ದಾರೆ.

Advertisement

ಮುಂಬಯಿಯಲ್ಲಿ ಅಮ್ಮನ ಕಾರ್ಯಕ್ರಮ ರದ್ದಾದ ಕಾರಣ ಮುಂಬಯಿಯಿಂದಲೂ ಭಕ್ತರು ಬರುತ್ತಾರೆ. ಸುಮಾರು ಸಾವಿರ ಜನ ಅಮ್ಮನ ಅನುಯಾಯಿಗಳು ಕೇರಳದಿಂದ ಬರಲಿದ್ದಾರೆ ಎಂದು ರಘುಪತಿ ಭಟ್‌ ತಿಳಿಸಿದರು.

ಭವ್ಯ ವೇದಿಕೆ
ಮೈದಾನದ ಪಶ್ಚಿಮ ಬದಿಯಲ್ಲಿ ಅಡುಗೆ ಮನೆ ಮತ್ತು ಭೋಜನಾಲಯ ಸಿದ್ಧವಾಗಿದೆ. ಮಲ್ಪೆ ಸಮಿತಿಯವರು ಬಡಿಸುವ ವ್ಯವಸ್ಥೆ ಮಾಡಲಿದ್ದಾರೆ. ಬಂದವರಿಗೆ ಊಟದ ವ್ಯವಸ್ಥೆಯಲ್ಲದೆ ಸಾರ್ವಜನಿಕ ಅನುಕೂಲಕ್ಕಾಗಿ ಕ್ಯಾಂಟೀನ್‌ ವ್ಯವಸ್ಥೆ, ಕುಡಿಯುವ ನೀರು, ವೈದ್ಯಕೀಯ ಶುಶ್ರೂಷೆ, ಉಚಿತ ವೈದ್ಯಕೀಯ ಸಹಾಯವನ್ನೂ ಕಲ್ಪಿಸಲಾಗಿದೆ.

20 ಶೌಚಾಲಯ ನಿರ್ಮಿಸಲಾಗುತ್ತಿದೆ. ಮೈದಾನದ ದಕ್ಷಿಣ ತುದಿಯಲ್ಲಿ ಉತ್ತರಕ್ಕೆ ಮುಖಮಾಡಿ 72×32 ಅಡಿಯ ಭವ್ಯ ವೇದಿಕೆ ಸಿದ್ಧವಾಗುತ್ತಿದೆ. ಇದರ ಪಕ್ಕದಲ್ಲಿಯೇ ಅಮ್ಮ ಮತ್ತು ರಾಜ್ಯಪಾಲರು, ಸಚಿವರಾದಿ ವಿವಿಐಪಿಗಳು ಆಗಮಿಸಲಿದ್ದಾರೆ. ಮೈದಾನದ ಪೂರ್ವದಿಕ್ಕಿನಲ್ಲಿ ಭಕ್ತರಿಗೆ ಆಗಮಿಸಲು ಮತ್ತು ನಿರ್ಗಮಿಸಲು 50 ಅಡಿ ಅಗಲದ ದ್ವಾರವನ್ನು ತೆರೆಯಲಾಗಿದೆ.

ವಾಹನ ನಿಲುಗಡೆ
ದ್ವಿಚಕ್ರ ವಾಹನಗಳನ್ನು ಉಪೇಂದ್ರ ಪೈ ಸ್ಮಾರಕ ಕಾಲೇಜಿನ ಮೈದಾನದಲ್ಲಿ ನಿಲ್ಲಿಸಬೇಕು. ಎಲ್ಲ ರೀತಿಯ ಕಾರುಗಳನ್ನು ಕಲ್ಸಂಕ ರೋಯಲ್‌ ಗಾರ್ಡನ್‌ನಲ್ಲಿ ನಿಲುಗಡೆಗೊಳಿಸಬೇಕು. ಅಲ್ಲಿಂದ ಸಮಾರಂಭಕ್ಕೆ ಬರಲು ಮತ್ತು ವಾಪಸು ಹೋಗಲು ರಾತ್ರಿಯಿಡೀ ವಾಹನದ ವ್ಯವಸ್ಥೆ ಮಾಡಲಾಗುತ್ತದೆ. ಟಿಟಿ, ಮಿನಿಬಸ್‌, ಬಸ್‌, ಘನ ವಾಹನಗಳಲ್ಲಿ ಬರುವವರು ಮೈದಾನದ ಬಳಿ ಜನರನ್ನು ಇಳಿಸಿ ಬೀಡಿನಗುಡ್ಡೆ ಕ್ರೀಡಾಂಗಣ, ಬೀಡಿನಗುಡ್ಡೆ ಪಿಲಿಚಂಡಿ ದೈವಸ್ಥಾನದ ವಠಾರದಲ್ಲಿ ನಿಲುಗಡೆಗೊಳಿಸಬೇಕು. ಇತರ ಕೆಲವು ವಾಹನಗಳಿಗೆ ಇಎಂಎಚ್‌ಎಸ್‌ ಮೈದಾನ, ಶಾರದಾ ಮಂಟಪ ಬಳಿಯ ಕಲ್ಕೂರ ಪಾರ್ಕಿಂಗ್‌, ಬಿಜೆಪಿ ಕಚೇರಿ ಬಳಿ ವ್ಯವಸ್ಥೆ ಮಾಡಲಾಗುವುದು. ಗುರುವಾರ ಮಾರ್ಕಿಂಗ್‌ ಕೆಲಸ ನಡೆಯಲಿದೆ. ಸಮಿತಿ ಕಾರ್ಯಕರ್ತರಲ್ಲದೆ 25 ನುರಿತ ಭದ್ರತಾ ಸಿಬಂದಿಗಳನ್ನು ಮಣಿಪಾಲ ವಿ.ವಿ.ಯವರು ನಿಯೋಜಿಸುತ್ತಾರೆ.

ದರ್ಶನಕ್ಕೆ  ಟೋಕನ್‌ 
ಸಭೆ, ಸತ್ಸಂಗ, ಪ್ರವಚನದ ಬಳಿಕ (ಸುಮಾರು ರಾತ್ರಿ 9 ಗಂಟೆ) ಕೇರಳದಿಂದ ಬಂದ ಆಶ್ರಮವಾಸಿಗಳೇ ಭಕ್ತರಿಗೆ ಟೋಕನ್‌ ಕೊಡುತ್ತಾರೆ. ಮೊದಲು ಬಂದು ಕುಳಿತವರಿಗೆ ಮೊದಲ ಟೋಕನ್‌ ಸಿಗುತ್ತದೆ. 20,000 ಆಸನಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಟೋಕನ್‌ ಕೊಡುವಲ್ಲಿ ಸ್ಥಳೀಯ ಸಮಿತಿಯವರು ಕೈ ಹಾಕುವುದಿಲ್ಲ ಎಂದು ನವೀನ್‌ ಕುಮಾರ್‌ ತಿಳಿಸಿದರು. 

ಮನೆಗಳಲ್ಲಿ  ವಸತಿ
ದೂರದೂರುಗಳಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಬರುತ್ತಿರುವುದರಿಂದ ವಸತಿ ವ್ಯವಸ್ಥೆ ಮಾಡುವುದು ಕಷ್ಟ. ಹೀಗಾಗಿ ಎಂಜಿಎಂ ಮೈದಾನದ ಆಸುಪಾಸಿನ ನಾಗರಿಕರು ಆಸಕ್ತಿ ವಹಿಸಿದರೆ ಕುಂಜಿಬೆಟ್ಟಿನಲ್ಲಿ ತೆರೆಯಲಾದ ಅಮೃತವೈಭವದ ಕಚೇರಿಯಲ್ಲಿ ಹೆಸರು ನೋಂದಾಯಿಸಿ ಒಂದು ದಿನದ ಮಟ್ಟಿಗೆ ಭಕ್ತರಿಗೆ ಉಳಿದುಕೊಳ್ಳಲು ಅವಕಾಶ ಕೊಡಬಹುದು. ಸಂಪರ್ಕ: 0820-2521508

Advertisement

Udayavani is now on Telegram. Click here to join our channel and stay updated with the latest news.

Next