ಬೆಳಗಾವಿ: ಚಳಿಗಾಲ ಅಧಿವೇಶನದಲ್ಲಿ ಭಾಗವಹಿಸಲು ಆಗಮಿಸಿರುವ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಹಾಗೂ ಎಲ್ಲ ಹಿರಿಯ ಅಧಿಕಾರಿಗಳ ಭದ್ರತೆ ನೆಪದಲ್ಲಿ ನಗರ ಪೊಲೀಸರು ಉದ್ದೇಶಪೂರ್ವಕವಾಗಿ ಗಂಟೆ ಗಟ್ಟಲೇ ರಸ್ತೆಗಳನ್ನು ಬಂದ್ ಮಾಡುತ್ತಿದ್ದಾರೆ ಎಂದು ನಾಗರಿಕರು ಹಾಗೂ ವಾಹನ ಸವಾರರು ತೀವ್ರ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಹೊರ ಭಾಗಗಳಿಂದ ಆಗಮಿಸುವ ವಾಹನಗಳ ನಿಲುಗಡೆಗೆ ಜಾಗ ಕಲ್ಪಿಸಿದರೆ ನಗರದಲ್ಲಿ ಸಾಮಾನ್ಯ ವಾಹನ ಸಂಚಾರ ಯಾವ ರೀತಿ ಇರಬೇಕು. ಯಾವ ರಸ್ತೆ ಮೂಲಕ ಸಂಚರಿಸಬೇಕು ಎಂಬ ಮಾಹಿತಿಯನ್ನು ಬೆಳಗಾವಿ ಟ್ರಾಫಿಕ್ ಪೊಲೀಸರು ಸಾರ್ವಜನಿಕರಿಗೆ ತಿಳಿಸಿಲ್ಲ. ಇದರಿಂದ ವಿಐಪಿಗಳ ಆಗಮನ ವೇಳೆ ಕಿರಿದಾದ ರಸ್ತೆಯಲ್ಲಿ ಭಾರೀ ವಾಹನಗಳ ದಟ್ಟಣೆಯೊಂದಿಗೆ ಪ್ರತಿಭಟನೆಗೆ ಆಗಮಿಸುತ್ತಿರುವ ವಾಹನಗಳ ಜತೆಗೆ ಇತರರ ವಾಹನಗಳು ಸಾಲು ಸರದಿಯಲ್ಲಿ ನಿಂತು ಗಂಟೆಗಟ್ಟಲೇ ಕಾಯುವ ಪರಿಸ್ಥತಿ ಎದುರಾಗಿದೆ.
ಎಲ್ಲೆಲ್ಲಿ ಟ್ರಾಫಿಕ್: ಬಸ್ ನಿಲ್ದಾಣ ಬಳಿ, ಅಶೋಕ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಚನ್ನಮ್ಮ ವೃತ್ತ, ಕಾಲೇಜು ರಸ್ತೆ, ಜಿಲ್ಲಾ ಆಸ್ಪತ್ರೆ ರಸ್ತೆ, ಗಾಂಧಿ ನಗರ, ಮಜಗಾಂವ, ಬೋಗಾರವೇಸ್, ಬಿಮ್ಸ್ ರಸ್ತೆಗಳಲ್ಲಿ ವಾಹನ ಸವಾರರು ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ನಿಂತು ಸಂಚಾರ ದಟ್ಟಣೆ ಎದುರಿಸಬೇಕಾಗಿದೆ.
ಬಸ್ ಇಲ್ಲದೇ ಪರದಾಡಿದ ಪ್ರಯಾಣಿಕರು: ಬೆಳಗ್ಗೆ ಬೇರೆ ಊರುಗಳಿಂದ ನಗರಕ್ಕೆ ಆಗಮಿಸುವ ಪ್ರಯಾಣಿಕರು ತಂತಮ್ಮ ಪ್ರದೇಶಗಳಿಗೆ ತೆರಳಲು ಸಂಚರಿಸಲು ಸಿಟಿ ಬಸ್ ನಿಲ್ದಾಣಕ್ಕೆ ಬಂದರೆ ಅನಿಗೋಳ, ಮಚ್ಚೆ, ಸಂತಿ ಬಸ್ತವಾಡ, ನಾವಗೆ ,ಕರ್ಲೆ ಗ್ರಾಮಕ್ಕೆ ಸಂಚರಿಸುವ ಬಸ್‌ಗಳು ಇಲ್ಲದೇ ಪ್ರಯಾಣಿಕರು ಆಟೋಗಳತ್ತ ಮುಖ ಮಾಡುವಂತಾಯಿತು.
ಅಜಿತ್ ಶಿರಗಾಪುರ